ಗೋಕಾಕ: ಶರಣರ ವಿಚಾರಧಾರೆಗಳನ್ನು ಸಮಾಜಕ್ಕೆ ಮುಟ್ಟಿಸಲು ಶರಣ ಸಾಹಿತ್ಯ ಪರಿಷತ್ 1986 ರಿಂದ ರಾಜ್ಯದಲ್ಲಿ ಕಾರ್ಯ ಮಾಡುತ್ತಿದೆ ಎಂದು ಸುತ್ತೂರಿನ ವೀರ ಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು ಹೇಳಿದರು.
ಅವರು ಸೋಮವಾರ ನಗರದ ರೋಟರಿ ರಕ್ತ ಭಂಡಾರ ಸಭಾಂಗಣದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅನುಭವ ಮಂಟಪದ ಕಲ್ಪನೆ ಕೊಟ್ಟ ಬಸವಣ್ಣನವರ ಪ್ರತಿಮೆ ಇಂದು ಸಂಸತ್ತಿನಲ್ಲಿ ಸ್ಥಾಪಿತವಾಗಿರುವುದು ಶಣರ ಸಾಹಿತ್ಯವನ್ನು ಎತ್ತಿ ಹಿಡಿದಂತಾಗಿದೆ. ಮನುಷ್ಯನು ಅಂತರಂಗ ಶುದ್ಧಿಗೆ ಮುಂದಾಗಬೇಕು. ಮನುಷ್ಯ ಹೃದಯ ಪರಿಶುದ್ಧ ಮಾಡಿಕೊಂಡು ಬದುಕಬೇಕು. ಆ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ ಕಾರ್ಯ ಮಾಡುತ್ತಿದೆ ಎಂದರು. ಎಲ್ಲ ಸಂಘಟನೆಗಳ ಸಹಕಾರದೊಂದಿಗೆ ಶರಣ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದ ಶ್ರೀಗಳು ಇಲ್ಲಿನ ಶೂನ್ಯ ಸಂಪಾದನ ಮಠದಿಂದ ಈ ಭಾಗದಲ್ಲಿ ಶರಣ ಸಂಸ್ಕೃತಿ ಉತ್ಸವದ ಮೂಲಕ ಶರಣರ ಅನುಭಾವಗಳು ಪ್ರಚಾರ ಮಾಡುತ್ತಿದ್ದಾರೆ.
ಅವುಗಳ ಸದುಪಯೋಗ ಪಡೆದುಕೊಂಡು ಈ ಭಾಗದ ಭಕ್ತರು ಪುನೀತರಾಗಬೇಕು ಎಂದು ಹೇಳಿದರು. ಶ್ರೀ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಶರಣ ಸಾಹಿತ್ಯವನ್ನು ಜಗತ್ತಿಗೆ ತೋರಿಸಿದ ಬಸವಣ್ಣನವರ ಲಿಂಗಾಯತ ಕಲ್ಪನೆಯ ಜ್ಯೋತಿಯ ಬೆಳಕನ್ನು ಸುತ್ತೂರು ಜಗದ್ಗುರುಗಳು ಮನೆ, ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಘೋಡಗೇರಿಯ ಶ್ರೀ ಮಲ್ಲಯ್ಯ ಸ್ವಾಮಿಗಳು ಮಾತನಾಡಿ, ಶರಣ ಸಾಹಿತ್ಯ ಪ್ರಚಾರದ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸುತ್ತಿರುವ ಸುತ್ತೂರು ಮಠದ ಕಾರ್ಯಕ್ಕೆ ನಾವೆಲ್ಲರು ಕೈಜೋಡಿಸೋಣ ಎಂದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ
ಅಶೋಕ ಮಳಗಲಿ, ತಾಲೂಕು ಅಧ್ಯಕ್ಷ ಮಹಾಂತೇಶ ತಾವಂಶಿ, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಅಕ್ಕಿ, ರೋಟರಿ ರಕ್ತ ಭಂಡಾರದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳಿ ಇದ್ದರು. ಕಸಾಪ ತಾಲೂಕು ಅಧ್ಯಕ್ಷೆ ಭಾರತಿ ಮದಬಾವಿ ಸ್ವಾಗತಿಸಿದರು, ಶಿಕ್ಷಕ ಆರ್.ಎಲ್.ಮಿರ್ಜಿ ನಿರೂಪಿಸಿದರು, ಕದಳಿ ಮಹಿಳಾ ತಾಲೂಕು ಅಧ್ಯಕ್ಷೆ ಜಯಾ ಚುನಮರಿ ವಂದಿಸಿದರು.