ಇದುವರೆಗೂ ಹಲವು ಚಿತ್ರಗಳನ್ನು ವಿತರಣೆ ಮಾಡಿರುವ ಗೋಕುಲ್ ಫಿಲಂಸ್, ಈಗ ನಿರ್ಮಾಣಕ್ಕೂ ಇಳಿಯಲಿದೆ. ತಮ್ಮ ಸಂಸ್ಥೆಯಡಿ ಈ ವರ್ಷ ನಿರ್ಮಾಣ ಮಾಡುವುದಕ್ಕೆ ಯೋಚಿಸಿರುವ ಗೋಕುಲ್ ರಾಜ್, ಮುಂದಿನ ದಿನಗಳಲ್ಲಿ ಕೆಲವು ಚಿತ್ರಗಳನ್ನು ನಿರ್ಮಿಸುವ ಕುರಿತು ಹೆಜ್ಜೆ ಇಟ್ಟಿದ್ದಾರೆ.
ಗೋಕುಲ್ ಫಿಲಂಸ್‌ನ ಮೊದಲ ಚಿತ್ರದಲ್ಲಿ ತಮ್ಮ ಮಗ ಗೌತಮ್ ರಾಜ್‌ನನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಗೋಕುಲ್ ರಾಜ್. ಈಗಾಗಲೇ ಗೌತಮ್, ಮುಂಬೈನ್ ಅನುಪಮ್ ಖೇರ್ ತರಬೇತಿ ಶಾಲೆಯಾದ “ಆ್ಯಕ್ಟರ್ ಪ್ರಿಪೇರ್’ನಲ್ಲಿ ಕಲಿತು ಬಂದಿದ್ದಾನಂತೆ.
ಹಾಗಾಗಿ ತಮ್ಮ ಸಂಸ್ಥೆಯ ಮೊದಲ ಚಿತ್ರದಲ್ಲಿ ಮಗನನ್ನು ಪರಿಚಯಿಸುವುದಕ್ಕೆ ಯೋಚಿಸುತ್ತಿದ್ದು, ಆ ನಂತರ ಬೇರೆ ಹೀರೋಗಳ ಚಿತ್ರಗಳನ್ನು ಮಾಡುವುದಾಗಿ ಹೇಳುತ್ತಾರೆ ಗೋಕುಲ್ ರಾಜ್. “ಈಗಾಗಲೇ ಸುದೀಪ್ ಅವರ ಜೊತೆಗೆ ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬೇರೆ ಹೀರೋಗಳ ಜೊತೆಗೂ ಚಿತ್ರ ಮಾಡುವ ಆಸೆ ಇದೆ’ ಎನ್ನುತ್ತಾರೆ ಗೋಕುಲ್ ರಾಜ್.
ಇತ್ತೀಚಿನ ದಿನಗಳಲ್ಲಿ “ಲಿಂಗ’, “ಕಬಾಲಿ, “ಐ’, “ಗೌತಮಿಪುತ್ರ ಶಾತಕರ್ಣಿ’ ಮುಂತಾದ ಹಲವು ಹೈ ಬಜೆಟ್ ಪರಭಾಷಾ ಚಿತ್ರಗಳನ್ನು ವಿತರಣೆ ಮಾಡಿರುವ ಗೋಕುಲ್ ಫಿಲಂಸ್, ವಿತರಣೆ ಕ್ಷೇತ್ರಕ್ಕೆ ಕಾಲಿಟ್ಟಿದ್ದು 90ರ ದಶಕದಲ್ಲಿ. ಡಾ. ವಿಷ್ಣುವರ್ಧನ್ ಅಭಿನಯದ “ಹಾಲುಂಡ ತವರು’ ಚಿತ್ರದ ಮೂಲಕ ವಿತರಕರಾದರು.
ನಂತರದ ದಿನಗಳಲ್ಲಿ “ಲವ್ ಟ್ರೈನಿಂಗ್’, “ಮುತ್ತಣ್ಣ’, “ಗಡಿಬಿಡಿ ಅಳಿಯ’ ಸೇರಿದಂತೆ ಹಲವು ಚಿತ್ರಗಳನ್ನು ವಿತರಣೆ ಮಾಡಿದ್ದರಂತೆ. ನಂತರ ಒಂದು ದೊಡ್ಡ ಗ್ಯಾಪ್‌ನ ನಂತರ, ವಿಕ್ರಮ್ ಅಭಿನಯದ “ಐ’ ಚಿತ್ರದ ಮೂಲಕ ಮತ್ತೆ ವಿತರಣೆಗೆ ಕಾಲಿಟ್ಟಿದ್ದಾರೆ. ಅಲ್ಲಿಂದ ಹಲವು ಚಿತ್ರಗಳನ್ನು ವಿತರಿಸಿರುವ ಅವರು, ಇನ್ನು ಮುಂದೆ ನಿರ್ಮಾಣದಲ್ಲೂ ತೊಡಗಿಸಿಕೊಳ್ಳುತ್ತಿರುವುದೂ ವಿಶೇಷ.