ಮೈಸೂರು: ಮಹಾ ಶಿವರಾತ್ರಿ ಹಬ್ಬಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು, ಶಿವದೇಗುಲಗಳಲ್ಲಿ ಶಿವನ ಆರಾಧನೆಗೆ ಭರ್ಜರಿ ಸಿದ್ಧತೆ ನಡೆದಿದೆ.
ನಗರದ ವಿವಿಧೆಡೆ ಇರುವ ಶಿವನ ದೇವಾಲಯಗಳಲ್ಲಿ ಗುರುವಾರ ಶಿವರಾತ್ರಿ ಆಚರಣೆ ನಡೆಯಲಿದ್ದು, ರಾತ್ರಿ ಇಡೀ ನಡೆಯುವ ಜಾಗರಣೆಗೆ ತಯಾರಿ ಮಾಡಿಕೊಳ್ಳಲಾಗಿದೆ.ಅದರಲ್ಲೂ ವಿಶೇಷವಾಗಿ ಮೈಸೂರು ಮಹಾರಾಜರು ನಿರ್ಮಿಸಿದ ಅರಮನೆಯ ತ್ರಿನೇಶ್ವರದೇವಾಲಯದಲ್ಲಿ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶಿವರಾತ್ರಿಯಂದು ಶಿವನಿಗೆ ಚಿನ್ನದ ಕೊಳಗೆ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸುವುದರಿಂದ ಈ ವರ್ಷವೂ ಸಹ ಸರ್ಕಾರದ ಖಜಾನೆಯಲ್ಲಿದ್ದ ಚಿನ್ನದ ಕೊಳಗವನ್ನು ದೇವಾಲಯಕ್ಕೆ ತಂದು ಹಸ್ತಾಂತರ ಮಾಡಿದ ಬಳಿಕ ಸ್ವತ್ಛಗೊಳಿಸುವ ಕಾರ್ಯ ಬುಧವಾರ ನಡೆಯಿತು. ಪ್ರತಿ ವರ್ಷ ಮಹಾಶಿವರಾತ್ರಿಯಂದು ತ್ರಿನೇಶ್ವರ ದೇವಾಲಯಕ್ಕೆ ಸಹಸ್ರಾರು ಭಕ್ತರು ಆಗಮಿಸಿ ಶಿವನ ದರ್ಶನ ಪಡೆಯುತ್ತಾರೆ. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮುಂಜಾನೆ ನಾಲ್ಕೂವರೆ ಗಂಟೆಗೆ ದೇವಾಲಯದಲ್ಲಿ ಶಿವನಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಆರಂಭವಾಗುವ ಭಕ್ತರ ದರ್ಶನ ರಾತ್ರಿ 12ರವರೆಗೆ ನಡೆಯುತ್ತದೆ.
ಅರಮನೆಯಆವರಣದಲ್ಲೇ ಇರುವ ತ್ರಿನೇಶ್ವರ ದೇವಾಲಯದ ಶಿವನ ವಿಗ್ರಹಕ್ಕೆ ಮೈಸೂರು ಮಹಾರಾಜರು ಚಿನ್ನದ ಮುಖವಾಡ ನೀಡಿದ್ದರು. ಪ್ರತಿ ವರ್ಷ ಶಿವರಾತ್ರಿ ಹಬ್ಬದ ದಿನದಂದು ಮಾತ್ರ ಶಿವನ ವಿಗ್ರಹಕ್ಕೆ ಇದನ್ನು ಧಾರಣೆ ಮಾಡಲಾಗುತ್ತದೆ. ಚಿನ್ನದ ಮುಖವಾಡ ಧರಿಸಿದ ಶಿವನ ವಿಗ್ರಹ ವನ್ನು ಶಿವರಾತ್ರಿಯಂದು ಭಕ್ತರು ಕಣ್ತುಂಬಿಕೊಂಡು ಪೂಜೆ ಸಲ್ಲಿಸಲಿದ್ದಾರೆ.
ಚಿನ್ನದ ಮುಖವಾಡ ಹಸ್ತಾಂತರ: ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಗರದ ತ್ರಿನೇಶ್ವರ ದೇವಾಲಯಕ್ಕೆ ಜಿಲ್ಲಾಡಳಿತ, ಮುಜರಾಯಿ ಇಲಾಖೆಯಿಂದ ಅರ್ಚಕರಿಗೆ ಬರೋಬ್ಬರಿ 11 ಕೆ.ಜಿ ಚಿನ್ನದ ಮುಖವಾಡವನ್ನು ಬುಧವಾರ ಹಸ್ತಾಂತರ ಮಾಡಲಾಯಿತು. ಈ ವೇಳೆ ಮುಜರಾಯಿ ತಹಶೀಲ್ದಾರ್ ಯತಿರಾಜ್ ಸಂಪತ್ ಕುಮಾರ್, ಅರಮನೆ ದೇವಾಲಯ ಗಳ ಕಾರ್ಯನಿರ್ವಹಣಾ ಅಧಿಕಾರಿ ಗೋವಿಂದರಾಜು, ತ್ರಿನೇಶ್ವರ ದೇವಾಲಯದ ಪ್ರಧಾನ ಅರ್ಚಕ ಸಂತಾನಂ, ದಿನೇಶ್, ಸಿ.ಜಿ.ಕೃಷ್ಣ, ಶೀಲಾ, ಅರಮನೆ ಎಸಿಪಿ ಚಂದ್ರ ಶೇಖರ್ ಇತರರಿದ್ದರು.
ಚಿನ್ನದ ಮುಖವಾಡ ವರ್ಷಪೂರ್ತಿ ಜಿಲ್ಲಾ ಖಜಾನೆಯಲ್ಲಿರುತ್ತದೆ. ಶಿವರಾತ್ರಿ ಮುನ್ನಾ ದಿನ ಖಜಾನೆಯಿಂದ ತೆಗೆದು ದೇವಾಲಯಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಶಿವರಾತ್ರಿಯ ದಿನ ಶಿವಲಿಂಗಕ್ಕೆ ಕೊಳಗ ಧಾರಣೆ ಮಾಡಿ ರಾತ್ರಿ ಪೂರ್ತಿ ಶಿವ ಭಕ್ತರಿಂದ ಜಾಗರಣೆ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯದ ಶಿವಲಿಂಗಕ್ಕೆ ಮುಖವಾಡ ಧಾರಣೆ ಮಾಡಿ, ಸಾರ್ವಜನಿಕರ ದರ್ಶನದ ಬಳಿಕ ವಾಪಸ್ ಜಿಲ್ಲಾ ಖಜಾನೆಯಲ್ಲಿ ಸಂರಕ್ಷಿಸಲಾಗುತ್ತದೆ.
101 ಶಿವಲಿಂಗಳಿಗೆ ಪೂಜೆ: ಇದಲ್ಲದೆ ನಗರದ ವಿವಿಧೆಡೆ ಇರುವ ಶಿವನ ದೇವಾಲಯಗಳಲ್ಲೂ ಮಹಾ ಶಿವರಾತ್ರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ರಾಮಾನುಜ ರಸ್ತೆಯಲ್ಲಿರುವ ಗುರುಕುಲ ಟ್ರಸ್ಟ್‌ನ 101 ಶಿವಲಿಂಗಗಳನ್ನು ಶಿವರಾತ್ರಿ ಹಿನ್ನೆಲೆಯಲ್ಲಿ ಬುಧವಾರ ಶುಚಿ ಗೊಳಿಸಲಾಯಿತು. ಶಿವ ದೇವಾಲಯ ಮತ್ತು ಶಿವನ ಪ್ರತಿಮೆಗಳಿರುವ ಕಡೆ ವಿಶೇಷ ಗಮನ ವಹಿಸಿ ಸ್ವತ್ಛತಾ ಕಾರ್ಯ ನಡೆಸಲಾಯಿತು.