ಮಂಗಳೂರು: ಕಳ್ಳತನ ಮಾಡಿದ್ದ ಚಿನ್ನವನ್ನು ಖರೀದಿಸಿದ ಆರೋಪ ಹೊರಿಸಿ ವಶಪಡಿಸುವ ಸೋಗಿನಲ್ಲಿ ಬಂದ ಯಲಹಂಕ ಠಾಣೆಯ ಪೊಲೀಸರು ಮಂಗಳೂರಿನ ಚಿನ್ನದ ಗುಣಮಟ್ಟ ಪರಿಶೀಲನೆ ಮಾಡುವ ಅಂಗಡಿಯೊಂದರಿಂದ ಚಿನ್ನ ಹಾಗೂ ನಗದು ತೆಗೆದುಕೊಂಡು ಹೋಗಿರುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಯಲಹಂಕ ಠಾಣೆಯ ಪೊಲೀಸರು ಅಂಗಡಿಗೆ ನುಗ್ಗಿ ಸಿಬಂದಿಗೆ ದೈಹಿಕ ಹಲ್ಲೆ ನಡೆಸಿ 180 ಗ್ರಾಂ. ಚಿನ್ನದ ಗಟ್ಟಿ ಹಾಗೂ 55,250 ರೂ. ಹಾಗೂ ಸಿಬಂದಿಯ ಮೊಬೈಲ್ ಫೋನ್ ಕೊಂಡೊಯ್ದಿದ್ದಾರೆ ಎಂದು ಮಂಗಳೂರಿನ ಎಂ.ಟಿ.ಸಿ. ಗೋಲ್ಡ್ ಟೆಸ್ಟಿಂಗ್ ಅಂಗಡಿ ಪಾಲುದಾರ ಎ. ಸತೀಶ್ ರಾವ್ ಅವರು ದೂರು ನೀಡಿದ್ದಾರೆ.
ಜು.19ರಂದು ಸಂಜೆ ಐದು ಗಂಟೆಯ ಸುಮಾರಿಗೆ ಇನೋವಾ ಕಾರಿನಲ್ಲಿ ಬಂದ ಆರು ಮಂದಿ ಎಂ.ಟಿ.ಸಿ. ಗೋಲ್ಡ್ ಟೆಸ್ಟಿಂಗ್ ಅಂಗಡಿಯ ಸಿಬಂದಿ ಸದಾಶಿವ ಆಚಾರ್ ಅವರಿಗೆ ತಾವು ಕರೆತಂದ ವ್ಯಕ್ತಿಯೊಬ್ಬನಿಂದ ಕರೆ ಮಾಡಿಸಿ ತನ್ನ ಚಿನ್ನದ ಆಭರಣಗಳು ಮಂಗಳೂರಿನ ಬ್ಯಾಂಕೊಂದರಲ್ಲಿ ಗಿರವಿ ಇಟ್ಟಿದ್ದು, ಅದನ್ನು ಮಾರಾಟ ಮಾಡಬೇಕಾಗಿರುವುದರಿಂದ ತಾವು ಬಂದು ಅದರ ಗುಣಮಟ್ಟ ಪರಿಶೀಲಿಸಿ ಕೊಡಬೇಕೆಂದು ಹೇಳಿದ್ದರು. ಅದರಂತೆ ಸದಾಶಿವ ಆಚಾರ್ ಅವರು ಬ್ಯಾಂಕಿನ ಬಳಿ ಹೋದಾಗ ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಬೆಂಗಳೂರಿನತ್ತ ತೆರಳಿದ್ದರು.
ಈ ಸಂದರ್ಭದಲ್ಲಿ ಸಿಬಂದಿ ಅಂಗಡಿ ಮಾಲಕರಿಗೆ ಕರೆ ಮಾಡಲು ಯತ್ನಿಸಿದಾಗ ಅವರ ಮೊಬೈಲ್, ನಗದು 55,250 ರೂ. ಹಾಗೂ ಅವರ ಬಳಿಯಿದ್ದ ಇತರ ವಸ್ತುಗಳನ್ನು ಕಿತ್ತುಕೊಂಡಿದ್ದರು. ಸ್ವಲ್ಪ ದೂರ ಹೋದ ಬಳಿಕ ಸದಾಶಿವ ಆಚಾರ್ ಹಾಗೂ ಅವರು ಕರೆತಂದ ಇನ್ನೊಬ್ಬ ವ್ಯಕ್ತಿ ಹಾಗೂ ಮಧ್ಯವರ್ತಿ ಚಂದ್ರಶೇಖರ್ ಅವರನ್ನೂ ಕಾರಿನಿಂದಿಳಿಸಿ ಫೋಟೋ ತೆಗೆಸಿ ಮಾಧ್ಯಮದವರಿಗೆ ಕರೆ ಮಾಡುವಂತೆ ನಟಿಸಿದ್ದರು. ಸದಾಶಿವ ಅವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನೂ ನೀಡಿದ್ದರು. ಇದೇ ಸಂದರ್ಭದಲ್ಲಿ ತನಗೂ ಕರೆ ಮಾಡಿದ್ದು ´ೋನ್ ನಾಟ್‌ರೀಚೆಬಲ್ ಆಗಿದ್ದರಿಂದ ಸದಾಶಿವ ತನ್ನ ಅಣ್ಣ ಮೋಹನ್ ಅವರಿಗೆ ಕರೆ ಮಾಡಿದ್ದರು. ಆದರೆ ತಾನು ಏನಿದ್ದರೂ ಅಂಗಡಿಗೆ ಬಂದರಷ್ಟೇ ಮಾತನಾಡುವುದು ಎಂದು ಮೋಹನ್ ಅವರು ಉತ್ತರಿಸಿದ್ದರು ಎಂದವರು ದೂರಿನಲ್ಲಿ ತಿಳಿಸಿದ್ದಾರೆ.
ಆರು ಮಂದಿ ಮತ್ತೆ ಚಿನ್ನ ಪರಿಶೀಲನೆಯ ಅಂಗಡಿಗೆ ಬಂದು “ನಾವು ಬೆಂಗಳೂರು ಪೊಲೀಸರು. ನಿಮ್ಮ ತಮ್ಮ ಸತೀಶ್ ಕಳ್ಳತನದ ಮಾಲುಗಳನ್ನು ಮಧ್ಯವರ್ತಿ ಚಂದ್ರಶೇಖರ್ ಅವರಿಂದ ಕೊಂಡಿದ್ದಾರೆ’ ಎಂದಾಗ, ಮೋಹನ್ “ನಾವೇನಿದ್ದರೂ ಬ್ಯಾಂಕಿನ ಮೂಲಕ ವ್ಯವಹಾರ ಮಾಡುತ್ತೇವೆ ವಿನಃ ವ್ಯಕ್ತಿಗಳಿಂದಲ್ಲ ಎಂದಿದ್ದರು. ಇದೀಗ ನನ್ನ ತಮ್ಮ ಊರಲ್ಲಿಲ್ಲ. ನಾಳೆ ಬನ್ನಿ ಎಂದಾಗ ಪೊಲೀಸರು ನಿಮ್ಮ ಸಿಬಂದಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ. ಅಲ್ಲಿಗೇ ಬನ್ನಿ ಎಂದಿದ್ದರು.
ಅದಕ್ಕೆ ನಿರಾಕರಿಸಿದಾಗ ಅಂಗಡಿಯಲ್ಲಿದ್ದ 180 ಗ್ರಾಂ. ಚಿನ್ನದ ಗಟ್ಟಿಯನ್ನು ಬಲವಂತವಾಗಿ ತೆಗೆದುಕೊಂಡು ಸಿಬಂದಿಯಿಂದ ಖಾಲಿ ಬಿಳಿ ಹಾಳೆಯಲ್ಲಿ ಸಹಿ ಹಾಕಿಸಿಕೊಂಡು ಹೋಗಿದ್ದರು. ಆದರೆ ಮಹಜರಿನಲ್ಲಿ 140 ಗ್ರಾಂ. ಚಿನ್ನಾಭರಣಗಳನ್ನು ಮಾತ್ರ ನಮೂದಿಸಿದ್ದಾರೆ. ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿ 180 ಗ್ರಾಂ. ಚಿನ್ನ ಹಾಗೂ 55,250ರೂ.ಗಳನ್ನು ತೆಗೆದುಕೊಂಡಿರುವ ಪೊಲೀಸರ ವಿರುದ್ಧ ಕಾನೂನುಕ್ರಮಕೈಗೊಂಡು, ದೋಚಿರುವ ಸೊತ್ತುಗಳನ್ನು ವಾಪಸು ಕೊಡಿಸಬೇಕು ಎಂದು ಸತೀಶ್ ರಾವ್ ಪೊಲೀಸ್ ಅಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.