ಚಿನ್ನವನ್ನು ಭೌತಿಕವಾಗಿ ಖರೀದಿಸುವಲ್ಲಿನ ಸಮಸ್ಯೆ, ಸವಾಲುಗಳನ್ನು ನಿವಾರಿಸಲು ಗೋಲ್ಡ್ ಇಟಿಎಫ್ ನಲ್ಲಿ ಚಿನ್ನವನ್ನು ಖರೀದಿಸುವುದು ಹೆಚ್ಚು ಅನುಕೂಲಕರ. ಹಾಗಿದ್ದರೆ ಗೋಲ್ಡ್ ಇಟಿಎಫ್ ಎಂದರೇನು ?
ಹೂಡಿಕೆಯಾಗಿ ಚಿನ್ನದ ಸಾಧ್ಯತೆಗಳನ್ನು ಚರ್ಚಿಸುವ ಈ ಸರಣಿ ಸಾಗುತ್ತಿರುವಂತೆಯೇ ಚಿನ್ನದ ಬೆಲೆ ಒಂದೇ ಸಮನೆ ಏರುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈಗ 22 ಕ್ಯಾರೆಟ್ ಚಿನ್ನ ಗ್ರಾಮಿಗೆ 3,450ರ ಗಡಿಯನ್ನು ದಾಟುತ್ತಿದೆ. ಹಾಗಿದ್ದರೂ ಚಿನ್ನದ ಮೇಲಿನ ಭಾರತೀಯರ ವ್ಯಾಮೋಹ ಕಡಿಮೆಯಾಗುತ್ತಿಲ್ಲ. ಜಗತ್ತಿನಲ್ಲಿ ಅತೀ ಹೆಚ್ಚು ಖಾಸಗಿ ಚಿನ್ನ ಖರೀದಿ ಮಾಡುವ ದೇಶ ಭಾರತ; ಹಾಗೆಯೇ ಇಡಿಯ ಜಗತ್ತಿನಲ್ಲಿ ಗರಿಷ್ಠ ಖಾಸಗಿ ಚಿನ್ನ ಇರುವುದು ಕೂಡ ಭಾರತೀಯರಲ್ಲಿ !
ಅಂದ ಸುಲಭದಲ್ಲಿ ಚಿನ್ನದ ಒಡವೆಗಳ ಒಡೆಯರಾಗುವ ಬಗೆ ಹೇಗೆ ಎಂಬುದನ್ನು ಅರಿಯುವ ನಿಟಿನಲ್ಲಿ ನಾವು ಚಿನ್ನ ಉಳಿತಾಯ ಯೋಜನೆಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿದೆವು. ಪ್ರತೀ ತಿಂಗಳ ಸಣ್ಣ ಉಳಿತಾಯದ ಮೂಲಕ ಚಿನ್ನ ಖರೀದಿಸುವ ಯೋಜನೆಗಳು ಜನರಲ್ಲಿ, ವಿಶೇಷವಾಗಿ ಮಧ್ಯಮ ವರ್ಗದವರಲ್ಲಿ ಜನಪ್ರಿಯ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಹಾಗಿದ್ದರೂ ಚಿನ್ನವನ್ನು ಒಡವೆ ರೂಪದಲ್ಲೇ ಪಡೆಯುವ ಮತ್ತು ಆ ಮೂಲಕ ಮೇಕಿಂಗ್ ಚಾರ್ಜ್ (ತೇಮಾನು) ನಷ್ಟವನ್ನು ಭರಿಸಲೇಬೇಕಾದ ಅನಿವಾರ್ಯತೆ, ಒಡವೆಯನ್ನು ಜೋಪಾನವಾಗಿ, ಭದ್ರವಾಗಿ ಕಾಪಿಡುವ ಹೊಣೆಗಾರಿಕೆ ಮತ್ತು ಲಾಕರ್‌ಗಳಲ್ಲಿ ಅವುಗಳನ್ನು ಇಡುವಲ್ಲಿ ತಗಲುವ ನಿರಂತರ ಖರ್ಚು ವೆಚ್ಚ, ಇತ್ಯಾದಿಗಳು ಕೂಡ ಹೂಡಿಕೆ ದೃಷ್ಟಿಯಿಂದ ಎದುರಾಗುವ ಸವಾಲುಗಳು ಎನ್ನುವುದನ್ನು ನಾವು ಮರೆಯುವ ಹಾಗಿಲ್ಲ.
ಹೂಡಿಕೆಯಾಗಿ ಚಿನ್ನವನ್ನು ಒಂದು ಸೂಕ್ತ ಮಾಧ್ಯಮವನ್ನಾಗಿ ಕಾಣುವ ನೈಜ ಹೂಡಿಕದಾರರ ದೃಷ್ಟಿಯಲ್ಲಿ ಚಿನ್ನದ ಖರೀದಿಗೆ ಗೋಲ್ಡ್ ಇಟಿಎಫ್ ಅತ್ಯಂತ ಪ್ರಶಸ್ತ. ಗೋಲ್ಡ್ ಇಟಿಎಫ್ ಸ್ಕೀಮಿನಲ್ಲಿ ಚಿನ್ನವನ್ನು ನಾವು ನೈಜ ಬೆಲೆಗೆ ನಿಕಟವಾಗಿ ಖರೀದಿಸುವುದು ಸಾಧ್ಯವಿದೆ.
ಹಾಗೆ ನೋಡಿದರೆ ಚಿನ್ನದ ನೈಜ (ಅಂತಾರಾಷ್ಟ್ರೀಯ) ಪೇಪರ್ ಬೆಲೆಗೂ ಭೌತಿಕ ರೂಪದ ಚಿನ್ನದ ಬೆಲೆಗೂ ಇರುವುದು ಮೇಕಿಂಗ್ ಚಾರ್ಜ್, ದಾಸ್ತಾನು ವೆಚ್ಚ, ಜ್ಯುವೆಲ್ಲರ್ ಗಳ ಮಾರ್ಜಿನ್ ಇತ್ಯಾದಿ. ಇಟಿಎಫ್ ನಲ್ಲಾದರೆ ಮೂಲ ಚಿನ್ನದ ಬೆಲೆ ಈ ಹೆಚ್ಚುವರಿ ಖರ್ಚು ವೆಚ್ಚಗಳು ತಗಲುವುದಿಲ್ಲ.
ಅಂತಿರುವಾಗ ಇಟಿಎಫ್ ಎಂದರೇನು ಎಂಬುದನ್ನು ನಾವು ತಿಳಿಯುವ ಅಗತ್ಯವಿದೆ. ಇಟಿಎಫ್ ಎಂದರೆ ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ ಎಂಬುದಾಗಿದೆ. ಎಂದರೆ ನಾವು ಚಿನ್ನವನ್ನು ಭೌತಿಕ ರೂಪಕ್ಕೆ ಬದಲಾಗಿ ದಾಖಲೆ ಪತ್ರ ಮೂಲಕ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಖರೀದಿಸಬಹುದಾಗಿರುತ್ತದೆ.
ಅರ್ಥಾತ್ ಇದು ಆನ್‌ಲೈನ್ ಟ್ರೇಡಿಂಗ್ ವ್ಯವಹಾರ. ಹೇಗೆ ನಾವು ಆನ್‌ಲೈನ್ ಟ್ರೇಡಿಂಗ್ ಮೂಲಕ ಭೌತಿಕ ಶೇರು ಸರ್ಟಿಫಿಕೇಟ್ ಇಲ್ಲದೆಯೇ ಡಿಮ್ಯಾಟ್ ರೂಪದಲ್ಲಿ ಶೇರು ಖರೀದಿ, ಮಾರಾಟ ಮಾಡಬಹುದೋ ಹಾಗೆ !
ಇಟಿಎಫ್ ನಡಿ ಹೂಡಿಕೆದಾರನು ನೈಜ ಬೆಲೆಯಲ್ಲಿ ಚಿನ್ನವನ್ನು ಖರೀದಿ ನೈಜ ಬೆಲೆಯಲ್ಲೇ ಚಿನ್ನವನ್ನು ಮಾರಬಹುದಾಗಿದೆ. ಭೌತಿಕ ರೂಪದ ಚಿನ್ನವನ್ನು ಹೊಂದುವಲ್ಲಿನ ಮತ್ತು ಮಾರುವಲ್ಲಿನ ಯಾವುದೇ ರೀತಿಯ ಕಷ್ಟ, ಸಮಸ್ಯೆ, ಸವಾಲುಗಳು ಇಟಿಎಫ್ ನಲ್ಲಿ ಎದುರಾಗುವುದಿಲ್ಲ. ನಮ್ಮಲ್ಲಿನ ಇಟಿಎಫ್ ಚಿನ್ನಕ್ಕೆ ಖರೀದಿದಾರನನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ.
ಚಿನ್ನದ ಮಾರುಕಟ್ಟೆಯಲ್ಲಿ ಏರು ಪೇರುಗಳ ಲಾಭ ನಗದೀಕರಣಕ್ಕೆ ಯಾವುದೇ ರೀತಿಯ ಆಡೆತಡೆ, ಅಡ್ಡಿ ಆತಂಕ ಇರುವುದಿಲ್ಲ. ಖರೀದಿ, ಮಾರಾಟ ಎಲ್ಲವೂ ಸಲೀಸು. ಒಂದೇ ಒಂದೆಂದರೆ ಆನ್‌ಲೈನ್ ಟ್ರೇಡಿಂಗ್ ಸಾಕ್ಷರತೆಯನ್ನು ಸ್ವಲ್ಪಮಟ್ಟಿಗೆ ಹೊಂದಿರುವ ಅಗತ್ಯವಿರುತ್ತದೆ. ಇಟಿಎಫ್ ನಲ್ಲಿ ಚಿನ್ನದ ಖರೀದಿ ಮತ್ತು ಮಾರಾಟ ದರ, ಆಯಾ ದಿನದ ಮಾರುಕಟ್ಟೆಗೆ ಅನುಗುಣವಾಗಿ, ಪಾರದರ್ಶಕವಾಗಿರುವುದೇ ಹೂಡಿಕೆದಾರನಿಗೆ ದೊಡ್ಡ ಅಡ್ವಾಂಟೇಜ್ ಎನ್ನುವುದರಲ್ಲಿ ಎರಡು ಮಾತಿಲ್ಲ.
ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ನಗದು ವ್ಯವಹಾರದ ವೇದಿಕೆ ಮೂಲಕ, ಯಾವುದೇ ಕಂಪೆನಿಯ ಶೇರುಗಳನ್ನು ಖರೀದಿಸಿದ ಹಾಗೆ ಗೋಲ್ಡ್ ಇಟಿಎಫ್ ವ್ಯವಹಾರವನ್ನು ಹೂಡಿಕೆದಾರನು ಕೈಗೊಳ್ಳಬಹುದಾಗಿದೆ. ಯಾವಾಗ ಬೇಕೆಂದರೆ ಆವಾಗ ಚಿನ್ನವನ್ನು ನಮಗಿಷ್ಟದ ಪ್ರಮಾಣದಲ್ಲಿ ಆಯಾ ಹೊತ್ತಿನ ಮಾರುಕಟ್ಟೆ ದರದಲ್ಲಿ, ಖರೀದಿ ಮತ್ತು ಮಾರಾಟವನ್ನು ಕೈಗೊಳ್ಳಬಹುದಾಗಿದೆ.
ಇದಕ್ಕಾಗಿ ನಮಗೆ ಬೇಕಿರುವುದು ಶೇರು ಬ್ರೋಕರ್ ಜತೆಗಿನ ಒಂದು ಟ್ರೇಡಿಂಗ್ ಅಕೌಂಟ್ ಮತ್ತು ಒಂದು ಡಿಮ್ಯಾಟ್ ಅಕೌಂಟ್. ಇಲ್ಲಿಯೂ ಪ್ರತೀ ತಿಂಗಳು ಕಂತು ಹಣದ ನೆಲೆಯಲ್ಲಿ ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್ ಪ್ರಕಾರ ಚಿನ್ನವನ್ನು ನಿರಂತರವಾಗಿ ಖರೀದಿಸುತ್ತಲೇ ಹೋಗಬಹುದಾಗಿದೆ.
ಇದರಡಿ ನಾವು ಒಮ್ಮೆಗೆ ಒಂದು ಗ್ರಾಂ ಚಿನ್ನವನ್ನೂ ಖರೀದಿಸಬಹುದಾಗಿದೆ. ಚಿನ್ನದ ಬೆಲೆ ಏರುತ್ತೋ ಇಳಿಯುತ್ತೋ ಎಂಬುದನ್ನು ಕಾದು ನಿಷ್ಕ್ರಿಯರಾಗಿ ಕುಳಿತು ಕೊಳ್ಳುವ ಬದಲು ಪ್ರತೀ ತಿಂಗಳೂ ಸಿಪ್ ಯೋಜನೆಯಡಿ ನಿರ್ದಿಷ್ಟ ಕಂತು ಮೊತ್ತಕ್ಕೆ ಅನುಗುಣವಾಗಿ ಚಿನ್ನವನ್ನು ಖರೀದಿಸುತ್ತಾ ಹೋದಲ್ಲಿ ಎವರೇಜಿಂಗ್ ಅಥವಾ ಸರಾಸರಿ ನೆಲೆಯಲ್ಲಿ ನಾವು ಕಡಿಮೆ ಕ್ರಯದಲ್ಲೇ ಚಿನ್ನ ಖರೀದಿಸಿದಂತಾಗುತ್ತದೆ ಎನ್ನುವುದು ಗಮನಾರ್ಹ,