Advertisement

ಚಿನ್ನದ ರಥ ಸಮರ್ಪಣೆಗೆ ಮತ್ತೆ ಜೀವ

01:41 AM Apr 29, 2019 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನೂತನ ಚಿನ್ನದ ರಥ ಅರ್ಪಿಸುವ ಕೆಲಸಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದಿಢೀರನೇ ವೇಗ ಕಲ್ಪಿಸಿದ್ದು, ರಾಜಕೀಯವಾಗಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

Advertisement

ಅಡೆತಡೆಗಳಿಲ್ಲದೆ ಆಡಳಿತ ನಡೆಸಬೇಕಾದರೆ ಶೀಘ್ರ ಚಿನ್ನದ ರಥ ಅರ್ಪಿಸಬೇಕು ಎಂಬ ಜೋತಿಷಿಸಲಹೆ ಮೇರೆಗೆ ಸಿಎಂ ಮುಜರಾಯಿ ಇಲಾಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಯಾಕೆಂದರೆ ಈ ಚಿನ್ನದ ರಥ ಪ್ರಸ್ತಾವ 2006ರದ್ದು. ಕುಮಾರಸ್ವಾಮಿ ಮೊದಲ ಬಾರಿಗೆ ಸಿಎಂ ಆದಾಗ ದೇವರಿಗೆ ಸ್ವರ್ಣ ರಥ ನಿರ್ಮಿಸಿ ಅರ್ಪಿಸುವ ಉದ್ದೇಶ ಹೊಂದಿದ್ದರಂತೆ. 12 ವರ್ಷಗಳಲ್ಲಿ ಅದು ಪೂರ್ಣಗೊಂಡಿಲ್ಲ. ಈಗ ಜೋತಿಷಿ ಸಲಹೆಯಂತೆ ಕೆಲಸ ಚುರುಕುಗೊಳ್ಳುವ ಲಕ್ಷಣಗಳಿವೆ. ಈ ಸಂಬಂಧ ಬೆಂಗಳೂರಿನಲ್ಲಿ ಚಿನ್ನದ ರಥ ನಿರ್ಮಾಣಕ್ಕೆ ಸಂಬಂಧಿಸಿ ಮುಜರಾಯಿ ಇಲಾಖೆಯ ಉನ್ನತ ಅಧಿಕಾರಿಗಳ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸಭೆ ನಡೆದಿದೆ. ಜೋತಿಷಿಯ ಸಲಹೆ?: ಜೋತಿಷಿಯೊಬ್ಬರು ಚಿನ್ನದ ರಥ ನಿರ್ಮಾಣ ಪೂರ್ಣಗೊಳ್ಳದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರಿಗೆ ಸಮಸ್ಯೆ ಉಂಟು. ಒಂದುವೇಳೆ ಚಿನ್ನದ ರಥ ಸಮರ್ಪಣೆಯಾದರೆ ಎಲ್ಲ ಅಡೆತಡೆಗಳೂ ನಿವಾರಣೆಯಾಗುತ್ತವೆ. ಸರ್ಕಾರಕ್ಕೂ ಧಕ್ಕೆ ಬಾರದು, ಮಂಡ್ಯದಲ್ಲಿ ಪುತ್ರ ನಿಖೀಲ್ ಗೆಲ್ಲಬಹುದು ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

2006ರಲ್ಲಿ ರಾಜ್ಯ ಸರ್ಕಾರ ಚಿನ್ನದ ರಥ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. 15 ಕೋ.ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲು ಆಗ ಟೆಂಡರ್‌ ಪ್ರಕ್ರಿಯೆಯೂ ನಡೆದಿತ್ತು. ಪ್ರಾಥಮಿಕ ಹಂತದ ಕೆಲಸ ಆರಂಭವಾಗಿತ್ತು. ಚಿನ್ನಕ್ಕೆ ನಿಗದಿಪಡಿಸಿದ ದರದ ವಿಷಯದಲ್ಲಿ ತಾಂತ್ರಿಕ ತೊಂದರೆಗಳು ಎದುರಾದ ಕಾರಣ ಸ್ಥಗಿತಗೊಂಡಿತ್ತು.

ದರದಲ್ಲಿ ಏರಿಕೆ: ಚಿನ್ನದ ದರದಲ್ಲಿ ಅಂದಿಗೂ ಇಂದಿಗೂ ಅಜಗಜಾಂತರ ಇದೆ. ಅಂದು ಗ್ರಾಂ ಒಂದಕ್ಕೆ 600 ರಿಂದ 700 ರೂ. ಇದ್ದರೆ ಇಂದು 3 ಸಾವಿರ ರೂ. ಆಸುಪಾಸಿನಲ್ಲಿದೆ. ಹಾಗಾಗಿ 15 ಕೋಟಿ ರೂ. ಎಂಬ ಅಂದಾಜು ವೆಚ್ಚ 80 ಕೋಟಿ ರೂ.ಗೇರುತ್ತದೆ. ರಥ ನಿರ್ಮಾಣಕ್ಕೆ 240 ಕೆ.ಜಿ. ಚಿನ್ನ ಅಗತ್ಯವಿದೆ. ದೇವಸ್ಥಾನದ ಖಾತೆಯಲ್ಲಿ ಈಗ 312 ಕೋಟಿ ರೂ. ಇದ್ದು, ಹಣದ ಕೊರತೆ ಉಂಟಾಗದು. ಆದರೂ ದೇಣಿಗೆ ಸಂಗ್ರಹಿಸಿ ರಥ ನಿರ್ಮಿಸುವ ಉದ್ದೇಶ ಆಡಳಿತ ಮಂಡಳಿಯದ್ದು.

ಹಿಂದಿನ ಪ್ರಸ್ತಾವನೆಗೆ ಈಗ ಚುರುಕು ಸಿಕ್ಕಿದೆ ಅಷ್ಟೆ. ಸುಮಾರು 80ರಿಂದ 85 ಕೋಟಿ ರೂ. ವೆಚ್ಚದಲ್ಲಿ ನೂತನ ರಥ ನಿರ್ಮಾಣವಾಗುತ್ತಿದೆ. ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿ ರಥ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡುತ್ತೇವೆ.

Advertisement

-ನಿತ್ಯಾನಂದ ಮುಂಡೋಡಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ

  • ಬಾಲಕೃಷ್ಣ ಭೀಮಗುಳಿ
Advertisement

Udayavani is now on Telegram. Click here to join our channel and stay updated with the latest news.

Next