ಗೋಕರ್ಣ : ದಕ್ಷಿಣದ ಕಾಶಿ, ಪ್ರವಾಸಿಗರ ಸ್ವರ್ಗ ಎನಿಸಿಕೊಂಡಿರುವ ಗೋಕರ್ಣಕ್ಕೆ ಈಗ ನೀರಿನ ಬಿಸಿ ತಟ್ಟಿದೆ. ಕಳೆದ ಐದಾರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅತಿಬೇಗ ನೀರಿನ ಅಭಾವಕ್ಕೆ ಒಳಗಾಗಿದ್ದರಿಂದಾಗಿ ಜನರು ಸಾಕಷ್ಟು ಸಂಕಷ್ಟ ಪಡುವಂತಾಗಿದೆ. ಇನ್ನು ಬಹುತೇಕ ಹೊಟೇಲ್, ರೆಸಾರ್ಟ್ ಗಳಲ್ಲಿಯೂ ಕೂಡ ನೀರಿನ ಅಭಾವ ಉಂಟಾಗಿ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಜನರು ಕೂಡ ಕುಡಿಯುವ ನೀರಿಗಾಗಿ ದೂರದ ಪ್ರದೇಶಗಳಿಗೆ ನಡೆದುಕೊಂಡು ತೆರಳಬೇಕು ಅಥವಾ ನಲ್ಲಿ ನೀರಿಗಾಗಿ ಎರಡು ಮೂರು ದಿನ ಕಾಯಬೇಕು ಎನ್ನುವ ಸ್ಥಿತಿ ಅನುಭವಿಸುತ್ತಿದ್ದಾರೆ.
ಗುಂಡಬಾಳ ಯೋಜನೆಯಿಂದಾಗಿ ಈ ಭಾಗದವರಿಗೆ ಜಲ ಜೀವನ್ ಮಿಷನ್ ಯೋಜನೆಯಿಂದ ಪ್ರತಿದಿನ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈಗ ಗುಂಡಬಾಳ ನದಿಯಲ್ಲಿಯೇ ನೀರು ಬತ್ತುತ್ತಿರುವುದರಿಂದಾಗಿ ನೀರಿನ ಪೂರೈಕೆ ಕೂಡ ಕುಂಠಿತಗೊಂಡಿದೆ.
ಬಳಲೆಯಲ್ಲಿ ನಿರ್ಮಿಸಲಾದ ನೀರು ಸಂಗ್ರಹಗಾರದಲ್ಲಿ ಪ್ರತಿದಿನ ನಾಲ್ಕು ಲಕ್ಷ ಲೀ. ನೀರು ಸಂಗ್ರಹಗೊಂಡು ಒಟ್ಟು 1700 ಮನೆಗಳಿಗೆ ಪ್ರತಿದಿನ ನೀರನ್ನು ಬಿಡಲಾಗುತ್ತಿದೆ. ಆದರೆ ನೀರಿನ ತಗ್ಗಿದ್ದರಿಂದಾಗಿ ಸದ್ಯ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಇನ್ನೊಂದಿಷ್ಟು ದಿನ ಕಳೆದರೆ ವಾರಕ್ಕೊಮ್ಮೆ ನೀರು ಬಂದರೂ ಅಚ್ಚರಿಪಡಬೇಕಾಗಿಲ್ಲ.
ಗೋಕರ್ಣ ಭಾಗದಲ್ಲಿ ಹೋಮ್‌ಸ್ಟೇ, ರೆಸಾರ್ಟ್ ಹಾಗೇ ಅನುಕೂಲಸ್ಥರು ತಮ್ಮ ಸಣ್ಣಪುಟ್ಟ ಜಾಗದಲ್ಲಿಯೇ ಕೂಡ ಕೊಳವೆ ಬಾವಿಯನ್ನು ಕೊರೆದು ಯಥೇಚ್ಛವಾಗಿ ನೀರನ್ನು ಬಳಸುತ್ತಿದ್ದರು. ಇದರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ನೀರಿನ ಕ್ಷಾಮ ಕೂಡ ಎದುರಾಗಿದೆ. ಹೀಗಾಗಿ ಇದು ಹೊಟೇಲ್ ನವರಿಗೂ ಈಗ ಬಿಸಿ ತಟ್ಟಿದಂತಾಗಿದೆ.
ಇನ್ನು ಗೋಕರ್ಣ ಗ್ರಾ.ಪಂ.ವ್ಯಾಪ್ತಿಯ ಬಿಜ್ಜೂರು, ಚೌಡಗೇರಿ, ತಲಗೇರಿ, ಬಂಡಿಕೇರಿ ಬಾವಿಗಳಿಂದ ಹಾಗೂ ಆರು ಕೊಳವೆ ಬಾವಿಗಳಿಂದ ಈ ಮೊದಲು ನೀರು ನೀಡಲಾಗುತ್ತಿತ್ತು. ಆದರೆ ನಿರ್ವಹಣೆಯಿಲ್ಲದೇ ಪೈಪ್‌ಲೈನ್ ಸೇರಿದಂತೆ ಇನ್ನಿತರ ಸಮಸ್ಯೆಗಳು ಉಂಟಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಬೇಕಿದೆ.