ಪುಣೆ: ವೈದ್ಯಕೀಯ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ಪುಣೆಯ ಬಿ.ಜೆ. ಮೆಡಿಕಲ್ ಕಾಲೇಜ್‌ನ ವಿದ್ಯಾರ್ಥಿನಿ ಡಾ| ಹರ್ಷಿತಾ ಶೆಟ್ಟಿ ಕಾಲೇಜ್‌ಗೆ ಅತೀ ಹೆಚ್ಚು ಅಂಕಗಳನ್ನು ಪಡೆದು ಡಾ| ಎ.ವಿ. ಉಮರ್ಕರ್ ಸ್ಮರಣಾರ್ಥ ಕೊಡಮಾಡುವ ಚಿನ್ನದ ಪದಕವನ್ನು ಪಡೆದಿದ್ದಾರೆ.
ಪುಣೆಯ ತುಳು, ಕನ್ನಡಿಗ, ಹೊಟೇಲ್ ಉದ್ಯಮಿ, ಧನಕವಾಡಿ ನಿವಾಸಿ
ಮೂಲತಃ ಶಿರ್ವ ಪಂಜಿಮಾರ್ ದೊಡ್ಡಮನೆ ಹರೀಶ್ ಎನ್. ಶೆಟ್ಟಿ ಮತ್ತು ಉಡುಪಿ ಕಬ್ಯಾಡಿ ತಟ್ಟೂರು ಮನೆ ವಾರಿಜಾ ಶೆಟ್ಟಿ ದಂಪತಿ ಪುತ್ರಿಯಾದ ಇವರು ಮಹಾರಾಷ್ಟ್ರ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನಾಸಿಕ್ ವಲಯದ ಮಹಿಳಾ ಪರೀಕ್ಷಾರ್ಥಿಗಳಲ್ಲಿ ಮೆಡಿಸಿನ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆ ದು ದಿ| ಶ್ರೀಮತಿ ವಿಜಯದೇವಿ ಫಡ್ತಾರೆ ಸ್ಮರಣಾರ್ಥ ಕೊಡಮಾಡುವ ಚಿನ್ನದ ಪದಕವನ್ನೂ ಮುಡಿಗೆರಿಸಿಕೊಂಡಿದ್ದಾರೆ.
ಕೊರೊನಾ ನಿಯಮಾನುಸಾರ ಮಹಾರಾಷ್ಟ್ರ ರಾಜ್ಯಮಟ್ಟದಲ್ಲಿ ಆನ್‌ಲೈನ್ ಮೂಲಕ ನಡೆದ ಈ ಸಮಾವೇಶದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಉಪಸ್ಥಿತರಿದ್ದು, ಮಹಾರಾಷ್ಟ್ರ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನಾಸಿಕ್ ಇದರ ಪರೀûಾ ಪರಿವಿಕ್ಷಕ, ನಿಯಂತ್ರಕ ಡಾ| ಅಜಿತ್ ಪಾಠಕ್ ಅವರು ಈ ಚಿನ್ನದ ಪದಕವನ್ನು ಡಾ| ಹರ್ಷಿತಾ ಶೆಟ್ಟಿ ಅವರಿಗೆ ಪ್ರದಾನ ಮಾಡಿ ಅಭಿನಂದಿಸಿದರು.
ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ 2 ಚಿನ್ನದ ಪದಕವನ್ನು ಪಡೆದ ಡಾ| ಹರ್ಷಿತಾ ಶೆಟ್ಟಿ ಅವರು ಈ ಮೊದಲು ಮೂರನೇ ವರ್ಷದ ಎಂಬಿಬಿಎಸ್ ಪರೀಕ್ಷೆಯ OPHTHALMOLOGY ವಿಭಾಗದಲ್ಲಿ ಕೂಡ ಚಿನ್ನದ ಪದಕವನ್ನು ಪಡೆದಿದ್ದರು. ಪ್ರಾಥಮಿಕ, ಫ್ರೌಢ ಮತ್ತು ಪದವಿಯನ್ನು ಶ್ರೇಷ್ಟ ಶ್ರೇಣಿಯಲ್ಲಿ ಮುಗಿಸಿರುವ ಇವರು 2015 -2016ರಲ್ಲಿ ಎಂಎಸ್‌ಸಿಇಟಿ ಪರೀಕ್ಷೆಯಲ್ಲಿ ಇನ್ನೂರಕ್ಕೆ ಇನ್ನೂರು ಅಂಕಗಳನ್ನು ಪಡೆದು ಮಹಾರಾಷ್ಟ್ರಕ್ಕೆ ಮೊದಲಿಗರಾಗಿ ಉತ್ತೀರ್ಣರಾಗಿದ್ದರು. ಇವರನ್ನು ಬಂಟರ ಸಂಘ ಪುಣೆ, ಶ್ರೀ ಅಯ್ಯಪ್ಪ ಸೇವಾ ಸಂಘ ಕಾತ್ರಜ್ ಪುಣೆ, ಬಂಟ್ಸ್ ಅಸೋಸಿಯೇಶನ್ ಪುಣೆ, ಶ್ರೀ ಗುರುದೇವ ಸೇವಾ ಬಳಗ ಪುಣೆ, ತುಳು ಕೂಟ ಪುಣೆ ಹಾಗೂ ವಿವಿದ ಸಂಘ ಸಂಸ್ಥೆಗಳು ಅಧ್ಯಕ್ಷರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ.