Advertisement

ಸಿಂಧು ಮುಂದೆ ಸುವರ್ಣಾವಕಾಶ

12:30 AM Aug 25, 2019 | Team Udayavani |

ಬಾಸೆಲ್‌: ಭಾರತದ ಭರವಸೆಯ ಶಟ್ಲರ್‌ ಪಿ.ವಿ. ಸಿಂಧು ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದ್ದಾರೆ. ಶನಿವಾರದ ಸೆಮಿಫೈನಲ್‌ ಕಾಳಗದಲ್ಲಿ ಅವರು ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌, ಚೀನದ ಚೆನ್‌ ಯು ಫೀ ವಿರುದ್ಧ ಕೇವಲ 40 ನಿಮಿಷಗಳಲ್ಲಿ 21-7, 21-14 ಅಂತರದ ಸುಲಭ ಗೆಲುವು ಸಾಧಿಸಿದರು.

Advertisement

ಇದು ಸಿಂಧು ಅವರ ಸತತ 3ನೇ ಫೈನಲ್‌ ಆಗಿದ್ದು, ಹಿಂದಿನೆರಡೂ ಕೂಟಗಳಲ್ಲಿ ಪ್ರಶಸ್ತಿ ವಂಚಿತರಾಗಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟಿದ್ದರು.

ಭಾರತಕ್ಕೆ ಒಲಿಯದ ಚಿನ್ನ
ಇದುವರೆಗೆ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಆಟಗಾರರ್ಯಾರೂ ಚಾಂಪಿಯನ್‌ ಆಗಿಲ್ಲ. ಇದೀಗ ಪಿ.ವಿ. ಸಿಂಧು ಮುಂದೆ ಇಂಥದೊಂದು ಸುವರ್ಣಾವಕಾಶ ಎದುರಾಗಿದೆ. ಗೆದ್ದರೆ ಬಂಗಾರದ ಪದಕ ಸಿಂಧು ಕೊರಳನ್ನು ಅಲಂಕರಿಸಲಿದೆ. ಫೈನಲ್‌ನಲ್ಲಿ ಸಿಂಧು 2017ರ ವಿಜೇತೆ, ವಿಶ್ವದ 4ನೇ ಶ್ರೇಯಾಂಕಿತೆ ಜಪಾನಿನ ನೊಜೊಮಿ ಒಕುಹಾರಾ ವಿರುದ್ಧ ಸೆಣಸಲಿದ್ದಾರೆ.

ಚೆನ್‌ ವಿರುದ್ಧ 5-3ರ ಗೆಲುವಿನ ದಾಖಲೆ ಹೊಂದಿನ ಪಿ.ವಿ. ಸಿಂಧು, ಸೆಮಿಫೈನಲ್‌ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದರು. ಇದಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತ ಹೋದರು. ಆರಂಭದಿಂದಲೇ ಮುನ್ನಡೆ ಸಾಧಿಸುತ್ತ ಹೋದ ಪಿ.ವಿ. ಸಿಂಧು ಮೊದಲ ಗೇಮ್‌ನ ವಿರಾಮದ ವೇಳೆ 11-3ರ ಮುನ್ನಡೆಯಲ್ಲಿದ್ದರು. ದ್ವಿತೀಯ ಗೇಮ್‌ನಲ್ಲೂ ಸಿಂಧು ಸ್ಪಷ್ಟ ಮೇಲುಗೈ ಸಾಧಿಸಿದರು. ಭಾರತೀಯಳ ಆಕ್ರಮಣಕಾರಿ ಆಟದ ಎದುರು ಚೀನಿ ಆಟಗಾರ್ತಿ ಚೆನ್‌ ಯು ಫೀ ಸಂಪೂರ್ಣ ಮಂಕಾದರು.

ಸಾಯಿ ಪ್ರಣೀತ್‌ಗೆ ಕಂಚು
ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಬಿ. ಸಾಯಿ ಪ್ರಣೀತ್‌ ಸೋಲನುಭವಿಸಿ ಕೂಟದಿಂದ ನಿರ್ಗಮಿಸಿದರು. ಜಪಾನಿನ ಅಗ್ರಮಾನ್ಯ ಶಟ್ಲರ್‌ ಕೆಂಟೊ ಮೊಮೊಟ 21-13, 21-8ರಿಂದ ಸುಲಭದಲ್ಲಿ ಮಣಿಸಿದರು. ಇದರೊಂದಿಗೆ ಪ್ರಣೀತ್‌ ಕಂಚಿನ ಪದಕಕ್ಕೆ ತೃಪ್ತರಾದರು.

Advertisement

ಇದು ಈ ಪ್ರತಿಷ್ಠಿತ ಕೂಟದ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ 1983ರ ಬಳಿಕ ಭಾರತಕ್ಕೆ ಒಲಿದ ಮೊದಲ ಪದಕ ಎಂಬುದು ವಿಶೇಷ. ಅಂದು ಪ್ರಕಾಶ್‌ ಪಡುಕೋಣೆ ಕೂಡ ಕಂಚು ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next