ಗೋಕಾಕ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪರ ಹಾಗೂ ವಿರೋಧ ಪ್ರತಿಭಟನೆಗಳು ಬುಧವಾರ ಬಸವೇಶ್ವರ ವೃತ್ತದಲ್ಲಿ ನಡೆದವು.
ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿ ಸಿದಂತೆ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಶಿ ಗಡಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿ ಟಿವಿ ಮಾಧ್ಯಮ ಹಾಗೂ ವಾಟ್ಸ್ ಆ್ಯಪ್‌ದಲ್ಲಿ ಪ್ರಕಟವಾಗಿದ್ದು, ಈ ಪ್ರಕರಣನ್ನು ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಶಾಸಕ ಜಾರಕಿಹೊಳಿಯವರ ನಡೆ ಜನರು ತಲೆ ತಗ್ಗಿಸುವಂತೆ ಮಾಡಿದೆ ಎಂದು ಆರೋಪಿಸಿದರು.
ಮಾ. 9ರಂದು ಗೋಕಾಕ ಬಂದ್ ಮಾಡುವುದಾಗಿ ಜಾರಕಿಹೊಳಿ ವಿರೋಧಿಗಳು ಎಚ್ಚರಿಕೆ ನೀಡಿದ್ದರು. ಸಚಿವ ಸ್ಥಾನಕ್ಕೆ ರಮೇಶ ರಾಜೀನಾಮೆ ನೀಡುತ್ತಿದ್ದಂತೆ ಅವರ ವಿರೋಧಿಗಳು ಪಟಾಕಿ ಸಿಡಿಸಿ ಸಂಭ್ರಮಿಸಲು ಮುಂದಾದಾಗ ಪೊಲೀಸರು ಕಾನೂನು ಸುವ್ಯವಸ್ಥೆ ಬಗ್ಗೆ ಹೇಳಿ ಇದನ್ನು ತಡೆದರು.
ನಂತರ ಬಸವೇಶ್ವರ ವೃತ್ತದಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಸಚಿವ ರಮೇಶ ನೀಡಿದ ರಾಜೀನಾಮೆಯನ್ನು ಅಂಗೀಕಾರ ಮಾಡಬಾರದು. ಇದರ ಸತ್ಯಾಸತ್ಯತೆ ತನಿಖೆ ನಡೆಸಿ ಪ್ರಕರಣದ ಹಿಂದಿರುವ ಕುತಂತ್ರಿಗಳ ಹೆಸರು ಬಯಲು ಮಾಡಬೇಕು ಎಂದು ಆಗ್ರಹಿಸಿ ರಸ್ತೆ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಂತರ ರಮೇಶ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿ ತಮ್ಮ ಅಭಿಮಾನ ಮೆರೆದರು.
ಇಂದೊಂದು ರಾಜಕೀಯ ಪ್ರೇರಿತ ಆರೋಪವಾಗಿದ್ದು, ರಮೇಶ ಜಾರಕಿಹೊಳಿ ಅವರ ಏಳ್ಗೆಯನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಡೆಸಿದ ಕುತಂತ್ರವಾಗಿದೆ. ವಿವಾದಿತ ಸಿಡಿ ಕುರಿತು ಸಂಪೂರ್ಣವಾಗಿ ತನಿಖೆಯಾಗುವವರೆಗೂ ಸಚಿವ ರಮೇಶ ಜಾರಕಿಹೊಳಿ ಅವರ ರಾಜೀನಾಮೆ ಅಂಗೀಕಾರ ಮಾಡಬಾರದು. ತನಿಖೆಯನ್ನು ಸಿಬಿಐ ಅಥವಾ ಸಿಒಡಿಗೆ ವಹಿಸಬೇಕು. ಇದೊಂದು ವ್ಯವಸ್ಥಿತ ರಾಜಕೀಯ ಪಿತೂರಿಯಾಗಿದೆ. ರಾಜಕೀಯ ಷಡ್ಯಂತ್ರದಿಂದಾಗಿ ನಡೆಸಿರುವ ಕುತಂತ್ರವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗೋಕಾಕ ನಗರದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್‌ಪಿ ಅಮರನಾಥ ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಠಿಕಾಣಿ ಹೂಡಿದ್ದಾರೆ. ನಗರದೆಲ್ಲೆಡೆ ಗಸ್ತು ತಿರುಗುತ್ತಿದ್ದು, ಹೆಚ್ಚಿನ ಭದ್ರತೆಗಾಗಿ ಬೇರೆ ಕಡೆಗಳಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.