Advertisement

ಇದು Golden Time: ಬಾನದಾರಿಯಲ್ಲಿ ಕೃಷ್ಣ ಜಪ

03:07 PM Aug 06, 2023 | Team Udayavani |

ನಮ್ಮಂತಹ ಸ್ಟಾರ್‌ ನಟರು ವರ್ಷಕ್ಕೆರಡು ಸಿನಿಮಾ ಮಾಡಬೇಕು. ನಾನು ಆ ನಿಟ್ಟಿನಲ್ಲೇ ಕಾರ್ಯಪ್ರವೃತ್ತನಾಗಿದ್ದೇನೆ…’- ನಟ ಗಣೇಶ್‌ ಹೀಗೆ ಹೇಳಿ ಸಣ್ಣ ನಗೆ ಬೀರಿದರು. ಅವರ ಮಾತಲ್ಲಿ ಒಂದು ಕಾಳಜಿ ಇತ್ತು. ಕಳೆದ ಆರು ತಿಂಗಳಿನಿಂದ ಕನ್ನಡ ಚಿತ್ರರಂಗ ಯಾವುದೇ ಗೆಲುವು ಇಲ್ಲದೇ ಸೊರಗಿದ ಬಗೆಗಿನ ಸ್ಪಷ್ಟ ಚಿತ್ರಣ ಅವರಲ್ಲಿತ್ತು. ಅದೇ ಕಾರಣದಿಂದ “ನಮ್ಮಂತಹ ಸ್ಟಾರ್‌ಗಳು ವರ್ಷಕ್ಕೆರಡು ಸಿನಿಮಾ ಮಾಡಬೇಕು’ ಎಂಬ ಮಾತು ಅವರಿಂದ ಬಂತು. ಅದು ಸತ್ಯ ಕೂಡಾ ಸದ್ಯದ ಪರಿಸ್ಥಿತಿಯಲ್ಲಿ ಸ್ಟಾರ್‌ಗಳು ಚಿತ್ರರಂಗದ ಬಗ್ಗೆ ಸ್ವಲ್ಪ ಹೆಚ್ಚೇ ಕಾಳಜಿ ವಹಿಸಬೇಕಿದೆ. ಇವತ್ತು ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವುದು ಸವಾಲಿನ ಕೆಲಸ. ಸ್ಟಾರ್‌ಗಳು ಸಿನಿಮಾ ಮಾಡಿದರೆ ಅವರಿಗೊಂದು ಅಭಿಮಾನಿ ವರ್ಗವಿರುವುದರಿಂದ ಒಮ್ಮೆ ಥಿಯೇಟರ್‌ನತ್ತ ಜನ ಬರಬಹುದು ಎಂಬ ನಂಬಿಕೆ ಸಿನಿಮಾ ಮಂದಿಯದ್ದು.

Advertisement

ಸದ್ಯ ಗಣೇಶ್‌ ಕೂಡಾ ವರ್ಷಕ್ಕೆರಡು ಸಿನಿಮಾಗಳನ್ನು ಮಾಡುವತ್ತ ಮನಸ್ಸು ಮಾಡಿದ್ದಾರೆ. ಈಗಾಗಲೇ ಗಣೇಶ್‌ ನಾಯಕರಾಗಿರುವ “ಬಾನದಾರಿಯಲ್ಲಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ. ಇದರ ನಡುವೆಯೇ ಗಣೇಶ್‌ ಸದ್ದಿಲ್ಲದೇ ಹೊಸ ಸಿನಿಮಾದತ್ತ ಮುಖ ಮಾಡಿದ್ದಾರೆ. ಈಗಾಗಲೇ ಅವರ ಹೊಸ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.  ಗಣೇಶ್‌ ನಾಯಕನಾಗಿ ಅಭಿನಯಿಸುತ್ತಿರುವ 41ನೇ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ “ಕೃಷ್ಣಂ ಪ್ರಣಯ ಸಖೀ’ ಎಂದು ಹೆಸರಿಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ “ದಂಡುಪಾಳ್ಯ’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು “ಕೃಷ್ಣಂ ಪ್ರಣಯ ಸಖೀ’ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

ಫ‌ಸ್ಟ್‌ಲುಕ್‌ನಲ್ಲಿ ಕೃಷ್ಣಂ ಪ್ರಣಯ ಸಖೀ

ಅಂದಹಾಗೆ, “ಕೃಷ್ಣಂ ಪ್ರಣಯ ಸಖೀ’ ಔಟ್‌ ಆ್ಯಂಡ್‌ ಔಟ್‌ ಕೌಟುಂಬಿಕ ಕಥಾಹಂದರ ಸಿನಿಮಾವಾಗಿದ್ದು, ಈಗಾಗಲೇ ಸದ್ದಿಲ್ಲದೆ ಬೆಂಗಳೂರು ಸುತ್ತಮುತ್ತ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಕೂಡ ನಡೆಯುತ್ತಿದೆ. ಇತ್ತೀಚೆಗೆ  ನಾಯಕ ನಟ ಗಣೇಶ್‌ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ “ಕೃಷ್ಣಂ ಪ್ರಣಯ ಸಖೀ’ ಸಿನಿಮಾದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಗಣೇಶ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

“ತ್ರಿಶೂಲ್‌ ಎಂಟರ್‌ಟೈನ್ಮೆಂಟ್‌’ ಬ್ಯಾನರಿನಲ್ಲಿ ಪ್ರಶಾಂತ್‌ ಜಿ. ರುದ್ರಪ್ಪ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಅರ್ಜುನ್‌ ಜನ್ಯ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು “ಕೃಷ್ಣಂ ಪ್ರಣಯ ಸಖೀ’ ಸಿನಿಮಾದಲ್ಲಿ ಗಣೇಶ್‌ ಅವರಿಗೆ ನಾಯಕಿಯಾಗಿ ಮಲೆಯಾಳಿ ಚೆಲುವೆ ಮಾಳವಿಕ ನಾಯರ್‌ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್‌, ಶ್ರುತಿ, ಸುಧಾರಾಣಿ, ಶ್ರೀನಿವಾಸಮೂರ್ತಿ, ಶಿವಧ್ವಜ್‌ ಶೆಟ್ಟಿ, ಬೆನಕ ಗಿರಿ ಮುಂತಾದ ಕಲಾವಿದರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಭರದಿಂದ “ಕೃಷ್ಣಂ ಪ್ರಣಯ ಸಖೀ’ ಸಿನಿಮಾದ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ, ಎರಡನೇ ಹಂತದಲ್ಲಿ ಮೈಸೂರು, ರಾಜಸ್ಥಾನ ಹಾಗೂ ಯುರೋಪ್‌ನಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಗಣಿ ಹೊಸಚಿತ್ರ “ಕೃಷ್ಣಂ ಪ್ರಣಯ ಸಖೀ’ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

“ಕೃಷ್ಣಂ ಪ್ರಣಯ ಸಖೀ’ ಚಿತ್ರದ ಮೇಲೆ ಗಣೇಶ್‌ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಆ ಸಿನಿಮಾದ ಕಥೆ. ಇಷ್ಟು ದಿನ ಮಾಡಿದ ಸಿನಿಮಾಗಳಿಗಿಂತ ಈ ಸಿನಿಮಾದ ಕಥೆ ವಿಭಿನ್ನವಾಗಿದೆ ಎಂಬ ಖುಷಿ ಗಣೇಶ್‌ ಅವರಿಗಿದೆ. ಈ ಬಗ್ಗೆ ಮಾತನಾಡುವ ಗಣೇಶ್‌, “ಕಥೆ ತುಂಬಾ ವಿಭಿನ್ನವಾಗಿದೆ. ಪಕ್ಕಾ ಫ್ಯಾಮಿಲಿ ಡ್ರಾಮಾವಿದು. ದೊಡ್ಡ ಕುಟುಂಬವೊಂದರಲ್ಲಿರುವ ಏಕೈಕ ಗಂಡು ಮಗನಿಗೆ ಹೆಣ್ಣು ಹುಡುಕುವುದೇ ಈ ಸಿನಿಮಾ ಹೈಲೈಟ್‌. ಈ ಪ್ರಸಂಗವನ್ನು ನಿರ್ದೇಶಕ ಶ್ರೀನಿವಾಸ ರಾಜು ತುಂಬಾ ಮಜವಾಗಿ ಹೇಳಿದ್ದಾರೆ. ಆತ ಆಗರ್ಭ ಶ್ರೀಮಂತ. ಇಂತಹ ಯುವಕನಿಗೆ ಹುಡುಗಿ ಹುಡುಕುವುದೇ ಒಂದು ಸವಾಲು’ ಎಂದು ತಮ್ಮ ಹೊಸ ಸಿನಿಮಾ ಬಗ್ಗೆ ಹೇಳುತ್ತಾರೆ.

ಬಾನದಾರಿಯ ನಿರೀಕ್ಷೆ

ನಟ ಗಣೇಶ್‌ ಅವರ “ಬಾನದಾರಿಯಲ್ಲಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಪ್ರೀತಂ ಗುಬ್ಬಿ ಹಾಗೂ ಗಣೇಶ್‌ ಕಾಂಬಿನೇಶನ್‌ನ ನಾಲ್ಕನೇ ಸಿನಿಮಾವಿದು. ಈಗಾಗಲೇ ಈ ಚಿತ್ರದ ಹಾಡು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ.  ಕವಿರಾಜ್‌ ಅವರು ಬರೆದಿರುವ “ನಿನ್ನನ್ನು ನೋಡಿದ ನಂತರ..’ ಎಂಬ ಗೀತೆ ಆನಂದ್‌ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಾಡಿನ ಹಾಗೂ ಸಿನಿಮಾದ ಬಗ್ಗೆ  ಮಾತನಾಡುವ ಗಣೇಶ್‌,” ನಾನು ಮೊದಲು ಆನಂದ್‌ ಆಡಿಯೋ ಅವರಿಗೆ ಧನ್ಯವಾದ ಹೇಳುತ್ತೇನೆ. ಏಕೆಂದರೆ ನನ್ನ ಸಿನಿಜರ್ನಿಯಲ್ಲೇ ಅತೀ ಹೆಚ್ಚು ಮೊತ್ತ ಕೊಟ್ಟು ಈ ಚಿತ್ರದ ಆಡಿಯೋ ರೈಟ್ಸ್‌ ಪಡೆದುಕೊಂಡಿದ್ದಾರೆ. ಇನ್ನು ಈ ಹಾಡನ್ನು ಕವಿರಾಜ್‌ ಬರೆದಿದ್ದಾರೆ. ಹುಡುಗಾಟ ಚಿತ್ರದ ಮಂದಾಕಿನಿ ಯೇ ಹಾಡಿನಿಂದ ಶುರುವಾದ ನಮ್ಮ ಜರ್ನಿ ಈ ಹಾಡಿನ ತನಕ ಮುಂದುವರೆದಿದೆ. ನನ್ನ ಅನೇಕ ಹಿಟ್‌ ಹಾಡುಗಳನ್ನು ಕವಿರಾಜ್‌ ಅವರೆ ಬರೆದಿ¨ªಾರೆ. ಅರ್ಜುನ್‌ ಜನ್ಯ ಸಂಗೀತ ಚಿತ್ರದ ಮತ್ತೂಂದು ಹೈಲೆಟ್‌ . ನಿರ್ದೇಶಕ ಪ್ರೀತಂ ಗುಬ್ಬಿ ಈ ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿ¨ªಾರೆ. ಸಾಮಾನ್ಯವಾಗಿ ನಾನು ಡಬ್ಬಿಂಗ್‌ ಸಮಯದಲ್ಲಿ ಚಿತ್ರದ ಬಗ್ಗೆ ಹೇಳಿ ಬಿಡುತ್ತೇನೆ. ಈ ಚಿತ್ರದ ಡಬ್ಬಿಂಗ್‌ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ. ನಾಯಕಿಯರಾದ ರುಕ್ಮಿಣಿ ವಸಂತ್‌ ಹಾಗೂ ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ  ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಪ್ರೀತಾ ಜಯರಾಮ್‌ – ಪ್ರೀತಂ ಗುಬ್ಬಿ ಸೇರಿ ಒಳ್ಳೆಯ ಕಥೆ ಬರೆದಿ¨ªಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಅದ್ಭುತವಾಗಿದೆ. ಕೀನ್ಯಾ ಭಾಗದ  ಚಿತ್ರೀಕರಣವನ್ನು  ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಈ ಚಿತ್ರದಲ್ಲಿ ಕ್ರಿಕೆಟ್‌ ಆಟಗಾರನಾಗಿ ಕಾಣಿಸಿಕೊಂಡಿದ್ದೇನೆ’ ಎನ್ನುವುದ ಗಣೇಶ್‌ ಮಾತು.

ಕಂಟೆಂಟ್‌ ಸಿನಿಮಾ ಮುಖ್ಯ

ಸದ್ಯ ಕನ್ನಡ ಚಿತ್ರರಂಗದ ಟ್ರೆಂಡ್‌ ಬದಲಾಗಿದೆ. ಒಂದು ಸಮಯದಲ್ಲಿ ಮೂರು ಹಾಡು, ನಾಲ್ಕು ಫೈಟ್‌ಗೆ ಖುಷಿಪಡುತ್ತಿದ್ದ ಆಡಿಯನ್ಸ್‌ ಅನ್ನು ಬದಿಗೆ ಸರಿಸಿ, ಆ ಸೀಟ್‌ನಲ್ಲಿ ಕಂಟೆಂಟ್‌ ಬಗ್ಗೆ ತಲೆಕೆಡಿಸಿಕೊಳ್ಳುವ, ಅಂತಹ ಸಿನಿಮಾಗಳಿಗೆ ಜೈಕಾರ ಹಾಕುವ ಪ್ರೇಕ್ಷಕರು ಬಂದು ಕುಳಿತಿದ್ದಾರೆ. ಇದು ಇವತ್ತಿನ ಬಹುತೇಕ ಹೀರೋಗಳಿಗೆ ಅರ್ಥವಾಗಿದೆ. ಇದರಲ್ಲಿ ಗಣೇಶ್‌ ಕೂಡಾ ಸೇರಿದ್ದಾರೆ. ಇಷ್ಟು ವರ್ಷ ಬೇರೆ ಬೇರೆ ಕಥೆಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ ಬಂದ ಗಣೇಶ್‌ ಅವರಿಗೆ ಬದಲಾದ ಸ್ಥಿತಿಯಲ್ಲಿ ಸಿನಿಮಾವೊಂದರ ಗೆಲುವಿಗೆ ಕಂಟೆಂಟ್‌ ಮುಖ್ಯ ಎಂಬುದು ಗೊತ್ತಾಗಿದೆ. “ಇವತ್ತು ಆಡಿಯನ್ಸ್‌ ಮೈಂಡ್‌ ಸೆಟ್‌ ಬದಲಾಗಿದೆ. ಜನ ಕಂಟೆಂಟ್‌ ಸಿನಿಮಾಗಳನ್ನು ಬಯಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಕಂಟೆಂಟ್‌ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಒಳ್ಳೆಯ ಸ್ಕೋರ್‌ ಮಾಡುತ್ತಿವೆ. ಕಂಟೆಂಟ್‌ ಅಂದಾಕ್ಷಣ ಏನೇನೋ ಮಾಡುವುದು ಸರಿಯಲ್ಲ. ಸಿನಿಮಾದಲ್ಲೊಂದು ವಿಶೇಷತೆ ಇದ್ದಾಗ ಮಾತ್ರ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯ. ನಾನು ಆ ತರಹದ ಕಥೆಗಳತ್ತ ಹೆಚ್ಚು ಗಮನಹರಿಸುತ್ತಿದ್ದೇನೆ’ ಎನ್ನುತ್ತಾರೆ ಗಣೇಶ್‌.

ಗಣೇಶ್‌ ಅವರ ಇಷ್ಟು ವರ್ಷದ ಜರ್ನಿಯಲ್ಲಿ ಚಿತ್ರರಂಗದ ಆಗು-ಹೋಗುಗಳನ್ನು ಹತ್ತಿರದಿಂದ ನೋಡಿದ್ದಾರೆ. ಅದೇ ಅನುಭವದ ಮೇಲೆ ಅವರೊಂದು ಮಾತು ಹೇಳುತ್ತಾರೆ; “ಚಿತ್ರರಂಗಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲಿ ಏರುಪೇರಾಗಬಹುದು. ಆದರೆ, ಯಾವತ್ತಿಗೂ ಮನರಂಜನಾ ಕ್ಷೇತ್ರ ನಿಲ್ಲೋದಿಲ್ಲ. ಅದು ಯಾವತ್ತಿದ್ದರೂ ನಿರಂತರ’ ಎನ್ನುತ್ತಾರೆ.

ಥ್ರಿಲ್ಲರ್‌ ಕನಸು

ಪ್ರತಿ ನಟನೊಳಗೊಬ್ಬ ನಿರ್ದೇಶಕನಿರುತ್ತಾನೆ ಎಂಬ ಮಾತಿದೆ. ಅದು ಸತ್ಯ ಕೂಡಾ ಅನೇಕ ಸಂದರ್ಭದಲ್ಲಿ ಕೆಲವು ನಟರು ನಿರ್ದೇಶನ ಮಾಡಿದ್ದಾರೆ. ಇದರಿಂದ ಗಣೇಶ್‌ ಕೂಡಾ ಹೊರತಲ್ಲ.ಈಗಾಗಲೇ “ಕೂಲ್‌’ ಸಿನಿಮಾ ನಿರ್ದೇಶನ ಮಾಡಿರುವ ಗಣೇಶ್‌ ಕಣ್ಣಲ್ಲಿ ಮತ್ತೆ ನಿರ್ದೇಶನದ ಕನಸು ಕಾಣುತ್ತಿದೆ. “ನಿರ್ದೇಶನ ಮಾಡಬೇಕೆಂಬ ಆಸೆ ಇದೆ. ಆದರೆ ಸಮಯವಿಲ್ಲ. ನಾನು ನಿರ್ದೇಶನಕ್ಕೆ ಹೋದರೆ ಒಂದೂವರೆ ವರ್ಷ ಬೇಕಾಗುತ್ತದೆ. ಇದರಿಂದ ನಾನು ಈಗಾಗಲೇ ಕಮಿಟ್‌ ಆಗಿರುವ ಸಿನಿಮಾಳಿಗೆ ತೊಂದರೆ ಆಗುತ್ತದೆ. ಮುಂದೆ ನಾನು ನಿರ್ದೇಶನ ಮಾಡಿದರೆ ಅದು ಥ್ರಿಲ್ಲರ್‌ ಸಿನಿಮಾವಾಗಿರುತ್ತದೆ. ನನಗೆ ಥ್ರಿಲ್ಲರ್‌ ಜಾನರ್‌ ಎಂದರೆ ತುಂಬಾ ಇಷ್ಟ’ ಎನ್ನುವುದು ಗಣೇಶ್‌ ಮಾತು.

ಎಜುಕೇಶನ್‌ ಫ‌ಸ್ಟ್‌ ಮಿಕ್ಕಿದ್ದು ನೆಕ್ಸ್ಟ್

ಗಣೇಶ್‌ ಅವರ ಮಕ್ಕಳಾದ ಚಾರಿತ್ರ್ಯ ಹಾಗೂ ವಿಹಾನ್‌ ಈಗಾಗಲೇ ಸಿನಿಮಾಗಳಲ್ಲಿ ಬಾಲ ಕಲಾವಿದರಾಗಿ ನಟಿಸಿದ್ದಾರೆ. ಸಹಜವಾಗಿಯೇ ಒಂದು ಪ್ರಶ್ನೆ ಬರುತ್ತದೆ. ಮುಂದೆ ಸಿನಿಮಾದಲ್ಲಿ ನಟಿಸುತ್ತಾರಾ, ಗಣೇಶ್‌ ಅದಕ್ಕೆ ಅವಕಾಶ ಮಾಡಿಕೊಡುತ್ತಾರಾ ಎಂಬುದೇ ಆ ಪ್ರಶ್ನೆ. ಈ ಬಗ್ಗೆ ಮಾತನಾಡುವ ಗಣೇಶ್‌, “ಮಗಳು ಈಗ ಎಂಟನೇ ಕ್ಲಾಸ್‌, ಮಗ ಎರಡನೇ ತರಗತಿಯಲ್ಲಿ ಓದುತ್ತಿದ್ದಾರೆ. ಮೊದಲು ಎಜುಕೇಶನ್‌, ಆ ನಂತರ ಏನು ಬೇಕಾದರೂ ಮಾಡಬಹುದು. ಆ ನಿಟ್ಟಿನಲ್ಲೇ ನಾನು ಯೋಚಿಸುತ್ತಿದ್ದೇನೆ’ ಎನ್ನುತ್ತಾರೆ.

-ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next