Advertisement

60 ಮೀ. ಆಳದಲ್ಲೂ  ಶೋಧ: ಸಚಿವೆ

12:30 AM Feb 05, 2019 | Team Udayavani |

ಉಡುಪಿ: ಮಲ್ಪೆ ಬಂದರಿನಿಂದ ಹೊರಟು ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್‌ನ ಪತ್ತೆಗೆ ನೌಕಾಪಡೆಯ ಅಧಿಕಾರಿಗಳು ಸಮುದ್ರದಲ್ಲಿ 35 ಮೀಟರ್‌ ಆಳಕ್ಕೆ ವರೆಗೆ ಹೋಗಿ ಶೋಧಿಸಿದ್ದಾರೆ. ಇಷ್ಟಕ್ಕೇ ನಮ್ಮ ಪ್ರಯತ್ನವನ್ನು ಕೈಬಿಡೆವು. ಮುಂದಿನ ಹಂತದಲ್ಲಿ 60 ಮೀ. ಅಳಕ್ಕೆ ಇಳಿದು ಶೋಧಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ತಿಳಿಸಿದರು.

Advertisement

ಉಡುಪಿಯಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನೌಕಾ ಪಡೆಯ ಹಡಗಿನ ತಳಕ್ಕೆ ಹಾನಿಯಾಗಿರುವ ಸಮಯ, ಸುವರ್ಣ ತ್ರಿಭುಜದ ಸಂಪರ್ಕ ಕಡಿತ ಆಗಿರುವ ಸಮಯ ಇತ್ಯಾದಿಗಳ ಬಗ್ಗೆ ಸಂಶಯಗಳಿವೆ. ಹುಡುಕಾಟದ ವೇಳೆ ನೌಕಾಪಡೆಗೆ ಸಾಗರ ತಳದಲ್ಲಿ 23 ಮೀ. ಉದ್ದದ ಬೋಟೊಂದು ಕಂಡು ಬಂದಿದೆ. ಆದರೆ ಆಳದಲ್ಲಿ ಇರುವುದರಿಂದ ಸ್ಪಷ್ಟವಾಗಿ ಗೋಚರವಾಗಿಲ್ಲ. ಈ ಹಿಂದೆ ಯಾವತ್ತೋ ಮುಳುಗಿದ್ದ ಬೋಟಿನ ಅವಶೇಷವೋ ಎಂಬುದೂ ದೃಢವಾಗಿಲ್ಲ. ಸುವರ್ಣ ತ್ರಿಭುಜ ಬೋಟ್‌ 24 ಮೀಟರ್‌ ಇರುವುದರಿಂದ ಅದಕ್ಕೂ ಇದಕ್ಕೂ ತಾಳೆಯಾಗುವುದಿಲ್ಲ. ಸರಿಯಾದ  ಪರಿಶೀಲನೆ ನಡೆಸಿದಾಗ ನಮ್ಮ ಎಲ್ಲ ಸಂಶಯಕ್ಕೆ ಪರಿಹಾರ ಸಿಗಲಿದೆ ಎಂದರು.

ವದಂತಿ ನಿಜವಾಗಲಿ
ಸುವರ್ಣ ತ್ರಿಭುಜ ಬೋಟು ಸಹಿತ ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿದ್ದಾರೆ ಎಂಬ ಹಲವು ವಂದತಿಗಳು ಎಲ್ಲೆಡೆ ಹರಡುತ್ತಿವೆ. ನಾಪತ್ತೆಯಾದವರ ಕುಟುಂಬದವರು ಈಗಲೂ ಅವರು ಬರುತ್ತಾರೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ವದಂತಿಗಳು ಸತ್ಯವಾಗಲಿ ಎನ್ನುವುದು ನಮ್ಮ ಆಸೆ ಎಂದು ಡಾ| ಜಯಮಾಲಾ ತಿಳಿಸಿದರು.

ಬೋಟ್‌ ಡಿ. 13 ರಂದು ರಾತ್ರಿ 11 ಗಂಟೆಗೆ ಮಲ್ಪೆ ಬಂದರಿನಿಂದ ಮೀನು ಗಾರಿಕೆಗೆ ತೆರಳಿತ್ತು. ಡಿ. 15ರ ತಡರಾತ್ರಿ ವರೆಗೆ ಮನೆ ಮಂದಿಯ ಜತೆ ಮೀನುಗಾರರು ಸಂಪರ್ಕದಲ್ಲಿದ್ದರು. ಅನಂತರ ಮೊಬೈಲ್‌ ಸಂಪರ್ಕ ಕಡಿದು ಕೊಂಡಿತ್ತು. ಬೋಟ್‌ನಲ್ಲಿ ಉಡುಪಿಯ ಇಬ್ಬರು ಮತ್ತು ಉತ್ತರ ಕನ್ನಡ ಜಿಲ್ಲೆಯ ಐವರು ಮೀನುಗಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next