Advertisement

ಗೋಕಾಕದಾಗ ನಿರುತ್ಸಾಹ ಯಾತಕ?

03:27 PM Apr 03, 2019 | Naveen |

ಗೋಕಾಕ: ಲೋಕಸಭಾ ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದ್ದು, ಬೆಳಗಾವಿ ಲೋಕಸಭಾ ವ್ಯಾಪ್ತಿಯ ಗೋಕಾಕ ಹಾಗೂ ಅರಭಾಂವಿ ಕ್ಷೇತ್ರಗಳನ್ನು ಬಿಟ್ಟು ಉಳಿದೆಡೆ ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿದೆ.

Advertisement

ಈ ಎರಡು ವಿಧಾನಸಭಾ ಮತಕ್ಷೇತ್ರಗಳಲ್ಲಿ ಚುನಾವಣೆಯ ಬಿರುಸೇ ಕಂಡುಬರುತ್ತಿಲ್ಲ. ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹವೇ ಕಂಡು ಬರುತ್ತಿಲ್ಲ. ಇದರಿಂದ ಎಲ್ಲಿಯೂ ಚುನಾವಣೆಯ ಕಾವು ಕಾಣುತ್ತಿಲ್ಲ.

ಸಂಸದ ಸುರೇಶ ಅಂಗಡಿ ಅವರು ಗೋಕಾಕದಲ್ಲಿ ಹಾಗೂ ವಿಧಾನ ಪರಿಷತ್‌ ಸದಸ್ಯ ಕವಟಗಿಮಠ ಅರಭಾಂವಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ಮುಖಂಡ ಅಶೋಕ ಪೂಜಾರಿ ಮತ್ತು ಬ್ಲಾಕ್‌ ಬಿಜೆಪಿ ಅಧ್ಯಕ್ಷರಾದ ಎಸ್‌.ವಿ. ದೇಮಶೆಟ್ಟಿ ಹಾಗೂ ವಿರುಪಾಕ್ಷಿ ಯಲಿಗಾರ ಅವರು ನಿರ್ಲಿಪ್ತರಾಗಿದ್ದಾರೆ. ಹೀಗಾಗಿ ಗ್ರಾಮಾಂತರ ಪ್ರದೇಶದ ಪಕ್ಷದ ಕಾರ್ಯಕರ್ತರು ಚುನಾವಣೆಗೆ ಇನ್ನೂ ಸಜ್ಜುಗೊಂಡಿಲ್ಲವೇನೋ ಎನಿಸುತ್ತಿದೆ.

ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿಯೂ ಅದೇ ಪರಿಸ್ಥಿತಿ ಕಂಡು ಬರುತ್ತಿದೆ. ಕಾಂಗ್ರೆಸ್‌ನ ಭದ್ರ ಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಚಾರ ಕಾರ್ಯ ಈವರೆಗೆ ಪ್ರಾರಂಭಿಸಿಯೇ ಇಲ್ಲ. ಸಚಿವ ಸತೀಶ ಜಾರಕಿಹೊಳಿ ಅವರು ನಗರಕ್ಕೆ ಬಂದು ತಮ್ಮ ಬೆಂಬಲಿಗರ ಸಭೆ ಕರೆದು ಪಕ್ಷಪರ ಪ್ರಚಾರ ಮಾಡುವಂತೆ ತಿಳಿಸಿದ್ದರೂ ಈ ಸಭೆಗೆ ನಗರಸಭೆ ನೂತನ ಚುನಾಯಿತರು ಗೈರು ಹಾಜರು ಇರುವುದನ್ನು ಕಂಡರೆ ಕಾಂಗ್ರೆಸ-ಜೆಡಿಎಸ್‌ ಮೈತ್ರಿ ಸರಕಾರದ ಬಗ್ಗೆ ಮುನಿಸಿಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ನಡೆ ಎತ್ತ ಕಡೆ ಎನ್ನುವ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ| ವಿ.ಎಸ್‌.ಸಾಧುನವರ ಅವರಿಗೆ ಟಿಕೆಟ್‌ ಘೋಷಣೆಯಾದ ನಂತರ ಇಲ್ಲಿವರೆಗೆ ಗೋಕಾಕ ಮತಕ್ಷೇತ್ರಕ್ಕೆ ಅವರು ಬಂದಿಲ್ಲ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸ್ಥಳೀಯ ಶಾಸಕ ರಮೇಶ ಜಾರಕಿಹೊಳಿ ಅವರು ಪಾಲ್ಗೊಳ್ಳದೇ ಇರುವುದು ಮತ್ತು ಈವರೆಗೆ ತಮ್ಮ ನಿರ್ಧಾರ ಪ್ರಕಟಿಸದೇ ಇರುವುದು ಹಲವಾರು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಬೆಳಗಾವಿ ಜಿಲ್ಲೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವ ಜಾರಕಿಹೊಳಿ ಸಹೋದರರು ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಹಾಗೂ ಜಿಲ್ಲಾ ಪ್ರತಿಷ್ಠೆಯ ವಿಷಯದಲ್ಲಿ ನೊಂದಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸದೇ ತಮ್ಮ ನಡೆಯನ್ನು ನಿಗೂಢವಾಗಿಟ್ಟಿರುವುದು ಕಾಂಗ್ರೆಸ್‌ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.

Advertisement

ಲೋಕಸಭಾ ಚುನಾವಣೆ ಲಕ್ಷಣವೇ ಕ್ಷೇತ್ರದಲ್ಲಿ ಕಂಡು ಬರುತ್ತಿಲ್ಲ. ಕಾರ್ಯಕರ್ತರಲ್ಲಿಯೂ ಹುಮ್ಮಸ್ಸು ಕಂಡು ಬರುತ್ತಿಲ್ಲ ಎಂದು ಜನ ಗೊಂದಲಕ್ಕೀಡಾಗಿದ್ದಾರೆ. ಪಕ್ಷಗಳ ಚಟುವಟಿಕೆಗಳು ಕಂಡು ಬಾರದೇ ಜಿಲ್ಲಾಡಳಿತದಿಂದ ಮತದಾನ ಜಾಗೃತಿಗೆ ಜಾಥಾ ಕಾರ್ಯಕ್ರಮಗಳ ಮೂಲಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದರೂ ಈಗಿನ ಪರಿಸ್ಥಿತಿ ಅವಲೋಕಿಸಿದರೆ ಮತದಾನ ಕಡಿಮೆ ಆಗುವ ಸಂಶಯ ವ್ಯಕ್ತವಾಗುತ್ತಿದೆ.

ಎಲ್ಲೆಡೆ ಗೊಂದಲ
ಗೋಕಾಕ ಮತಕ್ಷೇತ್ರವು ಜಾರಕಿಹೊಳಿ ಸಹೋದರರಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದರೂ ರಮೇಶ ಅವರ ಅಸಮಾಧಾನದಿಂದಾಗಿ ಕಾಂಗ್ರೆಸ್‌ ಪಕ್ಷದ ಯಾವುದೇ ರಾಜಕೀಯ ಚಟುವಟಿಕೆಗಳು ಇನ್ನುವರೆಗೂ ನಡೆದಿಲ್ಲ. ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಬೆಂಬಲಿಗರ ಮುಂದೆಯೂ ತಮ್ಮ ನಡೆ ಏನೆಂಬುದನ್ನು ಬಗ್ಗೆ ಸ್ಪಷ್ಟಪಡಿಸದೇ ಇರುವುದು ಗೊಂದಲಕ್ಕೆ ಕಾರಣ.

ಮಲ್ಲಪ್ಪ ದಾಸಪ್ಪಗೋಳ

Advertisement

Udayavani is now on Telegram. Click here to join our channel and stay updated with the latest news.

Next