Advertisement

ಪಶು ವೈದ್ಯಕೀಯ ವಿವಿ : ಕೃಷಿಕ, ಸೈನಿಕನ ಮಕ್ಕಳ ಚಿನ್ನದ ಬೇಟೆ !

03:34 PM Apr 28, 2022 | Team Udayavani |

ಬೀದರ್: ಒಬ್ಬರು ದೇಶ ಕಾಯುವ ಸೈನಿಕನ ಮಗಳು, ಮತ್ತೊಬ್ಬರು ಅನ್ನ ಬೆಳೆಯುವ ಕೃಷಿಕನ ಮಗ ಈ ಬಾರಿಯ ಪಶು ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗರಿಷ್ಠ ಚಿನ್ನದ ಪದಕ ಬಾಚಿಕೊಳ್ಳುವ ಮೂಲಕ ಎಲ್ಲರೂ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾರೆ. ಭವಿಷ್ಯದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿ ರೈತರಿಗೆ ನೆರವಾಗುವ ಆಶಯ ಹೊಂದಿದ್ದಾರೆ.

Advertisement

ಮೂಲತ: ಹರಿಯಾಣ ಮೂಲದ ಕನಿಕ ಯಾದವ್ ಮತ್ತು ಬೆಳಗಾವಿ ಜಿಲ್ಲೆಯ ಹಾರೂರಗೇರಿ ನಿವಾಸಿ ಕಿರಣ ದರೂರ್ ಅವರು ತಮ್ಮ ಸಾಧನೆಯ ಹೊಂಬೆಳಕಿನಲ್ಲಿ ಚಿನ್ನಕ್ಕೆ ಮುತ್ತಿಟ್ಟವರು. ಕನಿಕ ಅವರು2019-20 ನೇ ಸಾಲಿನ ಸ್ನಾತಕ ಪದವಿ ಬಿವಿಎಸ್‌ಸಿ ಮತ್ತು ಎಎಚ್‌ನಲ್ಲಿ ವಿಭಾಗದಲ್ಲಿ ಬರೋಬ್ಬರಿ 13 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರೆ, ಕಿರಣ ಅವರು 2020-21 ಸಾಲಿನಲ್ಲಿ ಬಿವಿಎಸ್‌ಸಿ ಮತ್ತು ಎಎಚ್‌ನಲ್ಲಿ 9 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ. ಆ ಮೂಲಕ ಯುವ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಂತಿದ್ದಾರೆ.

ಹರಿಯಾಣಾದ ರೇವಾರಿ ನಿವಾಸಿಯಾಗಿರುವ ಕನಿಕ ಅವರು ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದು ದಾಖಲೆಯ ಚಿನ್ನ ಗಿಟ್ಟಿಸಿಕೊಂಡಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 78 ಮತ್ತು ಪಿಯುಸಿಯಲ್ಲಿ ಶೇ. 94 ರಷ್ಟು ಅಂಕ ಪಡೆದಿದ್ದರು. ಕನಿಕ ಅವರ ತಮ್ಮ ಪ್ರವೀಣಕುಮಾರ ಎಂಬಿಬಿಎಸ್ ಓದುತ್ತಿದ್ದರೆ. ಅವರ ತಂದೆ ಸುನೀಲಕುಮಾರ ಯಾದವ್ ಅವರು ಬಿಎಸ್‌ಎಫ್ ಯೋಧರಾಗಿ ಗಡಿ ರಕ್ಷಣೆಗೆ ಸಮರ್ಪಿಸಿಕೊಂಡಿದ್ದರೆ ತಾಯಿ ಸುನೀತಾ ಗೃಹಿಣಿಯಾಗಿ ಮಕ್ಕಳ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯಧ್ಯ ಬಿಕಾನೇರ್‌ನಲ್ಲಿ ಡಾ. ಸುರೇಶಕುಮಾರ್ ಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.

ಭವಿಷ್ಯದಲ್ಲಿ ಐವಿಎಆರ್ ಅಥವಾ ಗಡವಾದಲ್ಲಿ ಪಿಎಚ್‌ಡಿ ಮಾಡುವ ಆಸೆ ಹೊತ್ತಿರುವ ಕನಕ, ಈ ಮೂಲಕ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಕೃಷಿಕರಿಗೆ ನೆರವಾಗುವ ಗುರಿ ಇಟ್ಟಿಕೊಂಡಿದ್ದಾರೆ. ಇದು ನನ್ನ ಕಠಿಣ ಪರಿಶ್ರಮಕ್ಕೆ ದೊರೆತ ಫಲ. ಚಿನ್ನದ ಹುಡಗಿ ಆಗುತ್ತೇನೆ ಎಂಬ ವಿಶ್ವಾಸ ಇತ್ತು. ಆದರೆ, ವಿವಿಯಲ್ಲೇ ಗರಿಷ್ಠ ಸ್ವರ್ಣ ಪದಕಗಳನ್ನು ನಾನೇ ಪಡೆಯುವೆ ಎಂಬ ನಂಬಿಕೆ ಇರಲಿಲ್ಲ. ಹೆತ್ತವರ ಸಹಕಾರ, ಪ್ರಾಧ್ಯಾಪಕರ ಮಾರ್ಗದರ್ಶ ನನ್ನ ಈ ಸಾಧನೆಗೆ ಸ್ಪೂರ್ತಿ ಎನ್ನುತ್ತಾರೆ ಕನಿಕ.

ಇನ್ನೂ ಅಪ್ಪಟ ಗ್ರಾಮೀಣ ಪ್ರತಿಭೆ, ಕೃಷಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ಬೆಳಗಾವಿ ಜಿಲ್ಲೆಯ ಹಾರೂರಗೇರಿಯ ರೈತ ದಂಪತಿಯ ಮಗ ಕಿರಣ, ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿದ್ದಾರೆ. ಪಿಯುಸಿಯಲ್ಲಿ ಶೇ. 94 ರಷ್ಟು ಮತ್ತು ಪಿಯುಸಿಯಲ್ಲಿ ಶೇ. 88 ರಷ್ಟು ಅಂಕ ಗಳಿಸಿದ್ದರು. ಅವರ ಕಿರಯ ಸಹೋದರ ಸಚಿನ್ ಬಿಕಾಂ ಮುಗಿಸಿ ಸಿವಿಲ್ ಸರ್ವಿಸ್‌ಗೆ ತಯ್ಯಾರಿ ನಡೆಸುತ್ತಿದ್ದಾರೆ. ತಂದೆ ಮಹದೇವ ಮತ್ತು ತಾಯಿ ನಿರ್ಮಲಾ ಕೃಷಿಕ ಕಾಯಕದಿಂದಲೇ ಮಕ್ಕಳ ಶೈಕ್ಷಣಿಕ ಬದುಕನ್ನು ಕಟ್ಟಿಕೊಡುತ್ತಿದ್ದಾರೆ.

Advertisement

ಐಸಿಎಆರ್‌ನಲ್ಲಿ ಪಿಜಿ ಕೋರ್ಸ್‌ನ್ನು ಮುಗಿಸಿ ಮುಂದೆ ಸಂಶೋಧನಾ ಕ್ಷೇತ್ರದಲ್ಲಿ ಹೊಸತನ ಸಾಧಿಸುವ ಕನಸು ಹೊತ್ತಿದ್ದಾರೆ. ಬಡತನದ ಮಧ್ಯಯೂ ಉನ್ನತ ಶಿಕ್ಷಣ ಕೊಡಿಸಿರುವ ನನ್ನ ಅಪ್ಪನಂಥ ರೈತ ವರ್ಗದವರ ಕಲ್ಯಾಣಕ್ಕೆ ಜೀವನ ಮುಡುಪಾಗಿಡುತ್ತೇನೆ ಎಂದು ಹೇಳಿರುವ ಕಿರಣ, ನನ್ನೆಲ್ಲ ಆಶಯಗಳಿಗೆ ತಂದೆ- ತಾಯಿ ಬೆನ್ನಲುಬಾಗಿ ನಿಂತಿದ್ದಾರೆ. ಗುರುಗಳು ನನ್ನ ಕಲಿಕೆಗೆ ಮಾರ್ಗದರ್ಶನ ಮಾಡಿ ನಿರೇರೆದಿದ್ದಾರೆ. ಇದರಿಂದ ನಾನು ಸಾಧನೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.

ನನಗೆ ಇಷ್ಟೊಂದು ಗೋಲ್ಡ್ ಮೆಡಲ್ ಬರುತ್ತವೆ ಎಂದು ಊಹೆಯೂ ಮಾಡಿರಲಿಲ್ಲ. ನಿರೀಕ್ಷೆ ಮೀರಿ ಪದಕಗಳು ಬಂದಿರುವುದು ಖುಷಿ ತಂದಿದೆ. ನನ್ನ ಪರಿಶ್ರಮದ ಹಿಂದೆ ಪಾಲಕರು ಹಾಗೂ ಎಲ್ಲ ಗುರುವೃಂದದ ಪಾತ್ರ ಹಿರಿದಾಗಿದೆ. ಅಂಕಗಳಿಗಾಗಿ ಎಂದೂ ಓದಬಾರದು. ಆತ್ಮತೃಪ್ತಿಗಾಗಿ ಓದಿದರೆ ಪದಕಗಳು ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ನಾನೇ ಸಾಕ್ಷಿ.

ಕನಿಕ ಯಾದವ್, 13 ಚಿನ್ನ ಸಾಧಕಿ

ಪ್ರಾಧ್ಯಾಪಕರು ಹೇಳಿಕೊಡುತ್ತಿದ್ದ ಅಂದಿನ ಪಾಠವನ್ನು ಅಂದೇ ಓದುತ್ತಿದ್ದೇ. ಶ್ರದ್ದೆ, ಆಸಕ್ತಿಯಿಂದ ಪರಿಶ್ರಮ ಪಟ್ಟರೆ ಜೀವನದಲ್ಲಿ ಪ್ರತಿಯೊಬ್ಬರು ಸಾಧನೆ ಮಾಡಬಹುದು. ನನ್ನ ಸಾಧನೆಯನ್ನು ಹೆತ್ತವರು, ಗುರುಗಳಿಗೆ ಅರ್ಪಿಸುತ್ತೇನೆ. ಭವಿಷ್ಯದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ರೈತರಿಗೆ ನೆರವಾಗುವ ಆಶಯ ನನ್ನದಾಗಿದೆ.

ಕಿರಣ ದರೂರ್, 9  ಚಿನ್ನ ಪಡೆದ ಸಾಧಕ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next