ಗೋಕಾಕ: ಗೋಕಾಕದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರ ಬೆಂಬಲಿಗರಾದ ತಾಪಂನ 23 ಕಾಂಗ್ರೆಸ್ ಸದಸ್ಯರು ಬುಧವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಾಪಂ ಸಭಾಭವನದಲ್ಲಿ ಬುಧವಾರ ಬೆಳಗ್ಗೆ ಸಭೆ ನಡೆಸಿದ ಗೋಕಾಕ ಹಾಗೂ ಅರಭಾಂವಿ ವಿಧಾನಸಭಾ ಮತಕ್ಷೇತ್ರದ ತಾಪಂ ಸದಸ್ಯರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿ ತಮ್ಮ ರಾಜೀನಾಮೆ ಪತ್ರವನ್ನು ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಅವರಿಗೆ ಕಳಿಸಿದ್ದಾರೆ.
ಒಟ್ಟು 42 ಸದಸ್ಯರ ಬಲಾಬಲ ಹೊಂದಿರುವ ಗೋಕಾಕ ತಾಪಂನಲ್ಲಿ ಕಾಂಗ್ರೆಸ್ 23 ಸದಸ್ಯರನ್ನು ಹೊಂದಿದೆ. ಉಳಿದಂತೆ 19 ಬಿಜೆಪಿ ಸದಸ್ಯರಿದ್ದಾರೆ. ಈಗಿನ ರಾಜಕೀಯ ವಿದ್ಯಮಾನಗಳು ಹಾಗೂ ಕಾಂಗ್ರೆಸ್ ಪಕ್ಷದ ಏಕಪಕ್ಷೀಯ ನಿರ್ಧಾರ ತಮ್ಮ ರಾಜೀನಾಮೆಗೆ ಕಾರಣ. ರಾಜೀನಾಮೆಗೆ ಯಾವುದೇ ರಾಜಕೀಯ ಒತ್ತಡ ಇಲ್ಲ. ಇನ್ನು ಮುಂದೆ ನಮ್ಮದೇ ಆದ ಬಣ (ಪಕ್ಷೇತರ) ರಚಿಸಿ ಕಾರ್ಯನಿರ್ವಹಿಸುತ್ತೇವೆ ಎಂದು ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ ಸೇರಿದಂತೆ ಎಲ್ಲ 23 ಸದಸ್ಯರು ಪತ್ರದಲ್ಲಿ ತಿಳಿಸಿದ್ದಾರೆ.
ರಾಜೀನಾಮೆ ನೀಡಿದವರಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದ 18 ಹಾಗೂ ಅರಭಾಂವಿ ಕ್ಷೇತ್ರದ 5 ಕಾಂಗ್ರೆಸ್ ಸದಸ್ಯರು ಸೇರಿದ್ದಾರೆ. ನಮ್ಮ ನಾಯಕರು ಯಾರು ಎಂಬ ಗೊಂದಲದಲ್ಲಿ ನಾವಿದ್ದೇವೆ. ನಮ್ಮ ಮುಂದಿನ ನಡೆಯನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸುತ್ತೇವೆ ಎಂದು ತಾಪಂ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಗೋಕಾಕ ತಾಪಂನ 23 ಸದಸ್ಯರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡಿರುವುದು ಗಮನಕ್ಕೆ ಬಂದಿದೆ. ಸದಸ್ಯರು ತಮ್ಮ ರಾಜೀನಾಮೆ ಪತ್ರವನ್ನು ನನ್ನ ವಾಟ್ಸ್ ಆ್ಯಪ್‌ಗೆ ಕಳಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಖಚಿತ ಪಡಿಸಿದರು.
ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹಾಗೂ ಅವರ ಸಹೋದರ ಲಖನ್ ಜಾರಕಿಹೊಳಿ ಅವರ ಮೂಲಕ ಗೋಕಾಕ ಕ್ಷೇತ್ರದಲ್ಲಿ ಈಗಾಗಲೇ ಭರ್ಜರಿ ಪ್ರಚಾರ ನಡೆಸಿದ್ದ ಕಾಂಗ್ರೆಸ್‌ಗೆ ಈಗ ಚುನಾವಣೆ ಹೊಸ್ತಿಲಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರ ಸಾಮೂಹಿಕ ರಾಜೀನಾಮೆ ಬಹಳ ದೊಡ್ಡ ಆಘಾತ ನೀಡಿದೆ. ಈ ಮಧ್ಯೆ ಸಾಮೂಹಿಕ ರಾಜೀನಾಮೆ ನೀಡಿರುವ ಎಲ್ಲ ತಾಲೂಕು ಪಂಚಾಯತ್ ಸದಸ್ಯರು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸಭೆ ನಡೆಸಿರುವುದು ಗೋಕಾಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.