Advertisement

ಮನೆಕನ್ನ ಗ್ಯಾಂಗ್‌ ಸೃಷ್ಟಿ, ಮಾಲೀಕರೇ ಜೋಕೆ

03:07 PM Jun 30, 2023 | Team Udayavani |

ಬೆಂಗಳೂರು: ಮನೆಗೆ ಬೀಗ ಹಾಕಿಕೊಂಡು ಊರುಗಳತ್ತ ಹೋಗುವ ಮುನ್ನ ಹುಷಾರ್‌, ಮನೆಗೆ ಕನ್ನ ಬಿದ್ದೀತು ಜೋಕೆ ! ಅಂತರಾಜ್ಯ ಮನೆ ಗಳ್ಳರ ಹಲವು ಗ್ಯಾಂಗ್‌ಗಳು ಕರ್ನಾಟಕದಾದ್ಯಂತ ಸಕ್ರಿಯವಾಗಿದ್ದು, ಮನೆಯ ಲಾಕರ್‌ಗಳಲ್ಲಿರುವ ಚಿನ್ನಾಭರಣ, ದುಡ್ಡೇ ಇವರ ಟಾರ್ಗೆಟ್‌.

Advertisement

ಇರಾನಿ, ಬವೇರಿಯಾ, ಶಾಮ್ಲಿ ಗ್ಯಾಂಗ್‌ನಂತಹ ಕುಖ್ಯಾತ ಅಂತರಾಜ್ಯ ಕಳ್ಳರ ತಂಡ ಸೈಲೆಂಟ್‌ ಆದ ಬೆನ್ನಲ್ಲೇ ಇದೀಗ ಮತ್ತೆ ಇದೇ ಮಾದರಿಯ ಹೊಸ ಅಂತಾರಾಜ್ಯ ಮನೆಗಳ್ಳರ ತಂಡ ಹುಟ್ಟಿಕೊಂಡಿದ್ದು, ಕರ್ನಾಟಕವನ್ನೇ ಟಾರ್ಗೆಟ್‌ ಮಾಡುತ್ತಿವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಅಸ್ಸಾಂ, ನೆರೆಯ ತಮಿಳುನಾಡು, ಆಂಧ್ರ ಪ್ರದೇಶದ ಕೆಲ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಆರೋಪಿಗಳು ಮನೆಗಳ್ಳತನವನ್ನೇ ವೃತ್ತಿಯನ್ನಾಗಿಸಿ ಕೊಂಡಿದ್ದಾರೆ. ಈ ಗ್ಯಾಂಗ್‌ನ ಸದಸ್ಯರು ಹಲವು ಬಾರಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪೊಲೀಸರ ಬೆಲೆಗೆ ಬಿದ್ದರೂ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಹಳೆ ಚಾಳಿ ಮುಂದುವರೆಸುತ್ತಿರುವುದು ಪೊಲೀಸರಿಗೂ ದೊಡ್ಡ ತಲೆನೋವಾಗಿದೆ.

ಕಳ್ಳರು ಮನೆ ಗುರುತಿಸುವುದೇ ರೋಚಕ: ಅಂತಾರಾಜ್ಯ ಕಳ್ಳರು ಹಗಲು ಹೊತ್ತಿನಲ್ಲಿ ಶ್ರೀಮಂತರ ಮನೆಗಳಿರುವ ಏರಿಯಾದಲ್ಲಿ ತಿರುಗಾಡುತ್ತಾರೆ. ಬೀಗ ಹಾಕಿರುವ ಮನೆ, ಹಲವು ದಿನಗಳಿಂದ ಹಾಲು, ಪೇಪರ್‌ ಮನೆ ಮುಂದೆ ಬಿದ್ದಿರುವುದು, ಪಾಟ್‌ಗಳಲ್ಲೇ ಮನೆ ಕೀ ಇಟ್ಟು ಹೋಗಿರುವುದನ್ನು ಪರಿಶೀಲಿಸುತ್ತಾರೆ. ಇದಾದ ಬಳಿಕ ಮನೆಯ ಒಳಾಂಗಣದಲ್ಲಿನ ಚಲನಾವಲನದ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಾರೆ. ಅಂತಿಮವಾಗಿ ಯಾರೂ ಇಲ್ಲದಿರುವ ಮನೆ ಗುರುತಿಸುತ್ತಾರೆ. ತಡರಾತ್ರಿ ಈ ತಂಡದ ಸದಸ್ಯರು ಎಕ್ಸೋ ಬ್ಲೇಡ್‌, ಸೂð ಡ್ರೈವರ್‌, ಕಬ್ಬಿಣದ ಸರಳು ಮತ್ತೀತರ ಆಯುಧ, ಪರಿಕರಗಳನ್ನು ಬ್ಯಾಗ್‌ನಲ್ಲಿ ತುಂಬಿ ಸಾಮಾನ್ಯ ಜನರಂತೆ ಎಂಟ್ರಿ ಕೊಡುತ್ತಾರೆ. ಗ್ಯಾಂಗ್‌ನಲ್ಲಿರುವ ಓರ್ವ ಸದಸ್ಯ ಯಾರಾದರೂ ಬರುತ್ತಾರೆಯೇ ಎಂಬುದನ್ನು ಕಂಪೌಂಡ್‌ ಹೊರಗೆ ನಿಂತು ಗಮನ ಸುತ್ತಾನೆ. ಸುತ್ತ-ಮುತ್ತ ಯಾರೇ ಓಡಾಡಿದರೂ ಕೂಡಲೇ ಕೋಡ್‌ವರ್ಡ್‌ ಮೂಲಕ ಒಳಗಿರುವ ಸಹಚರರಿಗೆ ಸಂದೇಶ ನೀಡುತ್ತಾನೆ.

ಇತ್ತ ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಮೊದಲು ಕಳ್ಳರ ಚಿತ್ತ ಹೋಗುವುದೇ ಬೆಡ್‌ರೂಂನಲ್ಲಿರುವ ಲಾಕರ್‌ ನತ್ತ. ಲಾಕರ್‌ ಒಡೆದು ಅದರಲ್ಲಿರುವ ಚಿನ್ನಾಭರಣ, ದುಡ್ಡು ಸೇರಿದಂತೆ ಸುಲಭವಾಗಿ ಕೈಯಲ್ಲೇ ತೆಗೆದುಕೊಂಡು ಹೋಗಬಹುದಾದ ಮೌಲ್ಯಯುತ ವಸ್ತುಗಳನ್ನು ದೋಚುತ್ತಾರೆ ಎಂಬ ಅಂಶವು ಇತ್ತೀಚೆಗೆ ಬಂಧನಕ್ಕೊಳಗಾದ ಅಂತಾರಾಜ್ಯ ಕಳ್ಳರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂಬ ಸಂಗತಿ ಪೊಲೀಸ್‌ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಪರಿಚಿತರಿಗೆ ಚಿನ್ನ ಮಾರಾಟ: ಹೊರ ರಾಜ್ಯಗಳಿಂದ ಸಾಮಾನ್ಯವಾಗಿ ರೈಲಿನಲ್ಲಿ ನಗರಕ್ಕೆ ಕಾಲಿಡುವ ಈ ತಂಡಗಳು ಇಲ್ಲಿನ ಲಾಡ್ಜ್ನಲ್ಲಿ ತಂಗುತ್ತಾರೆ. ಕಳ್ಳತನ ನಡೆಸಿದ ದಿನವೇ ಚಿನ್ನಾಭರಣದೊಂದಿಗೆ ರೈಲು ಅಥವಾ ಬಸ್ಸಿನಲ್ಲಿ ತಮ್ಮ ರಾಜ್ಯಗಳಿಗೆ ಹಿಂತಿರುಗುತ್ತಾರೆ. ಬಳಿಕ ತಮ್ಮ ಮನೆಯಲ್ಲಿರುವ ಮಹಿಳೆಯರ ಮೂಲಕ ಅಥವಾ ಪರಿಚಿತ ಚಿನ್ನದ ಅಂಗಡಿ ಮಾಲೀಕರಿಗೆ ಕಡಿಮೆ ಬೆಲೆಗೆ ಚಿನ್ನ ಮಾರಾಟ ಮಾಡುತ್ತಾರೆ. ಮತ್ತೂಂದೆಡೆ ಚಿನ್ನದಂಗಡಿ ಮಾಲೀಕರು ಕದ್ದ ಚಿನ್ನಾಭರಣಗಳನ್ನು ಚಿನ್ನದ ಗಟ್ಟಿ ಮಾಡಿಸಿ ಪೊಲೀಸರು ಜಪ್ತಿ ಮಾಡದಂತೆ ಮುನ್ನೆಚ್ಚರಿಕೆ ವಹಿಸುವ ಸಂಗತಿಯೂ ಬಂಧಿತ ಕಳ್ಳರ ವಿಚಾರಣೆ ವೇಳೆ ತಿಳಿಸಿರುವ ಮಾಹಿತಿ ಗೊತ್ತಾಗಿದೆ.

Advertisement

ಪೊಲೀಸರಿಗೆ ಸುಳಿವು ಸಿಗದಂತೆ ಮುನ್ನೆಚ್ಚರಿಕೆ: ಕೃತ್ಯ ಎಸಗುವ ವೇಳೆ ಕಳ್ಳರ ತಂಡ ಮೊಬೈಲ್‌ ಬಳಸುವುದಿಲ್ಲ, ಸಿಸಿಕ್ಯಾಮರಾದಲ್ಲಿ ಮುಖ ಚಹರೆ ಸೆರೆಯಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ, ಸ್ಥಳೀಯರಿಗೆ ತಮ್ಮ ಮೇಲೆ ಅನುಮಾನ ಬಾರದಂತೆ ನಡೆದುಕೊಂಡು ಪೊಲೀಸರಿಗೆ ಸಣ್ಣ ಸುಳಿವೂ ಸಿಗದಂತೆ ಎಚ್ಚರಿಕೆ ವಹಿಸುತ್ತಾರೆ. ಇಷ್ಟಾಗಿಯೂ ಪೊಲೀಸರಿಗೆ ಸಿಕ್ಕಿಬಿದ್ದರೆ ತಮ್ಮನ್ನು ಜಾಮೀನಿನ ಮೂಲಕ ಬಿಡಿಸಲೆಂದೇ ವಕೀಲರನ್ನು ಇಟ್ಟುಕೊಂಡಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಹೊರ ರಾಜ್ಯದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ, ಕದ್ದ ಚಿನ್ನ ಜಪ್ತಿ ಮಾಡುವುದು ಪೊಲೀಸರಿಗೂ ಸವಾಲಾಗಿದೆ.

ಮುನ್ನೆಚ್ಚರಿಕಾ ಕ್ರಮಗಳೇನು ?

ಊರಿಗೆ ಹೋಗುವ ವೇಳೆ ಮನೆಯಲ್ಲಿ ಚಿನ್ನಾಭರಣ ಇಡಬೇಡಿ.

ಹೆಚ್ಚಿನ ಚಿನ್ನಾಭರಣವುದ್ದರೆ ಬ್ಯಾಂಕ್‌ ಲಾಕರ್‌ ಗಳಲ್ಲಿಡುವುದು ಸೂಕ್ತ.

ಹಾಲು, ಪೇಪರ್‌, ಅಂಚೆ ಕಾಗದ ಮನೆ ಮುಂದೆ ಹಾಕದಂತೆ ನೋಡಿಕೊಳ್ಳಿ.

ಸಿಸಿ ಕ್ಯಾಮೆರಾ ಸದಾ ಕಾರ್ಯ ನಿರ್ವಹಿಸುತ್ತಿರಲಿ.

ಮನೆಯ ಬಳಿ ಗಸ್ತು ತಿರುಗುವಂತೆ ಪೊಲೀಸರಿಗೆ ಮನವಿ ಮಾಡಿದರೆ ಒಳಿತು.

ಹೆಚ್ಚಿನ ದಿನ ಮನೆ ಬಿಟ್ಟರೆ ನೆರೆ ಮನೆಯವರ ಬಳಿ ಪರಿಶೀಲಿಸಲು ಮನವಿ ಮಾಡಿ.

ಕೀಯನ್ನು ಪಾಟ್‌, ಮ್ಯಾಟ್‌ನಡಿ ಇಟ್ಟು ಹೋಗಬೇಡಿ

44,903 ಕಳ್ಳತನ ಪ್ರಕರಣ

ಎರಡೂವರೆ ವರ್ಷಗಳಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 44,903 ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಕರ್ನಾಟಕದಲ್ಲಿ ಕಳ್ಳತನ ಪ್ರಕರಣ ಏರಿಕೆಯಾಗಿರುವುದಕ್ಕೆ ಪುಷ್ಠಿ ನೀಡುತ್ತದೆ. 2021 ಏಪ್ರಿಲ್‌ನಲ್ಲಿ ದಾಖಲಾದ 325 ಮನೆಗಳ್ಳತನ ಕೇಸ್‌ 2022ರ ಏಪ್ರಿಲ್‌ಗೆ 360ಕ್ಕೆ ಏರಿಕೆಯಾಗಿದೆ. 2023 ಏಪ್ರಿಲ್‌ಗೆ ಬರೋಬ್ಬರಿ 514ಕ್ಕೆ ಹೆಚ್ಚಿದೆ.

ಸಾರ್ವಜನಿಕರು ಊರಿಗೆ ಹೋಗುವ ವೇಳೆ ಮನೆಯಲ್ಲಿ ಚಿನ್ನಾ ಭರಣದಂತಹ ಮೌಲ್ಯಯುವತ ವಸ್ತುಗಳ ಮೇಲೆ ನಿಗಾ ಇಡಿ. ಹಾಲು, ಪೇಪರ್‌ ಮನೆ ಮುಂದೆ ಹಾಕದಂತೆ ಸೂಚಿಸಿ. ● ಪಿ.ಕೃಷ್ಣಕಾಂತ್‌, ಉಪ ಪೊಲೀಸ್‌ ಆಯುಕ್ತ, ದಕ್ಷಿಣ ವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next