ಬೀಳಗಿ (ಬಾಗಲಕೋಟೆ): ತನ್ನ ಆಪ್ತಮಿತ್ರನೊಂದಿಗೆ ಕೃಷ್ಣಾ ನದಿ ಈಜುವ ಷರತ್ತು ಕಟ್ಟಿದ್ದ ರೈತನೋರ್ವ, ಗೆಳೆಯ ಸೋತರೂ ಎರಡೂವರೆ ತೊಲೆ ಚಿನ್ನದ ಉಂಗುರ ತೊಡಿಸುವ ಮೂಲಕ ಗಮನ ಸೆಳೆದರು. ಬೀಳಗಿ ತಾಲೂಕು ರೊಳ್ಳಿ ಗ್ರಾಮದ ಗೋವಿಂದಪ್ಪ ಬಿಳೆಂಡಿ ಅವರೇ ತಮ್ಮ ಗೆಳೆಯ, ಕಾಂಗ್ರೆಸ್ ಮುಖಂಡ ಶಿವಾನಂದ ನಿಂಗನೂರ ಅವರಿಗೆ ಸುಮಾರು 76 ಸಾವಿರ ಮೊತ್ತದ ಚಿನ್ನದ ಉಂಗುರ ತೊಡಿಸಿದರು. ನದಿ ಈಜುವ ಷರತ್ತು: ರೊಳ್ಳಿ ಗ್ರಾಮದ ರೈತ ಗೋವಿಂದಪ್ಪ ಮತ್ತು ಶಿವಾನಂದ ಇಬ್ಬರೂ 65 ವರ್ಷಗಳ ಗೆಳೆಯರು. ಮಿಗಿಲಾಗಿ ಇಬ್ಬರೂ ಕೃಷಿ ಕುಟುಂಬದವರು. ಗ್ರಾಮೀಣ ಕ್ರೀಡೆಗಳಾದ ಭಾರ ಎತ್ತುವ ಸ್ಪರ್ಧೆ, ಹೊಲ ಉಳುಮೆ, ಕಸ ತೆಗೆಯುವುದು, ಓಟ ಹೀಗೆ ಹಲವು ಸ್ಪರ್ಧೆ ನಡೆದಾಗ ಅಲ್ಲೆಲ್ಲ ರೈತ ಗೋವಿಂದಪ್ಪ ಭಾಗವಹಿಸಿ, ಗೆಲ್ಲುತ್ತಿದ್ದರು. ಗೆಳೆಯ ಗೆದ್ದಾಗ, ಅವರ ಸ್ನೇಹಿತ ಶಿವಾನಂದ ನಿಂಗನೂರ ಕೂಡ ಹಲವು ಬಾರಿ, ಬೆಳ್ಳಿ, ಬಟ್ಟೆ ಆಯೇರಿ, ನಗದು ಬಹುಮಾನ ನೀಡಿ ಖುಷಿ ಪಡುತ್ತಿದ್ದರು. ಈಗ ಶಿವಾನಂದ ನಿಂಗನೂರಗಾಗಿ ನದಿ ಈಜುವ ಷರತ್ತು ಹಾಕಿದ್ದರು. ಶಿವಾನಂದ, ಕೊಲ್ಹಾರ ದಡದಿಂದ ಟಕ್ಕಳಕಿ ದಡದ ವರೆಗೆ ಮೂರೂವರೆ ಕಿ.ಮೀ ಈಜಿ ದಡ ಸೇರಿದರೆ, ನಾನು ಎರಡು ತೊಲೆ ಚಿನ್ನದ ಉಂಗುರ ಹಾಕುವುದಾಗಿ ಬಹುಮಾನ ಘೋಷಣೆ ಮಾಡಿದ್ದರು. ಗೆಳೆಯನ ಷರತ್ತಿಗೆ ಸವಾಲು ಪಡೆದ, ಶಿವಾನಂದ ನಿಂಗನೂರ, ಅದಕ್ಕಾಗಿಯೇ ಒಂದು ಸ್ಪರ್ಧೆಯನ್ನೂ ಏರ್ಪಡಿಸಿದ್ದರು. ತಮ್ಮ ಮತ್ತು ಗೆಳೆಯನ ಚಿನ್ನದ ಉಂಗುರ ಷರತ್ತು ಪ್ರತ್ಯೇಕ ಮಾಡಿಕೊಂಡು, ನದಿ ಈಜಿದವರಿಗೆ 5 ತೊಲೆಯ ಬೆಳ್ಳಿಯ ಖಡ್ಗವನ್ನು ಗ್ರಾಮಸ್ಥರ ಪರ ಕೊಡುವ ಸ್ಪರ್ಧೆ ರೂಪುಗೊಂಡಿತು.
ಬುಧವಾರ ಬೆಳಗ್ಗೆ ಕೃಷ್ಣಾ ನದಿಯ ಕೊರ್ತಿ- ಕೊಲ್ಹಾರ ಸೇತುವೆ ಬಳಿ ಆ ದಡದಿಂದ ಈ ದಡದವರೆಗೆ ಒಟ್ಟು ಮೂರೂವರೆ ಕಿ.ಮೀ ನದಿ ಈಜಲು ಶಿವಾನಂದ ಅವರು ಇತರ 8 ಜನರೊಂದಿಗೆ ಆರಂಭಿಸಿದರು. ಆದರೆ, ಅರ್ಧ ಕಿ.ಮೀ ಬರುವಷ್ಟರಲ್ಲಿ ಅಲೆಗಳು ಹೆಚ್ಚಾದಾಗ, ಶಿವಾನಂದ ಅವರು, ಈಜುವುದನ್ನು ಮುಂದುವರೆಸದೇ, ತೆಪ್ಪ ಏರಿದರು. ಬಳಿಕ ಅರ್ಧ ಗಂಟೆಯ ಬಳಿಕ ಮತ್ತೆ ಈಜಲು ಆರಂಭಿಸಿ, ಸತತ ಮೂರೂವರೆ ಗಂಟೆಗಳ ಬಳಿಕ ದಡ ಸೇರಿದರು.
ಗೆದ್ದರು-ಸೋತರೂ ಚಿನ್ನ ಗೆಳೆಯನಿಗೆ: ನಾನು ಶಿವಾನಂದ ನಿಂಗನೂರ ಅವರೊಂದಿಗೆ ಮಾತ್ರ ನದಿ ಈಜುವ ಷರತ್ತು ಕಟ್ಟಿದ್ದೆ. ಅವರು ಗ್ರಾಮಸ್ಥರೊಂದಿಗೆ ಇದೊಂದು ಸ್ಪರ್ಧೆಯನ್ನಾಗಿ ಮಾಡಿದರು. ಆದರೆ, ಚಿನ್ನದ ಉಂಗುರ ತೊಡಿಸುವ ಸ್ಪರ್ಧೆ ನನ್ನ ಮತ್ತು ಗೆಳೆಯನ ಮಧ್ಯೆ ಇತ್ತು. ಆತ ಈಜುವುದನ್ನು ಮಧ್ಯೆ ನಿಲ್ಲಿಸಿ, ಬಳಿಕ ಮತ್ತೆ ಈಜಿದರು. ಇಲ್ಲಿ ಸೋಲು-ಗೆಲುವು ನಮಗೆ ಮುಖ್ಯವಲ್ಲ. ನಾನು ಹಲವಾರು ಸ್ಪರ್ಧೆಯಲ್ಲಿ ಗೆದ್ದಾಗ, ಆತ ಖುಷಿ ಪಟ್ಟಿದ್ದ. ಈಗ ಆತ ಈಜಿದ್ದಾನೆ. ಸೋತರೂ ಪರವಾಗಿಲ್ಲ. 76 ಸಾವಿರ ರೂ. ಕೊಟ್ಟು ಎರಡೂವರೆ ತೊಲೆ ಚಿನ್ನದ ಉಂಗುರ ತಂದಿದ್ದೇನೆ. ಈ ಚಿನ್ನದ ಬಹುಮಾನ ಅವನಿಗೇ ಸೇರಬೇಕು ಎಂದು ರೈತ ಗೋವಿಂದಪ್ಪ ಬಿಳೆಂಡಿ ಉದಯವಾಣಿಗೆ ತಿಳಿಸಿದರು. ಶಿವಾನಂದ ನಿಂಗನೂರ ಅವರು, ಈಜಿ ದಡಕ್ಕೆ ಬಂದಾಗ, ಗೋವಿಂದಪ್ಪ ಅವರು ಅಶೋಕ ಸ್ತಂಭ ಇರುವ ಚಿನ್ನದ ಉಂಗುರ ತೊಡಿಸಿದರು.
ಶ್ರೀಶೈಲ ಕೆ. ಬಿರಾದಾರ