ಬಂಟ್ವಾಳ: ಸ್ವತ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶದ 16 ಕಡೆಗಳಲ್ಲಿ ಬಹು ಗ್ರಾಮ ಮಲ ತ್ಯಾಜ್ಯ ನಿರ್ವಹಣ ಘಟಕ(ಎಫ್‌ಎಸ್‌ಟಿಪಿ)ಗಳನ್ನು ನಿರ್ಮಿಸುತ್ತಿದ್ದು, ದ.ಕ.ಜಿಲ್ಲೆಯ ಗೋಳ್ತಮಜಲು ಹಾಗೂ ಉಜಿರೆಯಲ್ಲಿ ಈ ಘಟಕ ನಿರ್ಮಾಣಗೊಂಡಿದೆ. ಗೋಳ್ತಮಜಲುವಿನಲ್ಲಿ ನಿರ್ಮಾಣವಾಗಿರುವ ಘಟಕವು ಫೆ. 6ರಂದು ಉದ್ಘಾಟನೆಗೊಳ್ಳಲಿದೆ. ದ.ಕ. ಜಿಲ್ಲೆಯ ಘಟಕಗಳು ದಿನಂಪ್ರತಿ ತಲಾ 3000 ಲೀ.(3 ಕೆಎಲ್‌ಡಿ) ಮಲ ತ್ಯಾಜ್ಯವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಬಂಟ್ವಾಳ ಹಾಗೂ ಬೆಳ್ತಂಗಡಿ ತಾ.ಪಂ. ಈಗಾಗಲೇ 3 ಕೆಎಲ್‌ಡಿ ಸಾಮರ್ಥ್ಯದ ಸಕ್ಕಿಂಗ್ ವಾಹನವನ್ನು ಹೊಂದಿದೆ. ಗೋಳ್ತಮಜಲಿನ ಚಿಮಿಣಿಗುರಿಯಲ್ಲಿ ನಿರ್ಮಾಣಗೊಂಡಿರುವ ಘಟಕವು ಫೆ. 6 ರಂದು ಬೆಳಗ್ಗೆ 10.30ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಗ್ರಾ.ಪಂ. ವ್ಯಾಪ್ತಿಯ ಎಲ್ಲ ಮನೆ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಶೌಚಾಲಯ ಗುಂಡಿ ತುಂಬಿದ್ದಲ್ಲಿ ಮಲವನ್ನು ತೆರವುಗೊಳಿಸಲು ತಾ.ಪಂ. ಸಕ್ಕಿಂಗ್ ವಾಹನದ ಸಹಾಯವಾಣಿಗೆ ಕರೆ ಮಾಡುವುದು ಅಥವಾ ಗ್ರಾ.ಪಂ. ತಿಳಿಸಿದಾಗ ಗುಂಡಿಯ ಮಲ ತ್ಯಾಜ್ಯವನ್ನು ಸಕ್ಕಿಂಗ್ ವಾಹನದ ಮೂಲಕ ತೆರವುಗೊಳಿಸಿ ಘಟಕಕ್ಕೆ ರವಾನಿಸಲಾಗುತ್ತದೆ. ಇದರ ಸಾಗಾಣಿಕೆಗೆ ಸಕ್ಕಿಂಗ್ ವಾಹನದ ಶುಲ್ಕವನ್ನು ಕಿ.ಲೋ. ಮೀಟರ್‌ಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
1.20 ಕೋ.ರೂ. ಅನುದಾನ ಬಳಕೆ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದಕೇಂದ್ರ ಸರಕಾರದ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಮಲ ತ್ಯಾಜ್ಯ ನಿರ್ವಹಣೆಗಾಗಿ ಪ್ರತೀ ವ್ಯಕ್ತಿಗೆ 230 ರೂ. ನಂತೆ ಅನುದಾನ ನೀಡಲಾಗಿದೆ. ಗೋಳ್ತಮಜಲಿನ ಘಟಕವು 25 ಗ್ರಾ.ಪಂ. ವ್ಯಾಪ್ತಿಯನ್ನು ಹೊಂದಿದ್ದು, 82,20,951 ರೂ. ಅನುದಾನ ಬಳಕೆಯಾಗಿದೆ. ಉಜಿರೆಯ ಘಟಕ 24 ಗ್ರಾ.ಪಂ. ವ್ಯಾಪ್ತಿ ಹೊಂದಿ 58,39,444 ರೂ. ಅನುದಾನ ಬಳಕೆಯಾಗಿದೆ. ಒಟ್ಟು 49 ಗ್ರಾ.ಪಂ. ವ್ಯಾಪ್ತಿಗೆ 1.20 ಕೋ.ರೂ. ಅನುದಾನ ಬಳಕೆ ಮಾಡಲಾಗಿದೆ.