Advertisement

ಚಿನ್ನದ ಕಂತು ಖರೀದಿ ಉಳಿತಾಯ ಯೋಜನೆ ಜನಸಾಮಾನ್ಯರಿಗೆ ಎಷ್ಟು ಉಪಯುಕ್ತ?

12:26 PM Jan 05, 2019 | udayavani editorial |

ಉಳಿತಾಯದ ಹಣವನ್ನು ಲಾಭದಾಯಕ ಯೋಜನೆಗಳಲ್ಲಿ ತೊಡಗಿಸಿ ಅತ್ಯಧಿಕ ಇಳುವರಿ ಪಡೆಯುವುದರೊಂದಿಗೆ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಹತ್ತು ಉತ್ಕೃಷ್ಟ  ಮಾರ್ಗೋಪಾಯಗಳ ಪಟ್ಟಿಯಲ್ಲಿ  ಚಿನ್ನದ ಮೇಲಿನ ಹೂಡಿಕೆ ಕೊನೇ ಸ್ಥಾನದಲ್ಲಿರುವುದನ್ನು ನಾವು ಕಂಡುಕೊಂಡೆವು.

Advertisement

ಆದರೂ ಭಾರತೀಯರಿಗೆ, ವಿಶೇಷವಾಗಿ ಭಾರತೀಯ ಮಹಿಳೆಯರಿಗೆ ಮತ್ತು ಜನಸಾಮಾನ್ಯರಿಗೆ ಅಂದಿಗೂ ಇಂದಿಗೂ ಚಿನ್ನವೇ ಪರಮೋಚ್ಚ ಹೂಡಿಕೆ ಮಾಧ್ಯಮವಾಗಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದುದರಿಂದಲೇ ಸಾಮಾನ್ಯ ಭಾರತೀಯರು ಶೇರು, ಇತ್ಯಾದಿ ಹಣಕಾಸು ಮಾರುಕಟ್ಟೆಗಳ ಗೋಜಿಗೆ ಹೋಗದೆ ಸಣ್ಣ ಸಣ್ಣ ಪ್ರಮಾಣದಲ್ಲಿ ಚಿನ್ನ ಖರೀದಿಸಿಡುವುದು ಸರ್ವವ್ಯಾಪಿಯಾಗಿರುವ ವಿದ್ಯಮಾನವಾಗಿದೆ. 

ಆದರೆ ಚಿನ್ನದ ಹೂಡಿಕೆಯಲ್ಲಿ ಕೆಲವೊಂದು ತೊಡಕುಗಳಿವೆ. ಅವೆಂದರೆ ಚಿನ್ನದ ಬೆಲೆ ಬಲು ದುಬಾರಿ; ಚಿನ್ನವನ್ನು  ಒಡವೆ ರೂಪದಲ್ಲಿ ಅಥವಾ ಗಟ್ಟಿ ರೂಪದಲ್ಲಿ ಹೊಂದಿರುವುದರಲ್ಲಿ  ಸಾಕಷ್ಟು  ಅಭದ್ರತೆ ಇದೆ; ಮೇಲಾಗಿ ಚಿನ್ನವನ್ನು ಅಲ್ಪ ಪ್ರಮಾಣದಲ್ಲಿ ಖರೀದಿಸಿ ಸಂಗ್ರಹಿಸಿಡುವುದು ಕೂಡ ಕಷ್ಟವೇ; ಒಮ್ಮೆಲೇ ಒಂದೇ  ದೊಡ್ಡ ಗಂಟಿನಲ್ಲಿ ಚಿನ್ನದ ಮೇಲೆ ಹಣ ಹೂಡುವ ಸಾಮರ್ಥ್ಯ ಜನಸಾಮಾನ್ಯರಿಗೆ  ಇರುವುದಿಲ್ಲ. 

ಹಾಗಿರುವಾಗ ಚಿನ್ನವನ್ನೇ ಹೂಡಿಕೆ ಮಾಧ್ಯಮವನ್ನಾಗಿ ಆಯ್ಕೆ ಮಾಡುವ ಜನ ಸಾಮಾನ್ಯರು ಏನು ಮಾಡಬೇಕು; ಅವರಿಗೆ ಗೋಲ್ಡ್ ಬಾಂಡ್ ಎಂದರೇನೆಂದು ಗೊತ್ತಿಲ್ಲ. ಗೋಲ್ಡ್ ಇಟಿಎಫ್ ಕೂಡ ಗೊತ್ತಿಲ್ಲ. ಚಿನ್ನದ online ಖರೀದಿಯಂತೂ ಅವರಿಗೆ ಕಿರಿಕಿರಿಯ, ಕಷ್ಟದ ವಿಷಯ.

ಅಂತಿರುವಾಗ ಜನ ಸಾಮಾನ್ಯರ ನೆರವಿಗೆ ಬರುವುದು ಚಿನ್ನ ಖರೀದಿಯ ಉಳಿತಾಯ ಯೋಜನೆಗಳು !

Advertisement

ಚಿನ್ನಾಭರಣ ವ್ಯಾಪಾರೀ ಸಂಸ್ಥೆಗಳು ಸಾದರಪಡಿಸುವ ಚಿನ್ನ ಉಳಿತಾಯ ಯೋಜನೆಗಳೇ ಈ ದಿನಗಳಲ್ಲಿ ಹೆಚ್ಚು ಆಕರ್ಷಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇವುಗಳಲ್ಲಿ ನಾವು ಆಯ್ಕೆ ಮಾಡುವ ನಿರ್ದಿಷ್ಟ ಮೊತ್ತದ ಕಂತನ್ನು ತಿಂಗಳು ತಿಂಗಳೂ ರಿಕರಿಂಗ್ ಡೆಪಾಸಿಟ್ ನ ಹಾಗೆ ಕಟ್ಟಬಹುದು.

ಒಪ್ಪಿಕೊಂಡ ವಾಯಿದೆ ಮುಗಿದಾಗ ಕಂತು-ಖರೀದಿ ಯೋಜನೆಯಲ್ಲಿ ಸಂಗ್ರಹಗೊಳ್ಳುವ ಹಣದ ಮೊತ್ತಕ್ಕೆ ಒಂದಿಷ್ಟು ಹೆಚ್ಚಿನ ಮೊತ್ತವನ್ನು ಸೇರಿಸಿ ನಮ್ಮ ಆಯ್ಕೆಯ, ನಮ್ಮ ಬಜೆಟ್ ಮಿತಿಯೊಳಗಿನ ಚಿನ್ನದ ಒಡವೆಯನ್ನು ಖರೀದಿಸಬಹುದು. ಅತ್ತ ಉಳಿತಾಯವೂ ಆಯಿತು; ಇತ್ತ ಆ ಉಳಿತಾಯದಿಂದ ಚಿನ್ನಾಭರಣ ಖರೀದಿಯೂ ಸಾಧ್ಯವಾಯಿತು. 

ಆದುದರಿಂದಲೇ ಇಂದು ದೇಶದ ಬಹುತೇಕ ಎಲ್ಲ ನಗರ, ಪಟ್ಟಣಗಳಲ್ಲಿನ ಚಿನ್ನದ ಮಳಿಗೆಗಳಲ್ಲಿ “ಚಿನ್ನದ ಕಂತು ಖರೀದಿ ಉಳಿತಾಯ” ಯೋಜನೆಗಳನ್ನು ಹೆಂಗಳೆಯರಿಗಾಗಿ, ಜನ ಸಾಮಾನ್ಯರಿಗಾಗಿ ರೂಪಿಸಲಾಗಿರುತ್ತದೆ. ಮತ್ತು ಅವು ಆಕರ್ಷಕವಾಗಿವೆ.  

ಬಹುತೇಕ ಚಿನ್ನ ಉಳಿತಾಯ ಯೋಜನೆಗಳಲ್ಲಿ ಲಕ್ಕಿ ಡ್ರಾ ಕೂಡ ಅಂತರ್ಗತವಾಗಿರುತ್ತದೆ. ಕಂತು ಕಟ್ಟುವ ಅವಧಿಯಲ್ಲಿ ಅದೃಷ್ಟ ಖುಲಾಯಿಸಿತೆಂದರೆ ಮುಂದಿನ ಕಂತುಗಳನ್ನು ಕಟ್ಟಬೇಕಾಗಿಲ್ಲ. ಪೂರ್ತಿ ಕಂತುಗಳಿಗೆ ಸಮಾನವಾದ ಮೊತ್ತದ ಚಿನ್ನದ ಒಡವೆಗಳನ್ನು ಖರೀದಿಸುವುದಕ್ಕೆ ಅವಕಾಶ ಇರುತ್ತದೆ !

ಕೆಲವೊಂದು ಚಿನ್ನದ ವ್ಯಾಪಾರಸ್ಥರಲ್ಲಿ ಚಿನ್ನ ಉಳಿತಾಯದ 12 ಕಂತುಗಳ ಯೋಜನೆಯಲ್ಲಿ ಗ್ರಾಹಕರು 11 ಕಂತುಗಳನ್ನು ಕ್ರಮಬದ್ಧವಾಗಿ, ಲೋಪವಿಲ್ಲದೆ, ಕಟ್ಟಿದರೆ 12ನೇ ಕಂತನ್ನು ಆ ಮಳಿಗೆಯವರೇ ಉಡುಗೊರೆ ರೂಪದಲ್ಲಿ ಕೊಡುವ ಯೋಜನೆ ಇರುತ್ತದೆ.

ಉದಾಹರಣೆಗೆ ನೀವು ತಿಂಗಳಿಗೆ 5,000 ರೂ. ಕಂತನ್ನು 11 ತಿಂಗಳ ಕಾಲ ಕಟ್ಟಿದರೆ ನೀವು ಕಟ್ಟಿದ ಒಟ್ಟು ಮೊತ್ತ  55,000 ರೂ. ಆಗುವುದು; ಆಗ 12ನೇ ಕಂತಿನ 5,000 ರೂ. ಮೊತ್ತವನ್ನು ಆ ವ್ಯಾಪಾರಿಯೇ ನಿಮ್ಮ ಖಾತೆಗೆ ಜಮೆ ಮಾಡುತ್ತಾರೆ. ಎಂದರೆ ನೀವು 60,000 ರೂ. ಮೌಲ್ಯದ ಚಿನ್ನಾಭರಣ ಖರೀದಿಸುವುದಕ್ಕೆ ಅವಕಾಶ ಇರುತ್ತದೆ. ಕೆಲವು ವ್ಯಾಪಾರಸ್ಥರು ಗ್ರಾಹಕರ ಕೊನೇ ಕಂತಿನ ಶೇ.90ರಷ್ಟು ರಿಯಾಯಿತಿಯನ್ನು ಕೊಡುವುದಿದೆ.

ಕೆಲವೊಂದು ಚಿನ್ನಾಭರಣ ಉದ್ಯಮ ಸಂಸ್ಥೆಗಳ ಚಿನ್ನ ಉಳಿತಾಯ ಯೋಜನೆಗಳು ಇನ್ನೂ ಆಕರ್ಷಕವಿರುತ್ತವೆ. ಉದಾ: Tanishq ನ ಗೋಲ್ಡ್ ಹಾರ್ವೆಸ್ಟ್ ಸ್ಕೀಮ್.

ಇದರಡಿ ಗ್ರಾಹಕರು ಕನಿಷ್ಠ 2,000 ರೂ. ತಿಂಗಳ ಕಂತಿನ ಖಾತೆ ತೆರೆದರೆ ಇದರ ಮೆಚ್ಯುರಿಟಿ, ಖಾತೆ ತೆರೆದ ದಿನಾಂಕದಿಂದ 300ನೇ ದಿನ ಮುಗಿದಾಗ ಆರಂಭವಾಗುತ್ತದೆ. ಈ ಯೋಜನೆಯಡಿ ಗ್ರಾಹಕರು ಕೊನೇ ಕಂತಿನ ಶೇ.75ರ ಡಿಸ್‌ಕೌಂಟ್‌ ಗೆ ಅರ್ಹರಾಗುತ್ತಾರೆ. 300ನೇ ದಿನದ ಬಳಿಕ ಮತ್ತು 365ನೇ ದಿನ ಮುಗಿಯುವ ಮುನ್ನ ಗ್ರಾಹಕರು ಯೋಜನೆಯಿಂದ ಹೊರಬರಲು ಬಯಸಿದರೆ, ಯೋಜನೆಯಡಿ ಬಾಕಿ ಉಳಿಯುವ ದಿನಗಳನ್ನು ಲೆಕ್ಕಿಸಿ, ಅವರಿಗೆ ಒಂದು ತಿಂಗಳ ಕಂತಿನ ಶೇ.55ರಿಂದ ಶೇ.75ರ ವರೆಗಿನ ಡಿಸ್ಕೌಂಟ್ ಸಿಗುತ್ತದೆ. 

ಭವಿಷ್ಯತ್ತಿನ ಖರೀದಿ ಯೋಜನೆಗಾಗಿ ಮುಂಗಡ ಎಂದೇ ವರ್ಣಿತವಾಗಿರುವ ಚಿನ್ನ ಖರೀದಿ ಯೋಜನೆಗಳ ರೂಪರೇಖೆಯನ್ನು ಸಂಕ್ಷಿಪ್ತವಾಗಿ ನಾವು ಈ ಕೆಳಗಿನಂತೆ ಗುರುತಿಸಬಹುದು : 

1. ಗ್ರಾಹಕರು ಕಟ್ಟಬೇಕಾದ ಕಂತುಗಳು ಎಷ್ಟು ?
ಸಮಾನ ಮೊತ್ತದ., ನಿರ್ದಿಷ್ಟ ಸಂಖ್ಯೆಯ, ಕಂತುಗಳನ್ನು  ಕಟ್ಟಬೇಕು.

2.ಕಂತು ಕಟ್ಟಬೇಕಾದ ನಿಗದಿತ ದಿನಾಂಕ ಯಾವುದು ?
ಗ್ರಾಹಕರು ಮೊದಲ ಕಂತು ಕಟ್ಟಿದ ದಿನದ ಬಳಿಕದ ಪ್ರತೀ ತಿಂಗಳ ಅದೇ ದಿನದಂದು ಕಂತು ಕಟ್ಟತಕ್ಕದ್ದು. ಉದಾಹರಣೆಗೆ ಗ್ರಾಹಕರು ಮೊದಲ ಕಂತನ್ನು 5ನೇ ತಾರೀಕಿನಂದು ಕಟ್ಟಿದರೆ, ಅನಂತರದ ಉಳಿದ ಎಲ್ಲ ಕಂತುಗಳನ್ನು ಪ್ರತೀ ತಿಂಗಳ 5ನೇ ತಾರೀಕಿನಂದೇ ಕಟ್ಟತಕ್ಕದ್ದು.

3. ಕಂತು ಕಟ್ಟುವುದಕ್ಕೆ ರಿಯಾಯಿತಿ ದಿನಗಳು ಇವೆಯೇ ?
ಇಲ್ಲ. ಯಾವುದೇ ರಿಯಾಯಿತಿ ದಿನಗಳು ಇರುವುದಿಲ್ಲ. ಇದನ್ನು ಸದಸ್ಯರಿಗೆ ಕಟ್ಟುನಿಟ್ಟಾಗಿ ತಿಳಿಸಲಾಗುತ್ತದೆ.

4. ಗ್ರಾಹಕರಿಂದ ಕೆವೈಸಿ (ಗ್ರಾಹಕರ ಪರಿಚಯ ಮಾಹಿತಿ) ದಾಖಲೆಗಳನ್ನು ಕೇಳುತ್ತಾರೆಯೇ?
ಹೌದು. ಯಾರ ಹೆಸರಿನಲ್ಲಿ ಸ್ಕೀಮನ್ನು ತೆರೆಯಲು ಬಯಸಲಾಗಿದೆಯೋ ಆ ವ್ಯಕ್ತಿಯ ಮೂಲ ಬ್ಯಾಂಕ್ ಪಾಸ್ ಬುಕ್ ತರುವಂತೆ ಗ್ರಾಹಕರನ್ನು ಕೇಳಬಹುದಾಗಿರುತ್ತದೆ.  ಬ್ಯಾಂಕಿನ ಹೆಸರು, ಶಾಖೆಯ ಹೆಸರು, ಖಾತೆಯ ನಂಬ್ರ (ಹದಿನೈದು ಅಂಕಿಗಳು),  IFSC ಕೋಡ್ ಇತ್ಯಾದಿ ಮಾಹಿತಿಗಳಿರುವ ಸಾಫ್ಟ್ ಪ್ರತಿಯನ್ನು ಪಡೆಯಬಹುದಾಗಿರುತ್ತದೆ.  ಜೆರಾಕ್ಸ್ ಪ್ರತಿಗಳು 12 ತಿಂಗಳ ಕಾಲಾವಧಿಯಲ್ಲಿ ಮಾಸಿ ಹೋಗುವುದರಿಂದ ಸಾಫ್ಟ್ ಪ್ರತಿಯನ್ನು ಪಡೆಯಬಹುದಾಗಿರುತ್ತದೆ. ಒಂದೊಮ್ಮೆ ಪತಿಯು ತನ್ನ ಪತ್ನಿಯ ಹೆಸರಿನಲ್ಲಿ ಸ್ಕೀಮ್ ತೆರೆಯಲು ಬಯಸಿದರೆ, ಪತ್ನಿಯ ಕೆವೈಸಿ ದಾಖಲೆಗಳನ್ನು ಸಂಗ್ರಹಿಸಬಹುದಾಗಿರುತ್ತದೆ. 

5. ಕೆವೈಸಿಯನ್ನು ಹೆಚ್ಚುವರಿ ದಾಖಲೆಯಾಗಿ ಕೇಳುತ್ತಾರೆಯೇ ?
ಕನಿಷ್ಠ ಒಂದು ವಿಳಾಸ ದಾಖಲೆ ಮತ್ತು ಪ್ಯಾನ್ ಕಾರ್ಡ್ ಪ್ರತಿಯನ್ನು ಪಡೆಯಬಹುದಾಗಿರುತ್ತದೆ. ಸ್ಕೀಮ್ ಕಂತುಗಳು 40,000 ರೂ. ಮೀರಿದಲ್ಲಿ ಪಾನ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಪಡೆಯಬಹುದಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next