ಕಲಬುರಗಿ: ಅಫಜಲಪುರ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಾಗಿದ್ದ ಪ್ರಸ್ತುತ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ (ಇಇ) ಮಹಾದೇವ ಸಿಂಧೆ ಸೇರಿದಂತೆ ಮೂವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಅಫಜಲಪುರ ತಾಲೂಕಿನ ಭೈರಾಮಡಗಿ ಸೇರಿದಂತೆ ಇತರೆಡೆ ಕುಡಿಯುನ ನೀರಿನ ಕಾಮಗಾರಿ ಮಾಡದೇ ಹಣ ಗುಳುಂ ಮಾಡಿರುವ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಅವ್ಯವಹಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಲಬುರಗಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಅಂಬಲಗಿ, ನಕಲಿ ದಾಖಲೆ ಸೃಷ್ಟಿಸಿ ಹೆಚ್ಚುವರಿಯಾಗಿ 12.9 ಕೋಟಿ ರೂ. ಅವ್ಯಹಾರ ಎಸಗಿ ಸರ್ಕಾರಕ್ಕೆ ವಂಚಿಸಲಾಗಿದೆ ಎಂದು ದೂರು ನೀಡಿದ್ದಾರೆ. ಈಗಾಗಲೇ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಇಇ ಮಹಾದೇವ ಸಿಂಧೆ ಹಾಗೂ ಸಹಾಯಕ ಇಂಜಿನಿಯರ್ ಅಮರನಾಥ ಧೂಳೆ, ಕಿರಿಯ ಇಂಜಿನಿಯರ್ ಖಾಜಾ ನಿಜಾಮುದ್ದೀನ್ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.
ಉದಯವಾಣಿಯಲ್ಲಿ ತನಿಖಾ ವರದಿ: ಅಫಜಲಪುರ ತಾಲೂಕಿನ ಭೈರಾಮಡಗಿ ತಾಂಡಾಕ್ಕೆ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳದೇ 33.43 ಲಕ್ಷ ರೂ. ಗೋಲ್ ಮಾಲ್ ಮಾಡಲಾಗಿದೆ ಎಂಬುದಾಗಿ 2015ರ ಆಗಸ್ಟ್ 17ರ “ಉದಯವಾಣಿ’ಯಲ್ಲಿ ಮಾತ್ರ ಸಮಗ್ರ ದಾಖಲೆಗಳೊಂದಿಗೆ ತನಿಖಾ ವರದಿ ಪ್ರಕಟವಾಗಿತ್ತು. ವರದಿ ಆಧಾರದ ಮೇಲೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಇಲಾಖೆ ತನಿಖೆಗೆ ಆದೇಶಿಸಿದ್ದರು.
“ಉದಯವಾಣಿ’ ವರದಿ ಉಲ್ಲೇಖೀಸಿಯೇ ಸಿಇಒ ಅವರು ತನಿಖೆಗೆ ಆದೇಶಿಸಿದ್ದರು. ಇಲಾಖೆ ತನಿಖೆ ಕೈಗೊಂಡ ನಂತರ ಭೈರಾಮಡಗಿಯಲ್ಲದೇ ಇತರ ಒಂಭತ್ತು ಗ್ರಾಮಗಳ ಕುಡಿಯುನ ನೀರು ಪೂರೈಕೆ ಕಾಮಗಾರಿಗಳಲ್ಲೂ ಅವ್ಯವಹಾರ ಕಂಡು ಬಂತು. ಹೀಗಾಗಿ 2015ರ ಅಕ್ಟೋಬರ್ ತಿಂಗಳಿನಲ್ಲಿಯೇ ಸಹಾಯಕ ಇಂಜಿನೀಯರ್ ಅಮರನಾಥ ಧೂಳೆ, ಕಿರಿಯ ಇಂಜನೀಯರ್ ಖಾಜಾ ನಿಜಾಮುದ್ದೀನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ತದನಂತರ 2016ರ ಮಾರ್ಚ್ ತಿಂಗಳಿನಲ್ಲಿ ಮಹಾದೇವ ಸಿಂಧೆ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧೀನ ಕಾರ್ಯದರ್ಶಿಗಳು ಸೇವೆಯಿಂದ ಅಮಾನತುಗೊಳಿಸಿದ್ದರು. ಹೀಗಾಗಿ ಸಹಾಯಕ ಕಾರ್ಯನಿರ್ವಾಹಕ (ಎಇಇ) ಹುದ್ದೆಯಿಂದ ಕಾರ್ಯಪಾಲಕ ಅಭಿಯಂತರ (ಇಇ) ಹುದ್ದೆಗೆ ಬಡ್ತಿ ಹೊಂದುವುದಕ್ಕೆ ತಾತ್ಕಾಲಿಕ ತಡೆ ಬಿದ್ದಿತ್ತು. ಕಳೆದ ಆರು ತಿಂಗಳ ಹಿಂದೆಯಷ್ಟೇ ಸಣ್ಣ ನೀರಾವರಿ ಇಲಾಖೆಗೆ ಇಇಯಾಗಿ ಕಾರ್ಯಭಾರ ವಹಿಸಲಾಗಿದೆ. ಆದರೆ ಈಗ ಮತ್ತೆ ಅಮಾನತು ಭೀತಿ ಎದುರಾಗಿದೆ.
ಭೈರಾಮಡಗಿ ತಾಂಡಾಕ್ಕೆ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳದೇ 3.43 ಲಕ್ಷ ರೂ. ಗುಳುಂ ಮಾಡಿದ್ದಲ್ಲದೇ ಚೌಡಾಪುರ ತಾಂಡಾ, ಹಾವನೂರ ತಾಂಡಾ, ಗುಡೂರ ತಾಂಡಾ, ಚೌಡಾಪುರ ತಾಂಡಾ, ಶಿವನಗರ ತಾಂಡಾ, ಬಡದಾಳ ತಾಂಡಾ, ಕರ್ಜಗಿ ತಾಂಡಾ, ಶಿರವಾಳ, ರೇವೂರ, ಗಾಣಗಾಪುರ, ಗೌಡಗಾಂವ, ಹೀರಾನಾಯಕ ತಾಂಡಾ, ಪಾಲ್‌ಸಿಂಗ್ ತಾಂಡಾಗಳಲ್ಲಿ 16 ಕುಡಿಯುವ ನೀರು ಹಾಗೂ 10 ಕಿರು ನೀರು ಸರಬರಾಜು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ 129.79 ಲಕ್ಷ ರೂ. ಅವ್ಯವಹಾರ ಎಸಗಲಾಗಿದೆ. ಪತ್ರಿಕಾ ತನಿಖಾ ವರದಿ ಆಧರಿಸಿ ತದನಂತರ ಇಲಾಖೆ ತನಿಖಾ ತಂಡದಿಂದ ಅವ್ಯವಹಾರ ಬಯಲಿಗೆ ಬಂದಿದೆ.