ಸಾಗರ: ತಾಲೂಕಿನ ಮಾಸೂರು ಗ್ರಾಮದ ಸ.ನಂ. 105 ರಲ್ಲಿರುವ 7.15S ಎಕರೆ ಗೋಮಾಳ ಜಮೀನಿಗೆ ಸಂಬಂಧಪಟ್ಟಂತೆ ಖಾತೆ ಪಹಣಿ ರದ್ದುಪಡಿಸದೆ ಹೋದಲ್ಲಿ ಗ್ರಾಮಸ್ಥರು ಮುಂದಿನ ಎಲ್ಲಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್ ಮೆಳವರಿಗೆ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೇವೆ. ಆದರೆ ಹಾಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗ್ರಾಮಸ್ಥರ ಗೋಮಾಳ ಉಳಿಸಿಕೊಳ್ಳುವ ಹೋರಾಟಕ್ಕೆ ಬೆಂಬಲ ನೀಡದೆ ಇರುವುದು ದುರದೃಷ್ಟಕರ ಸಂಗತಿ ಎಂದರು.
1963-64 ರಲ್ಲಿ ಮೆಳವರಿಗೆ ಗ್ರಾಮ ನಾರಾಯಣಪ್ಪ ಎಂಬುವವರಿಗೆ ಷರತ್ತಿನ ಮೇಲೆ ಗೇರು ಬೇಸಾಯಕ್ಕೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಗೇರು ಬೇಸಾಯ ಈತನಕ ಮಾಡಿಲ್ಲ. ಸರ್ಕಾರ ವಿಧಿಸಿದ ಷರತ್ತು ಉಲ್ಲಂಘನೆ ಮಾಡಿರುವುದರಿಂದ ಜಮೀನು ಸರ್ಕಾರಕ್ಕೆ ವಾಪಾಸು ಸಲ್ಲಬೇಕು. ಈ ಜಮೀನಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ಜಮೀನನ್ನು ಗ್ರಾಮಸ್ಥರು ನೂರಾರು ವರ್ಷಗಳಿಂದ ರಕ್ಷಣೆ ಮಾಡಿಕೊಂಡು ಬಂದಿದ್ದೇವೆ ಎಂದರು.
ಉದ್ದೇಶಿತ ಜಾಗದಲ್ಲಿ ಕಾಡು ಜಾತಿ ಮರ, ಹುಲ್ಲುಗಾವಲು ಇದೆ. ಆದರೆ ಪೊಲೀಸರು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಜಮೀನಿಗೆ ಸಂಬಂಧಪಟ್ಟ ರೇಣುಕಮ್ಮ ಎಂಬುವವರಿಗೆ ಅನುಕೂಲ ಮಾಡಿಕೊಡಲು ಜೆಸಿಬಿ, ಟ್ರ್ಯಾಕ್ಟರ್ ಬಳಸಿ ಹಸಿರು ನಾಶ ಮಾಡಿ ಜಮೀನು ಸಮತಟ್ಟು ಮಾಡಲಾಗಿದೆ. ಪ್ರತಿಭಟಿಸಿದ ಗ್ರಾಮಸ್ಥರನ್ನು ಪೊಲೀಸರು ಬೆದರಿಸಿದ್ದಾರೆ. ಜೊತೆಗೆ ಕಾಡು ಇರಲಿಲ್ಲ ಎಂದು ಸುಳ್ಳು ವರದಿ ನೀಡಲಾಗಿದೆ ಎಂದು ದೂರಿದರು.
ಗ್ರಾಮಕ್ಕೆ ಸಂಬಂಧಪಟ್ಟ ಜಮೀನು ಗ್ರಾಮಕ್ಕೆ ಉಳಿಯಬೇಕು. ಈ ಹೋರಾಟಕ್ಕೊಂದು ತಾರ್ಕಿಕ ಅಂತ್ಯ ಸಿಗುವವರೆಗೂ ಗ್ರಾಮಸ್ಥರು ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ. ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶ ಮಾಡಿ ಗ್ರಾಮದ ಜಮೀನು ಗ್ರಾಮಕ್ಕೆ ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ನಾರಾಯಣಪ್ಪ, ಗಣಪತಿ, ವೆಂಕಟೇಶ್, ಸೋಮಶೇಖರ್, ಅಣ್ಣಪ್ಪ, ಲೋಕೇಶ್, ರಮೇಶ್, ನಾರಾಯಣಪ್ಪ ಎಚ್.ಎ., ನಾಗರಾಜ, ವೀರಭದ್ರ, ಕೆರೆಯಪ್ಪ, ರಾಜಪ್ಪ ಇನ್ನಿತರರು ಹಾಜರಿದ್ದರು.