Advertisement
ಈ ಕರಫ್ಟ್ ಆಫೀಸರ್ ಒಂದು ಹಂತದಲ್ಲಿ ಕರೆಕ್ಟ್ ಆಫೀಸರ್ ಆಗುತ್ತಾನೆ. ನೋಡ ನೋಡುತ್ತಲೇ ಆ್ಯಕ್ಷನ್ ಹೀರೋ ಆಗಿ ರೌಡಿಗಳನ್ನು ಚೆಂಡಾಡುತ್ತಾನೆ. “ಪಟಾಕಿ’ ಚಿತ್ರ ನಿಮಗೆ ಮಜಾ ಕೊಡುವುದೇ ಈ ಕಾರಣಕ್ಕಾಗಿ. ಒಬ್ಬ ತುಂಟ ಯುವಕ ಎಸಿಪಿಯಾದರೆ, ಅದರಲ್ಲೂ “ಸಂಪಾದನೆ’ಯ ಕನಸು ಕಂಡವನಾಗಿದ್ದರೆ ಏನೆಲ್ಲಾ ಆಗಬಹುದು ಅವೆಲ್ಲವೂ ಇಲ್ಲಿ ಆಗುತ್ತದೆ. ಪಕ್ಕಾ ಒಂದು ಫ್ಯಾಮಿಲಿ ಸೆಂಟಿಮೆಂಟ್ ಹಿನ್ನೆಲೆಯ ಕಥೆಯನ್ನು ಆ್ಯಕ್ಷನ್ ಹಾಗೂ ಕಾಮಿಡಿ ಹಿನ್ನೆಲೆಯಲ್ಲಿ ಮಜಾವಾಗಿ ಹೇಳಿದ್ದಾರೆ ನಿರ್ದೇಶಕ ಮಂಜು ಸ್ವರಾಜ್.
ಇದು ತೆಲುಗಿನ “ಪಟಾಸ್’ ಚಿತ್ರದ ರೀಮೇಕ್. ಮೂಲ ಚಿತ್ರಕ್ಕೆ ಧಕ್ಕೆಯಾಗದಂತೆ ಇಲ್ಲೊಂದಿಷ್ಟು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ ಮತ್ತು ಅದು ಚಿತ್ರಕ್ಕೆ ಪೂರಕವಾಗಿದೆ ಕೂಡಾ. ಆರಂಭದಿಂದ ಇಂಟರ್‌ವಲ್‌ವರೆಗೆ ಬಿಸಿರಕ್ತದ ಎಸಿಪಿ ಸೂರ್ಯನ ಖತರ್‍ನಾಕ್ ಐಡಿಯಾಗಳು, ಆತನ ಆಲೋಚನೆಗಳನ್ನು ಹೇಳುವ ಮೂಲಕ ಫನ್ನಿಯಾಗಿ ಸಾಗುವ ಸಿನಿಮಾಕ್ಕೆ ಇಂಟರ್‌ವಲ್ ನಂತರ ಸೆಂಟಿಮೆಂಟ್ ಹಾಗೂ ಆ್ಯಕ್ಷನ್ ಟ್ಯಾಗ್ ಅಂಟಿಕೊಳ್ಳುತ್ತೆ. ಚಿತ್ರದಲ್ಲಿ ಒಂದು ಗಾಢವಾದ ಸೆಂಟಿಮೆಂಟ್ ಎಳೆ ಇದೆ. ಹಾಗಂತ ಅದನ್ನು ಹೆಚ್ಚು ಎಳೆದಾಡುವ ಗೋಜಿಗೆ ಹೋಗದೇ ಕಥೆಗೆ ಪೂರಕವಾಗಿ ಮುಗಿಸುವ ಮೂಲಕ ಎಂಟರ್‌ಟೈನ್‌ಮೆಂಟ್‌ಗೆ ಹೆಚ್ಚು ಮಹತ್ವ ನೀಡಲಾಗಿದೆ. ತಂದೆ-ಮಗನ ಸಂಬಂಧ, ಅವರ ಫ್ಲ್ಯಾಶ್‌ಬ್ಯಾಕ್, ಅಣ್ಣ-ತಂಗಿ ಬಾಂಧವ್ಯ … ಎಲ್ಲವೂ ಈ ಸಿನಿಮಾದಲ್ಲಿವೆ.
Related Articles
Advertisement
ಹಾಗಾಗಿ, ಲವ್, ಆ್ಯಕ್ಷನ್, ಸೆಂಟಿಮೆಂಟ್ ಜೊತೆಗೆ ಕಾಮಿಡಿ ಸೇರಿಕೊಳ್ಳುವ ಮೂಲಕ “ಪಟಾಕಿ’ ಇಷ್ಟವಾಗುತ್ತದೆ. ಚಿತ್ರದಲ್ಲಿ ಬರುವ ಕೆಲವು ದೃಶ್ಯಗಳನ್ನು ಟ್ರಿಮ್ ಮಾಡುವ ಮೂಲಕ ಚಿತ್ರದ ವೇಗವನ್ನು ಮತ್ತಷ್ಟು ಹೆಚ್ಚಿಸುವ ಅವಕಾಶ ನಿರ್ದೇಶಕರಿಗಿತ್ತು. ನಾಯಕ ಗಣೇಶ್‌ಗೆ ಆ್ಯಕ್ಷನ್ ಚಿತ್ರ, ಪೊಲೀಸ್ ಪಾತ್ರ ಒಗ್ಗುತ್ತಾ ಎಂಬ ಪ್ರಶ್ನೆ ಅನೇಕರಲ್ಲಿತ್ತು. ಆ ಎಲ್ಲಾ ಪ್ರಶ್ನೆಗಳಿಗೆ ಗಣೇಶ್ ತಮ್ಮ ನಟನೆಯ ಮೂಲಕ ಉತ್ತರ ಕೊಟ್ಟಿದ್ದಾರೆ. ಅವರಿಲ್ಲಿ ಮೂರು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಲವರ್‌ಬಾಯ್, ಪಕ್ಕಾ ಲೋಕಲ್ ಎಸಿಪಿ ಹಾಗೂ ಸ್ಟ್ರಿಕ್ಟ್ ಆಫೀಸರ್ ಎಸಿಪಿ ಸೂರ್ಯ. ಈ ಮೂರು ಶೇಡ್‌ಗಳಲ್ಲಿ ಗಣೇಶ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ತಂದೆ-ಮಗನ ನಡುವಿನ ಕೆಲವು ಸನ್ನಿವೇಶಗಳಲ್ಲಿ ಗಣೇಶ್ ಹೆಚ್ಚು ಇಷ್ಟವಾಗುತ್ತಾರೆ. ನಾಯಕಿ ರನ್ಯಾಗೆ ಇಲ್ಲಿ ಹೆಚ್ಚು ಸ್ಕೋಪ್ ಇಲ್ಲ. ಗಣೇಶ್ ತಂದೆಯಾಗಿ, “ಡ್ನೂಟಿ ಫಸ್ಟ್ ಫ್ಯಾಮಿಲಿ ನೆಕ್ಸ್ಟ್’ ಎಂಬ ಖಡಕ್ ಪೊಲೀಸ್ ಆಫೀಸರ್ ಆಗಿ ಸಾಯಿಕುಮಾರ್ ಮಿಂಚಿದ್ದಾರೆ.
ಮಾತು ಬಾರದ ತಂಗಿಯಾಗಿ ಪ್ರಿಯಾಂಕಾ ತಮ್ಮ ಭಾವನೆಗಳ ಮೂಲಕ ಪಾತ್ರದ ತೂಕ ಹೆಚ್ಚಿಸಿದ್ದಾರೆ. ಉಳಿದಂತೆ ಆಶಿಶ್ ವಿದ್ಯಾರ್ಥಿ, ಧರ್ಮ, ಸಾಧುಕೋಕಿಲ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಾಡು ಹಾಗೂ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.
ಚಿತ್ರ: ಪಟಾಕಿನಿರ್ಮಾಣ: ಎಸ್.ವಿ.ಬಾಬು
ನಿರ್ದೇಶನ: ಮಂಜು ಸ್ವರಾಜ್
ತಾರಾಬಳಗ: ಗಣೇಶ್, ರನ್ಯಾ, ಸಾಯಿಕುಮಾರ್, ಪ್ರಿಯಾಂಕಾ, ಸಾಧುಕೋಕಿಲ, ಆಶಿಶ್ ವಿದ್ಯಾರ್ಥಿ ಮತ್ತಿತರರು. * ರವಿಪ್ರಕಾಶ್ ರೈ