ಬೆಂಗಳೂರು: ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಶುಕ್ರವಾರ ಚಿನ್ನದ ಅಂಗಡಿಗಳಿಗೆ ಮುಗಿಬಿದ್ದಿದ್ದ ಜನರಲ್ಲಿದ್ದ ಉತ್ಸಾಹ, ಶನಿವಾರವೂ ಮುಂದುವರಿದಿತ್ತು. ಅಕ್ಷಯ ತೃತೀಯ ಏ.28 ಮತ್ತು 29ರಂದು ಎರಡು ದಿನ ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಚಿನ್ನದ ಖರೀದಿ ನಡೆಯುವ ಅಂದಾಜಿತ್ತು.
ನಿರೀಕ್ಷೆ ಯಂತೆ ಶುಕ್ರವಾರ ಉತ್ತಮ ವ್ಯಾಪಾರ ನಡೆದ್ದು, ಶನಿವಾರ ಅಷ್ಟೇನೂ ವಹಿವಾಟು ನಡೆಯಲಿಲ್ಲ ಎಂದು ಹೇಳಲಾಗಿದೆ. ಆದರೆ, ಅಕ್ಷಯ ತೃತೀಯಕ್ಕೂ ಮೊದಲೇ ಮುಂಗಡ ಕಾಯ್ದಿರಿಸಿದ್ದ ಗ್ರಾಹಕರು ಶನಿವಾರ ಚಿನ್ನ ಖರೀದಿಸಿದ್ದಾರೆ. ಹೀಗಾಗಿ, ನಿರೀಕ್ಷೆಯಂತೆ ವಹಿವಾಟು ನಡೆದಿದೆ ಎಂದು ಜ್ಯುವೆಲರಿ ಅಸೋಸಿಯೇಷನ್ ತಿಳಿಸಿದೆ.
ಮಳೆ, ಜ್ಯೋತಿಷ್ಯ ಕಾರಣ: ಶನಿವಾರ ಚಿನ್ನ ಖರೀದಿ ಅಷ್ಟೇನು ಪ್ರಾಶಸ್ತ್ಯವಲ್ಲ ಎಂದು ಕೆಲವು ಜ್ಯೋತಿಷಿಗಳು ಹೇಳಿದ್ದು, ಹಾಗೂ ಶನಿವಾರ ಸಂಜೆ ಹೊತ್ತಿಗೆ ಸುರಿದ ಮಳೆಯ ಕಾರಣ ಚಿನ್ನದ ಅಂಗಡಿಗಳತ್ತ ಹೋಗಲು ಜನರು ಹಿಂದೇಟು ಹಾಕಿದ್ದರು. ಹೀಗಾಗಿ ಶುಕ್ರವಾರ ರಾತ್ರಿ ಜನರಿಂದ ತುಂಬಿ ತುಳುಕುತ್ತಿದ್ದ ಚಿನ್ನದ ಅಂಗಡಿಗಳು, ಶನಿವಾರ ಖಾಲಿ ಖಾಲಿಯಾಗಿದ್ದವು.
ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಹಲವು ಜ್ಯುವೆಲರಿಗಳು ಶನಿವಾರ ಬೆಳಗ್ಗೆ 9 ಗಂಟೆಗೇ ಬಾಗಿಲು ತೆರೆದಿದ್ದವು. ಸಾಲು ಸಾಲು ರಜೆ ಕಾರಣ ಶನಿವಾರ ಹೆಚ್ಚು ಗ್ರಾಹಕರು ಬರುತ್ತಾರೆ ಎಂಬ ನಿರೀಕ್ಷೆ ಸುಳ್ಳಾಯಿತು. ಬೆಳಗ್ಗೆ 11 ಗಂಟೆವರೆಗೆ ಹೇಳಿಕೊಳ್ಳುವ ವಹಿವಾಟು ನಡೆಯಲಿಲ್ಲ. 2016ರ ಅಕ್ಷಯ ತೃತೀಯದಂದು 2,200 ಕೆಜಿ ಚಿನ್ನ, 1,500 ಕೆಜಿ ಬೆಳ್ಳಿ ಆಭರಣಗಳ ವ್ಯಾಪಾರ ನಡೆದು, 640 ಕೋಟಿ ರೂ. ವಹಿವಾಟು ನಡೆದಿತ್ತು. ಈ ಬಾರಿ ಹಿಂದಿಗಿಂತ ಹೆಚ್ಚು ವಹಿವಾಟು ನಡೆದಿದೆ .
ಎರಡು ದಿನಗಳಲ್ಲಿ ರಾಜ್ಯಾದ್ಯಂತ ಒಟ್ಟಾರೆ 2,795 ಕೆ.ಜಿ.ಗೂ ಅಕ ಚಿನ್ನ ಮತ್ತು 1,860 ಕೆ.ಜಿ.ಗೂ ಅಕ ಬೆಳ್ಳಿ ಬಿಕರಿಯಾಗಿದೆ. ಈ ಮೂಲಕ 796.25 ಕೋಟಿ ರೂ. ವಹಿವಾಟು ನಡೆದಿದೆ. ಶುಕ್ರವಾರ ಅಂದಾಜು 1,120 ಕೆ.ಜಿ. ಚಿನ್ನ ಹಾಗೂ 780 ಕೆ.ಜಿ. ಬೆಳ್ಳಿ ಮಾರಾಟವಾಗಿತ್ತು.
-ರಾಮಾಚಾರಿ, ಪ್ರಧಾನ ಕಾರ್ಯದರ್ಶಿ, ರಾಜ್ಯ ಆಭರಣ ವರ್ತಕರ ಒಕ್ಕೂಟ