Advertisement

ಕೋವಿಡ್ ಕಷ್ಟ ಕಾಲದಲ್ಲಿ ಬಂಗಾರವೇ ಜೀವನಾಧಾರ! ಚಿನ್ನ ಅಡ ಇಡುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

09:05 PM May 18, 2021 | Team Udayavani |

ನವ ದೆಹಲಿ: ಕೊರೊನಾ ಮೊದಲನೇ ಅಲೆ ಉಂಟು ಮಾಡಿದ ಆರ್ಥಿಕ ಸಂಕಷ್ಟದಿಂದ ಇನ್ನೂ ಲಕ್ಷಾಂತರ ಮಂದಿ ಹೊರಬಂದಿಲ್ಲ. ಇದರ ನಡುವೆಯೇ ಎರಡನೇ ಅಲೆಯೂ ಬಂದಿದ್ದು ಭಾರತದ ಮಧ್ಯಮ ವರ್ಗವನ್ನೇ ಅಲುಗಾಡಿಸಿ ಬಿಟ್ಟಿದೆ. ಇದು ಎಷ್ಟರ ಮಟ್ಟಿಗೆ ಎಂದರೆ, ಕಷ್ಟಕಾಲಕ್ಕೆ ಎಂದು ಅಡ ಇಟ್ಟಿದ್ದ ಬಂಗಾರವನ್ನೇ ಬಿಡಿಸಿಕೊಳ್ಳಲಾಗದಷ್ಟು ಸಂಕಷ್ಟಕ್ಕೆ ಇಳಿದಿದ್ದಾರೆ.

Advertisement

ಹೌದು, ರೇಟಿಂಗ್‌ ಏಜೆನ್ಸಿ ಕ್ರಿಸಿಲ್‌ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದ್ದು, ಕಳೆದ ವರ್ಷ ಅಪಾರ ಪ್ರಮಾಣದಲ್ಲಿ ಬಂಗಾರ ಅಡ ಇಡಲಾಗಿದೆ. ಆದರೆ, ಇದನ್ನು ಬಿಡಿಸಿಕೊಳ್ಳಲಾಗದ ಮಂದಿ, ಅದರ ತಂಟೆಗೇ ಹೋಗುತ್ತಿಲ್ಲ. ಇದರಿಂದಾಗಿ ಬಂಗಾರ ಅಡ ಇಡಿಸಿಕೊಂಡು ಹಣ ಕೊಟ್ಟ ಬ್ಯಾಂಕರ್‌ ಕಂಪನಿಗಳು ಇದನ್ನು ಹರಾಜು ಹಾಕುವ ಪ್ರಕ್ರಿಯೆಗೆ ಮುಂದಾಗಿವೆ.

ಕ್ರಿಸಿಲ್‌ ಸಂಸ್ಥೆ ಪ್ರಕಾರ, 2020ರ ಏಪ್ರಿಲ್‌ 12ರ ನಂತರ ಬ್ಯಾಂಕುಗಳಲ್ಲಿ ಬಂಗಾರ ಅಡಮಾನ ಇಡುವ ಪ್ರಕ್ರಿಯೆ ಹೆಚ್ಚಾಗಿದೆ. ಅಲ್ಲದೆ, 2021ರ ಫೆಬ್ರವರಿವರೆಗೆ ನಡೆಸಿದ ಅಧ್ಯಯನದ ಪ್ರಕಾರ, ಬಂಗಾರ ಇಡುವವರ ಸಂಖ್ಯೆ ಶೇ.70ರಷ್ಟು ಹೆಚ್ಚಾಗಿದೆ. ಅಂದರೆ, ಸುಮಾರು 56 ಸಾವಿರ ಕೋಟಿ ರೂ.ಗಳಷ್ಟು ಸಾಲವಾಗಿ ಪಡೆಯಲಾಗಿದೆ.

ಬಂಗಾರದ ರೇಟ್‌ ಕಡಿಮೆ
ಕಳೆದ ವರ್ಷ ಸಾಂಕ್ರಾಮಿಕ ರೋಗದ ತೀವ್ರತೆ ಹೆಚ್ಚಾಗುತ್ತಿದ್ದಂತೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಒಂದು ನಿಯಮ ರೂಪಿಸಿತ್ತು. ಈ ಪ್ರಕಾರವಾಗಿ 2021ರ ಮಾರ್ಚ್‌ 31ರ ವರೆಗೆ ಅಡಮಾನವಿಟ್ಟ ಬಂಗಾರದ ಮೌಲ್ಯದ ಶೇ.90ರಷ್ಟು ಹಣವನ್ನು ಸಾಲವಾಗಿ ನೀಡಬಹುದಾಗಿತ್ತು. ಇದಕ್ಕೂ ಮುನ್ನ ಶೇ.75ರಷ್ಟು ಮೌಲ್ಯವನ್ನು ಮಾತ್ರ ಸಾಲವಾಗಿ ನೀಡಲಾಗುತ್ತಿತ್ತು.

ವಿಚಿತ್ರ ವೆಂದರೆ, ಆಗ ಬಂಗಾರದ ಬೆಲೆ ಪ್ರತಿ 10 ಗ್ರಾಂ.ಗೆ 57 ಸಾವಿರ ರೂ.ಗಳಷ್ಟಿತ್ತು. ಆದರೆ, ಈಗ ಬಂಗಾರದ ಮೇಲೆ ಪ್ರತಿ 10 ಗ್ರಾಂ.ಗೆ 45 ಸಾವಿರದ ಸನಿಹಕ್ಕೆ ಬಂದಿದೆ. ಹೀಗಾಗಿ ಬಂಗಾರದ ಬೆಲೆಯೂ ಕಡಿಮೆಯಾಗಿದ್ದು, ಜನ ಅಡವಿಟ್ಟ ಬಂಗಾರವನ್ನು ಬಿಡಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

Advertisement

ಬ್ಯಾಂಕುಗಳಿಂದ ಒತ್ತಡ
ಈಗಾಗಲೇ ಬ್ಯಾಂಕುಗಳು ಬಂಗಾರದ ಅಡಮಾನ ಮೌಲ್ಯವನ್ನು ಮತ್ತೆ ಶೇ.75ಕ್ಕೆ ಇಳಿಸಿವೆ. ಜತೆಗೆ ಹಳೇ ಸಾಲದ ಬಡ್ಡಿ ಕಟ್ಟುವಂತೆಯೂ ಹೇಳುತ್ತಿವೆ. ಆದರೂ, ಜನ ವೈದ್ಯಕೀಯ ವೆಚ್ಚ ಸೇರಿದಂತೆ ಇತರೆ ವೆಚ್ಚದಿಂದಾಗಿ ಬಿಡಿಸಿಕೊಳ್ಳಲು ಹೋಗುತ್ತಿಲ್ಲ. ಹೀಗಾಗಿ, ಬ್ಯಾಂಕುಗಳು ಚಿನ್ನವನ್ನು ಹರಾಜು ಹಾಕಲು ಮುಂದಾಗುತ್ತಿವೆ.

ಶೇ.75 ಸಾಲವಾಗಿ ನೀಡುವ ಬಂಗಾರದ ಮೇಲಿನ ಮೌಲ್ಯದ ಹಣ

ಶೇ.90 ಕೊರೊನಾ ಕಾಲದಲ್ಲಿ ಆರ್‌ಬಿಐ ನಿಗದಿ ಮಾಡಿದ್ದ ಸಾಲವಾಗಿ ನೀಡುವ ಮೌಲ್ಯ

56,000 ಕೋಟಿ ಬಂಗಾರ ಅಡ ಇಟ್ಟು ಸಾಲವಾಗಿ ಪಡೆದ ಒಟ್ಟಾರೆ ಹಣ

Advertisement

Udayavani is now on Telegram. Click here to join our channel and stay updated with the latest news.

Next