Advertisement

Nyamathi: ಎಸ್‌ಬಿಐ ಬ್ಯಾಂಕ್ ನಿಂದ 12.95 ಕೋಟಿ ರೂ ಮೌಲ್ಯದ ಚಿನ್ನ ಕಳ್ಳತನ

05:18 PM Oct 29, 2024 | Team Udayavani |

ದಾವಣಗೆರೆ: ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ನಡೆದ ಎಸ್‌ಬಿಐ ಬ್ಯಾಂಕ್ (SBI Bank) ದರೋಡೆ ಪ್ರಕರಣದಲ್ಲಿ ಬರೋಬರಿ 17.705 ಕೆಜಿ ಚಿನ್ನಾಭರಣ ಕಳ್ಳತನವಾಗಿದ್ದು, ಇದರ ಮೌಲ್ಯ 12.95 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

Advertisement

ವಾರಾಂತ್ಯದ (ಶನಿವಾರ-ಭಾನುವಾರ) ಸರಣಿ ರಜೆ ನೋಡಿಕೊಂಡು ಪಟ್ಟಣದ ನೆಹರು ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗೆ ಕನ್ನ ಹಾಕಿದ ದರೋಡೆಕೋರರು, ಕಿಟಕಿ ಸರಳು ಮುರಿದು ಒಳನುಗ್ಗಿ, ಗ್ಯಾಸ್ ಕಟರ್‌ನಿಂದ ಲಾಕರ್ ಕೊರೆದು 509 ಪುಟ್ಟ ಪುಟ್ಟ ಬ್ಯಾಗ್‌ಗಳಲ್ಲಿ ಕಟ್ಟಿಟ್ಟಿದ್ದ ಕೋಟ್ಯಂತರ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಬ್ಯಾಂಕ್‌ನಲ್ಲಿ ಇನ್ನೂ ಎರಡು ಲಾಕರ್‌ ಗಳಲ್ಲಿ 30 ಲಕ್ಷಕ್ಕೂ ಅಧಿಕ ನಗದು, ಚಿನ್ನಾಭರಣವಿತ್ತು. ಆದರೆ, ಸಮಯ ಮೀರಿದ್ದರಿಂದಲೋ, ಗ್ಯಾಸ್ ಕಟರ್‌ ನ ಗ್ಯಾಸ್ ಖಾಲಿಯಾಗಿದ್ದರಿಂದಲೋ ಕಳ್ಳತರು ಅವುಗಳನ್ನು ಹಾಗೆಯೇ ಬಿಟ್ಟು ಓಡಿ ಹೋಗಿದ್ದಾರೆ. ದರೋಡೆ ಸಂದರ್ಭದಲ್ಲಿ ಲಾಕರ್ ಎಚ್ಚರಿಕೆ ಧ್ವನಿ ಸಂಪರ್ಕ ಕಟ್ ಮಾಡಿದ್ದಾರೆ. ಸಿಸಿಟಿವಿ ಡಿವಿಆರ್ ಸಹಿತ ಹೊತ್ತೊಯ್ದಿದ್ದಾರೆ. ಸಾಕ್ಷ್ಯ ಸುಳಿವು ಸಿಗದಂತೆ ಕಚೇರಿ ತುಂಬೆಲ್ಲ ಖಾರದ ಪುಡಿ ಎರಚಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ.

ಸೋಮವಾರ (ಅ.28) ಬೆಳಿಗ್ಗೆ ಬ್ಯಾಂಕಿನ ಬಾಗಿಲು ತೆಗೆದಾಗ ಬ್ಯಾಂಕ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು ಮಂಗಳವಾರ ಶಾಖಾ ವ್ಯವಸ್ಥಾಪಕ ಸುನಿಲಕುಮಾರ್ ಯಾದವ್ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬ್ಯಾಂಕ್‌ನಲ್ಲಿ ಚಿನ್ನದ ಸಾಲಕ್ಕೆ ಸಂಬಂಧಿಸಿ 932ಕ್ಕೂ ಅಧಿಕ ಖಾತೆಗಳಿದ್ದು, ಪ್ರತಿಯೊಂದು ಖಾತೆಯ ಪರಿಶೀಲನೆ ಮಾಡಿ, ಕಳ್ಳತನವಾದ ಮಾಹಿತಿ ಸಂಗ್ರಹಿಸಬೇಕಾಗಿರುವುದರಿಂದ ದೂರು ಕೊಡಲು ತಡವಾಗಿದೆ ಎಂದು ಸಹ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

Advertisement

ಭದ್ರತಾ ಲೋಪ

ಬ್ಯಾಂಕ್‌ಗೆ ರಾತ್ರಿ ಕಾವಲುಗಾರರನ್ನು ನೇಮಿಸಿಲ್ಲ. ಹಳೆಯ ಕಾಲದ ಸೈರನ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಬ್ಯಾಂಕ್ ಭದ್ರತಾ ಲೋಪದಿಂದ ಈ ಘಟನೆ ನಡೆದಿದೆ. ಪ್ರಕರಣದ ತನಿಖೆಗೆ ಐವರು ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಲಾಗಿದೆ. 10 ಜನ ಪಿಎಸ್‌ಐಗಳು ಸೇರಿ ಹಲವು ಸಿಬ್ಬಂದಿಯನ್ನು ತನಿಖೆಗೆ ನಿಯೋಜಿಸಲಾಗಿದ್ದು, ತನಿಖೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next