Advertisement

ಚಿನ್ನ ಖರೀದಿ, ರೇಟ್ ಬೆನಿಫಿಟ್, ಪೋಂಜಿ ಸ್ಕೀಮು ಅಂದ್ರೇನು !

12:30 AM Jan 14, 2019 | udayavani editorial |

ಮಧ್ಯಮ ವರ್ಗದ ಸಣ್ಣ ಉಳಿತಾಯದ ಜನರಿಗೆ ಚಿನ್ನ ಗಗನ ಕುಸುಮ ಎಂಬ ಮಾತಿದೆ. ಇದು ನಿಜವೇನೋ ಹೌದು.

Advertisement

ಆದರೆ ವರ್ಷದ ಕೆಲವು ಸಂದರ್ಭಗಳಲ್ಲಿ ಭವಿಷ್ಯಕ್ಕೆಂದು ಸ್ವಲ್ಪ ಸ್ವಲ್ಪವಾದರೂ ಚಿನ್ನವನ್ನು ಖರೀದಿಸದಿರುವವರು ಇಲ್ಲವೇ ಇಲ್ಲ ಎನ್ನುವುದು ಕೂಡ ಅಷ್ಟೇ ನಿಜ. ಇದಕ್ಕೆ ಕಾರಣ ಬಹಳ ಸರಳ ಮತ್ತು ನೇರ. ಅದೆಂದರೆ ಮಧ್ಯಮ ವರ್ಗದ ಜನರಿಗೆ, ಸಣ್ಣ ಉಳಿತಾಯದಾರರಿಗೆ ಚಿನ್ನ ಒಂದು ಅಪದ್ಧನ. ಕಷ್ಟಕಾಲ ಒದಗುವುದಕ್ಕೆ ಸಂಪತ್ತು !

ಅಂತಿರುವಾಗ ಮಧ್ಯಮ ವರ್ಗದ ಸಣ್ಣ ಉಳಿತಾಯದಾರರಿಗೆಂದೇ ಚಿನ್ನಾಭರಣ ಉದ್ಯಮಿಗಳು, ವ್ಯಾಪಾರಸ್ಥರು, ಮಳಿಗೆಗಳು ಚಿನ್ನ ಉಳಿತಾಯ ಯೋಜನೆ ಅಥವಾ ಅದೃಷ್ಟಕರ ಕಂತು ಖರೀದಿ ಯೋಜನೆ ಅಥವಾ ಭವಿಷ್ಯದ ಚಿನ್ನದ ಖರೀದಿಯ ಮುಂಗಡ ಯೋಜನೆ ಎಂದೆಲ್ಲ ನಾನಾ ರೀತಿಯ ಸ್ಕೀಮುಗಳನ್ನು ರೂಪಿಸಿರುತ್ತಾರೆ. 

ಈ ಸ್ಕೀಮುಗಳಲ್ಲಿ ಅದೃಷ್ಟದ ಲಕ್ಕಿ ಡ್ರಾ ಇರುವುದು ಸರ್ವ ಸಾಮಾನ್ಯ. ಈ ರೀತಿಯ ಸ್ಕೀಮು ಒಂದು, ಎರಡು ಅಥವಾ ಮೂರು ವರ್ಷಗಳ ಒಳಗೆ ಮುಗಿಯುವ ಯೋಜನೆಗಳಾಗಿರುತ್ತವೆ ಮತ್ತು ಇವುಗಳಡಿ ತಿಂಗಳು ತಿಂಗಳು ಕ್ರಮಬದ್ಧವಾಗಿ ನಗದು ಕಂತು ಕಟ್ಟುವುದು ಒಂದು ರೀತಿಯ ಶಿಸ್ತಿನ ಉಳಿತಾಯ ಯೋಜನೆಯೇ ಆಗಿರುತ್ತದೆ.

Advertisement

ಸ್ಕೀಮಿನ ಅವಧಿಯೊಳಗೆ ಮುಗಿಯುವುದರೊಳಗೆ ಅದೃಷ್ಟದ ಲಕ್ಕೀ ಡ್ರಾದಲ್ಲಿ ವಿಜಯಿಯಾದರೆ ಉಳಿದ ಕಂತು ಕಟ್ಟುವ ಪ್ರಶ್ನೆಯೇ ಇರುವುದಿಲ್ಲ. ಅದೃಷ್ಟಶಾಲಿಗಳಾಗಿ ಮೂಡಿ ಬಾರದಿದ್ದರೂ ಡಿಸ್ಕೌಂಟ್ ರೂಪದಲ್ಲಿ ಕೊನೇ ಕಂತು ಮಾಫಿಯಾಗುವ ಅವಕಾಶವೂ ಇರುತ್ತದೆ. 

ಒಟ್ಟಿನಲ್ಲಿ ಈ ಬಗೆಯ ಸರಳ, ಆಕರ್ಷಕ ಸ್ಕೀಮುಗಳಿಂದ ಮಧ್ಯಮ ವರ್ಗದ ಸಣ್ಣ ಉಳಿತಾಯದಾರರಿಗೆ ಚಿನ್ನವನ್ನು ವರ್ಷಂಪ್ರತಿ ಖರೀದಿಸುತ್ತಲೇ ಹೋಗುವ ಅವಕಾಶ ಪ್ರಾಪ್ತವಾಗುವುದು ನಿಜ. ಎಲ್ಲಕ್ಕಿಂತ ಮುಖ್ಯವಾಗಿ ಈ ಸ್ಕೀಮುಗಳು ಪೋಂಜಿ ಸ್ಕೀಮುಗಳಾಗಿರುವುದಿಲ್ಲ.

ಪೋಂಜಿ ಸ್ಕೀಮು ಎಂದರೆ ಚೈನ್ ಸ್ಕೀಮ್; ಸರಣಿ ಸದಸ್ಯರನ್ನು ಮಾಡುವ ದೊಡ್ಡ ಘೊಟಾಳೆಯ, ಅಂತಿಮವಾಗಿ ಎಲ್ಲರಿಗೂ ಪಂಗನಾಮ ಬೀಳುವ ಸ್ಕೀಮುಗಳು. ಆದುದರಿಂದ ಚಿನ್ನದ ಕಂತು ಖರೀದಿ, ಅದೃಷ್ಟದ ಲಕ್ಕೀ ಡ್ರಾ ಯೋಜನೆಯ ಸ್ಕೀಮುಗಳು ಅಷ್ಟರ ಮಟ್ಟಿಗೆ ನಂಬಿಗಸ್ಥ ಸ್ಕೀಮುಗಳು ಎನ್ನಬಹುದು.

ಹಾಗಿದ್ದರೂ ಈ ಬಗೆಯ ಸ್ಕೀಮುಗಳ ರೀತಿ- ನೀತಿ, ಸ್ವರೂಪ, ರೂಪರೇಖೆ ಇತ್ಯಾದಿಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ. ಅಂತೆಯೇ ನಾವಿಲ್ಲಿ ಸಂಕ್ಷಿಪ್ತವಾಗಿ ಅವನ್ನು  ಪ್ರಶ್ನೋತ್ತರ ರೂಪದಲ್ಲಿ  ಗುರುತಿಸಬಹುದು : 

1. ಗ್ರಾಹಕರು ಕಟ್ಟಬೇಕಾದ ಕಂತುಗಳು ಎಷ್ಟು ?
ಗ್ರಾಹಕರು ಸಮಾನ ಮೊತ್ತದ ಹತ್ತು ಕಂತುಗಳನ್ನು ಕಟ್ಟಬೇಕು.

2.ಕಂತು ಕಟ್ಟಬೇಕಾದ ನಿಗದಿತ ದಿನಾಂಕ ಯಾವುದು ?
ಗ್ರಾಹಕರು ಮೊದಲ ಕಂತು ಕಟ್ಟಿದ ದಿನದ ಬಳಿಕದ ಪ್ರತೀ ತಿಂಗಳ ಅದೇ ದಿನದಂದು ಕಂತು ಕಟ್ಟತಕ್ಕದ್ದು. ಉದಾಹರಣೆಗೆ ಗ್ರಾಹಕರು ಮೊದಲ ಕಂತನ್ನು 5ನೇ ತಾರೀಕಿನಂದು ಕಟ್ಟಿದ್ದರೆ, ಅನಂತರದ ಉಳಿದ ಎಲ್ಲ ಕಂತುಗಳನ್ನು ಪ್ರತೀ ತಿಂಗಳ 5ನೇ ತಾರೀಕಿನಂದೇ ಕಟ್ಟತಕ್ಕದ್ದು.

3. ಕಂತು ಕಟ್ಟುವುದಕ್ಕೆ ರಿಯಾಯಿತಿ ದಿನಗಳು ಇವೆಯೇ ?
ಇಲ್ಲ. ಯಾವುದೇ ರಿಯಾಯಿತಿ ದಿನಗಳಿಲ್ಲ. ಇದನ್ನು ಸದಸ್ಯರಿಗೆ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುತ್ತದೆ.

4. ಗ್ರಾಹಕರಿಂದ ಕೆವೈಸಿ (ಗ್ರಾಹಕರ ಪರಿಚಯ ಮಾಹಿತಿ) ದಾಖಲೆಗಳನ್ನು ನಾವು ಪಡೆದುಕೊಳ್ಳಬಹುದೇ ?
ಹೌದು. ಯಾರ ಹೆಸರಿನಲ್ಲಿ ಸ್ಕೀಮನ್ನು ತೆರೆಯಲು ಬಯಸಲಾಗಿದೆಯೋ ಆ ವ್ಯಕ್ತಿಯ ಮೂಲ ಬ್ಯಾಂಕ್ ಪಾಸ್ ಬುಕ್ ಅನ್ನು ತರುವಂತೆ ಗ್ರಾಹಕರನ್ನು ಕೇಳಿಕೊಳ್ಳಲಾಗುತ್ತದೆ.  ಬ್ಯಾಂಕಿನ ಹೆಸರು, ಶಾಖೆಯ ಹೆಸರು, ಖಾತೆಯ ನಂಬ್ರ (ಹದಿನೈದು ಅಂಕಿಗಳು),  IFSC ಕೋಡ್ ಇತ್ಯಾದಿ ಮಾಹಿತಿಗಳಿರುವ ಸಾಫ್ಟ್ ಪ್ರತಿಯನ್ನು  ಪಡೆದೆಕೊಳ್ಳಬಹುದಾಗಿರುತ್ತದೆ.  

ಸಾಮಾನ್ಯವಾಗಿ ಕೆಲವೊಂದು ರೀತಿಯ  ಜೆರಾಕ್ಸ್ ಪ್ರತಿಗಳು 12 ತಿಂಗಳ ಕಾಲಾವಧಿಯಲ್ಲಿ ಮಾಸಿ ಹೋಗುವುದರಿಂದ ಸಾಫ್ಟ್ ಪ್ರತಿಯನ್ನು ಪಡೆದಿಟ್ಟುಕೊಳ್ಳಲಾಗುತ್ತದೆ. ಒಂದೊಮ್ಮೆ ಪತಿಯು ತನ್ನ ಪತ್ನಿಯ ಹೆಸರಿನಲ್ಲಿ ಸ್ಕೀಮ್ ತೆರೆಯಲು ಬಯಸಿದರೆ, ಪತ್ನಿಯ ಕೆವೈಸಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ. 

5. ಕೆವೈಸಿಯನ್ನು ಹೆಚ್ಚುವರಿ ದಾಖಲೆಯಾಗಿ ಸ್ವೀಕರಿಸುತ್ತಾರೆಯೇ ? 
ಕನಿಷ್ಠ ಒಂದು ವಿಳಾಸ ದಾಖಲೆ ಮತ್ತು ಪಾನ್ ಕಾರ್ಡ್ ಪ್ರತಿಯನ್ನು ಪಡೆದಿಟ್ಟುಕೊಳ್ಳುವುದು ಸೂಕ್ತವೆಂದು ತಿಳಿಯಲಾಗಿರುತ್ತದೆ.  ಸ್ಕೀಮ್ ಕಂತುಗಳು 40,000 ರೂ. ಮೀರಿದಲ್ಲಿ ಪಾನ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಪಡೆದಿಟ್ಟುಕೊಳ್ಳಬೇಕು ಎಂಬ ನಿಯಮವೂ ಇರಬಲ್ಲುದು.

                                                                                                (ಇನ್ನೂ ಇದೆ)

Advertisement

Udayavani is now on Telegram. Click here to join our channel and stay updated with the latest news.

Next