ಹೊಳೆಹೊನ್ನೂರು: ಕೇವಲ 20 ಲಕ್ಷ ರೂ.ಗೆ 8 ಕೆ.ಜಿ. ಬಂಗಾರ ಕೊಡುವುದಾಗಿ ದಂಪತಿಗಳಿಗೆ ನಂಬಿಸಿ ಮೋಸ ಮಾಡಿರುವ ಬಗ್ಗೆ ಪಟ್ಟಣದ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಾಪುರದ ದಂಪತಿ ವಂಚನೆಗೆ ಒಳದಾವರು.
ಘಟನೆಯ ವಿವರ: ಮಹಾಲಿಂಗಾಪುರದ ವ್ಯಕ್ತಿಯೊಬ್ಬರು ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ಈ ವಂಚಕನ ಪರಿಚಯವಾಗಿತ್ತು. ಇಬ್ಬರೂ ಮೊಬೈಲ್ ನಂ. ವಿನಿಮಯ ಮಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಮಹಾಲಿಂಗಾಪುರದ ವ್ಯಕ್ತಿಗೆ ಕರೆ ಮಾಡಿದ ವಂಚಕ ನನ್ನ ಅಜ್ಜಿಗೆ 8 ಕೆ.ಜಿ. ಚಿನ್ನದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ನೀವು ಕೊಳ್ಳುವುದಾದರೆ ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ಪುಸಲಾಯಿಸಿದ್ದ.
ವಂಚಕನ ಮಾತು ನಂಬಿದ ಈ ವ್ಯಕ್ತಿ, ತನ್ನ ಪತ್ನಿ ಬಳಿ ಈ ವಿಷಯವನ್ನು ಹೇಳಿಕೊಂಡಿದ್ದು, ದಂಪತಿಗಳು ಇಬ್ಬರು ತಾವೇ ಚಿನ್ನ ಕೊಳ್ಳುವ ಬಗ್ಗೆ ಯೋಚಿಸಿದ್ದರು. ಅಷ್ಟರಲ್ಲಿ ಮತ್ತೆ ಮಾತಿಗೆ ಸಿಕ್ಕ ವಂಚಕ ನಿಮಗಾದರೇ ಕೇವಲ 20 ಲಕ್ಷ ರೂ. ಗೆ 8 ಕೆ.ಜಿ. ತೂಕದ ಪೂರ್ತಿ ಚಿನ್ನವನ್ನು ಕೊಡುವೆ ಎಂದು ನಂಬಿಸಿದ್ದ.
ನಯ ವಂಚಕನ ಮಾತಿಗೆ ಮರುಳಾದ ದಂಪತಿ ಆ.15 ರಂದು ಹೊಳೆಹೊನ್ನೂರು ಠಾಣಾ ವ್ಯಾಪ್ತಿಗೆ ಬಂದಿದ್ದರು. 2 ಚಿನ್ನದ ನಾಣ್ಯಗಳನ್ನು ಕೊಟ್ಟು ಚಿನ್ನದ ಅಸಲಿತನ ಪರೀಕ್ಷೆ ಮಾಡಿಕೊಳ್ಳಿ ಎಂದು ತಿಳಿಸಿದ್ದ. ದಂಪತಿಗಳು ಚಿನ್ನಾಭರಣ ಮಳಿಗೆಗೆ ಹೋಗಿ ನಾಣ್ಯಗಳನ್ನು ಪರೀಕ್ಷಿಸಿದಾಗ ಅವು ಅಸಲಿ ನಾಣ್ಯಗಳಾಗಿದ್ದವು.
ನಾಣ್ಯಗಳನ್ನು ಪಡೆಯುವ ದುರಲೋಚನೆಯಿಂದ ದಂಪತಿಗಳು ಮಹಾಲಿಂಗಾಪುರದಲ್ಲಿದ್ದ ತಮ್ಮ ಜಮೀನನ್ನು ಮಾರಾಟ ಮಾಡಿ ಆ.28 ರಂದು 20 ಲಕ್ಷ ರೂ. ನೊಂದಿಗೆ ವಂಚಕ ಹೇಳಿದ ಜಾಗದಲ್ಲಿ ಹಾಜರಾಗಿದ್ದರು. ಈ ವಂಚಕನೊಂದಿಗೆ ಮತ್ತೊಬ್ಬ ಕೈ ಜೋಡಿಸಿದ್ದು, ಇಬ್ಬರೂ ಸೇರಿ 4 ನಕಲಿ ನಾಣ್ಯಗಳನ್ನು ಕೊಟ್ಟು ಹಣ ಪಡೆದಿದ್ದಾರೆ.
ಉಳಿದ ನಾಣ್ಯಗಳನ್ನು ತರುತ್ತೇವೆ ಅಲ್ಲಿಯವರೆಗೆ ಇಲ್ಲಿಯೇ ಇರಿ ಎಂದು ಹೇಳಿ ತುಂಬಾ ಹೊತ್ತಾದರೂ ವಾಪಸ್ ಬಾರದ ಹಿನ್ನಲೆ ಆ ವಂಚಕರಿಗೆ ಕರೆ ಮಾಡಿದಾಗ ಫೋನ್ ಆಫ್ ಆಗಿದ್ದು, ಆ ಬಳಿಕ ದಂಪತಿಗಳಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ.
ಈ ಬಗ್ಗೆ ತಡವಾಗಿ ನವೆಂಬರ್ ಮೊದಲ ವಾರದಲ್ಲಿ ಪಟ್ಟಣದ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ಕೈಗೆತ್ತಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.