ತಿರುವನಂತಪುರ: ಕೇರಳ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾದಳ (ಎನ್‌ಐಎ)ದ ಅಧಿಕಾರಿಗಳು ಚಿನ್ನ ಕಳ್ಳಸಾಗಣೆದಾರರಿಗೆ ಹವಾಲಾ ಹಾಗೂ ಭಯೋತ್ಪಾದಕ ಸಂಘಟನೆಗಳ ಜತೆ ಇರ ಬಹುದಾದ ನಂಟಿನ ಕುರಿತು ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ಶಂಕಿತ ಆರೋಪಿ ಫರೀದ್, ಪರಾರಿಯಾಗಿದ್ದು, ಈತನ ಪತ್ತೆಗೆ ಇಂಟರ್‌ಪೋಲ್‌ನ ನೆರವು ಕೋರ ಲಾಗಿದೆ. ಈತ ಹವಾಲಾ ಜಾಲದ ಪ್ರಮುಖ ಸೂತ್ರದಾರನಾಗಿದ್ದು, ಸದ್ಯ ಈತ ಯುಎಇಯಲ್ಲಿ ಇರಬಹುದು. ಕೇರಳದಲ್ಲಿ ಕಳ್ಳಸಾಗಣೆ ಮಾಡಲಾಗುವ ಚಿನ್ನದಿಂದ ಬರುವ ಹಣವನ್ನು ಹವಾಲಾ ಜಾಲದ ಮೂಲಕ ದುಬಾೖ ಹಾಗೂ ಇತರ ಮಧ್ಯಪ್ರಾಚ್ಯ ದೇಶಗಳಿಗೆ ಕಳುಹಿಸಲಾಗುತ್ತದೆ.
ಈ ಕಳ್ಳ ವ್ಯವಹಾರ ಫರೀದ್‌ನ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಸಾಧ್ಯತೆಯಿದೆ. ಅಲ್ಲದೆ, ಭಯೋತ್ಪಾದಕ ಸಂಘಟನೆಗಳ ಜತೆಗೂ ಈ ಜಾಲ ನಂಟು ಹೊಂದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಕಳ್ಳಸಾಗಣೆ ಮಾಡಲಾಗುವ ಸರಕಿನ ಮೇಲೆ ಯುಎಇ ರಾಯಭಾರ ಕಚೇರಿಯ ನಕಲಿ ದಾಖಲೆಗಳು, ಲಾಂಛನಗಳು ಹಾಗೂ ಚಿಹ್ನೆಗಳನ್ನು ಅಂಟಿಸಲಾಗುತ್ತದೆ. ಆ ಮೂಲಕ ವಿಮಾನ ನಿಲ್ದಾಣಗಳಲ್ಲಿ ಈ ಸರಕಿಗೆ ರಾಜತಾಂತ್ರಿಕ ವಿನಾಯಿತಿ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕನಿಷ್ಠ 3-4 ಸರಕು ಸಾಗಣೆ ವಿಮಾನಗಳಲ್ಲಿ ಚಿನ್ನದ ಕಳ್ಳಸಾಗಣೆ ಮಾಡಲಾಗಿದ್ದು, ಇವುಗಳ ಮೌಲ್ಯ ಸುಮಾರು 40-45 ಕೋಟಿ ರೂ.ಗಳಷ್ಟಾಗಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ, 13 ವಿಮಾನಗಳಲ್ಲಿ ಸಾಗಿಸಲಾದ ಸರಕುಗಳನ್ನು ಪರಿಶೀಲನೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅಲ್ಲದೆ, ಈ ಚಿನ್ನ ಕಳ್ಳಸಾಗಣೆಯ ಫಲಾನುಭವಿಗಳನ್ನು ಪತ್ತೆ ಹಚ್ಚಿ, ಅವರನ್ನೂ ತನಿಖೆಗೆ ಒಳಪಡಿಸಲು ಮುಂದಾಗಿದ್ದಾರೆ.