ಬೆಂಗಳೂರು: ಅಮೆರಿಕದ ಬಾಸ್ಟನ್‌ನಲ್ಲಿ ನ.9ರಿಂದ 13ರವರೆಗೆ ನಡೆದ “ಇಂಟರ್‌ನ್ಯಾಷನಲ್ ಜೆನೆಟಿಕಲಿ ಎಂಜಿನೀಯರ್ ಮಷಿನ್-ಐಜೆಮ್’ ಸ್ಪರ್ಧೆಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಬಿಎಸ್‌ಸಿ (ರೀಸರ್ಚ್) ಪದವಿ ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದಿದ್ದಾರೆ.
ಐಜೆಮ್ ಸ್ಪರ್ಧೆಯು ಜಾಗತಿಕ ಮಟ್ಟದಲ್ಲಿ ಸಿಂಥೆಟಿಕ್ ಜೀವ ವಿಜ್ಞಾನ ಕ್ಷೇತ್ರದ ಅತ್ಯಂತ ಪ್ರತಿಷ್ಠೆಯ ಸ್ಪರ್ಧೆಯಾಗಿದೆ. ನೈಜ ಜೀವನದಲ್ಲಿ ವ್ಯಕ್ತಿ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಸ್ಪರ್ಧೆ ಆಯೋಜಿಸುತ್ತಿದ್ದು, ಪ್ರಸಕ್ತ ಸಾಲಿನ ಸ್ಪರ್ಧೆಯಲ್ಲಿ ವಿಶ್ವದ 300ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ರಿಕಾಂಬಿನಂಟ್ ಪ್ರೊಟೀನ್ ಶುದ್ಧೀಕರಿಸುವ ನೂತನ ಐಡಿಯಾದೊಂದಿಗೆ “ಐಐಎಸ್‌ಸಿ-ಐಜೆಮ್’ ತಂಡವು ಕಳೆದ ಎಂಟು ತಿಂಗಳಿನಿಂದ ಮೈಕ್ರೋ ಬಯಾಲಜಿ ಹಾಗೂ ಸೆಲ್ ಬಯಾಲಜಿ ವಿಭಾಗದ ಪ್ರೊ.ದೀಪ್‌ಶಿಖಾ ಚಕ್ರವರ್ತಿ ಹಾಗೂ ಪ್ರೊ.ಉತ್ಪಲ್‌ನಾಥ್ ಅವರ ಮಾರ್ಗದರ್ಶನದಲ್ಲಿ ಸತತ ಪ್ರಯೋಗ ನಡೆಸಿ, “ಐ-ಫ್ಲೋಟ್’ ಎಂಬ ಹೆಸರಿನ ಈ ಯೋಜನೆಯಲ್ಲಿ ಹ್ಯಾಲೋ ಬ್ಯಾಕ್ಟೀರಿಯಲ್ ಸ್ಪೀಸೀಸ್‌ನ ಬೇರ್ಪಡಿಸುವಿಕೆಯಿಂದ ಲಭ್ಯವಾಗುವ ಗ್ಯಾಸ್ ವೆಸಿಕಲ್ಸ್ ಉಪಯೋಗಿಸಿಕೊಳ್ಳುವ ತಂತ್ರವನ್ನ ಸಿದ್ಧಪಡಿಸಿದ್ದರು.
ಈ ಅನಿಲ ವೆಸಿಕಲ್‌ಗಳ ಪರಿಣಾಮದಿಂದ ಬ್ಯಾಕ್ಟೀರಿಯಾಗಳು ದ್ರವ ಮಾಧ್ಯಮದಲ್ಲಿ ಮೇಲ್ಮುಖವಾಗಿ ಚಲಿಸಿ, ಮೇಲಕ್ಕೆ ಬಂದು ತೇಲುತ್ತವೆ. ಇದನ್ನು ಬಳಸಿಕೊಂಡ ಐಐಎಸ್‌ಸಿ “ಐ-ಫ್ಲೋಟ್’ ವಿದ್ಯಾರ್ಥಿಗಳ ತಂಡವು ರಿಕಾಂಬಿನಂಟ್ ಪ್ರೋಟೀನ್ ಶುದ್ಧೀಕರಿಸುವ ತಂತ್ರಜ್ಞಾವನ್ನು ಅಭಿವೃದ್ಧಿಪಡಿಸಿದ್ದರು.
ಈ ನೂತನ ತಂತ್ರಜ್ಞಾನದಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಜೀನ್ ಕ್ಲೋನಿಂಗ್ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಬಳಸಿದ್ದರು. ನಂತರದಲ್ಲಿ ಬಯೋಕೆಮಿಕಲ್ ಪರೀಕ್ಷಾ ತಂತ್ರಗಳೆನಿಸಿದ “ಎಸ್‌ಡಿಎಸ್-ಪೇಜ್’ ಪರೀಕ್ಷೆಯ ಮೂಲಕ ಪರೀಕ್ಷೆಗೆ ಒಳಪಡಿಸಿ, ಎಲ್ಲ ಪರೀಕ್ಷೆಗಳಲ್ಲಿ ತಂತ್ರಜ್ಞಾನ ಯಶಸ್ವಿಯಾದ ನಂತರದಲ್ಲಿ ಸ್ಪರ್ಧೆ ಕಳುಹಿಸಲಾಗಿದ್ದ ತಂತ್ರಜ್ಞಾನಕ್ಕೆ ಚಿನ್ನದ ಪದಕ ದೊರಕಿದೆ.
ಚಿನ್ನದ ಪದಕ ವಿಜೇತ ತಂಡದಲ್ಲಿ ರಾಜ್ ಮಗೇಶ್, ಸಾಯಿ ಪದ್ಮಪ್ರಿಯಾ, ಕುನಾಲ್ ಹೆಳಂಬೆ, ರಜಸ್ ಪೂರ್ಣ, ಶರತ್ ಕೆ.ಮೆನನ್, ರೋಹಿತ್ ಕೆ.ಎಂ.ಎಸ್., ಭಾಸ್ಕರ್ ಕುಮಾವತ್, ದುರ್ಜಯ ಪ್ರಮಾಣಿಕ್, ಪ್ರತ್ಯೂಷಾ ಮಧೂರೆ, ಜೂಲಿಯನ್ ಡಿ’ಕೋಸ್ಟ, ಮುಕುಲ್ ಸಾಗರ್, ಶ್ರೇಯ್ ಗುಪ್ತಾ, ಆದಿತ್ಯ ಅಯ್ಯರ್ ಮತ್ತು ಪ್ರೀತಮ್ ವೆಂಕಟೇಶ್ ಇದ್ದಾರೆ. ಜತೆಗೆ ಪಿಎಚ್‌ಡಿ ವಿದ್ಯಾರ್ಥಿ ಅಕ್ಷಯ್ ದಾತೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಬಾಸ್ಟನ್‌ನಿಂದ ಭಾರತಕ್ಕೆ ಗುರುವಾರ ಬಂದಿಳಿದ 14 ವಿದ್ಯಾರ್ಥಿಗಳಿದ್ದ ತಂಡವು ಐಐಎಸ್‌ಸಿ ನಿರ್ದೇಶಕರಾದ ಪ್ರೊ.ಅನುರಾಗ್ ಕುಮಾರ್ ಅವರನ್ನು ಭೇಟಿ ಮಾಡಿ ಸಂತಸ ಹಂಚಿಕೊಂಡಿದ್ದು, ಇದೇ ವೇಳೆ ನಿರ್ದೇಶಕರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಅಭಿನಂದಿಸಿದ್ದಾರೆ.