ನವದೆಹಲಿ: ಹಳದಿ ಲೋಹ ಚಿನ್ನದ ಬೆಲೆ ಮತ್ತೆ ಏರಿಕೆಯಾಗತೊಡಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ(ಡಿಸೆಂಬರ್ 24, 2020) ಚಿನ್ನದ ಬೆಲೆ 385 ರೂಪಾಯಿ ಹೆಚ್ಚಳವಾಗಿದ್ದು, ಇದರೊಂದಿಗೆ ಹತ್ತು ಗ್ರಾಂ ಚಿನ್ನಕ್ಕೆ 49,624ರೂಪಾಯಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಚಿನ್ನ, ಬೆಳ್ಳಿ ಬೆಲೆ ಹೆಚ್ಚಳವಾದ ಪರಿಣಾಮ ಭಾರತದಲ್ಲಿಯೂ ಬೆಲೆ ಏರಿಕೆಯಾಗಿದೆ. ಬೆಳ್ಳಿ ಬೆಲೆ 1,102 ರೂಪಾಯಿ ಹೆಚ್ಚಳವಾಗಿದ್ದು, ಕೆಜಿ ಬೆಳ್ಳಿ ಬೆಲೆ 66, 954 ರೂಪಾಯಿಗೆ ಏರಿಕೆಯಾಗಿದೆ. ಬುಧವಾರ ಕೆಜಿ ಬೆಳ್ಳಿ ಬೆಲೆ 65, 852 ರೂಪಾಯಿ ಆಗಿತ್ತು.
ಬುಧವಾರ ಹತ್ತು ಗ್ರಾಂ ಚಿನ್ನದ ಬೆಲೆ 49,239 ರೂಪಾಯಿಗೆ ಏರಿಕೆಯಾಗಿತ್ತು. ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆಫ್ ಅಹಮದಾಬಾದ್ ನ ಇಂಡಿಯಾ ಗೋಲ್ಡ್ ಪಾಲಿಸಿ ಸೆಂಟರ್ ನ ಅಧ್ಯಕ್ಷ ಪ್ರೊ.ಅರವಿಂದ್ ಸಹಾಯ್ ಅವರು, ಜಗತ್ತಿನ 17 ದೇಶಗಳಲ್ಲಿ ಚಿನ್ನ ಖರೀದಿಸುವ ಪ್ರಮಾಣ ಶೇ,22ರಷ್ಟು ಹೆಚ್ಚಳವಾಗಿದೆ. ಪ್ರಬಲವಾದ ಹೂಡಿಕೆಯ ಬೇಡಿಕೆಯಿಂದಾಗಿ ಇದು ಶೇ.13ರಿಂದ 60ಕ್ಕೆ ಏರಿಕೆಯಾಗುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ.
ನಮ್ಮ ಅಂದಾಜಿನ ಪ್ರಕಾರ ಪ್ರಸ್ತುತ ಸನ್ನಿವೇಶದಂತೆ 2021-22ರಲ್ಲಿ ಚಿನ್ನದ ಬೆಲೆ ಶೇ.20ರಿಂದ 25ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಡಾಲರ್ ಮತ್ತು ಯುರೋ ಬಡ್ಡಿದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಅಷ್ಟೇ ಅಲ್ಲ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ವ್ಯಾಪಾರ ಸಂಘರ್ಷ, ಮತ್ತೊಂದೆಡೆ ಚೀನಾ ಬಿಕ್ಕಟ್ಟು, ಭೌಗೋಳಿಕ ರಾಜಕೀಯ ಘರ್ಷಣೆ, ತಾಂತ್ರಿಕ ವೈಷಮ್ಯತೆ ಹಾಗೂ ಕೋವಿಡ್ 19 ಸೋಂಕು ಮತ್ತು ಅದರ ಲಸಿಕೆ ಕುರಿತ ಗೊಂದಲ ಮುಂದುವರಿದಿರುವ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿ ಹೆಚ್ಚಳವಾಗಲಿದೆ ಎಂದು ಪ್ರೊ.ಅರವಿಂದ್ ವಿಶ್ಲೇಷಿಸಿದ್ದಾರೆ.