Advertisement

ಚಿನ್ನದ ಮೇಲಣ ಹೂಡಿಕೆ ಸುರಕ್ಷಿತ ಭವಿಷ್ಯ

01:07 AM Jun 19, 2022 | Team Udayavani |

ಭೌತಿಕವಾಗಿ ಚಿನ್ನ ಖರೀದಿ ಮಾತ್ರವಲ್ಲ ಚಿನ್ನದ ಮೇಲೆ ಹೂಡಿಕೆ ಮಾಡಲು ಬೇರೆ ಹಲವಾರು ದಾರಿಗಳೂ ಇವೆ ಎಂಬುದು ಎಲ್ಲರಿಗೂ ತಿಳಿದಿಲ್ಲ. ಮಕ್ಕಳ ಶಿಕ್ಷಣ, ಮದುವೆ ಸಹಿತವಾಗಿ ಕುಟುಂಬದ ಭವಿಷ್ಯದ ಸುರಕ್ಷತೆಗೆ ಚಿನ್ನ ಎಂದಿಗೂ ದೊಡ್ಡ ಆಸ್ತಿಯೇ ಸರಿ. ಮಳಿಗೆಯಲ್ಲಿ ಚಿನ್ನಾಭರಣ ಖರೀದಿಯ ಜತೆಗೆ ಬಾಂಡ್‌ಗಳನ್ನು ಖರೀದಿಸುವ ಮೂಲಕವೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಇದಕ್ಕೆ ಹಲವು ರೀತಿಯಲ್ಲಿ ಭದ್ರತೆಯನ್ನು ಕೇಂದ್ರ ಸರಕಾರದ ಅಧೀನ ಸಂಸ್ಥೆಗಳು ಒದಗಿಸುತ್ತಿವೆ. ಹಾಗಾದರೆ ಏನಿದು ಚಿನ್ನದ ಮೇಲಿನ ಹೂಡಿಕೆ, ಹೇಗೆ ಹೂಡಿಕೆ ಮಾಡಬೇಕು ಎಂಬಿತ್ಯಾದಿ ಹಲವು ಮಾಹಿತಿಗಳು ಇಲ್ಲಿವೆ.

Advertisement

ಗೋಲ್ಡ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫ‌ಂಡ್ಸ್‌ (ಇಟಿಎಫ್)
ಚಿನ್ನದ ಮೇಲಿನ ಹೂಡಿಕೆ, ಖರೀದಿ, ಮಾರಾಟಕ್ಕೆ ಸಂಬಂಧಿಸಿದಂತೆ ಈಗ ಮಾರುಕಟ್ಟೆ ಯಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಗೋಲ್ಡ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫ‌ಂಡ್ಸ್‌. ಇಟಿಎಫ್ ಎಂಬುದು ಚಿನ್ನದಲ್ಲಿ ಮಾತ್ರವಲ್ಲ ಷೇರಿನಲ್ಲೂ ಇರುತ್ತದೆ. 30 ಷೇರುಗಳ ಸೆನ್ಸೆಕ್ಸ್‌ನಲ್ಲಿ ಇಟಿಎಫ್ ನೀಡಲಾಗುತ್ತದೆ. ಕೇವಲ 1,000ರೂ. ಗಳ ಇಟಿಎಫ್ ಖರೀದಿ ಮಾಡಿದರೂ 30 ಷೇರಿನಲ್ಲೂ ಪಾಲು ಮಾಡಿ ಹೂಡಿಕೆ ಮಾಡಿದಂತಾಗುತ್ತದೆ. ಪ್ರಸ್ತುತ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಗಳು (ಎಎಂಸಿ) ನಮ್ಮಲ್ಲಿನ ಹಣ ತೆಗೆದುಕೊಂಡು ನಮ್ಮ ಪರವಾಗಿ ಶುದ್ಧ ಚಿನ್ನ ಖರೀದಿ ಮಾಡಿ, ನಮಗೆ ಯುನಿಟ್‌ ರೂಪದಲ್ಲಿ ಅದನ್ನು ನೀಡುತ್ತಿವೆ. ನಮ್ಮ ಕೈಯಲ್ಲಿ ಚಿನ್ನ ಇರುವುದಿಲ್ಲ. ಬದಲಾಗಿ ಅದಕ್ಕೆ ಸಮಾನಾದ ಚಿನ್ನದ ಯುನಿಟ್‌ಗಳು ಇರುತ್ತವೆ. ಇದನ್ನು ಷೇರು ಮಾರುಕಟ್ಟೆಯ ನಿತ್ಯದ ವಹಿ ವಾಟಿನಲ್ಲಿ ಯಾವಾಗ ಬೇಕಾದರೂ ಖರೀದಿಸ ಬಹುದು ಮತ್ತು ಮಾರಾಟ ಮಾಡಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೇಗೆ ಏರಿಳಿತ ಕಾಣುತ್ತದೆಯೋ ಹಾಗೆಯೇ ಇಲ್ಲಿಯೂ ಏರಿಳಿತ ಆಗುತ್ತಿರುತ್ತದೆ. ಎಸ್‌ಬಿಐ, ಎಚ್‌ಡಿಎಫ್ಸಿ, ಆಕ್ಸಿಸ್‌, ಕೋಟಕ್‌ ಇತ್ಯಾದಿ 10-15 ಸಂಸ್ಥೆಗಳ ಗೋಲ್ಡ್‌ ಇಟಿಎಫ್ ಮಾರುಕಟ್ಟೆಯಲ್ಲಿವೆ. ಈ ಹೂಡಿಕೆಗೆ ಡಿ-ಮ್ಯಾಟ್‌ ಖಾತೆ ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಆನ್‌ಲೈನ್‌ ಅಥವಾ ಭೌತಿಕ ವ್ಯವಹಾರದಲ್ಲಿ ಷೇರು ಬ್ರೋಕರ್‌ಗಳ ಮೂಲಕ ಡಿ-ಮ್ಯಾಟ್‌ ಖಾತೆ ಮಾಡಿಸಿಕೊಂಡು ಆನ್‌ಲೈನ್‌ ಮೂಲಕ ಕೂಡ ನಾವೇ ಲಾಗಿನ್‌ ಆಗಿ ಖರೀದಿ, ಮಾರಾಟಕ್ಕೆ ಯಾವಾಗಲೂ ಅವಕಾಶವಿರುತ್ತದೆ. ಬ್ಯಾಂಕ್‌ನಲ್ಲೂ ಡಿ-ಮ್ಯಾಟ್‌ ಅಕೌಂಟ್‌ ತೆರೆಯಬಹುದು. ಯಾವಾಗ ಚಿನ್ನ ಖರೀದಿ ಮಾಡಬೇಕು ಎಂದಿರುತ್ತೇವೋ ಆ ದಿನವೇ ಮಾರಾಟಕ್ಕೂ ಬೇಕಾದ ಅವಕಾಶ ಇರುತ್ತದೆ. ಅಲ್ಪಪ್ರಮಾಣದ ಕಮಿಷನ್‌ ವೆಚ್ಚದಲ್ಲಿ ಈ ವ್ಯವಹಾರ ನಡೆಸಬಹುದು. ಈಗ ಹೆಚ್ಚಿನ ಎಲ್ಲ ಎಎಂಸಿಗಳು 0.01 ಗ್ರಾಂ ರೂಪದಲ್ಲಿ ಇಟಿಎಫ್ಗಳನ್ನು ಖರೀದಿ, ಮಾರಾಟ ಮಾಡಲು ಮಾರುಕಟ್ಟೆಯಲ್ಲಿ ಅವಕಾಶ ನೀಡಿವೆ. ಹೀಗಾಗಿ ಕೇವಲ 45ರೂ.ಗಳಲ್ಲಿ ( ಚಿನ್ನ ಒಂದು ಗ್ರಾಂ ಗೆ 4,500ರೂ. ಇದ್ದಲ್ಲಿ) ಒಂದು ಯುನಿಟ್‌ ಖರೀದಿಸಬಹುದು.

ಪ್ರಸ್ತುತ ಮಾರುಕಟ್ಟೆಯಲ್ಲಿ ಸಾಮಾನ್ಯ ಚಿನ್ನದ ಇಟಿಎಫ್ಗೂ 24 ಕ್ಯಾರೆಟ್‌ನ ಭೌತಿಕ ಚಿನ್ನಕ್ಕೂ ಸುಮಾರು ಶೇ.12ರಿಂದ ಶೇ.15ರಷ್ಟು ಬೆಲೆ ವ್ಯತ್ಯಾಸ ಇರುತ್ತದೆ. ಉದಾ: ಮಾರುಕಟ್ಟೆಯಲ್ಲಿ ಎಸ್‌ಬಿಐ ಇಟಿಎಫ್ 1 ಗ್ರಾಂ ಯುನಿಟ್‌ಗೆ ಅಂದಾಜು 4,600 ರೂ. ಇದ್ದರೆ, 1 ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ 5300 ರೂ.ಗಳು ಇರುತ್ತದೆ. ಇದು ಕೇಂದ್ರ ಸರಕಾರದ ಆಮದು ಸುಂಕ, ಜಿಎಸ್‌ಟಿ ಇತ್ಯಾದಿ ಭೌತಿಕ ಚಿನ್ನದಲ್ಲಿ ಸೇರಿರುವು ದರಿಂದ ಉಂಟಾದ ವ್ಯತ್ಯಾಸವಾಗಿರುತ್ತದೆ.

ಎಲ್ಲ ಇಟಿಎಫ್ಗಳು ಡಿ-ಮ್ಯಾಟ್‌ ಖಾತೆಯಲ್ಲೇ ಭದ್ರವಾಗಿ ಇರುವುದರಿಂದ ಕಳೆದು ಹೋಗುವ ಭಯವಿಲ್ಲ. ಸೆಕ್ಯೂರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್ ಇಂಡಿಯಾ(ಸೆಬಿ) ಅಧೀನದಲ್ಲಿ ಬರುವ ಎಲ್ಲ ಎಎಂಸಿಗಳಿಂದ ಪರವಾನಿಗೆ ತೆಗೆದುಕೊಂಡೇ ಇಟಿಎಫ್ ನೀಡಲಾಗುತ್ತದೆ. ಸೆಬಿ ಇದರ ಆಡಿಟ್‌ ಹಾಗೂ ಮೇಲ್ವಿಚಾರಣೆ ಕಾಲಕಾಲಕ್ಕೆ ಮಾಡುತ್ತಿರುತ್ತದೆ.
**

Advertisement

ಸಿಲ್ವರ್‌ ಫ‌ಂಡ್‌ ಸಿಲ್ವರ್‌ ಇಟಿಎಫ್ಟ್, ಸಿಲ್ವರ್‌
ಫ‌ಂಡ್‌ ಕೂಡ ಭಾರತದಲ್ಲಿ ಇತ್ತೀಚೆಗೆ ಶುರುವಾಗಿದೆ. ಈವರೆಗೂ ಭಾರತದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಇತ್ತೀಚೆಗೆ ಸೆಬಿಯವರು ಸಿಲ್ವರ್‌ ಫ‌ಂಡ್‌ಗೂ ಅವಕಾಶ ನೀಡಿದ್ದಾರೆ. ಅಂತೆಯೇ ಈಗ ಮಾರುಕಟ್ಟೆಯಲ್ಲಿ ಐಸಿಐಸಿಐ, ನಿಪ್ಪಾನ್‌, ಆದಿತ್ಯ ಬಿರ್ಲಾದವರು ಇದನ್ನು ನೀಡುತ್ತಿದ್ದಾರೆ. ಹೀಗೆ ಬೆಳ್ಳಿಯ ಮೇಲೂ ಇಟಿಎಫ್ ಅಥವಾ ಮ್ಯೂಚುವಲ್‌ ಫ‌ಂಡ್‌ ಹೂಡಿಕೆ ಮಾಡಬಹುದು. ಇಲ್ಲಿ ಪ್ರಸ್ತುತ ಒಂದು ಗ್ರಾಂ ಬೆಳ್ಳಿಯ ಯುನಿಟ್‌ ಲೆಕ್ಕಾಚಾರದಲ್ಲಿ ವ್ಯವಹಾರ ನಡೆಯುತ್ತದೆ.
**
ಆರ್‌ಬಿಐ ಸವರಿನ್‌ ಗೋಲ್ಡ್‌ ಬಾಂಡ್‌
ಇದು ಕೇಂದ್ರ ಸರಕಾರದ ಸ್ಕೀಂ ಆಗಿದ್ದು, ಆರ್‌ಬಿಐ ವರ್ಷಕ್ಕೆ ಎರಡು ಬಾರಿ ನಿರ್ದಿಷ್ಟ ಕಾಲಮಿತಿಯಲ್ಲಿ ಈ ಬಾಂಡ್‌ ಹಂಚಿಕೆ ಮಾಡುತ್ತಿದೆ. 2015ರ ನವೆಂಬರ್‌ನಲ್ಲಿ ಪ್ರಾರಂಭಗೊಂಡು ಹಲವಾರು ಸೀರೀಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಆರ್‌ಬಿಐ ಈ ಬಾಂಡ್‌ ವಿತರಿಸುವ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿರುತ್ತದೆ ಎಂಬುದರ ಮೇಲೆ ಬಾಂಡ್‌ನ‌ ದರ ನಿಗದಿ ಮಾಡಲಾಗುತ್ತದೆ. ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಇದನ್ನು ಖರೀದಿ ಮಾಡಬಹುದು. ಈ ಬಾಂಡ್‌ ಖರೀದಿಸಿದವರಿಗೆ ಪ್ರತೀ ವರ್ಷ ಸುಮಾರು ಶೇ. 2.50ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಇದು 5ರಿಂದ 8 ವರ್ಷದ ಹೂಡಿಕೆಯಾಗುತ್ತದೆ. 8 ವರ್ಷದ ಮೆಚೂÂರಿಟಿ ಅವಧಿ ಹೊಂದಿರುವ ಈ ಬಾಂಡ್‌ ಖರೀದಿದಾದರು ಐದು ವರ್ಷಗಳ ಅನಂತರ ಆರು ತಿಂಗಳಿಗೊಮ್ಮೆ ಬಡ್ಡಿ ಕೊಡುವ ಸಮಯದಲ್ಲಿ ಬೇಕಿದ್ದರೆ ಆರ್‌ಬಿಐಗೆ ವಾಪಸ್‌ ಮಾರಾಟ ಮಾಡಲು ಅವಕಾಶ ಇರುತ್ತದೆ. ಕೇವಲ ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಎನ್ನುವವರಿಗೆ ಇದು ಸಾಕಷ್ಟು ಉಪಯೋಗವಾಗಲಿದೆ. ಮನೆಯಲ್ಲಿ ಚಿನ್ನ ಸುರಕ್ಷಿತವಾಗಿಟ್ಟುಕೊಳ್ಳುವುದು ಕಷ್ಟ ಹಾಗೂ ಖರೀದಿಸುವಾಗ, ಮಾರಾಟ ಮಾಡುವಾಗ ಭೌತಿಕ ಚಿನ್ನದಲ್ಲಿ ಇರುವಂತೆ ಮೇಕಿಂಗ್‌ ಚಾರ್ಜ್‌, ವೇಸ್ಟೇಜ್‌ ಪ್ಯೂರಿಟಿ, ಜಿಎಸ್‌ಟಿ ಇತ್ಯಾದಿ ಹೊರೆ ಇರುವುದಿಲ್ಲ. ನಿರ್ದಿಷ್ಟ ಹಣ ನೀಡಿ ಒಮ್ಮೆ ಈ ಬಾಂಡ್‌ ಖರೀದಿ ಮಾಡಿದರೆ, ಐದು ವರ್ಷಗಳ ವರೆಗೂ ಮಾರಾಟ ಮಾಡಲು ಸಾಧ್ಯವಿಲ್ಲ. ಈ ಬಾಂಡ್‌ಗಳು ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್‌ ಆಗಿರುವುದಿಂದ ಅಗತ್ಯವಾಗಿ ಮಾರಾಟ ಮಾಡಬೇಕಾದಲ್ಲಿ ಆಗಿನ ದರ ವ್ಯತ್ಯಾಸದೊಂದಿಗೆ ಮಾರಾಟ ಮಾಡಬಹುದು. ಇದಕ್ಕೆ ಬಾಂಡ್‌ಗಳು ಡಿ-ಮ್ಯಾಟ್‌ ರೂಪದಲ್ಲಿ ಇರಬೇಕಾಗುತ್ತದೆ.
**
ಗೋಲ್ಡ್‌ ಫ‌ಂಡ್ಸ್‌
ಇದು ಮ್ಯೂಚುವಲ್‌ ಫ‌ಂಡ್ಸ್‌ನವರು ನೇರವಾಗಿ ಚಿನ್ನದ ಯುನಿಟ್‌ ಹಂಚಿಕೆ ಮಾಡುವುದಾಗಿದೆ. ಇದಕ್ಕೆ ಡಿ-ಮ್ಯಾಟ್‌ ಖಾತೆಯ ಅಗತ್ಯ ಇರುವುದಿಲ್ಲ. ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ ನೀಡಿ, ಕೆವೈಸಿ ನೋಂದಣಿ ಮಾಡಿ ಯಾವುದೇ ಎಎಂಸಿಗೆ ಅರ್ಜಿ ಹಾಕಿ ಕೇವಲ ನೂರು ರೂ.ಗಳಿಗೂ(ಎಷ್ಟು ಬೇಕೋ ಅಷ್ಟು, ನಮ್ಮಲ್ಲಿ ಹೂಡಿಕೆಯ ಅನುಕೂಲಕ್ಕೆ) ಸಮಾನವಾದ ಚಿನ್ನದ ಯುನಿಟ್‌ನಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಹೂಡಿಕೆಗೆ ಸಂಬಂಧಿಸಿದ ಸ್ಟೇಟ್‌ಮೆಂಟ್‌ ನಮಗೆ ಸಿಗುತ್ತದೆ. ಇದನ್ನು ಕೂಡ ಯಾವಾಗ ಬೇಕಾದರೂ ಆ ದಿನದ ಧಾರಣೆಯಲ್ಲಿ ಮಾರಾಟ ಮಾಡಬಹುದು. ಆದರೆ ಇದನ್ನು ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಮಾರಾಟ ಮಾಡದೆ ಮ್ಯೂಚುವಲ್‌ ಫ‌ಂಡ್‌ನ‌ವರ ಮೂಲಕ ಮಾರಬೇಕಾಗುತ್ತದೆ. ಅಂಚೆ ಕಚೇರಿಯಲ್ಲಿ ರಿಕರಿಂಗ್‌ ಡಿಪಾಸಿಟ್‌ ಮಾಡಿದಂತೆ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿಯೂ ಪ್ರತೀ ತಿಂಗಳು ಕನಿಷ್ಠ 100 ರೂ.ಗಳ ಚಿನ್ನ ಖರೀದಿಸಲು ಅವಕಾಶ ಇರುತ್ತದೆ. ಪ್ರತೀ ತಿಂಗಳ ಚಿನ್ನ ಖರೀದಿಗೆ ನಿಮ್ಮ ಬ್ಯಾಂಕ್‌ ಖಾತೆಯಿಂದ ನೇರ ಹಣ ಎಎಂಸಿಗಳು ಕಡಿತ ಮಾಡಿಕೊಳ್ಳಲು ಅವಕಾಶವಿದೆ. ಇದರಿಂದ ನಿಮ್ಮ ಹೂಡಿಕೆಯ ಆಧಾರದಲ್ಲಿ ಯುನಿಟ್‌ಗಳು ಹೆಚ್ಚುತ್ತಾ ಹೋಗುತ್ತವೆ. ಇದನ್ನು ಒಂದು ವರ್ಷದೊಳಗೆ ಮಾರಾಟ ಮಾಡಿದರೆ ಶೇ.1ರಷ್ಟು ಎಕ್ಸಿಟ್‌ ಶುಲ್ಕ ಕಡಿತ ಮಾಡಲಾಗುತ್ತದೆ. ಒಂದು ವರ್ಷದ ಅನಂತರ ಮಾರಾಟ ಮಾಡಿದರೆ ಯಾವುದೇ ಶುಲ್ಕ ಕಡಿತ ಇರುವುದಿಲ್ಲ. ಇದು ಕೂಡ ಅತ್ಯಂತ ಸುರಕ್ಷಿತ.
**
ಭದ್ರತೆ ಹೇಗೆ?
ಪ್ರಸ್ತುತ ಆರ್‌ಬಿಐ ನೀಡುವ ಗೋಲ್ಡ್‌ ಬಾಂಡ್‌ಗಳು ಸಂಪೂರ್ಣ ಕೇಂದ್ರ ಸರಕಾರದ ಗ್ಯಾರಂಟಿಯನ್ನು ಹೊಂದಿದೆ. ಇಟಿಎಫ್ ಗೋಲ್ಡ್‌ ಫ‌ಂಡ್‌ಗಳು ಸೆಬಿಯಿಂದ ಮಾನ್ಯತೆ ಪಡೆದ ಎಎಂಸಿಗಳು ಮಾತ್ರ ನೀಡಲು ಅವಕಾಶ ಇರುತ್ತದೆ. ಸದ್ಯ ಭಾರತದಲ್ಲಿ ಸುಮಾರು(44)ಎಎಂಸಿಗಳಿದ್ದು, ಸುಮಾರು 10ರಿಂದ 15 ಎಎಂಸಿಗಳ ಇಟಿಎಫ್ ಫ‌ಂಡ್‌ ಹಾಗೂ ಗೋಲ್ಡ್‌ ಫ‌ಂಡ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಾಲಕಾಲಕ್ಕೆ ಸೆಬಿಯವರು ಈ ಎಲ್ಲ ವ್ಯವಹಾರಗಳ ಮೇಲೂ ನಿಗಾ ಇಟ್ಟು ಸಾರ್ವಜನಿಕರ ಹೂಡಿಕೆಯ ರಕ್ಷಣೆಯನ್ನು ಪ್ರಧಾನವಾಗಿ ನಿರ್ವಹಿಸುತ್ತಿದ್ದಾರೆ. ಅಂತೆಯೇ ಎಲ್ಲ ಡಿ- ಮ್ಯಾಟ್‌ ಖಾತೆ ಪೂರೈಕೆದಾರರ ಮೇಲೂ ಸೆಬಿ ನಿಗಾ ವಹಿಸುತ್ತಿದ್ದು, ಅವ್ಯವಹಾರವಾದಲ್ಲಿ ಹೂಡಿಕೆದಾರರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಾರೆ. ಹೀಗಾಗಿ ಚಿನ್ನದ ಮೇಲೆ ಈ ರೀತಿಯ ಹೂಡಿಕೆ ತುಂಬ ಸುರಕ್ಷಿತ. ಚಿನ್ನವನ್ನು ಭೌತಿಕವಾಗಿ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಸೌಲಭ್ಯ ಪಡೆಯುವ ಮಾದರಿಯಲ್ಲೇ ಮೇಲಿನ ಎಲ್ಲ ಗೋಲ್ಡ್‌ ಬಾಂಡ್‌ ಮೇಲೂ ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ.

– ಯು.ಕೆ. ಶ್ರೀನಿವಾಸ್‌, ಹೂಡಿಕೆ ಸಲಹೆಗಾರರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next