Advertisement

ಚರ್ಮದಾನಕ್ಕೆ ಗೊಂದಿ ಕುಟುಂಬ ವಾಗ್ಧಾನ

04:28 PM Jul 28, 2019 | Suhan S |

ಅಕ್ಕಿಆಲೂರು: ವರ್ಷವಿಡಿ ನೇತ್ರದಾನ, ರಕ್ತದಾನ, ದೇಹದಾನ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿಯಲ್ಲಿ ತೊಡಗಿಕೊಂಡು ತಮ್ಮ ಜೀವಮಾನವನ್ನೇ ಸಮಾಜ ಸೇವೆಗಾಗಿ ಅಣಿಯಾಗಿಸಿಟ್ಟಿರುವ ಪಟ್ಟಣದ ಪೊಲೀಸ್‌ ಪೇದೆ ಕರಬಸಪ್ಪ ಗೊಂದಿ, ಇದೀಗ ತಮ್ಮ ಕುಟುಂಬದೊಂದಿಗೆ ತಮ್ಮ ಮರಣಾನಂತರ ಚರ್ಮದಾನಕ್ಕೆ ವಾಗ್ಧಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Advertisement

ಪಟ್ಟಣದ ಕುಮಾರ ನಗರದ ನಿವಾಸಿಯಾಗಿರುವ ಕರಬಸಪ್ಪ, ಪ್ರಸ್ತುತ ಆಡೂರ ಪೊಲೀಸ್‌ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 30 ವರ್ಷ ವಯಸ್ಸಿನ ಕರಬಸಪ್ಪ ಗೊಂದಿ, ತಮ್ಮ ವಿಶಿಷ್ಟ ಸಮಾಜಮುಖೀ ಕಾರ್ಯಗಳ ಮೂಲಕ ಗಿನ್ನಿಸ್‌ ದಾಖಲೆಗೆ ಸೇರ್ಪಡೆಯಾಗಿ ಗೌರವ ಡಾಕ್ಟರೇಟ್ ಪಡೆದಿರುವುದು ಹೆಮ್ಮೆಯ ಸಂಗತಿ. 7 ವರ್ಷಗಳಿಂದ ನೇತ್ರದಾನ ಮತ್ತು ರಕ್ತದಾನ ಮಾಡಿಸುವುದರ ಮೂಲಕ ಈ ಭಾಗದ ಜನಸಾಮಾನ್ಯರಲ್ಲಿ ಅಚ್ಛಳಿಯದೇ ಉಳಿದಿದ್ದಾರೆ. ಯಾರೆ ನಿಧನವಾದರು ಸಹ ಅವರ ಮನೆಗೆ ಹೋಗಿ ಕಣ್ಣು ಮಣ್ಣಾಗದೆ, ಮತ್ತೂಬ್ಬರ ಜೀವನಕ್ಕೆ ಬೆಳಕಾಗಲಿ ಎಂದು ಮನವೊಲಿಸಿ ಕಣ್ಣು ಪಡೆದು, ನೇತ್ರ ಚಿಕಿತ್ಸೆ ಸಂಸ್ಥೆಗೆ ನೀಡುತ್ತಾರೆ.ಈ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮರಣಾನಂತರ ನೇತ್ರ, ದೇಹದಾನ ಒಪ್ಪಿಗೆಗೆ ಸಹಿ ಹಾಕಿದ್ದ ಪೇದೆ ಕರಬಸಪ್ಪ ಅವರ ಕುಟುಂಬ ಈಗ ಚರ್ಮದಾನ ಒಪ್ಪಿಗೆ ನೀಡಿದೆ. ಕರಬಸಪ್ಪ ಅವರ ಎಲ್ಲ ಸಾಮಾಜಿಕ ಕಳಕಳಿಯನ್ನು ಬೆಂಬಲಿಸುವ ತಂದೆ ಮನೋಹರ ಗೊಂದಿ ಅವರ 60ನೇ ವರ್ಷದ ಜನ್ಮದಿನದ ಸಂಭ್ರಮದ ನೆನಪಿಗೆ ಕರಬಸಪ್ಪ ಅವರ ಪತ್ನಿ ವಿನುತಾ, ತಾಯಿ ಕುಸುಮಾ, ತಂದೆ ಮನೋಹರ ಮತ್ತು ದೊಡ್ಡಪ್ಪ ಬಾಬಣ್ಣ ಗೊಂದಿ ಮರಣಾನಂತರ ಚರ್ಮದಾನಕ್ಕೆ ವಾಗ್ಧಾನ ಮಾಡಿದ್ದಾರೆ.

ಚರ್ಮದಾನ ಕುರಿತು ಅಧಿಕೃತ ದಾಖಲೆಗಳಿಗೆ ಸಹಿ ಮಾಡಿ ಸ್ಥಳೀಯ ವಿರಕ್ತಮಠದ ಶಿವಬಸವ ಶ್ರೀಗಳಿಗೆ ಹಸ್ತಾಂತರಿಸಿದ್ದಾರೆ. ಶಿವಬಸವ ಶ್ರೀಗಳಿಂದ ಚರ್ಮದಾನದ ದಾಖಲೆಗಳು ಬೆಳಗಾವಿಯ ಕೆಎಲ್ಇಎಸ್‌ ಚರ್ಮ ಬ್ಯಾಂಕ್‌ಗೆ ತಲುಪಲಿವೆ. ಇಡೀ ಕುಟುಂಬ ಚರ್ಮದಾನ ಮಾಡಿರುವುದು ಜಿಲ್ಲಾದ್ಯಾಂತ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next