Advertisement

ಮನೆಗೆ ಹೋಗಿದ್ದು ನಿಜ ಮನಸು ಕೊಡಲಿಲ್ಲ

06:00 AM Jul 03, 2018 | Team Udayavani |

ಹೆಣ್ಣು ನೋಡಲೆಂದು ನಾನು ಹೋಗಿದ್ದು ನಿಜ. ಅವರ ಮನೇಲಿ ಟೀ ಕುಡಿದಿದ್ದೂ ನಿಜ. ಆದರೆ, ಅದರಿಂದಾಚೆಗೆ ಆ ಸಂಬಂಧ ಮುಂದುವರಿಯಲಿಲ್ಲ. ಅವತ್ತು ಹೆಚ್ಚಿನ ಮಾತುಕತೆಯೂ ನಡೆಯಲಿಲ್ಲ…

Advertisement

ಎಲ್ಲಿದ್ದೀಯಾ ಗೂಬೆ? ನಿನ್ನೆ ಎದುರಿಗೆ ಬಂದವಳು ನನ್ನನ್ನು ನೋಡಿಯೂ ನೋಡದವಳಂತೆ ಮುಖ ಊದಿಸಿಕೊಂಡು ಹೊರಟು ಹೋದಾಗಲೇ ಗೊತ್ತಾಯ್ತು, ನಿನಗೆ ಸಿಟ್ಟು ಬಂದಿದೆ ಅಂತ.

ಹಿಂದೆಯೇ ಬಂದು ನಿನ್ನನ್ನು ತಡೆದು ನಿಲ್ಲಿಸಿ, ಯಾಕೆ ಹೀಗೆಲ್ಲಾ ಸಿಡಿಮಿಡಿ ಅಂತಿದೀಯ? ಅಂತ ಕೇಳಿ ಬಿಡುವಷ್ಟು ಸಿಟ್ಟು ನನಗೂ ಬಂದಿತ್ತು. ಆದರೆ, ಪಕ್ಕದಲ್ಲಿ ಚಿಕ್ಕಮ್ಮ ಇದ್ದಳು. ಹಾಗಾಗಿ ದುಡುಕಿ ಕೂಗಾಡಬಾರದು. ಸೀನ್‌ ಕ್ರಿಯೇಟ್‌ ಮಾಡಬಾರದು ಎಂದು ನನ್ನನ್ನು ನಾನೇ ನಿಗ್ರಹಿಸಿಕೊಂಡೆ. ನನಗೆ ಗೊತ್ತು, ನಿನಗೆ ನೋವಾಗಿದೆ. ಸಿಟ್ಟು ಬಂದಿದೆ ಅಂತ. ಆದರೆ, ನಾನೇನು ಮಾಡಲಿ ಹೇಳು? ಅವರ ಮನೆಗೆ ಹೋಗೋ ವಿಚಾರವನ್ನು, ಅವರ ಮನೆಗೆ ಹೋಗುವವರೆಗೂ ನನಗೆ ಯಾರೂ ಹೇಳಿರಲಿಲ್ಲ! ನಿನ್ನ ಅನುಮಾನ ನಿಜ. ಮೊನ್ನೆ “ಅವರ ಮನೆಗೆ’ ನಾನು ಹೆಣ್ಣು ನೋಡಲು ಹೋದದ್ದು ನಿಜ. ಅವರು ನನಗೆ ಚಹಾ ಕೊಟ್ಟಿದ್ದೂ ನಿಜ. ಆದರೆ, ನಮ್ಮಿಬ್ಬರ ಪ್ರೀತಿಯ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ಹುಡುಗಿಯನ್ನು ಕಣ್ಣೆತ್ತಿಯೂ ನೋಡಲಿಲ್ಲ!

ಅಲ್ಲಿಂದ ಮನೆಗೆ ಬಂದ ಮೇಲೆ ಕಣ್ಣೀರಲ್ಲೆ ಸ್ನಾನ ಮಾಡಿಬಿಟ್ಟೆ ನಾನು. ಹಿಂದಿನಿಂದ ಬಂದು ಭುಜದ ಮೇಲೆ ಕೈ ಇಟ್ಟ ಅಮ್ಮ, ಕಣ್ಣೀರು ನೋಡಿ “ಯಾಕೋ ಮಗನೇ, ಯಾರನ್ನಾದರೂ ಪ್ರೀತಿಸ್ತಿದ್ದೀಯಾ?’ ಅಂತ ಕೇಳಿದರು. ಹೌದೆನ್ನುವಂತೆ ತಲೆ ಆಡಿಸಿದೆ. ಆ ಕ್ಷಣವೇ, ನನ್ನೆದುರಿಗೇ ಹೆಣ್ಣಿನ ಕಡೆಯವರಿಗೆ ಕಾಲ್‌ ಮಾಡಿ, ಈ ಸಂಬಂಧ ಮುಂದುವರಿಸುವುದು ಬೇಡ ಅಂತ ಹೇಳಿಯೇಬಿಟ್ಟರು. ಅಮ್ಮನನ್ನು ತಬ್ಬಿಕೊಂಡು, ಖುಷಿಯಿಂದ ಇನ್ನೊಂದು ಸುತ್ತು ಅತ್ತು ಹಗುರಾಗಿಬಿಟ್ಟೆ. ಅಮ್ಮ, “ಅವಳಾರೋ ನಿನ್ನ ಮನಸಲ್ಲಿರೋ ಹುಡುಗಿ? ಅವಳನ್ನ ಮನೆಗೆ ಕರೆಸಪ್ಪ. ನೋಡ್ಬೇಕು’ ಅಂದರು.

ಇಷ್ಟೇ ಕಣೇ ಗೂಬೆ ಅವತ್ತು ಆಗಿದ್ದು. ಇಷ್ಟಕ್ಕೇ ನೀನು, ಬೇರೊಬ್ಬಳೊಂದಿಗೆ ನನ್ನ ಮದುವೆಯೇ ಆಗಿ ಹೋಯೆ¤àನೋ ಅನ್ನೋ ಥರ ಆಡ್ತಿದ್ದೀಯಲ್ಲಾ. ನಿನ್ನನ್ನು ಅಷ್ಟೊಂದು ಪ್ರೀತಿಸಿ, ಇವತ್ಯಾರೋ ಸುಂದರ ಹುಡುಗಿ ಸಿಕ್ಕಿದಳು ಅಂತ ಒಪ್ಪಿ ಮದುವೆಯಾಗಿ ಹೊರಟು ಹೋಗುವಷ್ಟು ಕೆಟ್ಟ ಹುಡುಗನಾ ನಾನು? ಸರಿಯಾಗಿ ಕೇಳಿಸಿಕೋ.. ನೀನೇ ನನ್ನ ಜೀವ ಎಂದು ಹೇಳಿ ಆಗಲೇ ಎರಡು ವರ್ಷ ಕಳೀತು. ಈ ಎರಡು ವರ್ಷದಲ್ಲಿ ಒಂದೇ ಒಂದು ನಿಮಿಷಕ್ಕೂ ನನಗೆ ಬೇಜಾರಾಗಿಲ್ಲ… ಆಡಿದ ಮಾತು, ನೋಡಿದ ಸಿನಿಮಾ, ನಕ್ಕ ನಗೆಗಳಿಗೆ ಲೆಕ್ಕ ಸಿಕ್ಕಿಲ್ಲ. ನಿನ್ನಂಥ ಹುಡುಗಿಯನ್ನು ಬಿಟ್ಟು ಈ ಬದುಕಲ್ಲಿ ಬೇರೆ ಯಾರನ್ನೂ ನಾನು ಕಲ್ಪಿಸಿಕೊಳ್ಳುವುದೂ ಇಲ್ಲ..

Advertisement

ಅಕಸ್ಮಾತ್‌ ನಾನೇನಾದರೂ ಗರಿಗರಿ ರೇಷ್ಮೆ ಪಂಚೆ ಉಟ್ಟು ಕೂರುವುದಾದರೆ ಅದು ನಿನ್ನ ಪಕ್ಕದಲ್ಲಿ ಮಾತ್ರ… ನಾನು ನನ್ನನ್ನು ಎಷ್ಟು ಪ್ರೀತಿಸಿಕೊಳ್ಳುತ್ತೇನೋ ಗೊತ್ತಿಲ್ಲ. ಆದರೆ, ನಿನ್ನನ್ನು ನನಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ.
ಇಂತಿ ನಿನ್ನ 

ರವಿತೇಜ ಚಿಗಳಿಕಟ್ಟೆ      

Advertisement

Udayavani is now on Telegram. Click here to join our channel and stay updated with the latest news.

Next