Advertisement

ಚಿನ್ನ ಚಿನ್ನ ಆಸೆ

02:39 PM Jan 06, 2019 | |

ಚಿನ್ನ ಅಂದಾಕ್ಷಣ ಮನಸ್ಸು ಗರಿಗರಿಯಾಗುತ್ತದೆ. ಈ ಮೊದಲು ಚಿನ್ನ ಕೇವಲ ಆಭರಣಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ಹೂಡಿಕೆಯ ಭಾಗವಾಗಿದೆ. ಆದರೂ ಇತ್ತೀಚೆಗೆ ಚಿನ್ನ ಎತ್ತಿಡುವವರ ಸಂಖ್ಯೆ ಇಳಿಯುತಲಿದೆ. ಇವರನ್ನು ಆಕರ್ಷಿಸಲೋ ಏನೋ, ಚಿನ್ನದ ಬೆಲೆ ಈಗ ಮತ್ತೆ ಏರಿದೆ.  ಹಾಗಾದರೆ, ಅದರ ಮೇಲೆ ಹೂಡಿಕೆ ಮಾಡಬಹುದೆ? ನೋಡೋಣ ಬನ್ನಿ. 

Advertisement

ಹೊಸ ವರ್ಷ ಹೊಸ್ತಿಲಲ್ಲೇ ಶುದ್ಧ ಚಿನ್ನದ ಬೆಲೆ ಏರಿದೆ. ಗ್ರಾಂ.ಗೆ 200-300ರೂ. ಜಾಸ್ತಿಯಾಗಿದೆ ಅನ್ನೋ ವರದಿ ಓಡಾಡುತ್ತಿದೆ. ಹೂಡಿಕೆ ದಾರರ ಪಾಲಿಗೆ ಇದು ಖುಷಿ ವಿಚಾರ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಇಳಿದು ಹೋಗಿತ್ತು. ಇದಕ್ಕೆ ಕಾರಣ- ಬೆಲೆ ಏರಿಕೆಯ ಅನಿಶ್ಚತತೆ. ಗ್ರಾಂ.ಗೆ 40-50ರೂ. ಮಾತ್ರ ಏರುತ್ತಿತ್ತು. ಒಮ್ಮೆ 300ರೂ. ಏರಿದರೂ ಮೂರು ದಿನ ಕೂಡ ಅದೇ ಬೆಲೆಯ ಮೇಲೆ ನಿಲ್ಲುತ್ತಿರಲಿಲ್ಲ.  ಹೀಗಾಗಿ,  ಒಡವೆ ಚಿನ್ನದ ಮೇಲೆ ಹೂಡಿಕೆ ಮಾಡುವವರು ಗಟ್ಟಿ, ಪೇಪರ್‌ ಚಿನ್ನದ ಕಡೆ ಮುಖ ಮಾಡಿದ್ದರು. 

ಒಂದೆರಡು ವರ್ಷದ ಟ್ರಾಕ್‌ ರೆಕಾರ್ಡ್‌ ನೋಡಿದರೆ ಚಿನ್ನ ಹೇಳಿಕೊಳ್ಳುವಂಥ ಲಾಭ ತಂದು ಕೊಟ್ಟಿಲ್ಲ. ಬೆಲೆ ಕೂಡ ಕರಡಿ ಕುಣಿತದಂತೆ ಇದ್ದುದರಿಂದ ಚಿನ್ನದ ಮೇಲಿನ ಹೂಡಿಕೆ ಕಡೇ ಆಯ್ಕೆ ಯಾಗಿತ್ತು. 

ಈಗಿನ ಬೆಲೆ ಏರಿಕೆ ಹೊಸ ಚೇತರಿಕೆ ತಂದಂತಿದೆ. 

ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಗ್ರಾಂ. ಮೇಲೆ 25-30ರೂ. ಏರಿದೆ. ಹೀಗಾಗಿ, ಬೆಳ್ಳಿ ಕಾಯಿನ್‌ಗಳ ಕಡೆ ಎಲ್ಲರ ಗಮನ ಹೊರಳುತ್ತಿದೆ. ಕಳೆದ ವರ್ಷ ಬಂಗಾರದ ವಾರ್ಷಿಕ ಏರಿಕೆ ಶೇ.6.15, ಡಾಲರ್‌ ಎದುರು ನಮ್ಮ ರೂಪಾಯಿ ಮೌಲ್ಯ ಮುಗ್ಗರಿಸಿದ್ದು, ಚಿನ್ನದ ಬೆಲೆಯಲ್ಲಿ  ಶೇ.9ರಷ್ಟು ಕುಸಿದು, ಹೂಡಿಕೆದಾರರ ಆತಂಕ ಸೃಷ್ಟಿಯಾಗಿತ್ತು. ಈಗ ಏರಿಕೆಯಾಗಿರುವುದು ಕಳೆದ 6 ತಿಂಗಳಲ್ಲೇ ಹೆಚ್ಚು ಎನ್ನುತ್ತಿದ್ದಾರೆ ಮಾರ್ಕೆಟ್‌ ತಜ್ಞರು.

Advertisement

ಬದಲಾವಣೆಯ ಗಮನವಿರಲಿ
ಚಿನ್ನ, ಶೇರು- ಈ ಎರಡರ ನಡುವಿನ ಹೂಡಿಕೆಯಲ್ಲಿ ಅಂಥ ವ್ಯತ್ಯಾಸವೇನು ಇಲ್ಲ. ಎರಡರ ಬೆಲೆ ಏರಿಳಿಕೆ, ವಾರ್ಷಿಕ ಲಾಭಗಳನ್ನು ಗಮನಿಸಿಯೇ ಹೂಡಿಕೆ ಮಾಡಬೇಕು ಅನ್ನೋದನ್ನು ಮಾತ್ರ ಮರೆಯಬಾರದು.  ಚಿನ್ನದ ನಾಣ್ಯ, ಬಾರ್‌, ಇಟಿಎಫ್ ಏನೇ ಬಂದರು ಆಭರಣಗಳ ಮೇಲಿನ ಹೂಡುವ ಮಡಿವಂತಿಕೆಯಿಂದ ಬಹುತೇಕರು ಹೊರ ಬಂದಿಲ್ಲ.  ಹಣವನ್ನು ಮನೆಯಲ್ಲೋ, ಬ್ಯಾಂಕ್‌ನಲ್ಲೋ ಹಾಕುವ ಬದಲು ಇಟಿಎಫ್ಗಳಲ್ಲಿ ತೊಡಗಿಸಬಹುದು. ಇತ್ತೀಚಿನ ಚಿನ್ನದ ಬೆಲೆಯ ಏರುಪೇರುಗಳನ್ನು ಗಮನಿಸಿದರೆ ಇಟಿಎಫ್ ಕೂಡ ತತ್‌ಕ್ಷಣ ಲಾಭ ತಂದು ಕೊಡುವ ಭರವಸೆ ತೋರಿಸುತ್ತಿದೆ. ಅದರ ಬೆನ್ನಿಗೆ ತೆರಿಗೆ ಹಿಂಬಾಲಿಸುತ್ತದೆ. 

ಲಕ್ಷಾಂತರ ರೂ. ಮೌಲ್ಯದ ಚಿನ್ನದ ನಾಣ್ಯ, ಬಾರ್‌ಗಳನ್ನು ಕೊಂಡರೆ ಅದನ್ನು ಇಡಲು ಲಾಕರ್‌ಗಳಿಗೆ ದುಡ್ಡು ಕೊಡಬೇಕು. ಹೀಗಾಗಿ, ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಏರಿಕೆಗಾಗಿ ವರ್ಷಾನುಗಟ್ಟಲೆ ಕಾಯಲೇಬೇಕಾದ ಅನಿವಾರ್ಯವಿದೆ. ಹೀಗಾಗಿ, ಚಿನ್ನದಿಂದ ತಕ್ಷಣ ಲಾಭ ನಿರೀಕ್ಷಿಸುವುದು ತಪ್ಪು. ಯಾವುದೇ ಪ್ರಕಾರದ ಚಿನ್ನದಲ್ಲೂ ತಕ್ಷಣ ಲಾಭ ಸಿಗುವುದಿಲ್ಲ.

ಮೊದಲು ಷೇರು, ರಿಯಲ್‌ ಎಸ್ಟೇಟು, ಚಿನ್ನ – ಈ ಮೂರರ ಹೂಡಿಕೆಯಲ್ಲಿ ಚಿನ್ನವೇ ಮೊದಲಿತ್ತು. ಈಗ ಆ ಜಾಗವನ್ನು ರಿಯಲ್‌ ಎಸ್ಟೇಟ್‌, ಷೇರು ಹಂಚಿಕೊಂಡಿದೆ. ಈ ಎಲ್ಲವೂ ವೈಟ್‌ನಲ್ಲೇ ಆಗಬೇಕಾಗಿರುವುದರಿಂದ ಹೂಡಿಕೆ ಕಡಿಮೆಯಾಗಿದೆ.  ನಿಮ್ಮ ಒಟ್ಟಾರೆ ಹೂಡಿಕೆಯಲ್ಲಿ ಶೇ. 5ರಷ್ಟನ್ನು ಚಿನ್ನದ ಮೇಲೆ ಹಾಕುವುದು ಒಳಿತು.  ಅಂತಿಮವಾಗಿ, ಹೂಡಿಕೆಯ ಪ್ರಮಾಣವನ್ನು ಏರಿಳಿಕೆಯಾಗುವ ಬೆಲೆಯ ಅನ್ವಯ ವ್ಯತ್ಯಾಸ ಮಾಡಿಕೊಳ್ಳಬಹುದು. 

ಹಿಂದೆ ನಮ್ಮಲ್ಲಿ ಶೇ.75ರಷ್ಟು ಒಡವೆ ಅಂಗಡಿಗಳು ಟ್ಯಾಕ್ಸಿನ ವ್ಯಾಪ್ತಿಗೆ ಬರುತ್ತಿರಲಿಲ್ಲ.  ಈಗಿನ ಪರಿಸ್ಥಿತಿ ಹಾಗಿಲ್ಲ. ಜಿಎಸ್‌ಟಿ ಬಂದ ಮೇಲೆ ಇದರಲ್ಲಿ ಶೇ. 80ರಷ್ಟು ತೆರಿಗೆ ವ್ಯಾಪ್ತಿಯಲ್ಲಿದೆ. ಹೀಗಾಗಿ, ತೆರಿಗೆ ಇಲ್ಲದೇ  ಸಣ್ಣಪುಟ್ಟ ಅಂಗಡಿಗಳಲ್ಲಿ ಕೊಳ್ಳುತ್ತಿದ್ದವರೆಲ್ಲರೂ ಹೂಡಿಕೆ ಮೊತ್ತವನ್ನು ಇಳಿಸಿಕೊಂಡಿದ್ದಾರೆ. ಇಲ್ಲೂ ಕೂಡ ಲಕ್ಷ ರೂ. ವಹಿವಾಟು ದಾಟಿದರೆ ಚೆಕ್‌, ಪಾನ್‌ಕಾರ್ಡ್‌ ಕೊಡಬೇಕಾಗುತ್ತದೆ. ಒಂದು ಪಕ್ಷ  ಕಾರ್ಡ್‌ ಸ್ವೆ„ಪ್‌ ಮಾಡಬಹುದಾದರೂ, ಸ್ವೆ„ಪ್‌ ಮಾಡಿದ್ದರಿಂದ ಕಡಿತವಾಗುವ ತೆರಿಗೆ ಮೊತ್ತವನ್ನು ಅಂಗಡಿಯವರು ಗ್ರಾಹಕರ ಮೇಲೆ ಹಾಕಬೇಕೋ, ತಾನೇ ಇಟ್ಟುಕೊಳ್ಳಬೇಕೋ ಅನ್ನೋ ಗೊಂದಲ ಹಾಗೇ ಇದೆ. ಜಿಎಸ್‌ಟಿ ನಂತರ ತೆರಿಗೆ ಹಾಕೋಲ್ಲ ಅಂತ ಹೇಳಿದರೂ, ಕೂಲಿ, ವೇಸ್ಟೇಜ್‌ನಲ್ಲಿ ಈ ಮೊತ್ತವನ್ನು ಹೊಂದಾಣಿಕೆ ಮಾಡುತ್ತಿರುವುದು ಸುಳ್ಳೇನಲ್ಲ. 

ಹಾಗಾದರೆ  ನಷ್ಟವೇ?
ಈಗ ಚಿನ್ನದ ಹೂಡಿಕೆಗೆ ಬಾರ್‌, ಕಾಯಿನ್‌, ಇಟಿಎಫ್ – ಅಂತೆಲ್ಲಾ ಅನೇಕ ದಾರಿಗಳು ಇವೆ. ಇಲ್ಲಿ ಕೊಂಡರೆ ಒಂದು ಗ್ರಾಂ. ಚಿನ್ನದ ಮೇಲೆ. ಶೇ.1 ಅಥವಾ 2ರಷ್ಟು ತೆರಿಗೆ ಕಟ್ಟಬೇಕು. ಚಿನ್ನದ ಬೆಲೆಯಲ್ಲಿ ಅಂಥ ಏರಿಕೆ ಇಲ್ಲದ್ದರಿಂದ ಹೂಡಿದ ಅಸಲನ್ನು ವಾಪಸ್ಸು ಪಡೆಯುವುದೇ ಕಷ್ಟ. ತೆರಿಗೆ, ಆಮೇಲೆ ಲಾಭ. ಬಾರ್‌, ಇಟಿಎಫ್ ವ್ಯವಹಾರ ಬಿಟ್ಟು ಆಭರಣಗಳ ಮೇಲೆ ಹೂಡಿಕೆ ಮಾಡಿದರೆ ಹೇಗೆ? ಅಂತ ನೋಡಿದರೆ ಅದರದ್ದು ಇನ್ನೊಂದು ವ್ಯಥೆ.  ಹೂಡಿಕೆ ಮಾಡಿದ  ಆಭರಣಗಳನ್ನು ಮಾರಾಟ ಮಾಡಲು ಮುಂದಾದರೆ ಶೇ. 10ರಿಂದ 35ರಷ್ಟು ವೇಸ್ಟೇಜ್‌ ಹೋಗುತ್ತದೆ. ಉದಾಹರಣೆಗೆ 10 ಗ್ರಾಂ. ಒಡವೆಗೆ ಅಂದಾಜು ಶೇ. 20ರಷ್ಟು ಅಂತ ಎರಡು ಗ್ರಾಂ. ಬಂಗಾರ ತೆಗೆದರೆ 5-6 ಸಾವಿರ ಲಾಸ್‌. ಒಂದು ಲಕ್ಷ ಆಭರಣ ಚಿನ್ನದಲ್ಲಿ ಶೇ. 20ರಷ್ಟು ಹೋದರೆ 80ಸಾವಿರ ಕೈಗೆ ಸಿಕ್ಕರ ಲಾಭ ಹೇಗೆ? ಹೂಡಿಕೆಯಲ್ಲಿ ಹೂಡಿದ ಹಣಕ್ಕಿಂತ ಹೆಚ್ಚು ಲಾಭ ನಿರೀಕ್ಷಿಸುವುದು ಈಗ ಸಾಧ್ಯವಿಲ್ಲ.  ಇನ್ನು ಅಂಗಡಿಯಲ್ಲೋ, ಬ್ಯಾಂಕಿನಲ್ಲಿ ಕೊಂಡರೆ ಪ್ಯಾಕಿಂಗ್‌, ಟ್ಯಾಕ್ಸ್‌ ಕಟ್ಟಲೇಬೇಕಾಗಿರುವುದರಿಂದ, ಗ್ರಾಂ ಮೇಲೆ ಹೆಚ್ಚು ಕಡಿಮೆ 100ರೂ. ಜಾಸ್ತಿಯಾಗುತ್ತದೆ.  ಗ್ರಾಂ. ಚಿನ್ನದ ಮೇಲೆ 100, 200ರೂ. ಜಾಸ್ತಿಯಾಗಲು ಕಡಿಮೆ ಎಂದರೂ 6 ತಿಂಗಳು ಬೇಕು. ಇಟಿಎಫ್ನಲ್ಲಿ ಗೋಲ್ಡ್‌ ಪೇಪರ್‌ನಲ್ಲಿ ಇರುತ್ತದೆ. ಫಿಸಿಕಲ್ಲಾಗಿ ಇರೋಲ್ಲ. ಮಧ್ಯಮವರ್ಗದವರು ಇದನ್ನು ಇಷ್ಟ ಪಡುವುದಿಲ್ಲ.ಹೀಗಾಗಿ, ಚಿನ್ನ ಚಿನ್ನ ಆಸೆ ಪಡುವುದು ಕಷ್ಟವೇ ಆಗಿದೆ.  

– ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next