Advertisement

ಏನೋ ಮಾಡಲು ಹೋಗಿ, ಏನೋ ಆಯಿತಲ್ಲ…

10:24 AM Oct 15, 2019 | Lakshmi GovindaRaju |

ಮಕ್ಕಳಿಲ್ಲದ ಬಡ ಕುಟುಂಬ ಮತ್ತು ಶ್ರೀಮಂತ ಕುಟುಂಬ ಎರಡು ಜೋಡಿ ಬಾಬಾ ಮಂದಿರಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದಂತೆ, ದೈವಾನುಗ್ರಹವೆಂಬಂತೆ ಎರಡೂ ಕುಟುಂಬದಲ್ಲೂ ಏಕಕಾಲಕ್ಕೆ ಎರಡು ಗಂಡು ಮಕ್ಕಳು ಹುಟ್ಟುತ್ತವೆ. ಬಡ ಕುಟುಂಬದಲ್ಲಿ ಹುಟ್ಟಿದ ಹುಡುಗ ಬುದ್ದಿವಂತನಾಗಿ ಬೆಳೆದರೆ, ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಹುಡುಗ ವಿಕಲಚೇತನನಾಗಿ ಬೆಳೆಯುತ್ತಾನೆ. ಬಡ ಕುಟುಂಬದ ಹುಡುಗ ವಯಸ್ಸಿಗೂ ಮೀರಿದ ಬುದ್ದಿವಂತಿಕೆ ಪ್ರದರ್ಶಿಸಿದರೆ, ಶ್ರೀಮಂತ ಕುಟುಂಬದ ಹುಡುಗ ಮನೆಯವರಿಗೆ ಹೊರೆಯಾಗಿ ಬೆಳೆಯುತ್ತಾನೆ.

Advertisement

ಕೊನೆಯಲ್ಲಿ ಬುದ್ದಿವಂತ ಮತ್ತು ವಿಕಲಚೇತನ ಈ ಇಬ್ಬರು ಹುಡುಗರು ಒಂದಾಗುತ್ತಾರೆ. ಇದರ ಮಧ್ಯೆ ಸಂಬಂಧವೇ ಇಲ್ಲದ ಒಂದಷ್ಟು ಪಾತ್ರಗಳು, ಮಾರುದ್ದ ಭಾಷಣಗಳು! ಇದು ಈ ವಾರ ತೆರೆಗೆ ಬಂದಿರುವ “ಜ್ಞಾನಂ’ ಚಿತ್ರದ ಕಥೆಯ ಎಳೆ. ಅದು ಹೇಗೆ ಅನ್ನೋದು ನೋಡಬೇಕಾದರೆ (ಬಿಡುವಿದ್ದರೆ) ನೀವು ಎರಡು ಗಂಟೆ ಸಮಯ ತೆಗೆದಿಡಬೇಕು. ಯಾವುದೇ ಚಿತ್ರವಿರಲಿ ಅದಕ್ಕೆ ಜೀವಾಳ ಅಂದ್ರೆ ಕಥೆ, ಚಿತ್ರಕಥೆ, ಸಂಭಾಷಣೆ.

ಇವಿಷ್ಟು ಮೂಲ ಅಂಶಗಳನ್ನು ಇಟ್ಟುಕೊಂಡು, ನಿರ್ದೇಶಕ ಹೇಗೆ ಪ್ರೇಕ್ಷಕರ ಗಮನ ಸೆಳೆ ತೆರೆಮೇಲೆ ನಿರೂಪಣೆ ಮಾಡುತ್ತಾನೆ, ಅದು ಪ್ರೇಕ್ಷಕ ಪ್ರಭುಗಳಿಗೆ ಎಷ್ಟು ಇಷ್ಟವಾಗುತ್ತದೆ ಅನ್ನೋದರ ಮೇಲೆ ಚಿತ್ರವೊಂದರ ಹಣೆಬರಹ ಅಡಗಿರುತ್ತದೆ. ಹಾಗಾಗಿ ನಿರ್ದೇಶಕನಿಗೆ ತಾನು ಹೇಳಲು ಹೊರಟಿರುವ ವಿಷಯದ ಬಗ್ಗೆ ಸ್ಪಷ್ಟತೆ ಇರಬೇಕಾಗುತ್ತದೆ. ಇಲ್ಲದಿದ್ದರೆ, ತಾನೂ ಗೊಂದಲದಲ್ಲಿ ಬಿದ್ದು, ನೋಡುಗರನ್ನು ಗೊಂದಲದಲ್ಲಿ ಬೀಳಿಸಿ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ. ಬಹುಶಃ “ಜ್ಞಾನಂ’ ಚಿತ್ರದ ವಿಷಯದಲ್ಲೂ ಇದೇ ರೀತಿ ಆದಂತಿದೆ.

ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರೂಪಣೆ ಯಾವುದರಲ್ಲೂ ನೀವು ಏನನ್ನೂ ನಿರೀಕ್ಷಿಸುವಂತಿಲ್ಲ. ಚಿತ್ರದಲ್ಲಿ ಏನಾಗುತ್ತದೆ ಎನ್ನುವುದು ಅರ್ಥವಾಗುವ ಹೊತ್ತಿಗೆ, ಇತ್ತ ಮಕ್ಕಳಿಗೂ ಸಲ್ಲದ, ಅತ್ತ ದೊಡ್ಡವರಿಗೂ ಸಲ್ಲದ “ಜ್ಞಾನಂ’ಗೆ ಪ್ರೇಕ್ಷಕರು ಸುಸ್ತುಬಡಿದಿರುತ್ತಾರೆ. ಸಿನಿಮಾ ಮೇಕಿಂಗ್‌ ಬಗ್ಗೆ ಅಧ್ಯಯನ, ಅನುಭವ ಕೊರತೆಯಿದ್ದರೆ, ಎಂಥ ಚಿತ್ರಗಳು ಹೊರಬಹುದು ಅನ್ನೋದಕ್ಕೆ “ಜ್ಞಾನಂ’ ಇತ್ತೀಚಿನ ತಾಜಾ ಉದಾಹರಣೆ. ಕೇವಲ ಪ್ರಚಾರ, ಪ್ರಶಸ್ತಿಗಳ, ಸರ್ಕಾರದ ಸಬ್ಸಿಡಿ ಬೆನ್ನತ್ತಿ ಹೊರಟರೆ ಅಂಥ ಚಿತ್ರಗಳು ಎಂದಿಗೂ ಜನಮಮಾನಸದಲ್ಲಿ ಉಳಿಯುವುದಿಲ್ಲ.

ಚಿತ್ರ: ಜ್ಞಾನಂ
ನಿರ್ಮಾಣ: ವಸಂತ ಸಿನಿ ಕ್ರಿಯೇಷನ್ಸ್‌
ನಿರ್ದೇಶನ: ವರದರಾಜ್‌ ವೆಂಕಟಸ್ವಾಮಿ
ತಾರಾಗಣ: ಶೈಲಶ್ರೀ ಸುದರ್ಶನ್‌, ಪ್ರಣಯಮೂರ್ತಿ, ಮಾಸ್ಟರ್‌ ಲೋಹಿತ್‌, ಮಾಸ್ಟರ್‌ ಧ್ಯಾನ್‌, ವೇಣು ಭಾರದ್ವಾಜ್‌, ಸಂತೋಷ್‌ ಕುಮಾರ್‌, ರಾಧಿಕಾ ಶೆಟ್ಟಿ, ಆಶಾ ಸುಜಯ್‌, ಅನಿಲ್‌ ಕುಮಾರ್‌ ಮತ್ತಿತರರು.

Advertisement

* ಜಿ.ಎಸ್‌.ಕೆ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next