ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಿ 3 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕೆಟ್ ಹಾಗೂ 6 ಲಕ್ಷ ರೂ. ನಗದು ದೋಚಿದ್ದ ಹೋಮ್‌ಗಾರ್ಡ್ ಸೇರಿ ಮೂವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಎಸ್‌ಆರ್‌ಟಿಸಿಯಲ್ಲಿ ಹೋಮ್‌ಗಾರ್ಡ್ ಗಿರಿನಗರದ ಕಸ್ತೂರಿ ಬಾ ಕಾಲೋನಿ ನಿವಾಸಿ ನಾಗರಾಜ (31), ಆಟೋ ಚಾಲಕರಾದ ಬಾಪೂಜಿನಗರದ ಮಂಜುನಾಥ್ (39), ಅರುಣ್ ಕುಮಾರ್ (33) ಬಂಧಿತರು. ಆರೋಪಿಗಳಿಂದ 6 ಲಕ್ಷ ರೂ. ನಗದು ಹಾಗೂ 1 ಚಿನ್ನದ ಗಟ್ಟಿ, ಕೃತ್ಯಕ್ಕೆ ಬಳಸಿದ್ದ ಕಾರು, ಬಜಾಜ್ ಆಟೋವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ದರೋಡೆಗೊಳಗಾದ ಕೊಯಮತ್ತೂರಿನ ನಿವಾಸಿ ಸುಂದರಂ ಚಿನ್ನದ ವ್ಯಾಪಾರಿ ಉಪೇಂದ್ರನಾಥ ಎಂಬುವವರ ಬಳಿ ಕಳೆದ 5 ವರ್ಷಗಳಿಂದ ಚಿನ್ನಾಭರಣಗಳನ್ನು ಕೊಟ್ಟು ಗಟ್ಟಿ ಚಿನ್ನದ ಬಿಸ್ಕೆಟ್ ತೆಗೆದುಕೊಂಡು ಬರುತ್ತಿದ್ದರು. ಫೆ.5ರಂದು ಉಪೇಂದ್ರನಾಥ್ 180 ಗ್ರಾಂ ಚಿನ್ನಾಭರಣ ಹಾಗೂ 6 ಲಕ್ಷ ರೂ. ನಗದನ್ನು ಸುಂದರಂ ಕೈಗೆ ಕೊಟ್ಟು ಇದನ್ನು ದಾವಣರೆಗೆ ಹಾಗೂ ಶಿವಮೊಗ್ಗದಲ್ಲಿರುವ ಚಿನ್ನದ ವ್ಯಾಪಾರಿಗಳಿಗೆ ಕೊಟ್ಟು ಗಟ್ಟಿ ಬಂಗಾರ ತೆಗೆದುಕೊಂಡು ಬರುವಂತೆ ಸೂಚಿಸಿದ್ದರು.
ಅದರಂತೆ ಫೆ.6ಕ್ಕೆ ಬೆಂಗಳೂರಿಗೆ ಬಂದು ಅಲ್ಲಿಂದ ದಾವಣಗೆರೆಗೆ ತೆರಳಿದ್ದರು. ಅಲ್ಲಿ ಚಿನ್ನದ ಬಿಸ್ಕತ್ ಖರೀದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶಿವಮೊಗ್ಗದ ಜ್ಯುವೆಲ್ಲರಿ ಶಾಪ್‌ಗೆ ತೆರಳಿ ಚಿನ್ನಾಭರಣವನ್ನು 3 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಮಾಡಿಸಿಕೊಂಡು, ಫೆ.7ರಂದು ಬೆಂಗಳೂರಿನ ಸೆಟಲೈಟ್ ಬಸ್ ನಿಲ್ದಾಣಕ್ಕೆ ಸುಂದರಂ ಬಂದಿದ್ದರು.
ಅಲ್ಲಿಂದ ತಮಿಳುನಾಡಿನ ಸೇಲಂಗೆ ಹೋಗುವ ಬಸ್‌ನಲ್ಲಿ ಕುಳಿತುಕೊಂಡಿದ್ದರು. ಆ ವೇಳೆ ಪೊಲೀಸ್ ಧಿರಿಸಿನಲ್ಲಿ ಸುಂದರಂ ಬಳಿ ಬಂದ ಆರೋಪಿಗಳು, ನಾವು ಪೊಲೀ ಸರು ನಿಮ್ಮ ಬ್ಯಾಗ್ ಅನ್ನು ಪರಿಶೀಲಿಸಬೇಕು ಎಂದು ಹೇಳಿ ಸುಂದರಂ ಅವರನ್ನು ಬಸ್‌ನಿಂದ ಕೆಳಗಿಳಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ಸುಂದರಂ ಅವರನ್ನು ಹೆದರಿಸಿ ಬ್ಯಾಗ್‌ನಲ್ಲಿದ್ದ 6 ಲಕ್ಷ ರೂ., ಬಟ್ಟೆಯೊಳಗೆ ಇಟ್ಟಿದ್ದ 3 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಬಿಸ್ಕೆಟ್ ಕಿತ್ತುಕೊಂಡು ಪರಾರಿಯಾಗಿದ್ದರು.
ಆರೋಪಿಗಳ ಸುಳಿವು ಕೊಟ್ಟ ಸಿಸಿ ಕ್ಯಾಮೆರಾ : ದರೋಡೆ ಕೃತ್ಯವನ್ನು ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಚಿನ್ನದ ವ್ಯಾಪಾರಿ ಸುಂದರಂ ಅವರಿಗೆ ಆರೋಪಿಗಳು ಬೆದರಿಸಿದ್ದರು. ಇದಾದ ಬಳಿಕ ಸುಂದರಂ ಅವರನ್ನು ಮಾರ್ಗಮಧ್ಯೆ ಕಾರಿನಿಂದ ಕೆಳಗಿಸಿ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಸುಂದರಂ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಸೆಟಲೈಟ್ ಬಸ್ ನಿಲ್ದಾಣದ ಸಮೀಪದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ತಾಂತ್ರಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಮೊದಲು ಹೋಮ್‌ಗಾರ್ಡ್‌ನನ್ನು ಬಲೆಗೆ ಬೀಳಿಸಿ, ಬಳಿಕ ಇಬ್ಬರು ಆಟೋ ಚಾಲಕರನ್ನು ಬಂಧಿಸಿದ್ದಾರೆ.