ರಾಮನಗರ: ಕೋವಿಡ್-19 ಸೋಂಕು ಹರಡದಂತೆ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿದ್ದ ಲಾಕ್‌ಡೌನ್‌ನಿಂದಾಗಿ ಧಾರ್ಮಿಕ ಸ್ಥಳ ಹಾಗೂ ದೇವಸ್ಥಾನಗಳನ್ನು ಮುಚ್ಚಲಾಗಿತ್ತು. ಸುಮಾರು 80 ದಿನಗಳ ನಂತರ ಸರ್ಕಾರ ದೇವಾಲಯಗಳ ಅನ್‌ಲಾಕ್‌ಗೆ ಮುಂದಾಗಿದ್ದು, ಜೂನ್ 8ರಿಂದ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ.
ಆದರೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವಂತಹ ದೇವಾಲಯಗಳು ವಿಶೇಷ ವಾಗಿ ಎ ಕ್ಯಾಟಗರಿ ದೇವಾಲಯಗಳು ಸೋಮವಾರವೇ ತೆರೆಯುವುದು ಅನುಮಾನ. ಕಾರಣ ಜಿಲ್ಲಾಧಿಕಾರಿಗಳ ಆದೇಶ ಇನ್ನೂ ಹೊರ ಬಿದ್ದಿಲ್ಲ. ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರದ ಶ್ರೀ ಚಾಮುಂಡೇಶ್ವರಿ, ಶ್ರೀ ಬನ್ನಿಮಹಾಕಾಳಿ ಅಮ್ಮನವರು, ಶ್ರೀ ಬಲಮುರಿ ಗಣಪತಿ ದೇವಾಲಯ, ಕೈಲಾಂಚ ಹೋಬಳಿ ಎಸ್‌ಆರ್ ಎಸ್ ಕ್ಷೇತ್ರ,
ಚನ್ನಪಟ್ಟಣದ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ, ಶ್ರೀ ಅಪ್ರಮೇಯ ಸ್ವಾಮಿ, ಕನಕಪುರದ ಶ್ರೀ ಕಬ್ಟಾಳಮ್ಮ ದೇವಾಲ ಯ, ಶ್ರೀ ಕಲ್ಲಳ್ಳಿ ವೆಂಕಟೇಶ್ವರಸ್ವಾಮಿ ದೇವಾಲಯ, ಮಾಗಡಿ ಶ್ರೀ ರಂಗ ನಾಥಸ್ವಾಮಿ ದೇವಾಲಯ, ಸಾವನದುರ್ಗ ದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಇವು ಜಿಲ್ಲೆಯ ಪ್ರಮುಖ ದೇವಾಲಯಗಳ ಪೈಕಿ ಕೆಲವು. ದೇವಾಲಯಗಳಲ್ಲಿ ನಿತ್ಯ ಧಾರ್ಮಿಕ ಕೈಂಕರ್ಯಗಳು ನಿಂತಿರಲಿಲ್ಲ.
ಭಕ್ತರು ಸಹಕರಿಸಲಿ: ದೇವಾಲಯಗಳು ತೆರೆಯಲು ಸರ್ಕಾರ ಕೆಲವೊಂದು ನಿಯಮ ವಿಧಿಸಿದ್ದು, ಪಾಲನೆ ಕಡ್ಡಾಯ ಎಂದಿದೆ. ಆದರೆ ಭಕ್ತರ ಸಹಕಾರವಿಲ್ಲದೇ ನಿಯಮ ಪಾಲನೆ ಕಷ್ಟಸಾಧ್ಯ ಎಂದು ದೇವಾಲಯ ಗಳ ನಿರ್ವಹಣೆ ಮಂಡಳಿಗಳ ಪದಾಧಿ ಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರದ ನಿಯಮಾವಳಿಗಳ ಪಾಲನೆಗೆ ಈ ಪದಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.
ದೇವಾಲಯಗಳಲ್ಲಿ ನಿಯಮಗಳೇನು..?: ರೋಗ ಲಕ್ಷಣಗಳಿಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರವೇಶ, ಪ್ರವೇಶಕ್ಕೆ ಮುನ್ನ ಸ್ಯಾನಿಟೈಸರ್ ಮತ್ತು ನೀರು ಬಳಸಿ ಕೈಗಳ ಸ್ವತ್ಛತೆ ಮಾಡ ಬೇಕು. ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ, ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ. ಭಕ್ತರ ನಡುವೆ ಕನಿಷ್ಠ 6 ಅಡಿಗಳ ಸಾಮಾಜಿಕ ಅಂತರ ಕಡ್ಡಾಯ ತೀರ್ಥ, ತೀರ್ಥ ಪ್ರೋಕ್ಷಣೆ ಗಿಲ್ಲ ಅವಕಾಶ. ದೇವತಾ ಮೂರ್ತಿಗಳು, ಫೋಟೋ ಮುಟ್ಟಿ ನಮಸ್ಕರಿಸುವುದು ನಿಷಿದ್ಧ.
ಭಕ್ತರು ತಮ್ಮ ಶೂ, ಚಪ್ಪಲಿ ಎಲ್ಲೆಂದರಲ್ಲಿ ಬಿಡುವಂತಿಲ್ಲ. ಭಕ್ತರು ತಮ್ಮ ವಾಹನಗಳಲ್ಲೇ ಬಿಡಬೇಕು, ಇಲ್ಲವೇ ದೇವಾಲಯದವರು ನಿಗದಿ ಪಡಿಸಿದ ಸ್ಥಳ, ಶೆಲ್ಫ್ ವ್ಯವಸ್ಥೆಯಲ್ಲಿ ಇಡಬೇಕು. ಧಾರ್ಮಿಕ ಸ್ಥಳಗಳ ಪ್ರವೇಶ ಮತ್ತು ನಿರ್ಗಮನ ಪ್ರತ್ಯೇಕವಾಗಿರಬೇಕು. ಏರ್ ಕಂಡೀಷನ್ ವ್ಯವಸ್ಥೆಯಿದ್ದರೆ, ಅದರ ನಿಯಮಗಳ ಪಾಲನೆ ಕಡ್ಡಾಯ. ಗುಂಪು ಸೇರುವಿಕೆ, ದೊಡ್ಡ ಮಟ್ಟದಲ್ಲಿ ಜನ ಸೇರುವುದು ನಿಷಿದ್ಧ. ಭಜನೆ ಮುಂತಾದವು ಗಳಿಗೆ ಅವಕಾಶವಿಲ್ಲ.
ಮಸೀದಿ ಮುಂತಾದ ಪ್ರಾರ್ಥನಾ ಸ್ಥಳಗಳಿಗೆ ಭಕ್ತರು ತಾವೇ ಸ್ವತಃ ಚಾಪೆ, ಮ್ಯಾಟ್ ಕೊಂಡೊಯ್ಯಬೇಕು ಎಂದು ಸರ್ಕಾರ ನಿಯಮ ವಿಧಿಸಿದೆ. ನಿಯಮ ಗಳು ಎಷ್ಟು ಪಾಲನೆಯಾಗುತ್ತದೆ ಎಂಬುದೇ ಪ್ರಶ್ನೆ!