Advertisement

ಗೋಲ್ಡನ್‌ ಹವರ್‌ ನೆವರ್‌

12:56 PM May 21, 2018 | |

ಚಿನ್ನದ ಮೇಲಿನ ಹೂಡಿಕೆ ಯಾವಾಗಲು ಅತ್ಯುತ್ತಮ ಎಂಬ ನಂಬಿಕೆ ತುಂಬಾ ಹಿಂದಿನಿಂದಲೂ ಇತ್ತು. ಆದರೆ ಇತ್ತೀಚೆಗೆ ಚಿನ್ನದ ಖರೀದಿ ವಿಷಯದಲ್ಲಿ ಎಲ್ಲರೂ ನಿರಾಸಕ್ತಿ ತೋರುತ್ತಿದ್ದಾರೆ. ಚಿನ್ನ ಖರೀದಿಸಿದರೆ ಅದಕ್ಕೆ ಭದ್ರತೆ ಸಿಗದಿರುವುದು, ಚಿನ್ನದ ಬೆಲೆ ದಿನಕ್ಕೊಂದು ಅವಸ್ಥೆ ಕಾಣುತ್ತಿರುವುದು, ಚಿನ್ನದ ಮೇಲಿನ ಹೂಡಿಕೆಯಿಂದ ಕೆಲವೊಮ್ಮೆ ನಷ್ಟದ ಆಗಿರುವುದು… ಇಂಥವೇ ಹಲವು ಕಾರಣಗಳಿಂದ ಹಳದಿ ಲೋಹದ ಮೇಲೆ ಹಲವರಿಗೆ ನಿರಾಸಕ್ತಿ ಉಂಟಾಗಿದೆ.

Advertisement

ಚಿನ್ನ, ಬಂಗಾರ, ಚಿನ್ನುಮರಿ ಎಂದು ಮಕ್ಕಳನ್ನು ಸಂಬೋಧಿಸುವುದುಂಟು. ಭಾವನಾತ್ಮಕ ಬಂಧವಿರುವ ವ್ಯಕ್ತಿ, ವಿಷಯಗಳು ಬಂಗಾರಕ್ಕಿಂತಲೂ ಮಿಗಿಲು ಎಂಬುದರ ದ್ಯೋತಕವಿದು. ಜೊತೆಗೆ, ಭಾರತದಲ್ಲಿ ಚಿನ್ನಕ್ಕೆ ಮೊದಲಿನಿಂದಲೂ ನೀಡಿರುವ ಸ್ಥಾನಮಾನವೂ ಸಾಮಾನ್ಯವಾದದ್ದೇನಲ್ಲ. ಚಿನ್ನದ ವಿಷಯಕ್ಕೆ ರಾಜಮಹಾರಾಜರ ಅದೆಷ್ಟೋ ಯುದ್ದಗಳು ನಡೆದಿವೆ. ಸ್ವರ್ಣದಿಂದಲೇ ರಾಜಿಸಂಧಾನವೂ ಆಗಿದೆ ಅದೆಲ್ಲಾ ಸುವರ್ಣಯುಗದ ಮಾತು.

ಆದರೆ, ನವಯುಗದಲ್ಲಿ ಬಂಗಾರ ಒಂದು ದೊಡ್ಡ ಮಟ್ಟದ ಹೂಡಿಕೆ ಎಂದು ಭಾವಿಸಿ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಸುತ್ತಿದ್ದ ಜನರು ಇತ್ತೀಚೆಗೆ ಏಕೋ ಚಿನ್ನದ ಮೇಲೆ ಹೂಡುವುದನ್ನು ಕಡಿಮೆ ಮಾಡಿದಂತಿದೆ. ಅಥವಾ ಬಂಗಾರ ಉತ್ತಮ ಹೂಡಿಕೆಯಲ್ಲ ಎಂದು ನಿಯಂತ್ರಿಸುತ್ತಿರುವಂತಿದೆ. ಇದಕ್ಕೆ ಹೂಡಿಕೆ ಅವಕಾಶಗಳಲ್ಲಿ ಕಂಡುಬಂದಿರುವ ಹೆಚ್ಚಳ, ಚಿನ್ನದ ಭದ್ರತೆ ಪ್ರಶ್ನೆ, ಹೊಸ ಪೀಳಿಗೆಯಲ್ಲಿ ಬಂಗಾರದ ವ್ಯಾಮೋಹ ಇಳಿಕೆ, ಗೋಲ್ಡ್‌ ಬಾಂಡಿನ ಮೇಲೆ ಬಡ್ಡಿದರ ಹೆಚ್ಚಳ, ಮೌಲ್ಯದ ಏರಿಳಿತದ ಕೊರತೆ ಹೀಗೆ ಅನೇಕ ಕಾರಣಗಳೂ ಇವೆ. ಇದರ ಒಂದು ನೋಟ ಇಲ್ಲಿದೆ.

ಆಯ್ಕೆಗಳು: ಮೊದಲೆಲ್ಲಾ ಚಿನ್ನ ಖರೀದಿ ಮಾಡುವಾಗ ದೃಢ ನಿರ್ಧಾರವಿರುತ್ತಿತ್ತು. ಜತೆಗೆ ಚಿನ್ನ ಖರೀದಿ ಪ್ರತಿಷ್ಠೆಯ ಸರಕು, ಅಲ್ಲದೆ ಬೇರೆ ಆಯ್ಕೆ ಮತ್ತು ಅರಿವಿನ ಕೊರತೆಯಿಂದಾಗಿ ಬಂಗಾರದ ಮೇಲೆ ಸಾರಾ ಸಗಟಾಗಿ ಹೂಡಿಕೆ ಮಾಡಿಬಿಡುತ್ತಿದ್ದರು. ಆದರೆ, ಜನರು ಈಗ ಬುದ್ಧಿವಂತರಾಗಿದ್ದಾರೆ. ಹೂಡಿಕೆಯಲ್ಲಿರುವ ಅನೇಕ ಆಯ್ಕೆಗಳನ್ನು ಕಂಡುಕೊಂಡಿದ್ದಾರೆ.

ಚಿನ್ನದ ಮೇಲೆ ಹಾಕುವ ದುಡ್ಡನ್ನು ಕೆಲಕಾಲ ಸಂಗ್ರಹಿಸಿ ರಿಯಲ್‌ ಎಸ್ಟೇಟ್‌ ಮೇಲೆ ಹಾಕಿದರೆ ಹೇಗೆ, ಅದರ ಬದಲು ಮ್ಯೂಚುವಲ್‌ ಫ‌ಂಡ್‌ ಖರೀದಿಸಿದರೆ ಹೇಗೆ? ಎಂದೆಲ್ಲಾ ಯೋಚಿಸುವಷ್ಟು ತಾಳ್ಮೆ ಬಂದಿದೆ. ಹಣವನ್ನು ಅಗತ್ಯಕ್ಕೆ ತಕ್ಕಂತೆ ಬಳಸುವಂತೆ ಚಿನ್ನವನ್ನೂ ಅಗತ್ಯ ಬಿದ್ದರೆ ಮಾತ್ರ ಕೊಳ್ಳುವಂತಹ ವಿವೇಚನೆ ಇದೆ.

Advertisement

ಸ್ವರ್ಣ ಮೌಲ್ಯ: ಸುವರ್ಣ ಖರೀದಿಯನ್ನು ಮೊದಲು ಅದರ ಮೌಲ್ಯದ ಆಧಾರದ ಮೇಲೆ ಕೊಂಡು ಮಾರುವ ಪರಿಭಾಷೆ ಇತ್ತೀಚೆಗೆ ನೆಲಕಚ್ಚಿದೆ. ಅಂದರೆ ಚಿನ್ನದ ಮೌಲ್ಯ ಕಡಿಮೆ ಇದ್ದಾಗ ಕೊಂಡು ಅದು ಹೆಚ್ಚು ಮೌಲ್ಯಧಾರಣೆ ಮಾಡಿದಾಗ ಮಾರುವ ಪರಿಭಾಷೆ ಕುಂಠಿತವಾಗಿದೆ. ಈ ಸ್ಥಾನವನ್ನು ಶೇರು ಮಾರುಕಟ್ಟೆ ನಿರ್ವಹಿಸುತ್ತಿದೆ.

ಜಾಗತಿಕವಾಗಿ ಬಂಗಾರದ ಮೌಲ್ಯವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತ ನಿರ್ಧರಿಸುವುದರಿಂದ ಚಿನ್ನದ ಪ್ರತಿದಿನದ ಬದಲಾವಣೆ ದೊಡ್ಡಮಟ್ಟದಲ್ಲಿರುವುದಿಲ್ಲ. ಜೊತೆಗೆ ಬಂಗಾರ ಡಾಲರ್‌ನೊಂದಿಗೆ ನಂಟು ಹೊಂದಿರುವ ಕಾರಣ ರೂಪಾು ಮೌಲ್ಯ-ಡಾಲರ್‌ ಮೌಲ್ಯದಲ್ಲಿ ಬದಲಾವಣೆಯಾದಾಗಲೂ ಚಿನ್ನದ ಮೌಲ್ಯ ಬದಲಾವಣೆ ಸಾಧ್ಯತೆಯಿರುತ್ತದೆ.

ಆದರೆ, ಡಾಲರ್‌-ರೂಪಾಯಿ ಮೌಲ್ಯ ಬದಲಾವಣೆ ಪ್ರತಿದಿನ ದೊಡ್ಡ ಪ್ರಮಾಣದ ಬದಲಾವಣೆಯಾಗದ ಕಾರಣ ಏರಿಳಿತದ ಗತಿ ಕಡಿಮೆಯಿರುತ್ತದೆ. ಹೀಗಾಗಿ ಶೇರುಮಾರುಕಟ್ಟೆಯಲ್ಲಿ ಚಿನ್ನದ ಶೇರುಗಳನ್ನು ಖರೀದಿ ಮಾಡಿ ಮಾರಾಟ ಮಾಡುವ ಗ್ರಾಹಕ‌ ದೊಡ್ಡಮಟ್ಟದ ಲಾಭ ಗಳಿಸಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ಬಂಗಾರದ ದ್ರುವೀಕರಣದ ವೇಗ ತೀರಾ ಕಡಿಮೆಯಾದಾಗ, ಅದರ ಮೇಲೆ ಹೂಡಿಕೆ ಸಾಮಾನ್ಯವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

ದ್ರುವೀಕರಣದ ವೇಗ ಹೆಚ್ಚಿರುವ ಉತ್ಪನ್ನದ ಮೇಲೆ ಹೂಡಲು ಗ್ರಾಹಕ ಅಥವಾ ವ್ಯಾಪಾರಸ್ಥ ಮನಸ್ಸು ಮಾಡುತ್ತಾನೆ. ಇಲ್ಲಿ ಮತ್ತೂಂದು ವಿಷಯ ಹೇಳಬೇಕೆಂದರೆ ಚಿನ್ನದ ಬೆಲೆ ಕಡಿಮೆಯಾದಾಗ ಕೊಂಡು ಹೆಚ್ಚಾದಾಗ ಮಾರುವ ಅವಕಾಶ ದೊರೆಯುವುದು ಆಭರಣ ಮಳಿಗೆಗಳಿಗೆ ಮಾತ್ರ ಏಕೆಂದರೆ ಅವರು ಅಂದಂದಿನ ಚಿನ್ನ, ಆಭರಣ ಮೌಲ್ಯವನ್ನು ಮಾತ್ರ ನಮೂದಿಸಿ ಬಿಲ್‌ ನೀಡುತ್ತಾರೆಯೇ ಹೊರತು, ತಮ್ಮ ಹಣದಲ್ಲಿ ಮೂಲ ಮಾರುಕಟ್ಟೆಯಲ್ಲಿ ಚಿನ್ನ ಖರೀದಿಸಿದ ಯಾವುದೇ ಆಧಾರ ನೀಡುವುದಿಲ್ಲ.

ಸುವರ್ಣ ಸಾಲಪತ್ರ (ಗೋಲ್ಡ್‌ ಬಾಂಡ್‌): ಸುವರ್ಣ ಸಾಲಪತ್ರ ಅಥವಾ ಗೋಲ್ಡ್‌ ಬಾಂಡ್‌ ಅನ್ನು ರಿಸರ್ವ್‌ ಬ್ಯಾಂಕ್‌ ಆಗ್ಗಿಂದಾಗ್ಗೆ ನೀಡುತ್ತಾ ಬಂದಿದೆ. ಕಾಗದದ ರೂಪಿ ಚಿನ್ನವನ್ನು ಖರೀದಿ ಮಾಡಿದರೆ ಅದರ ಮೇಲೆ ಶೇ.2.75 ಬಡ್ಡಿಯನ್ನು ನೀಡಲಾಗುತ್ತಿತ್ತು. ಆದರೆ ಅದರ ಬಡ್ಡಿದರವನ್ನು ಶೇ.0.25 ಇಳಿಕೆ ಮಾಡಲಾಗಿದೆ. ಅಂದರೆ ಶೇ.2.50 ಬಡ್ಡಿ ನೀಡಲು ಮುಂದಾಗಿದೆ.

ಇದರಿಂದ ಎಂಟು ವರ್ಷದ ಅವಧಿಗೆ ಬಾಂಡ್‌ ಖರೀಸುವ ಗ್ರಾಹಕನಿಗೆ ಆರು ತಿಂಗಳಿಗೊಮ್ಮೆ ರಿಸರ್ವ್‌ಬ್ಯಾಂಕ್‌ ನೀಡುವ ಬಡ್ಡಿಯಲ್ಲಿ ನಿಶ್ಚಿತ ಲಾಭ ಕಡಿಮೆಯಾದಂತಾಯಿತು. ಇಎಂಐ ಮೂಲಕ ಒಂದು ನಿವೇಶನ ಖರೀದಿ ಮಾಡಿದರೆ ಎಂಟು ವರ್ಷದ ಬಳಿಕ ದೊರಕುವ ಲಾಭ ನಿವೇಶನ ಖರೀದಿಯ 2-3 ಪಟ್ಟು ಎಂದು ಸಾಮಾನ್ಯ ವ್ಯಾಪಾರಸ್ಥ ಯೋಚಿಸದೇ ಇರನು. ಇದೇ ಮಾದರಿಯಲ್ಲಿ ಅನೇಕ ಹೂಡಿಕೆಗಳಲ್ಲೂ ಚಿನ್ನದ ಮೇಲಿನ ಹೂಡಿಕೆಗಿಂತ ಹೆಚ್ಚು ಲಾಭ ತರುವಂತಾದರೆ ಬಂಗಾರದ ಯೋಜನೆಗಳ ಗತಿ ಏನಾಗಬಹುದೆಂದು ನೀವೇ ಯೋಚಿಸಿ.

ವ್ಯಾಮೋಹ ತಗ್ಗುತ್ತಿದೆಯೇ?: ಮಗಳ ಮದುವೆಗೋ, ಮಡದಿಯ ದುಂಬಾಲಿಗೋ ಕಟ್ಟುಬಿದ್ದು ಚಿನ್ನ ಖರೀದಿಸುವ ಸಂಪ್ರದಾಯ ನಮ್ಮಲ್ಲಿ ಮೊದಲಿನಿಂದಲೂ ಇದೆ. ಅಂದರೆ ಹಳದಿ ಲೋಹದ ಆಭರಣ ಖರೀದಿಯ ವ್ಯಾಮೋಹ ಇತ್ತೀಚೆಗೆ ತಗ್ಗಿದಂತೆ ಕಾಣುತ್ತಿದೆ. ಆಕ್ಸಸರಿ ಪ್ಯಾಷನ್‌ ಲೋಕ ಜಾಗೃತವಾದ ಮೇಲೆ ಹೋಸ ಪೀಳಿಗೆಯ ಯುವಕ ಯುವತಿಯರು ತಮ್ಮ ವಸ್ತ್ರದೊಂದಿಗೆ ಆಭರಣಗಳನ್ನೂ ಮ್ಯಾಚಿಂಗ್‌ ಮಾಡಲು ಮುಂದಾಗಿದ್ದಾರೆ.

ಈ ಕಾರಣದಿಂದ ದಿನವೂ ಚಿನ್ನವನ್ನು ತೊಡುತ್ತಿದ್ದ ಮಂದಿ ಈಗ ಕೇವಲ ಮದುವೆ, ಆರತಕ್ಷತೆಯಂಥ ಶುಭ ಸಂದರ್ಭಗಳಲ್ಲಿ ಮಾತ್ರ ಸಂದರ್ಭದಲ್ಲಿ ತೊಡುತ್ತಾರೆ. ಇದಕ್ಕೆ ಅವರು ನಮ್ಮ ಮುಂದಿಡುವ ಕಾರಣ ಒಂದು ಭದ್ರತೆಯದ್ದು, ಇನ್ನೊಂದು, ಕಡಿಮೆ ಖರ್ಚಿನಲ್ಲಿ ಉತ್ತಮ ವಿನ್ಯಾಸದ ಚಿನ್ನದ ತಲೆ ಮೇಲೆ ಹೊಡೆಯುವಂತಹ ಆಕರ್ಷಕ ಆಭರಣಗಳು ದೊರೆಯುತ್ತಿರುವುದು. ಇದನ್ನೇ ಚಿನ್ನದಲ್ಲಿ ಮಾಡಿಸಬೇಕೆಂದರೆ ಚಿನ್ನದ ಬೆಲೆ ಜೊತೆ ಮೇಕಿಂಗ್‌ ಚಾರ್ಚ್‌ ದುಬಾರಿ ಎನ್ನುತ್ತಾರೆ ಗ್ರಾಹಕರು.

ಭದ್ರತೆ: ಚಿನ್ನ ಖರೀದಿಸಿ ಅಗತ್ಯ ಬಿದ್ದಾಗ ಅದನ್ನು ನಗದಾಗಿ ಪರಿವರ್ತಿಸುವ ಆಲೋಚನೆಯನ್ನು ಎಲ್ಲರೂ ಮಾಡುತ್ತಾರೆ. ಅದೇ ಕಾರಣಕ್ಕೆ ಖರೀದಿ ಮಾಡುತ್ತಾರೆ ಕೂಡ. ಆದರೆ ಚಿನ್ನಕ್ಕೆ ಭದ್ರತೆ ಒದಗಿಸುವ ವಿಷಯದಲ್ಲಿ ಚಿಂತೆಗೀಡಾಗುತ್ತಾರೆ. ನಗರ ಪ್ರದೇಶದಲ್ಲಿ ಮನೆ ಮಂದಿಯೆಲ್ಲಾ ತಮ್ಮ ಕೆಲಸಗಳಿಗೆ ತೆರಳಿದರೆ ಅದನ್ನು ಭದ್ರ ಮಾಡುವ ಹೊಣೆಯಾರದ್ದು?

ಖರೀದಿಸಿದ ಚಿನ್ನವನ್ನು ಬ್ಯಾಂಕ್‌ ಲಾಕರಿನಲ್ಲಿ ಇರಿಸಿದ್ದೇವೆ ಎಂತಾದರೆ ಅದಕ್ಕೆ ನಾವೇ ವರ್ಷಕ್ಕೆ ಇಂತಿಷ್ಟು ಹಣ ಕಟ್ಟಬೇಕು. ಅಲ್ಲದೆ ಬೇಕಾದಾಗ ತಂದು, ಮತ್ತೆ ಅದನ್ನು ವಾಪಸ್‌ ಲಾಕರಿನಲ್ಲಿ ಇರಿಸುವ ಪಜೀತಿ ಸಮಾನ್ಯವಾದದ್ದಲ್ಲ. ಬ್ಯಾಂಕಿನ ರಜೆ ಸಮಯದಲ್ಲಿ ಅದನ್ನು ತರಲಾಗದು. ಜತೆಗೆ ಬ್ಯಾಂಕಿನ ನೂರಾರು ನಿಯಮಗಳು ಬೇರೆ ಎಂದು ಜನರು ಯೋಚಿಸುವುದೂ ಇದೆ. ಮನೆಯಲ್ಲಿದ್ದ ಚಿನ್ನ ಕಳ್ಳಕಾಕರ ಪಾಲಾದರೆ ಅದರ ಆಘಾತವನ್ನು ಹೇಳಲು ಸಾಧ್ಯವೇ?

ಗೋಲ್ಡ್‌ ಫೈನಾನ್ಸ್‌: ಮನೆಯಲ್ಲಿ ಇದ್ದರೆ ಚಿನ್ನ, ಚಿಂತೆ ಏತಕೆ ಇನ್ನ ಎಂದು ಹೇಳುವ ಬಂಗಾರದ ಫೈನಾನ್ಸ್‌ ಕಂಪನಿಗಳು ಚಿನ್ನವನ್ನು ಇರಿಸಿಕೊಂಡು ಅದರ ಮೇಲೆ ಸಾಲವನ್ನು ನೀಡುವುದಿದೆ. ಇದಕ್ಕೆ ಕೆಲವು ನಿಯಮಗಳನ್ನು ಹಾಕಿಯೇ ಅವರು ಸಾಲ ನೀಡಿರುತ್ತಾರೆ. ಸಾಲದ ಅವಧಿ ಮುಗಿಯುವ ಮುನ್ನ ಬಡ್ಡಿ ಸಮೇತ ಸಾಲ ಮರು ಪಾವತಿಸಿದರೆ ನಿಮಗೆ ಬಂಗಾರ ಸಿಗುತ್ತದೆ.

ಇಲ್ಲದಿದ್ದರೆ ಚಿನ್ನಕ್ಕಾಗಿ ಸಾಲ ಮಾಡಿದ್ದಾಯಿತು. ಚಿನ್ನದ ಸಾಲ ತೀರಿಸಲು ಚಿನ್ನದ ಮೇಲೆ ಸಾಲ ಪಡೆದಾಯಿತು. ಈಗ ಚಿನ್ನವೂ ಹೋಯಿತು ಎಂಬ ಸ್ಥಿತಿ ಗ್ರಾಹಕನದಾಗುತ್ತದೆ. ಇಲ್ಲಿ ಮತ್ತೂಂದು ಷಯವೆಂದರೆ ಚಿನ್ನದ ಲಿಕ್ವಿಡಿಟಿಯನ್ನು ಚಿನ್ನದ ಮೂಲ ವ್ಯಕ್ತಿಯ ಬದಲಾಗಿ ಕಂಪನಿ ಆಸ್ವಾದಿಸುವಂತಾದರೆ ಅದರಿಂದ ಲಾಭಕ್ಕಿಂತ, ನಷ್ಟವೇ ಅಧಿಕ.

ಎಕ್ಸ್‌ಚೇಂಜ್‌ ಜಾಲ: ಸಾಮಾನ್ಯವಾಗಿ ಮಹಿಳೆಯರು ಹೊಸನ್ಯಾಸದ ಆಭರಣ ಮತ್ತು ಚಿನ್ನ, ಬೆಳ್ಳಿ ವಸ್ತುಗಳನ್ನು ಖರೀದಿಸಲು ಇಚ್ಛಿಸುತ್ತಾರೆ. ಅದಕ್ಕಾಗಿ ಇದ್ದ ಚಿನ್ನವನ್ನು ಕೆಲವೊಮ್ಮೆ ಎಕ್ಸ್‌ಚೇಂಜ್‌ ಮಾಡುವುದೂ ಇದೆ. ಇದೊಂದು ಮಾದರಿಯ ಜಾಲದಲ್ಲಿ ಸಿಕ್ಕಿಕೊಂಡಂತೆ. ಚಿನ್ನವನ್ನು ಮತ್ತೆ ಕರಗಿಸಿ ಇನ್ನೊಂದು ವಿನ್ಯಾಸದ ಆಭರಣವನ್ನಾಗಿ ಮಾಡಿಕೊಡಲು ಅಕ್ಕಸಾಲಿಗ ಅಥವಾ ಆಭರಣ ಮಳಿಗೆ ಮತ್ತಷ್ಟು ಮೇಕಿಂಗ್‌ ಚಾರ್ಚ್‌ನ್ನು ಬೇಡುತ್ತದೆ. ಇದರಿಂದ ಚಿನ್ನ ಜತೆ ಆಗುವ ಖರ್ಚು ಸಾಮಾನ್ಯವಾದುದ್ದಲ್ಲ.

ಮತ್ತೆ ಕೆಲವು ಸಂದರ್ಭದಲ್ಲಿ ಹಳೇ ಚಿನ್ನವನ್ನು ಸ್ಥಳದಲ್ಲಿಯೇ ಪಡೆದು ಹೊಸ ವಿನ್ಯಾಸದ ಆಭರಣ ನೀಡುವುದಿದೆ. ಇಲ್ಲಿಯೂ ಸಹ ಹಳೇ ಚಿನ್ನದ ಗುಣಮಟ್ಟದಷ್ಟು ಹೊಸ ಚಿನ್ನವಿರುವುದಿಲ್ಲ ಎನ್ನುತ್ತಾರೆ ಗ್ರಾಹಕರು. ಜತೆಗೆ ಹಳೆಚಿನ್ನದ ಮೌಲ್ಯಕ್ಕೆ ಹೊಸ ಆಭರಣ ನೀಡುವ ಮಳಿಗೆಗೆ ಆಗುವ ಲಾಭದ ಮೇಲೆ ಸಂಶಯ ವ್ಯಕ್ತಪಡಿಸುವುದೂ ಇದೆ. ಇಲ್ಲಿ ಆಭರಣ ಮತ್ತು ಅದರಲ್ಲಿ ಬಳಕೆಯಾಗಿರುವ ರತ್ನಗಳು, ಚಿನ್ನದ ಗುಣಮಟ್ಟದ ಬಗ್ಗೆ ಜಾಗೃತರಾಗಿರುವುದು ಒಳಿತು.

1. ಗೋಲ್ಡ್‌ ಬಾರ್‌, ಅಥವಾ ಕಾಯನ್‌ ರೂಪದಲ್ಲಿ ಕೊಂಡ ಚಿನ್ನವನ್ನು ಆಭರಣ ಮಾಡಿಸದೇ ಧಿುಲ್ಲ ಏಕೆಂದರೆ ಗೋಲ್ಡ್‌ ಬಾರ್‌ಗಳನ್ನು ಮಾರುವ ಬ್ಯಾಂಕ್‌, ಅಥವಾ ಮಳಿಗೆಗಳು ಅದನ್ನು ಮತ್ತೆ ಕೊಳ್ಳುವುದು ತೀರಾ ಕಡಿಮೆ.

2. ಚಿನ್ನದಿಂದ ಆದಾಯವನ್ನು ನಿರೀಕ್ಷಿಸುವುದು ಗಿಡ ನೆಟ್ಟು ಹಣ್ಣು ಬೇಡಿದಂತೆ ಅಂದರೆ ಚಿನ್ನವು ದೀರ್ಘ‌ಕಾಲದ ಬಳಿಕ ಅದರ ಮೌಲ್ಯವರ್ಧನೆಯಾಗಿ ಲಾಭ ತಂದು ಕೊಡಬಲ್ಲದು ಶೀರ್ಘ‌ವಾಗಿ ಅದರಿಂದ ಲಾಭ ಅಸಾಧ್ಯ.

3. ಇತ್ತೀಚಿನ ಬೆಳವಣಿಗೆಯಲ್ಲಿ ಚಿನ್ನವನ್ನು ಆಪ್‌ ಮೂಲಕ ಅಮೂರ್ತ ಸ್ವರೂಪದಲ್ಲಿ ಖರೀದಿಸುವ ಪರಿಕಲ್ಪನೆಯಿದೆ. ಇದನ್ನು ಮೂರ್ತ ಸ್ವರೂಪದ ಸುವರ್ಣವಾಗಿ ಪರಿವರ್ತಿಸಲು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.

4. ಜಿಎಸ್‌ಟಿ ಬಳಿಕ ಚಿನ್ನ ಮತ್ತು ಆಭರಣದ ಮೇಲೆ ಏರಿಕೆಯಾದ ತೆರಿಗೆ ಹೆಚ್ಚಳ ಗ್ರಾಹಕರಲ್ಲಿ ಚಿನ್ನ ವ್ಯಾಮೋಹಕ್ಕೆ ತಣ್ಣೀರೆರಚಿದಂತೆ ಮಾಡಿದೆ. ಚಿನ್ನದ ಆಭರಣದ ವಿಷಯದಲ್ಲಿ ಚಿನ್ನದೊಂದಿಗೆ ಕಲ್ಲನ್ನು(ರತ್ನ) ಲೆಕ್ಕಹಾಕುವ ಪರಿಭಾಷೆ ಇನ್ನೂ ಇದೆ. ಚಿನ್ನ ಮತ್ತು ಕಲ್ಲನ್ನು ಬೇರೆ ಬೇರೆ ಲೆಕ್ಕ ಹಾಕವುದು ಕೆಲವೇ ಮಳಿಗೆಗಳು ಮಾತ್ರ. 

* ಎನ್. ಅನಂತನಾಗ್

Advertisement

Udayavani is now on Telegram. Click here to join our channel and stay updated with the latest news.

Next