Advertisement

ಚಿನ್ನ, ಚಿನ್ನ ಸಾಲ

02:47 PM Jul 10, 2017 | |

ಕೈಯಲ್ಲಿ ಬಂಗಾರವಿದ್ದರೂ ನನಗೆ ಈ ಬಂಗಾರದ ಮೇಲೆ ಸಾಲ ಕೊಡಿ ಅಂತ ಅರ್ಜಿ ಕೊಡಬೇಕು. ಇದರ ಆಧಾರದ ಮೇಲೆ ಬ್ಯಾಂಕಿನವರೇ  ಚಿನ್ನವನ್ನು ಒರೆಗೆಹಚ್ಚಿ ಪರೀಕ್ಷಿಸಿ ಅದರಲ್ಲಿರುವ ಹರಳು ಮತ್ತು ಇತರೆ ಲೋಹಗಳ ಅಂದಾಜು ತೂಕಗಳನ್ನು ಕಳೆದು,  ನಿವ್ವಳ ಬಂಗಾರದ ತೂಕದ ಲೆಕ್ಕನೀಡುತ್ತಾರೆ.   ಈ ಆಧಾರದ ಮೇಲೆ ಸಾಲ ಸಿಗುತ್ತದೆ.  

Advertisement

ಜೊತೆಯಲ್ಲಿದ್ದರೆ ಚಿನ್ನ, ಚಿಂತೆ ಏತಕೆ ಇನ್ನಾ?
ಹೀಗಂತ ಅನ್ನೋಕೆ ಆಗೋಲ್ಲ. ಚಿನ್ನ ಇದ್ದ ಮಾತ್ರಕ್ಕೆ ಸಾಲ ಸುಲಭವಾಗಿ ಸಿಗುತ್ತದೆ ಅಂದು ಕೊಳ್ಳಬೇಡಿ. ಬ್ಯಾಂಕ್‌ಗಳು ಯಾವತ್ತೂ ದುಡ್ಡಿದ್ದವರಿಗೇ ಸಾಲ ಕೊಡೋದು. ದುಡ್ಡಿಲ್ಲದವರಿಗೆ  ಕಾನೂನಿನ ಪಾಠ ಹೇಳಿ ಸಾಗಹಾಕುತ್ತವೆ. ಮೊದಲಿಂದಲೂ  ಬ್ಯಾಂಕ್‌ಗಳಿಗೂ ಚಿನ್ನಕ್ಕೂ ಅಷ್ಟಕ್ಕಷ್ಟೇ.  ಇದು ಹೂಡಿಕೆಯ ಯಂತ್ರವಾದ ಮೇಲೆ ಅವಿನಾಭಾವ ಸಂಬಂಧ ಎನ್ನುವಂತಾಗಿದೆ. 

ಬ್ಯಾಂಕ್‌ಗಳು ಏಕೆ ಬಂಗಾರದ ಸಾಲ ಕೊಡುತ್ತವೆ ಗೊತ್ತಾ?  ಬ್ಯಾಂಕ್‌ಗಳಲ್ಲಿ ಅನುತ್ಪಾದನ ಆಸ್ತಿ (ಎನ್‌ಪಿಎ) ಅಂತ ಇದೆ. ಅಂದರೆ ಕೊಟ್ಟ ಸಾಲ ವಸೂಲಿ ಆಗದೇ ಇದ್ದರೆ, ವಸೂಲಿ ಮಾಡಲು ಅಸಾಧ್ಯವಾದರೆ ಅದನ್ನು ಅನುತ್ಪಾದಕ ಆಸ್ತಿ ವ್ಯಾಪ್ತಿಗೆ ಸೇರಿಸಿ ಕೈತೊಳೆದು ಕೊಳ್ಳುತ್ತಾರೆ. 2005ರ ಈಚೆಗೆ ಬ್ಯಾಂಕುಗಳ ಸಾಲಗಳ ಅನುತ್ಪಾದಕ ಆಸ್ತಿ ಹೆಚ್ಚಾಗಿ ವಸೂಲಿಯಾಗದೆ ಸಾಲದ ಪ್ರಮಾಣ ಹೆಚ್ಚಾಯಿತು. ಆಗ ಕಣ್ಣಿಗೆ ಬಿದ್ದದ್ದೆ  ಬಂಗಾರದ ಸಾಲ.  ಬ್ಯಾಂಕ್‌ಗಳು ಶೇ.9-10ರಷ್ಟು ಬಡ್ಡಿ ಕೊಟ್ಟರೆ, ಅವು ಕೊಟ್ಟ ಸಾಲಕ್ಕೆ ಶೇ.10ರಿಂದ 14ರಷ್ಟು ಬಡ್ಡಿ ಪಡೆಯುತ್ತದೆ. ಆದರೆ ನಬಾರ್ಡ್‌ನಲ್ಲಿ ಇಟ್ಟರೆ ಶೇ.4ರಷ್ಟು ಲಾಸು. ಇದರಿಂದ ತಪ್ಪಿಸಿಕೊಳ್ಳೋದಕ್ಕೆ ಇರುವ ಮಾರ್ಗ ಎಂದರೆ ಚಿನ್ನದ ಸಾಲ. ರೈತರ ಚಿನ್ನದ ಸಾಲವನ್ನೂ ಅನುತ್ಪಾದಕ ಆಸ್ತಿಯ ಶೇ.18ರ ಸಾಲದಲ್ಲಿಯೇ ತೋರಿಸುತ್ತಾರೆ. ಇದು ಸಾಲದ ಹಿಂದಿರುವ ನಿಜವಾದ ಗುಟ್ಟು. 

ಸಾಲ ಕೊಡುವ ಬಗೆ
ಬಂಗಾರದ ಸಾಲಕ್ಕೂ ನಿಯಮಗಳಿವೆ.  ಮುಖ್ಯವಾಗಿ ಎರಡು ರೀತಿ ಸಾಲ ಕೊಡುತ್ತವೆ.  ಒಂದು ವೈಯಕ್ತಿಕ ಸಾಲ, ಇನ್ನೊಂದು ಕೃಷಿ ಸಾಲ. 

ಎಚ್ಚರವಿರಲಿ
ನೀವು ಬ್ಯಾಂಕಿಗೆ ತೆಗೆದುಕೊಂಡು ಹೋಗುವ ಆಭರಣಕ್ಕೆ ಇವತ್ತಿನ ಬೆಲೆ ಸಿಗುತ್ತದೆಯೇ? ಹೀಗೆ ಲೆಕ್ಕಾಚಾರ ಮಾಡಬೇಡಿ. ಏಕೆಂದರೆ ಬ್ಯಾಂಕಿನ ನಿಯಮದ ಪ್ರಕಾರ 30 ದಿನಗಳ ಸರಾಸರಿ ಬೆಲೆಯ ಶೇ. 75ರಷ್ಟು ಮಾತ್ರ ಸಾಲ ಕೊಡುವುದು. ದಾಖಲೆ ಇಲ್ಲದ, ಅಂದರೆ ಚಿನ್ನದ ಅಂಗಡಿಗಳಿಂದ ರಸೀತಿ ಪಡೆಯದೆ ಖರೀದಿಸಿದ ಬಿಸ್ಕತ್ತುಗಳು,  ಗಟ್ಟಿಗಳಿಗೆ ಬ್ಯಾಂಕಿನಲ್ಲಿ ಸಾಲ ಸಿಗುವುದು ಅನುಮಾನ. ಆದರೆ ಬ್ಯಾಂಕ್‌ನಲ್ಲಿ ಕೊಂಡ ಚಿನ್ನದ ಬಾರ್‌ಗಳಿಗೆ ಬೇಗ ಸಾಲ ಸಿಗುತ್ತದೆ. ಇನ್ನೊಂದು ವಿಷಯ ಎಂದರೆ ಬ್ಯಾಂಕಿನ ವ್ಯಾಲ್ಯುಯರ್‌ ಕೊಡುವ ಅಕ್ನಾಲೆಡ್ಜ್ಮೆಂಟ್‌ ಬಹಳ ಮುಖ್ಯ. ಅದೇ ರೀತಿ, ನೀವು ಸಾಲ ಮರುಪಾವತಿ ಮಾಡಿದ ನಂತರ ನೀಡುವ ಎಂಡಾರ್ಸ್‌ಮೆಂಟ್‌ ಕಳೆಯಬೇಡಿ. 

Advertisement

ಬಂಗಾರ ಅಡವಿಟ್ಟ ನಂತರ ಬ್ಯಾಂಕ್‌ ಎರಡು ಸಾರಿ ನೋಟಿಸ್‌ ಕೊಡಬಹುದು.  ಒಂದು ಬಂಗಾರದ ರೇಟು ಸಿಕ್ಕಾಪಟ್ಟೆ ಬಿದ್ದಾಗ. ಒಂದು ಪಕ್ಷ ಬಡ್ಡಿ ಕೊಡದೇ ಇದ್ದರೆ ಅಂತಹ ಬ್ಯಾಂಕ್‌ಗಳು ಇಟ್ಟುಕೊಂಡ ಶೇ.25ರಷ್ಟು  ಮಾರ್ಜಿನ್‌ ಹಣ ಕುಸಿಯುತ್ತದೆ. ಅದನ್ನು  ಸರಿದೂಗಿಸುವಂತೆ ನೋಟಿಸ್‌ ಕೊಡುತ್ತಾರೆ. ಹಾಗೆಯೇ ಅವಧಿ ಮುಕ್ತಾಯವಾದರೂ ಮರುಪಾವತಿ ಮಾಡದೇ ಇದ್ದರೆ ಬ್ಯಾಂಕ್‌ ನೋಟಿಸ್‌ ಕೊಟ್ಟು, ಅದಕ್ಕೂ ಉತ್ತರ ಬರದೇ ಇದ್ದರೆ, ಪತ್ರಿಕಾ ನೋಟಿಸ್‌ ಕೊಟ್ಟು ಬಹಿರಂಗ ಹರಾಜು ಹಾಕುತ್ತದೆ. 

ಸಾಲ ಪಡೆಯುವ ವ್ಯಕ್ತಿ ತನ್ನಲ್ಲಿರುವ ಬಂಗಾರದ ಆಭರಣಗಳು, ಬ್ಯಾಂಕುಗಳೇ ಠಂಕಿಸಿದ ಕಾಯಿನ್‌ಗಳನ್ನು ಒತ್ತೆ ಇಡಬಹುದು.  ಆದರೆ ಬೇರೆ ಕಡೆ ತಂದ ಚಿನ್ನದ ಬಿಸ್ಕತ್ತುಗಳ  ಮೇಲೆ, ಚಿನ್ನದ ಗಟ್ಟಿಗಳ ಮೇಲೆ ಸಾಲ ನೀಡುವಂತಿಲ. ಕೈಯಲ್ಲಿ ಬಂಗಾರವಿದ್ದರೂ ನನಗೆ ಈ ಬಂಗಾರದ ಮೇಲೆ ಸಾಲ ಕೊಡಿ ಅಂತ ಅರ್ಜಿ ಕೊಡಬೇಕು. ಇದರ ಆಧಾರದ ಮೇಲೆ ಬ್ಯಾಂಕಿನವರೇ ನೇಮಿಸಿಕೊಂಡಿರುವ ಅಕ್ಕಸಾಲಿಗ(ವ್ಯಾಲ್ಯೂಯರ್‌) ನಿಮ್ಮ ಚಿನ್ನವನ್ನು ಒರೆಗೆಹಚ್ಚಿ ಪರೀಕ್ಷಿಸಿ ಅದರಲ್ಲಿರುವ ಹರಳು ಇತರೆ ಲೋಹಗಳ ಅಂದಾಜು ತೂಕಗಳನ್ನು ಕಳೆದು,  ನಿವ್ವಳ ಬಂಗಾರದ ತೂಕದ ಲೆಕ್ಕನೀಡುತ್ತಾನೆ.  ಈ ಆಧಾರದ ಮೇಲೆ ಸಾಲ ಸಿಗುತ್ತದೆ.   ನಿಮ್ಮಲ್ಲಿ 100 ಗ್ರಾಂ. ಬಂಗಾರ ಇದೆ ಎನ್ನಿ. ಅಷ್ಟಕ್ಕೂ ಸಾಲ ಸಿಗುತ್ತದೆ. ಒಟ್ಟು ಬಂಗಾರದ ಮೊತ್ತದಲ್ಲಿ ಶೇ. 75ರಷ್ಟು ಮಾತ್ರ ಸಾಲವಾಗಿ ಸಿಗುತ್ತದೆ. ಆರ್‌ಬಿಐ  ಸೂಚನೆಯಂತೆ ಅಂತಹ ಬಂಗಾರ 22 ಕ್ಯಾರೆಟ್‌ ಇರಬೇಕೆಂಬುದು ಕಡ್ಡಾಯ ಹಾಗೂ ಬ್ಯಾಂಕುಗಳು ದೇಶದ ಚಿನ್ನದ ಮಾರುಕಟ್ಟೆಯಲ್ಲಿ ಆ ತಿಂಗಳಲ್ಲಿ ಇದ್ದ ಆಭರಣ ಬಂಗಾರದ ಸರಾಸರಿ ಬೆಲೆಯ  ಶೇ.75ರಷ್ಟು ಬಂಗಾರದ ತೂಕಕ್ಕೆ ತಕ್ಕನಾದ ಸಾಲ ಕೊಡುತ್ತಾರೆ. ಒಂದೊಮ್ಮೆ ಸಾಲ ಮರುಪಾವತಿ ಆಗದೇ ಇದ್ದರೆ ಹರಾಜು ಹಾಕಬಹುದು.

ನಿಮ್ಮ ಸಂಬಳ ಅದೇ ಬ್ಯಾಂಕಿನಲ್ಲಿ ಪಾವತಿ ಯಾಗುತ್ತಿದ್ದರೆ, ನೀವು ಪ್ರತಿ ತಿಂಗಳೂ ಅಡವಿಟ್ಟ ಬಂಗಾರದ ಬಡ್ಡಿಯನ್ನು ಚೆಕ್‌ಮೂಲಕ ಪಾವತಿಸುವುದಾದರೆ ಅವಧಿಯ ವಿಸ್ತರಣೆಯಾಗುತ್ತದೆ. ನಿಮ್ಮ ಪಾವತಿಯ ಸಾಮರ್ಥಯ, ತಿಂಗಳ ಕಟಾವುಗಳ ಆಧಾರದ ಮೇಲೆ ನಿಮಗೆ ಸಾಲ ಸಿಗಲೂಬಹುದು. 

ವೈಯಕ್ತಿಕ ಬಂಗಾರ ಸಾಲ
ವೈಯುಕ್ತಿಕ ಬಂಗಾರದ ಸಾಲ ಬೇಕಾದರೆ ಆ ಬ್ಯಾಂಕ್‌ನಲ್ಲಿ ನೀವು ಖಾತೇದಾರ ರಾಗಿರಬೇಕು. ಸಾಲದ ಅವಧಿ 12 ತಿಂಗಳು.

ಪ್ರತಿ ತಿಂಗಳು ಸಾಲದ ಮೇಲೆ ಬಡ್ಡಿ ಆಕರ
ಮಾಡುವ ಬ್ಯಾಂಕುಗಳು ಅದಕ್ಕೆ ಶೇ.12ರಿಂದ ಶೇ. 13.50ಯವರೆಗೆ ಬಡ್ಡಿ ಹಾಕುತ್ತಾರೆ. ಭಾರತೀಯ ರಿಜರ್ವ್‌ ಬ್ಯಾಂಕ್‌ ಆದೇಶದ ಪ್ರಕಾರ 12 ತಿಂಗಳಿಗೊಮ್ಮೆ ಸಾಲ ಮರು ಪಾವತಿಸುವವರು ಕೇವಲ 1ಲಕ್ಷದವರೆಗೆ ಬಂಗಾರದ ಮೇಲೆ ಸಾಲ ಪಡೆಯಬಹುದು. ಸಾಲ ಹಾಗೂ ಬಡ್ಡಿಯನ್ನು ವರ್ಷದ ಅಖೈರಿನಲ್ಲಿ ಒಮ್ಮೆಗೇ ಮರುಪಾವತಿಸುವ ಅವಕಾಶ ಇದೆ.
ಜೊತೆಗೆ ಪ್ರೊಸೆಸಿಂಗ್‌ಫೀ ಎಂದು ಆರಂಭದಲ್ಲಿ ಶೇ.0.20 ರಿಂದ ಶೇ.1ರವರೆಗೆ ಕತ್ತರಿ ಹಾಕುತ್ತಾರೆ.  ಕೆಲ ಬ್ಯಾಂಕುಗಳಲ್ಲಿ ಪ್ರತಿ ತಿಂಗಳು ಸಂಬಳದಲ್ಲಿ ಮರುಪಾವತಿಮಾಡಲು ಒಪ್ಪಿದಲ್ಲಿ ಹೆಚ್ಚಿನ ಸಾಲವೂ ದೊರೆಯಲಿದೆ. ಜೊತೆಗೆ ಬಡ್ಡಿಯಲ್ಲಿ ರಿಯಾಯಿತಿಯೂ ಉಂಟು.

ಇವರಿಗೆ ಸುಲಭ
ಕೃಷಿಕರು ಬಂಗಾರದ ಸಾಲ ಪಡೆಯುವುದು ಸುಲಭ.  “ಕೃಷಿ ಚಟುವಟಿಕೆಗಾಗಿಯೇ ಆ ಹಣವನ್ನು ವಿನಿಯೋಗಿಸುತ್ತಿದ್ದೇನೆ’ ಎಂದು ಘೋಷಣಾ ಪತ್ರಕ್ಕೆ ಸಹಿಮಾಡಿ ಸುವರ್ಣಸಾಲ ಪಡೆಯಬಹುದು. ತಾನು ರೈತ ಎನ್ನುವುದನ್ನು  ದೃಢೀಕರಿಸಲು ಪಹಣಿಯನ್ನು ನೀಡಬೇಕು.  ಇದು ಸಹಾ 12 ತಿಂಗಳ ಸಾಲ.  ಸರಳ ಬಡ್ಡಿಯಲ್ಲಿ ವರ್ಷಕ್ಕೊಮ್ಮೆ ಮಾತ್ರ ಬಡ್ಡಿಹಾಕುತ್ತಾರೆ. 3ಲಕ್ಷದವರೆಗಿನ ಸಾಲಕ್ಕೆ ಶೇ.7 ಬಡ್ಡಿ ಬೀಳಲಿದ್ದು, ವರ್ಷಕ್ಕೆ ಸರಿಯಾಗಿ ಪೂರ್ತಿಮರುಪಾವತಿ ಮಾಡಿದಲ್ಲಿ ಸರ್ಕಾರ ಶೇ.3 ಬಡ್ಡಿಸಹಾಯಧನ ನೀಡುತ್ತದೆ.  ಒಟ್ಟಾರೆ ಶೇ.4ರ ಬಡ್ಡಿಗೆ ಸಾಲ ಸಿಕ್ಕಂತಾಗುತ್ತದೆ.   ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡದೇ ಇದ್ದರೆ ಸಹಾಯಧನಕ್ಕೆ ಕತ್ತರಿ ಬೀಳುತ್ತದೆ.

ಆರ್‌ಕೆ

Advertisement

Udayavani is now on Telegram. Click here to join our channel and stay updated with the latest news.

Next