ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಗ್ರಾಮ ಪಂಚಾಯಿತಿಗೆ 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಗೊಜನೂರ ಗ್ರಾಮ ಪಂಚಾಯಿತಿ 2013-14ನೇ ಸಾಲಿನಲ್ಲೂ ಈ ಪುರಸ್ಕಾರಕ್ಕೆ ಪಾತ್ರವಾಗಿತ್ತು.
ಗೊಜನೂರ ಗ್ರಾಪಂ ವಿಶೇಷತೆ: ಗೊಜನೂರ, ಅಕ್ಕಿಗುಂದ, ಅಕ್ಕಿಗುಂದ ತಾಂಡಾ 3 ಗ್ರಾಮಗಳನ್ನೊಳಗೊಂಡು ಒಟ್ಟು 5508 ಜನಸಂಖ್ಯೆ ಹೊಂದಿದೆ. ಒಟ್ಟು 13 ಜನ ಗ್ರಾಪಂ ಸದಸ್ಯರನ್ನು ಒಳಗೊಂಡಿದೆ. 2020-21ರಲ್ಲಿ ಗ್ರಾಮ ಪಂಚಾಯತಿ ನಮ್ಮ ಗ್ರಾಮ ನಮ್ಮ ಯೋಜನೆಯಡಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ಲ್ಯಾನ್ ಪ್ಲಸ್, ಇ-ಗ್ರಾಮ ಸ್ವರಾಜ ತಂತ್ರಾಂಶಗಳ ಮೂಲಕ ಶೇ.100 ರಷ್ಟು ಅನುಷ್ಠಾನಗೊಳಿಸಿ ವಿಶೇಷವೆನಿಸಿದೆ.
ನರೇಗಾ ಯೋಜನೆಯಡಿ ಗ್ರಾಪಂ ವ್ಯಾಪ್ತಿಯ 2275 ನೊಂದಾಯಿತ ಕೂಲಿಕಾರ್ಮಿಕರಿಗೆ ಸಕಾಲದಲ್ಲಿ ಕೆಲಸ ನೀಡಿ ನಿಗದಿತ ಸಮಯಕ್ಕೆ ಕೂಲಿ ಹಣ ಪಾವತಿಸಲಾಗಿದೆ. ವಾರ್ಷಿಕ ಮಾನವ ದಿನಗಳ ಸೃಜನೆಯ ಗುರಿಯನ್ನು ಶೇ.100 ರಷ್ಟು ಪ್ರಗತಿ ಸಾ ಶಿಸಿರುವುದು, ಸ್ವತ್ಛ ಭಾರತ ಯೋಜನೆಯಡಿ ಬಯಲು ಬಹಿರ್ದೆಸೆ ಮುಕ್ತ ಮಾಡಿರುವುದು ಗಮನಾರ್ಹ. ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿ ಇಳಿಜಾರು ಬದು ಯೋಜನೆಯಡಿ ಗ್ರಾಮದ ಬಹುತೇಕ ರೈತರ ಜಮೀನುಗಳಲ್ಲಿ ಬದು ನಿರ್ಮಾಣ ಮಾಡಲಾಗಿದೆ.
ಗ್ರಾಪಂ ವ್ಯಾಪ್ತಿಯ 5 ಸರ್ಕಾರಿ ಶಾಲೆ, 1ಮೊರಾರ್ಜಿ ವಸತಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳಲ್ಲಿ ಶೇ.80 ರಷ್ಟು ಮನೆ ನಿರ್ಮಾಣದಲ್ಲಿ ಪ್ರಗತಿ ಸಾ ಧಿಸಿರುವುದು, ಲಭ್ಯವಿರುವ ಪೌರಕಾರ್ಮಿಕರನ್ನು ಬಳಸಿಕೊಂಡು ಗ್ರಾಮ ನೈರ್ಮಲ್ಯ ಕಾಪಾಡುವ ಮತ್ತು ಜನಜಾಗೃತಿ ಮೂಡಿಸುವಲ್ಲಿ ಸ್ಥಳೀಯ ಗ್ರಾಪಂ ಯಶಸ್ವಿಯಾಗಿದೆ. ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಗ್ರಾಮದ ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಸುತ್ತಿರುವುದು, ಸ್ವತ್ಛತೆ, ಪ್ಲಾಸ್ಟಿಕ್ ನಿಷೇಧ ಹಾಗೂ ತ್ಯಾಜ್ಯ ವಿಲೇವಾರಿ ನಿರ್ವಹಣೆ ಮತ್ತು ಜಾಗೃತಿ. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡಿರುವ ಪಂಚಾಯತ್‌ರಾಜ್ ಇಲಾಖೆ ಗೊಜನೂರ ಗ್ರಾಪಂಯನ್ನು 2ನೇ ಬಾರಿಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.