ಬೆಂಗಳೂರು: ಪೊಲೀಸರ ಸೋಗಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ರಾಯಚೂರು ಮೂಲದ ಅಬ್ದುಲ್ ರಜಾಕ್ ಎಂಬುವರು ಉಪ್ಪಾರಪೇಟೆ ಠಾಣೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ರಾಯಚೂರಿನ ನೇತಾಜಿನಗರದ ಅಬ್ದುಲ್ ರಜಾಕ್ ಮತ್ತು ಮಲ್ಲಯ್ಯ ಚಿನ್ನದ ಗಟ್ಟಿ ಕಳೆದುಕೊಂಡವರು.
ಮಾಲೀಕರ ಸೂಚನೆ ಮೇರೆಗೆ ಅಬ್ದುಲ್ ರಜಾಕ್ 56 ಲಕ್ಷ ರೂ. ಮತ್ತು ಮಲ್ಲಯ್ಯ 54 ಲಕ್ಷ ರೂ. ತಂದು ರಾಜಾ ಮಾರ್ಕೆಟ್ ನಲ್ಲಿರುವ ಬಾಪೂ ಭಾಯ್ ಹಾಗೂ ಅಜಯ್-ವಿಜಯ್ ಎಂಬುವರ ಬಳಿ ಚಿನ್ನದ ಗಟ್ಟಿ ಖರೀದಿಸಲು ಇಬ್ಬರು ಪ್ರತ್ಯೇಕವಾಗಿ ಮಾ.10ರಂದು ಬೆಂಗಳೂರಿಗೆ ಬಂದಿದ್ದರು. ಇದೇ ವೇಳೆ ಮತ್ತೂಬ್ಬ ಸುನೀಲ್ ಕುಮಾರ್ ಕೂಡ ಮಾಲೀಕರ ಸೂಚನೆ ಮೇರೆಗೆ ಚಿನ್ನದ ಗಟ್ಟಿ ಖರೀದಿಗೆ ಬಂದಿದ್ದರು. ಮಾ.11ರಂದು ಅಪರಾಹ್ನ ಅಬ್ದುಲ್ ರಜಾಕ್ ಮತ್ತು ಮಲ್ಲಯ್ಯ ಹಾಗೂ ಸುನೀಲ್ ಕುಮಾರ್ ರಾಜಾ ಮಾರ್ಕೆಟ್ ಗೆ ಹೋಗಿದ್ದಾರೆ. ಬಳಿಕ ಮೂವರು ಪ್ರತ್ಯೇಕವಾಗಿ ಚಿನ್ನಾಭರಣ ವ್ಯಾಪಾರಿಗಳ ಬಳಿ ತೆರಳಿ ಚಿನ್ನದ ಗಟ್ಟಿಗಳನ್ನು ಖರೀದಿಸಿದ್ದಾರೆ.
ನಂತರ ಲಾಡ್ಜ್ ಗೆ ಹೋಗಿ, ರಾತ್ರಿ 11 ಗಂಟೆಗೆ ರಾಯಚೂರಿಗೆ ವಾಪಸ್ ತೆರಳಲು ಗ್ರೀನ್ಸ್ ಟ್ರಾವೆಲ್ಸ್ ಕಚೇರಿ ಬಳಿ ಹೋಗಿದ್ದರು. ಈ ವೇಳೆ ಅಡ್ಡಗಟ್ಟಿದ್ದ ಇಬ್ಬರು ಅಪರಿಚಿತರು, ‘ನಾವು ಪೊಲೀಸರು 3 ತಿಂಗಳಿಂದ ನಿಮ್ಮನ್ನು ಗಮನಿಸುತ್ತಿದ್ದೇವೆ’ ಎಂದಿದ್ದಾರೆ. ಬಳಿಕ ಇಬ್ಬರ ಬಳಿಯಿದ್ದ 2 ಕೆ.ಜಿ.200 ಗ್ರಾಂ ಚಿನ್ನಾಭರಣದ ಬ್ಯಾಗ್ ಕಸಿದುಕೊಂಡು, ರೇಸ್‌ಕೋರ್ಸ್ ರಸ್ತೆ ಮಾರ್ಗವಾಗಿ ನೆಹರೂ ತಾರಾಲಯ ಬಳಿ ಕರೆದೊಯ್ದು ಮಾರ್ಗ ಮಧ್ಯೆ ಇಳಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬರುವಂತೆ ತಿಳಿಸಿ, ಆಟೋದಲ್ಲಿ ಪರಾರಿಯಾಗಿದ್ದಾರೆ.
ಈ ಸಂಬಂಧ 2.2 ಕೆ.ಜಿ. ಚಿನ್ನದ ಗಟ್ಟಿ, ಚಿನ್ನಾಭರಣಗಳಿರುವ ಬ್ಯಾಗ್, 19 ಸಾವಿರ ರೂ. ನಗದು ಕದ್ದು ಪರಾರಿಯಾಗಿದ್ದಾರೆ.