Advertisement

ಶ್ರೀಕೃಷ್ಣನ ಚಿನ್ನದ ಗುಡಿಗೆ ಬರುತ್ತಿದೆ ಚಿನ್ನ

01:44 PM Apr 12, 2018 | Harsha Rao |

ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಗೆ ಚಿನ್ನದ ತಗಡನ್ನು ಆಚ್ಛಾದಿಸುವ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಯೋಜನೆ ಕಾರ್ಯೋನ್ಮುಖವಾಗಲು ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಸುಮಾರು 100 ಕೆ.ಜಿ. ಚಿನ್ನ ಇದಕ್ಕೆ ಅಗತ್ಯವೆಂದು ಭಾವಿಸಲಾಗಿತ್ತು. ಆದರೆ ಈಗ ಇನ್ನೂ ಸ್ವಲ್ಪ ಕಡಿಮೆ ಚಿನ್ನ ಸಾಕು ಎಂದು ಹೇಳಲಾಗುತ್ತಿದೆ.

Advertisement

ಮಳೆಗಾಲದ ಬಳಿಕ (ಚಾತುರ್ಮಾಸ್ಯ ವ್ರತ) ಕೆಲಸ ಆರಂಭಿಸುವ ಚಿಂತನೆ ಇದೆ. ಮೊದಲ ಮೂರು ತಿಂಗಳು ಮಾಡು ಬಿಚ್ಚುವುದು, ತಾಮ್ರದ ಕೆಲಸಗಳು ಇವೆ. ಮರದ ಕೆಲಸಕ್ಕೆ ಆರು ತಿಂಗಳ ಕಾಲ ಬೇಕಾಗುವ ಸಾಧ್ಯತೆ ಇದೆ. ಮುಂದಿನ ಮೇಯಲ್ಲಿ ಶ್ರೀ ಪಲಿಮಾರು ಮಠದ ಹಿಂದಿನ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೋತ್ಸವದ ಸಂದರ್ಭ ಚಿನ್ನದ ಗೋಪುರವನ್ನು ಉದ್ಘಾಟಿಸುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. 

ಅಕ್ಷಯ ತೃತೀಯಾ: ಚಿನ್ನ ದಾನ
ಒಟ್ಟು ಯೋಜನೆಗೆ ಬೇಕಾದ 100 ಕೆ.ಜಿ. ಚಿನ್ನದಲ್ಲಿ ಇದುವರೆಗೆ ಚಿನ್ನದ ರೂಪದಲ್ಲಿ ಸುಮಾರು 11 ಕೆ.ಜಿ. ಚಿನ್ನ ಬಂದಿದೆ. ಇತ್ತೀಚೆಗೆ ಹನುಮ ಜ್ಜಯಂತಿ ದಿನ ಒಂದು ಗ್ರಾಂ ತೂಕದ ಸಾವಿರ ಸುವರ್ಣದ ನಾಣ್ಯಗಳನ್ನು ಅಭಿಷೇಕ ಮಾಡಿದ್ದು ಇದನ್ನು ಅಕ್ಷಯ ತೃತೀಯಾದ ದಿನ ಸುವರ್ಣ ದಾನ ಮಾಡುವವರಿಗೆ ಅವಕಾಶ ಕೊಡಲಾಗುತ್ತಿದೆ. 1 ಗ್ರಾಂ ಚಿನ್ನದ ಬೆಲೆ 3,000 ರೂ. 10,000 ರೂ. ದೇಣಿಗೆ ನೀಡಿದರೆ ಪ್ರಸಾದ ರೂಪದಲ್ಲಿ 1 ಗ್ರಾಂ ಚಿನ್ನದ ನಾಣ್ಯವನ್ನು ನೀಡಿ ಉಳಿದ 7,000 ರೂ. ಮೊತ್ತವನ್ನು ಚಿನ್ನದ ಗೋಪುರಕ್ಕೆ ಬಳಸಿಕೊಳ್ಳಲಾಗುತ್ತಿದೆ. 3,000 ರೂ. ನೀಡಿದರೆ 1 ಗ್ರಾಂ ತೂಕದ ಚಿನ್ನದ ತುಳಸಿಪತ್ರವನ್ನು ಗೋಪುರಕ್ಕೆ ಬಳಸಿಕೊಳ್ಳಲಾಗುತ್ತಿದೆ. 

ಚಿನ್ನದ ಗೋಪುರ ದಂತಹ ಬೃಹತ್‌ ಯೋಜನೆಗೆ ಇನ್ನೂ ಏಜೆನ್ಸಿ ಯನ್ನು ನಿಗದಿಗೊಳಿಸಿಲ್ಲ. ಸುರತ್ಕಲ್‌ ಎನ್‌ಐಟಿಕೆ ತಜ್ಞರ ಮೇಲುಸ್ತುವಾರಿಯಲ್ಲಿ ಕಟೀಲು ದೇವಸ್ಥಾನದ ಬಂಗಾರದ ರಥ ಮಾಡಿದಂತೆ ಇಲ್ಲಿಯೂ ಕಾಮಗಾರಿಯನ್ನು ಮಾಡಿಸಬೇಕೆಂದಿದ್ದೇವೆ. ಯಾರು ಕೆಲಸ ಮಾಡಬೇಕೆಂದು ನಿರ್ಧರಿಸಿಲ್ಲ. ನಮಗೆ ಒಮ್ಮೆಲೆ ಸಂಪನ್ಮೂಲವನ್ನು ಕ್ರೋಡೀಕರಿಸಲು ಆಗದೆ ಇರಬಹುದು. ಕಡಿಮೆಯಾದ ಮೊತ್ತವನ್ನು ಭರಿಸಿ ಮುಂದಿನ ಮೇಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಹೊಣೆ ಹೊರುವವರಿಗೆ ಕಾಮಗಾರಿ ನೀಡಬೇಕೆಂದಿದ್ದೇವೆ. ಕಡಿಮೆಯಾದ ಮೊತ್ತವನ್ನು ಪರ್ಯಾಯ ಮುಗಿಯುವುದರೊಳಗೆ ಪಾವತಿಸುತ್ತೇವೆ.
– ಪಲಿಮಾರು ಮಠಾಧೀಶರು 

Advertisement

Udayavani is now on Telegram. Click here to join our channel and stay updated with the latest news.

Next