Advertisement

ಪ್ರಸ್ತಾವಿತ ನವಲಿ ಡ್ಯಾಂ ಸುತ್ತಲಿನ ಭೂಮಿಗೆ ಚಿನ್ನದ ಬೆಲೆ

10:21 AM May 24, 2020 | mahesh |

ಗಂಗಾವತಿ: ಕನಕಗಿರಿ ತಾಲೂಕಿನ ನಿಯೋಜಿತ ನವಲಿ ಬಳಿ ಸಮನಾಂತರ ಡ್ಯಾಂ ನಿರ್ಮಾಣಕ್ಕೆ ಸರಕಾರ ಸಿದ್ಧತೆ ನಡೆಸುತ್ತಿರುವಂತೆ ನವಲಿ, ಕರಡೋಣಿ ಸೇರಿ ಸುತ್ತಲಿನ ಸುಮಾರು 28 ಗ್ರಾಮಗಳ ಭೂಮಿ ಮೇಲೆ ಭೂ ಮಾಫಿಯಾ ಕಣ್ಣು ಬಿದ್ದಿದೆ. ಇದರಿಂದ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಬೆಂಗಳೂರು, ಹೈದ್ರಾಬಾದ್‌, ಹುಬ್ಬಳ್ಳಿ ಸೇರಿ ವಿವಿಧ ನಗರಗಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ಮಾಡುವವರು ಮತ್ತು ಗಂಗಾವತಿ, ಸಿಂಧನೂರು, ಕಾರಟಗಿ, ಶ್ರೀರಾಮನಗರ ಸೇರಿ ನೀರಾವರಿ ಪ್ರದೇಶದಲ್ಲಿರುವ ಆರ್ಥಿಕವಾಗಿ ಉತ್ತಮವಾಗಿರುವ ರೈತರು, ವರ್ತಕರು ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಸಂಪರ್ಕಿಸಿ ಅವರಿಂದ ಭೂಮಿ ಖರೀದಿಸಲು ಮುಂದಾಗಿದ್ದಾರೆ.

Advertisement

ನೀರಾವರಿಯಾಗುವ ಪ್ರದೇಶ ಮತ್ತು ನವಲಿ ಡ್ಯಾಂ ಹಿನ್ನೀರು ಪ್ರದೇಶದ ಭೂಮಿಗೆ ಇದೀಗ ಚಿನ್ನದ ಬೆಲೆ ಬಂದಿದೆ. ಇಲ್ಲಿಯ ಭೂಮಿ ಖರೀದಿಸಲು ಕೆಲ ಭೂಮಾಫಿಯಾದವರು ಬೀಡುಬಿಟ್ಟಿದ್ದು ದಲ್ಲಾಳಿಗಳ ಮೂಲಕ ಸಣ್ಣಪುಟ್ಟ ಭೂಮಿ ಹೊಂದಿರುವ ರೈತರಿಗೆ ಹಣದ ಆಸೆ ತೋರಿಸಿ ಭೂಮಿ ಖರೀದಿಗೆ ಮುಂದಾಗಿದ್ದಾರೆ. ಇನ್ನು ನವಲಿ ಸುತ್ತಲೂ ರೈತರ ಭೂಮಿ ಖರೀದಿ ಮಾಡಿ ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ ವಸತಿ ಲೇಔಟ್‌ ಮಾಡುತ್ತಿದ್ದಾರೆ. ಈಗಾಗಲೇ 8-10 ಎನ್‌ಎ ಕಡತಗಳು ಸಹಾಯಕ ಆಯುಕ್ತರ ಕಚೇರಿಯಲ್ಲಿದ್ದು ನವಲಿ ಗ್ರಾಮಕ್ಕೆ ಹೊಂದಿಕೊಂಡಂತೆ ಉಳಿದ ಗ್ರಾಮಗಳ ಭೂಮಿಗೂ ಉತ್ತಮ ಬೆಲೆ ಬಂದಿದೆ. ನವಲಿ ಡ್ಯಾಂಗೆ ತುಂಗಭದ್ರಾ ಡ್ಯಾಂ ಹಿನ್ನೀರಿ ನಿಂದ ಕಾಲುವೆ ನಿರ್ಮಿಸಿ ನೀರನ್ನು ತರಲು ಉದ್ದೇಶಿಸಿದ್ದು ಶಿವಪುರ, ವಿಠಲಾಪುರ ಸೇರಿ ಪ್ರಮುಖ ಕೆರೆಗಳ ಮೂಲಕ ಕಾಲುವೆಗೆ ನೀರು ಹರಿಯುವಂತೆ ಯೋಜನೆ ರೂಪಿಸಲಾಗಿದೆ. ಈ ಕೆರೆಯ ಸುತ್ತಲಿನ ಭೂಮಿಗೂ ಅಧಿಕ ಬೆಲೆ ಬಂದಿದೆ.

50ಟಿಎಂಸಿ ಅಡಿ ನೀರು ಸಂಗ್ರಹದ ಯೋಜನೆ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದು ಮಳೆಗಾಲದಲ್ಲಿ ಹರಿದು ಹೋಗುವ ನೀರು ಸಂಗ್ರಹ ಮಾಡಲು ನವಲಿ ಬಳಿ ಸಮಾನಾಂತರ ಡ್ಯಾಂ ನಿರ್ಮಿಸಲು ಸರ್ಕಾರ ಮುಂದಾಗಿದೆ. ಕರಡೋಣಿ ಮತ್ತು ಆಕಳಕುಂಪಿ ಗ್ರಾಮದ ಎರಡು ಮಣ್ಣಿನ ಬೆಟ್ಟದ ಮಧ್ಯೆ ಡ್ಯಾಂ ನಿರ್ಮಾಣವಾಗಲಿದೆ. 50 ಟಿಎಂಸಿ ಅಡಿ ನೀರು ಸಂಗ್ರಹ ಮಾಡಲು ಸುಮಾರು 24 ಸಾವಿರ ಎಕರೆ ಪ್ರದೇಶದ ಭೂಮಿ ಡ್ಯಾಂನಲ್ಲಿ ಮುಳುಗಡೆಯಾಗಲಿದೆ. ಭೂಮಿ ಕಳೆದುಕೊಂಡ ರೈತರಿಗೆ ಡ್ಯಾಂ ಕೆಳಭಾಗದಲ್ಲಿ ಭೂಮಿ ಹಂಚಿಕೆ ಮಾಡಲು ಸರಕಾರ ಯೋಜನೆ ರೂಪಿಸಿದೆ. ಯೋಜನೆ ಪ್ರಕಾರ ಡ್ಯಾಂನಲ್ಲಿ ಸಂಗ್ರಹವಾಗುವ ನೀರು ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ಕೊನೆಭಾಗದ ರೈತರಿಗೆ ಮತ್ತು ಆಂಧ್ರಪ್ರದೇಶ ತೆಲಂಗಾಣ ರಾಜ್ಯಕ್ಕೆ ನೀರು ಪೂರೈಸಬೇಕಿದೆ. ಭೂಮಿಯನ್ನು ಕಳೆದುಕೊಳ್ಳುತ್ತಿರುವ ರೈತರು ಡ್ಯಾಂನ ಎರಡು ಭಾಗದಲ್ಲಿ ಉಪಕಾಲುವೆ ಮೂಲಕ ಸ್ಥಳೀಯ ಭೂಮಿಗೆ ನೀರು ಒದಗಿಸುವಂತೆ ಯೋಜನೆ ರೂಪಿಸುವ ಸಂದರ್ಭ ಮನವಿ ಮಾಡಿದ್ದಾರೆ.

ನವಲಿ ಡ್ಯಾಂ ನಿರ್ಮಾಣದಿಂದ ಒಣಬೇಸಾಯ ಪ್ರದೇಶ ಪ್ರಗತಿ ಹೊಂದಲಿದೆ. ಯೋಜನೆ ನಿರ್ಮಾಣಕ್ಕೂ ಮೊದಲು ಇಲ್ಲಿಯ ಭೂಮಿ ಖರೀದಿಸಲು ಭೂ ಮಾಫಿಯಾ ಮತ್ತು ರಿಯಲ್‌ಎಸ್ಟೇಟ್‌ನವರು ಕಳೆದ ಎರಡು ವರ್ಷಗಳಿಂದ ಯತ್ನ ನಡೆಸಿದ್ದಾರೆ. ರೈತರು ಯಾವುದೇ ಲಾಬಿಗೆ ಮಣಿಯದೆ ಸರಕಾರದ ಪರಿಹಾರ ಪಡೆದು ಡ್ಯಾಂ ಕೆಳಭಾಗದಲ್ಲಿ ಭೂಮಿ ಪಡೆಯಬೇಕು. ಖಾಸಗಿ ಲಾಬಿಗೆ ಮಣಿದು ಇರುವ ಭೂಮಿ ಕಳೆದುಕೊಳ್ಳಬಾರದು. ಯೋಜನೆಯಲ್ಲಿ ನವಲಿ
ಸುತ್ತಲಿನ ಗ್ರಾಮಗಳ ಭೂಮಿ ನೀರಾವರಿಯಾಗಬೇಕು. ಕೆರೆಗಳ ಭರ್ತಿಗೆ ಯೋಜನೆ ರೂಪಿಸಬೇಕು. ಕೆಲವರು ಅ ಧಿಕ ಪರಿಹಾರ ಪಡೆಯಲು ಭೂಮಿಯನ್ನು ಎನ್‌ಎ ಮಾಡಿಸುತ್ತಿದ್ದು ಜಿಲ್ಲಾಡಳಿತ ಪರಿಶೀಲನೆ ನಡೆಸಬೇಕು.
ಲಿಂಗರಾಜ ಹೂಗಾರ, ಅಧ್ಯಕ್ಷರು ಅಖೀಲ ಭಾರತ ಕಿಸಾನ್‌ ಮಹಾಸಭಾ ಕನಕಗಿರಿ

ಕೆ.ನಿಂಗಜ್ಜ

Advertisement
Advertisement

Udayavani is now on Telegram. Click here to join our channel and stay updated with the latest news.