Advertisement

Golgumbaz Express ರೈಲು ಸೇವೆ ಪಂಢರಪುರಕ್ಕೆ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

05:03 PM Sep 05, 2023 | Team Udayavani |

ವಿಜಯಪುರ : ಮೈಸೂರು- ಸೋಲಾಪುರ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ಪಂಢರಪುರಕ್ಕೆ ವಿಸ್ತರಣೆಯಾಗಿದೆ. ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮಂಗಳವಾರ ಬೆಳಿಗ್ಗೆ ವಿಜಯಪುರ ರೈಲು ನಿಲ್ದಾಣದಲ್ಲಿ ಪಂಢರಪುರ ವರೆಗೆ ಸಂಚಾರ ವಿಸ್ತರಣೆಯಾಗಿರುವ ಮೈಸೂರು ಗೋಲಗುಂಜ ರೈಲಿಗೆ ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿದರು.

Advertisement

ಪಂಡರಪುರ ವರೆಗೆ ರೈಲು ಸಂಚಾರಕ್ಕೆ ಚಾಲನೆ ನೀಡಿ, ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂದ ರಮೇಶ ಜಿಗಜಿಣಗಿ, ವಿಜಯಪುರ, ಬಾಗಲಕೋಟೆ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಭಾಗದ ಜನರು ಪಂಡರಾಪುರಕ್ಕೆ ರೈಲು ಪ್ರಾರಂಭಿಸುವ ಬೇಡಿಕೆ ಇರಿಸಿದ್ದರು. ಜನರ ಬೇಡಿಕೆ ಇದೀಗ ಈಡೇರಿದೆ ಎಂದರು.

ಸದರಿ ರೈಲು ಪಂಢರಪುರ ಧಾರ್ಮಿಕ ಕ್ಷೇತ್ರದ ವರೆಗ ವಿಸ್ತರಣೆ ಆಗಿರುವುದರಿಂದ ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ ವಿಠ್ಠಲನ ಭಕ್ತರು ಪಂಢರಪುರಕ್ಕೆ ತೆರಳಲು ಅನುಕೂಲವಾಗಲಿದೆ ಎಂದರು.

ವಿಜಯಪುರ ನಿಲ್ದಾಣದಿಂದ ಪಂಢರಪುರದ ವಿಠ್ಠಲನ ದರ್ಶನಕ್ಕೆ ಹೊರಟ ಭಕ್ತರು ಪಂಢರಪುರ ರೈಲು ವಿಸ್ತರಣೆಗೆ ಚಾಲನೆ ನೀಡಿದ ಸಂಸದ ಮದ್ದಳೆ ಬಾರಿಸಿ ಭಕ್ತರೊಂದಿಗೆ ಸಂಭ್ರಮ ಆಚರಿಸಿದರು.

ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ, ಶ್ರೀಧರ ಮ ಬಿಜ್ಜರಗಿ ಸೇರಿದಂತೆ ವಿಠ್ಠಲನ ಫೋಟೋ ಹಾಕಿಕೊಂಡು ಭಜನೆ ಮಾಡುತ್ತ ಕುಣಿದು ಸಂತಸ ವ್ಯಕ್ತಪಡಿಸಿದರು.

Advertisement

ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ, ಹುಬ್ಬಳ್ಳಿ ರೈಲ್ವೇ ವಿಭಾಗದ ಅಪರ ವಿಭಾಗೀಯ ವ್ಯವಸ್ಥಾಪಕ ಸಂತೋಷಕುಮಾರ ವರ್ಮಾ, ಹುಬ್ಬಳ್ಳಿ ವಾಣಿಜ್ಯ ವಿಭಾಗದ ಸಹಾಯಕ ವ್ಯವಸ್ಥಾಪಕಿ ನಿವೇದಿತಾ ಬಾಲರೆಡ್ಡಿ, ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯ ದಾಮೋದರ ದಾಸ ರಾಠಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೈಸೂರು-ಪಂಢರಪುರ ರೈಲಿನ ಸಂಖ್ಯೆ : ರೈಲು ಸಂಖ್ಯೆ 16535/16536 ಮೈಸೂರು-ಸೋಲಾಪುರ-ಮೈಸೂರು ಗೋಲಗುಂಬಜ್ ಎಕ್ಸ್ ಪ್ರೆಸ್ ಪಂಢರಪುರ ವರೆಗೆ ವಿಸ್ತರಣೆಗೆ ರೈಲ್ವೇ ಮಂಡಳಿ ಅನುಮತಿಸಿದಂತೆ ಸೆ.4 ರಿಂದ ಜಾರಿಗೆ ಬಂದಿದ್ದು, ಸೆ.5 ರಂದು ಬೆಳಿಗ್ಗೆ ವಿಜಯಪುರ ತಲುಪಿದ ರೈಲಿನ ಸಂಚಾರವನ್ನು ಪಂಢರಪುರಕ್ಕೆ ವಿಸ್ತರಿಸಿ, ಚಾಲನೆ ನೀಡಲಾಯಿತು.

ರೈಲು ಸಂಖ್ಯೆ 16535/16536 ಮೈಸೂರು-ಸೋಲಾಪುರ-ಮೈಸೂರು ಗೋಲಗುಂಬಜ್ ಎಕ್ಸ್‍ಪ್ರೆಸ್ ರೈಲು ಪಂಢರಪುರ ವರೆಗೆ ಚಾಲನೆ ನೀಡಲಾಗಿದೆ. ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16535 ಮೈಸೂರು – ಸೋಲಾಪುರ ಗೋಲಗುಂಬಜ್ ಎಕ್ಸ್ ಪ್ರೆಸ್ ರೈಲು ಪಂಢರಪುರ ವರೆಗೆ ವಿಸ್ತರಣೆಗೊಂಡಿದೆ. ಸೆ. 5 ರಂದು 16536 ಸಂಖ್ಯೆಯ ರೈಲು ಪಂಢರಪುರ ನಿಲ್ದಾಣದಿಂದ ವಿಜಯಪುರ ಮಾರ್ಗವಾಗಿ ಮೈಸೂರಿಗೆ ಹೊರಡಲಿದೆ.

ರೈಲಿನ ವೇಳಾಪಟ್ಟಿ : ರೈಲು ಸಂಖ್ಯೆ 16535 ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್‍ಪ್ರೆಸ್ ಮಧ್ಯಾಹ್ನ 03:45ಕ್ಕೆ ಮೈಸೂರಿನಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 12:25 ಗಂಟೆಗೆ ಪಂಢರಪುರ ನಿಲ್ದಾಣ ತಲುಪಲಿದೆ. ಮೈಸೂರಿನಿಂದ ಬಸವನಬಾಗೇವಾಡಿ ರೋಡ್ ನಿಲ್ದಾಣದ ವರೆಗೆ ಈ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ವಿಜಯಪುರಕ್ಕೆ ಈ ರೈಲು ಬೆಳಿಗ್ಗೆ 07-55 ಗಂಟೆಗೆ ಆಗಮಿಸಿ ಬೆಳಿಗ್ಗೆ 08:00 ಗಂಟೆಗೆ ನಿಲ್ದಾಣದಿಂದ ಹೊರಡಲಿದೆ. ಇಂಡಿ ರೋಡ್ ನಿಲ್ದಾಣಕ್ಕೆ ಬೆಳಿಗ್ಗೆ 08:41 ಆಗಮಿಸಿ ಬೆ.08:42 ನಿರ್ಗಮಿಸಲಿದೆ. ಸೋಲಾಪುರ ನಿಲ್ದಾಣದ ಬೆ.10-15ಕ್ಕೆ ಆಗಮಿಸಿ, ಬೆ.10-20ಕ್ಕೆ ನಿರ್ಗಮಿಸಲಿದೆ. ಕುರ್ಡುವಾಡಿ ನಿಲ್ದಾಣಕ್ಕೆ ಬೆಳಿಗ್ಗೆ 11-25ಕ್ಕೆ ಆಗಮಿಸಿ, ಬೆ.11-27 ಗಂಟೆಗೆ ನಿರ್ಗಮಿಸಲಿದೆ.

16536 ಸಂಖ್ಯೆಯ ರೈಲು ಪಂಢರಪುರ-ಮೈಸೂರು ಗೋಲಗುಂಬಜ್ ಎಕ್ಸ್‍ಪ್ರೆಸ್ ರೈಲು ಪಂಢರಪುರ ರೈಲು ನಿಲ್ದಾಣದಿಂದ ಮಧ್ಯಾಹ್ನ 1-00 ಗಂಟೆಗೆ ಹೊರಡಲಿದ್ದು ಮರುದಿನ ಬೆಳಿಗ್ಗೆ 10:-45 ಗಂಟೆಗೆ ಮೈಸೂರು ರೈಲ್ವೇ ನಿಲ್ದಾಣಕ್ಕೆ ತಲುಪಲಿದೆ.

ಕುರ್ಡುವಾಡಿಗೆ ಮಧ್ಯಾಹ್ನ 2-00ಕ್ಕೆ ಆಗಮಿಸಿ, ಮಧ್ಯಾಹ್ನ 02-02 ಕ್ಕೆ ನಿರ್ಗಮಿಸಲಿದೆ. ಸೋಲಾಪುರ ನಿಲ್ದಾಣಕ್ಕೆ ಮಧ್ಯಾಹ್ನ 03-30ಕ್ಕೆ ಆಗಮಿಸಿ, ಮಧ್ಯಾಹ್ನ 03-42 ಗಂಟೆಗೆ ನಿರ್ಗಮಿಸಲಿದೆ. ಇಂಡಿ ರೋಡ್‍ಗೆ ಮಧ್ಯಾಹ್ನ 04-28ಕ್ಕೆ ಆಗಮಿಸಿ ಮಧ್ಯಾಹ್ನ 04-30ಕ್ಕೆ ನಿರ್ಗಮಿಸಲಿದೆ.

ವಿಜಯಪುರ ನಿಲ್ದಾಣಕ್ಕೆ ಸಂಜೆ 5-50ಕ್ಕೆ ಆಗಮಿಸಿ ಸಂಜೆ 05-55ಕ್ಕೆ ನಿರ್ಗಮಿಸಲಿದೆ. ಬಸವನಬಾಗೇವಾಡಿ ರೋಡ್‍ಗೆ ಸಂಜೆ 06-27ಕ್ಕೆ ಆಗಮಿಸಿ ಸಂಜೆ 06-28 ಕ್ಕೆ ನಿರ್ಗಮಿಸಲಿದೆ. ಆಲಮಟ್ಟಿ ನಿಲ್ದಾಣಕ್ಕೆ ಸಂಜೆ 06-45ಕ್ಕೆ ಆಗಮಿಸಿ, ಸಂಜೆ 06-46 ಕ್ಕೆ ನಿರ್ಗಮಿಸಲಿದೆ. ಬಾಗಲಕೋಟೆಗೆ ರಾತ್ರಿ 07-23ಕ್ಕೆ ಆಗಮಿಸಿ, ರಾತ್ರಿ 07-25 ಗಂಟೆಗೆ ನಿರ್ಗಮಿಸಲಿದೆ.

ಗುಳೇದಗುಡ್ಡ ರೋಡ್‍ಗೆ ರಾತ್ರಿ 07-39ಕ್ಕೆ ಆಗಮಿಸಿ, ರಾತ್ರಿ 07-40 ಕ್ಕೆ ನಿರ್ಗಮಿಸಲಿದೆ. ಬಾದಾಮಿ ನಿಲ್ದಾಣಕ್ಕೆ ರಾತ್ರಿ 07-54ಕ್ಕೆ ಆಗಮಿಸಿ, ರಾತ್ರಿ 07-55ಕ್ಕೆ ನಿರ್ಗಮಿಸಲಿದೆ. ಹೊಳೆಆಲೂರು ನಿಲ್ದಾಣಕ್ಕೆ ರಾತ್ರಿ 08-17ಕ್ಕೆ ಆಗಮಿಸಿ, ರಾತ್ರಿ 08-18 ಗಂಟೆ ನಿರ್ಗಮಿಸಲಿದೆ. ಗದಗ ನಿಲ್ದಾಣಕ್ಕೆ ರಾತ್ರಿ 09-40 ಕ್ಕೆ ಆಗಮಿಸಿ, ರಾತ್ರಿ 09:45 ಕ್ಕೆ ನಿರ್ಗಮಿಸಲಿದೆ. ಅಣ್ಣಿಗೇರಿ ನಿಲ್ದಾಣಕ್ಕೆ ರಾತ್ರಿ 10:07ಕ್ಕೆ ಆಗಮಿಸಿ, 10-08 ಗಂಟೆ ನಿರ್ಗಮಿಸಲಿದೆ.

ಉಳಿದಂತೆ ಹುಬ್ಬಳ್ಳಿ ಎಸ್‍ಎಸ್‍ಎಸ್ ನಿಲ್ದಾಣದಿಂದ ಮೈಸೂರು ನಿಲ್ದಾಣದ ವರೆಗೆ ಸದರಿ ರೈಲಿನ ನಿಲುಗಡೆಗಳು ಹಾಗೂ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೇ ಅಧಿಕಾರಿಗಳು ವಿವರಿಸಿದರು.

ಇದನ್ನೂ ಓದಿ: District Collector CT Shilpanag: ದೌರ್ಜನ್ಯ ಪ್ರಕರಣ ಶೀಘ್ರ ವಿಲೇವಾರಿ ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next