Advertisement

ಕಾರ್ಕಳ ಗೋಮಟೇಶ್ವರ ಬೆಟ್ಟಕ್ಕೆ ಬೇಕಿದೆ ಭದ್ರತೆ

12:36 AM Jan 24, 2020 | Sriram |

ಕಾರ್ಕಳದ ಶ್ರೀ ಬಾಹುಬಲಿ ಮೂರ್ತಿ ವಿಶ್ವವಿಖ್ಯಾತ. ಹಿರಿಯಂಗಡಿಯ ಮಾನಸ್ತಂಭ ಬಸದಿಯೂ ಜೈನ ಧರ್ಮೀಯರ ಪವಿತ್ರ ಕ್ಷೇತ್ರಗಳಲ್ಲಿ ಒಂದು. ಬಸದಿಗಳು, ಅಲ್ಲಿನ ವಿಗ್ರಹಗಳು ಪ್ರಾಚೀನವಾದುವು. ಅವುಗಳಿಗೆ ಯಾವುದೇ ಹಾನಿಯಾಗದಂತೆ ಕಾಪಾಡಿಕೊಂಡು ಸದಾ ರಕ್ಷಿಸುವ ಕೆಲಸವಾಗಬೇಕು.

Advertisement

ವಿಶೇಷ ವರದಿ –ಕಾರ್ಕಳ: ವಿಶ್ವ ವಿಖ್ಯಾತ ಶ್ರೀ ಬಾಹುಬಲಿ ಮೂರ್ತಿ ಸೇರಿದಂತೆ ಸೇರಿದಂತೆ ಇಲ್ಲಿನ ಐತಿಹಾಸಿಕ ತಾಣಗಳಿಗೆ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಭದ್ರತೆ ಒದಗಿಸುವ ಅಗತ್ಯವಿದೆ.

1432ರಲ್ಲಿ ಭೈರ ಅರಸ ವೀರಪಾಂಡ್ಯನ ಕಾಲದಲ್ಲಿ ಕೆತ್ತಲಾದ ಭಗವಾನ್‌ ಶ್ರೀ ಬಾಹುಬಲಿ ಮೂರ್ತಿ ವೀಕ್ಷಣೆಗೆ ದೇಶ, ವಿದೇಶದಿಂದ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಕಣ್ಮನ ಸೆಳೆಯುವ 42 ಅಡಿ ಎತ್ತರದ ಏಕಶಿಲಾ ಗೋಮಟೇಶ್ವರನ ವಿಗ್ರಹ, ಬಂಡೆ ಕಲ್ಲಿನಿಂದ ಆವೃತ್ತವಾಗಿದ್ದು ಪ್ರವಾಸಿಗರಿಗೆ, ಭಕ್ತರಿಗೆ ನೆಚ್ಚಿನ ತಾಣ. ಆದರೆ ಸುರಕ್ಷತೆ ದೃಷ್ಟಿಯಿಂದ ಇಲ್ಲಿ ಯಾವುದೇ ನಿರ್ಬಂಧ ಇಲ್ಲ. ರಾತ್ರಿ ವೇಳೆ ಕಾವಲಿಗೆ ಸಿಬಂದಿಯೂ ಇಲ್ಲ.

ಮಾನಸ್ತಂಭ
ಜೈನ ಧರ್ಮೀಯರ ಪವಿತ್ರ ಕೇತ್ರಗಳಲ್ಲಿ ಹಿರಿಯಂಗಡಿ ಮಾನಸ್ತಂಭ ಬಸದಿಯೂ ಒಂದು. ಅತಿ ಎತ್ತರದ (56 ಅಡಿ) ಏಕಶಿಲಾ ಮಾನಸ್ತಂಭ ಇಲ್ಲಿದೆ. 2.5 ಅಡಿ ಎತ್ತರದ 24 ತೀರ್ಥಂಕರರ ಪ್ರತಿಮೆಗಳನ್ನು ಹೊಂದಿರುವ ಹಲ್ಲರ ಬಸದಿ, ಎಡಬಸದಿ, ಬಲಬಸದಿ, ಗುರುಬಸದಿ, ಅನಂತನಾಥ ಬಸದಿ ಗಳಿದ್ದು ಬೆಲೆಕಟ್ಟಲಾಗದ ವಿಗ್ರಹಗಳು, ಸಂರಚನೆಗಳಿವೆ.

ದೀಪವೂ ಇಲ್ಲ, ಸಿಸಿಟಿವಿಯೂ ಇಲ್ಲ
ಈ ಸ್ಮಾರಕಗಳ ಆಸುಪಾಸು ಸರಿಯಾದ ದೀಪದ ವ್ಯವಸ್ಥೆಗಳಲ್ಲಿ ಸಿಸಿಟಿವಿ, ಅಲರಾಂ ವ್ಯವಸ್ಥೆಗಳು ಇಲ್ಲ. ಇದರಿಂದ ಇಲ್ಲಿನ ರಕ್ಷಣೆ ಕಷ್ಟಕರವಾಗಿದೆ.

Advertisement

ಪುರಾತತ್ವ ಇಲಾಖೆಯಿದೆ
ಭವ್ಯ ಪರಂಪರೆಯನ್ನು ಸಂರಕ್ಷಿಸಿ ಸುರಕ್ಷಿತವಾಗಿಟ್ಟು ಕೊಳ್ಳುವ ಜಬಾಬ್ದಾರಿ ಹೊತ್ತಿರುವ ಪುರಾತತ್ವ ಇಲಾಖೆ ಕಚೇರಿ ಕಾರ್ಕಳ ನಗರದಲ್ಲಿಯೇ ಇದೆ. ಕಿರಿಯ ಸಹಾಯಕ ಸಂರಕ್ಷಕರು ಸೇರಿದಂತೆ ಒಟ್ಟು 7ಎಂಟಿಎಸ್‌ (ಸ್ಮಾರಕ ರಕ್ಷಕರು) ಅಲ್ಲಿದ್ದು, ಇವರು ಗೋಮಟೇಶ್ವರ, ಮಾನಸ್ತಂಭ ಬಸದಿ, ಅನಂತಶಯನ ಶ್ರೀ ಅನಂತಪದ್ಮನಾಭ ದೇವಸ್ಥಾನ, ಚತು ರ್ಮುಖ ಬಸದಿಯ ರಕ್ಷಣೆ, ನಿರ್ವಹಣೆ ಹೊಣೆ ಹೊತ್ತಿದ್ದಾರೆ.

ನಿಯಮ ಏನು?
ಕೇಂದ್ರ ಪುರಾತತ್ವ ಇಲಾಖೆಯಡಿಯಲ್ಲಿ ಬರುವ ರಾಷ್ಟ್ರೀಯ ಸ್ಮಾರಕಗಳಿಗೆ ಸುರಕ್ಷತೆ ವಿಚಾರದಲ್ಲಿ ನಿರ್ದಿಷ್ಟ ಮಾನದಂಡಗಳಿವೆ. ಆ ಪ್ರಕಾರ ಕಾವಲು ಸಿಬಂದಿ, ಸಿಸಿಟಿವಿ, ಎಕ್ಸ್‌ರೇ ಸ್ಕ್ಯಾನರ್‌, ಬೆಂಕಿ ಅಲರಾಂ, ಡಿಎಫ್ಎಂಡಿ, ಸ್ಮೋಕ್‌ ಡಿಟೆಕ್ಟರ್‌ ಇತ್ಯಾದಿಗಳನ್ನು ಅಳವಡಿಸಬೇಕು. ನಿರ್ದಿಷ್ಟ ಸ್ಥಳದ ರಕ್ಷಣೆ ಬಗ್ಗೆ ಪರಿಶೀಲನೆ ನಡೆಸಿ ಇವುಗಳನ್ನು ಸ್ಥಾಪಿಸಲಾಗುತ್ತಿದೆ. ಆದರೆ ಇಂತಹ ಕ್ರಮಗಳು ಕಾರ್ಕಳದಲ್ಲಿ ಜಾರಿಯಾಗಿಲ್ಲ.

ಗೋಮಟೇಶ್ವರ ಬೆಟ್ಟ, ಮಾನಸ್ತಂಭ ಬಸದಿ, ಅನಂತಶಯನ ಶ್ರೀ ಅನಂತಪದ್ಮನಾಭ ದೇವಸ್ಥಾನ, ಚತುರ್ಮುಖ ಬಸದಿಗಳಲ್ಲಿ ರಾತ್ರಿ ವೇಳೆ ಕಾವಲುಗಾರರಿಲ್ಲ. ಹಗಲು ಪುರಾತತ್ವ ಇಲಾಖೆ ಸಿಬಂದಿ ಕಾವಲಿದ್ದರೆ, ರಾತ್ರಿ ಬೀಟ್‌ ಪೊಲೀಸರು ಬಂದು ಹೋಗುವುದು ಬಿಟ್ಟರೆ ಇಲ್ಲಿ ಯಾವುದೇ ಕಾವಲುಗಾರರು ಇಲ್ಲ.

ವಿಗ್ರಹ ಕಳವು ಪ್ರಕರಣ
ಹಿರಿಯಂಗಡಿ ನೇಮಿನಾಥಸ್ವಾಮಿ ಬಸದಿಯಲ್ಲಿ 6 ವರ್ಷಗಳ ಹಿಂದೆ ಕೋಟ್ಯಂತರ ರೂ. ಮೌಲ್ಯದ ಪಂಚಲೋಹದ ವಿಗ್ರಹ ಕಳವಾಗಿದ್ದು, ವಾರದೊಳಗಡೆ ಬಳ್ಳಾರಿಯಲ್ಲಿ ಪತ್ತೆಯಾಗಿತ್ತು. ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಅಂದು ಎಸ್‌ಐ ಆಗಿದ್ದ ಪ್ರಮೋದ್‌ ಕುಮಾರ್‌ ಸಫ‌ಲರಾಗಿದ್ದರು.

ಪ್ರಸ್ತಾವನೆ ಸಲ್ಲಿಕೆ
ಸ್ಮಾರಕಗಳ ಕಾವಲು ನಡೆಸಲು ಹೆಚ್ಚಿನ ಸಿಬಂದಿ ಅಗತ್ಯವಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ಬೆಂಗಳೂರು ಕಚೇರಿಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ. ಮೇಲಧಿಕಾರಿಗಳು ಸಿಬಂದಿ ಒದಗಿಸುವ ಭರವಸೆ ಇದೆ.
-ಗೋಕುಲ್‌,
ಕಿರಿಯ ಸಹಾಯಕ ಸಂರಕ್ಷಕರು,
ಭಾರತೀಯ ಪುರಾತತ್ವ ಇಲಾಖೆ, ಕಾರ್ಕಳ

ಸೂಕ್ತ ಮಾಹಿತಿ
ಜ. 21ರಂದು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಪೊಲೀಸ್‌ ಠಾಣೆಯಲ್ಲಿ ಕಾರ್ಕಳದಲ್ಲಿನ ಧಾರ್ಮಿಕ, ಐತಿಹಾಸಿಕ ಕೇಂದ್ರಗಳ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿ ಕ್ಷೇತ್ರಗಳ ರಕ್ಷಣೆ ನಿಟ್ಟಿನಲ್ಲಿ ಸೂಕ್ತ ಮಾಹಿತಿ ನೀಡಲಾಗಿದೆ. ದಿನವೊಂದಕ್ಕೆ 100ರಿಂದ 500 ಮಂದಿ ಆಗಮಿಸುವ ಸ್ಥಳದಲ್ಲಿ ಸೆಕ್ಯೂರಿಟಿ ಗಾರ್ಡ್‌ ನೇಮಕ ಮತ್ತು ಸಿಸಿಟಿವಿ, ಡಿಎಫ್ಎಂಡಿ ಅಳವಡಿಸುವಂತೆ ಕೋರಲಾಗಿದೆ.
-ಮಧು ಬಿ.ಇ.,
ಎಸ್‌ಐ, ನಗರ ಪೊಲೀಸ್‌ ಠಾಣೆ ಕಾರ್ಕಳ

ಎಲ್ಲ ಕ್ರಮ
ಶ್ರದ್ಧಾ ಕೇಂದ್ರಗಳಲ್ಲಿರುವ ಸ್ಮಾರಕ ರಕ್ಷಣೆ ಸಲುವಾಗಿ ಸಿಸಿಟಿವಿ ಅಳವಡಿಕೆ, ಕಾವಲುಗಾರರ ನೇಮಕಗೊಳಿಸುವಂತೆ ಹಲವು ಬಾರಿ ಪುರಾತತ್ವ ಇಲಾಖೆಗೆ ಮನವಿ ಮಾಡಿದ್ದೇವೆ. ಭದ್ರತೆ ದೃಷ್ಟಿಯಿಂದ ನಾವು ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳುತ್ತೇವೆ.
-ಎಂ.ಕೆ. ವಿಜಯ ಕುಮಾರ್‌,
ಕಾರ್ಯದರ್ಶಿ, ಜೈನ ಜೀರ್ಣೋದ್ಧಾರಕ ಸಂಘ, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next