Advertisement

ಗೌರಿ ಹತ್ಯೆಗೆ ದೇವರ ಪ್ರೇರಣೆ!

11:35 AM Jun 16, 2018 | Team Udayavani |

ಬೆಂಗಳೂರು: “ಗೌರಿ ಲಂಕೇಶ್‌ ಹತ್ಯೆಗೆ ದೇವರ ಪ್ರೇರಣೆಯಾಗಿದೆ. ಇದು ನಿನ್ನ ಪಾಲಿನ ಸೌಭಾಗ್ಯ. ಈ ಒಳ್ಳೆ ಕಾರ್ಯ ಮಾಡಿದರೆ ದೇವರ ಆಜ್ಞೆ ಪಾಲಿಸಿದಂತೆ ಎಂದು ನನ್ನ ತಲೆಗೆ ತುಂಬಿದರು…’ ಗೌರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಪರಶುರಾಮ್‌ ವಾಗ್ಮೋರೆ, ಎಸ್‌ಐಟಿ ತನಿಖಾಧಿಕಾರಿಗಳ ಮುಂದೆ ನೀಡಿದ ಹೇಳಿಕೆಯಿದೆ!

Advertisement

ಎಸ್‌ಐಟಿ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಆರೋಪಿ ವಾಗ್ಮೋರೆ, ಗೌರಿ ಲಂಕೇಶ್‌ ಹತ್ಯೆಗೂ ಮುನ್ನ ಕೆಲವರು ನನ್ನನ್ನು ಭೇಟಿಯಾದರು. “ಗೌರಿ ಹತ್ಯೆಗೆ ದೇವರ ಪ್ರೇರಣೆಯಾಗಿದೆ. ಈ ಕೆಲಸಕ್ಕೆ ನೂರಾರು ಮಂದಿ ಸಿದ್ಧರಾಗಿದ್ದಾರೆ. ಆದರೆ, ದೇವರು ನಿನ್ನ ಹೆಸರನ್ನು ಹೇಳಿದ್ದಾನೆ. ಇತರರಿಗೆ ಸಿಗದ ಸೌಭಾಗ್ಯ ನಿನಗೆ ಸಿಕ್ಕಿದೆ’ ಎಂದೆಲ್ಲಾ ಹೇಳಿ ನನ್ನ ತಲೆಗೆ ತುಂಬಿದರು.

ಅದರಂತೆ ನಾನು, “ಅವರು’ ಹೇಳಿದ ಕೆಲಸ ಮಾಡಿದ್ದೇನೆ. ಹತ್ಯೆಗೆ ಸಂಚು ರೂಪಿಸಿದ್ದು ನಾನಲ್ಲ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ. “ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಕಾರಿನಲ್ಲಿ ನನ್ನ ಬಳಿ ಬಂದ ಮೂವರು ವ್ಯಕ್ತಿಗಳು, ಗನ್‌ ತೆಗೆದುಕೊಂಡು ಹೋದರು. ಅವರು ಯಾರೆಂದೂ ನನಗೆ ಗೊತ್ತಿಲ್ಲ. ಕನ್ನಡ ಮತ್ತು ಮರಾಠಿ ಮಾತನಾಡುತ್ತಿದ್ದರು ಎಂದಷ್ಟೇ ಅವರ ಬಗ್ಗೆ ಮಾಹಿತಿ ಇದೆ’ ಎಂದು ಹೇಳುತ್ತಿರುವ ವಾಗ್ಮೋರೆ, ಗೌರಿ ಹತ್ಯೆಗೆ ಸಂಚು ರೂಪಿಸಿ ತಲೆಗೆ ತುಂಬಿಸಿದವರು ಯಾರು?

ಗನ್‌ ತೆಗೆದುಕೊಂಡು ಹೋದವರು ಯಾರು ಎಂಬ ಬಗ್ಗೆ ಮಾತ್ರ ಬಾಯಿ ಬಿಡುತ್ತಿಲ್ಲ ಎನ್ನಲಾಗಿದೆ. “ಹತ್ಯೆಗೆ ಮುನ್ನ ನಾನು ಬೆಂಗಳೂರಿನಲ್ಲಿ ಇದ್ದದ್ದು ಹತ್ತೇ ದಿನ. ಹೀಗಾಗಿ ನಗರದ ಸ್ಥಳಗಳ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ’ ಎಂದು ಹೇಳಿರುವ ಆರೋಪಿ, ರಾಜರಾಜೇಶ್ವರಿ ನಗರದ ಗೌರಿ ಲಂಕೇಶ್‌ ಮನೆಯಿಂದ ತಾನು ಉಳಿದುಕೊಂಡಿದ್ದ ಕೊಠಡಿಗಳು, ಮಾರ್ಗಗಳ ಬಗ್ಗೆ ಆರೋಪಿ ವಿವರಿಸಿದ್ದಾನೆ ಎಂದು ಮೂಲಗಳು ಹೇಳಿವೆ.

ಹತ್ತಕ್ಕೂ ಹೆಚ್ಚು ಸ್ಥಳ ಮಹಜರು: ಪ್ರಕರಣದ 6ನೇ ಆರೋಪಿಯಾಗಿರುವ ವಾಗ್ಮೋರೆ, ಬೇರೆ ಆರೋಪಿಗಳಿಗಿಂತ ಉತ್ತಮವಾಗಿ ತನಿಖೆಗೆ ಸಹಕಾರ ನೀಡುತ್ತಿದ್ದಾನೆ. ಯಾವುದೇ ಪ್ರಶ್ನೆ ಕೇಳಿದರೂ ಸ್ಪಷ್ಟವಾಗಿ ಉತ್ತರಿಸುತ್ತಿದ್ದಾನೆ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ತಂಗಿದ್ದೆ? ಎಲ್ಲೆಲ್ಲಾ ಓಡಾಡಿದೆ ಎಂಬ ಮಾಹಿತಿ ನೀಡಿದ್ದಾನೆ. ಆ ಜಾಗ ಗುರುತಿಸುತ್ತಿದ್ದಾನೆಯೇ ಹೊರತು ಸ್ಥಳಗಳ ಹೆಸರು ಆತನಿಗೆ ಗೊತ್ತಿಲ್ಲ. ಹೀಗಾಗಿ ಆತ ಹೇಳಿದ ಲ್ಯಾಂಡ್‌ಮಾರ್ಕ್‌ ಆಧರಿಸಿ ಸುಮಾರು 10ಕ್ಕೂ ಹೆಚ್ಚು ಸ್ಥಳಗಳಿಗೆ ಕರೆದೊಯ್ದು ಶುಕ್ರವಾರ ಮಹಜರು ಮಾಡಲಾಯಿತು ಎಂದೂ ಎಸ್‌ಐಟಿ ಮೂಲಗಳು ತಿಳಿಸಿವೆ.

Advertisement

ತನಿಖಾ ತಂಡ ಶುಕ್ರವಾರ ಆರೋಪಿ ಪರಶುರಾಮ್‌ ವಾಗ್ಮೋರೆ ಹೇಳಿಕೆಯನ್ನಾಧರಿಸಿ ನಗರದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಹಜರು ನಡೆಸಿತು. ಆತ ಆಶ್ರಯ ಪಡೆದಿದ್ದ ಸುಂಕದಕಟ್ಟೆಯ ಮನೆ, ನಾಗರಬಾವಿಯಲ್ಲಿ ಪ್ರವೀಣ್‌ನನ್ನು ಭೇಟಿಯಾಗಿದ್ದ ಕೊಠಡಿಗಳು. ಅಮೋಲ್‌ ಕಾಳೆ ಜತೆಗೆ ಸುತ್ತಾಡಿದ್ದ ಎಲ್ಲ ಸ್ಥಳಗಳಿಗೂ ಕರೆದೊಯ್ದು ಮಹಜರು ನಡೆಸಲಾಗಿದೆ.

ಮಾಗಡಿ ಮುಖ್ಯ ರಸ್ತೆಯ ದಾಸನಪುರ ಹೋಬಳಿ ಸೀಗೆಹಳ್ಳಿ ಗೇಟ್‌ ಬಳಿಯ ಸರ್ಕಾರಿ ಶಾಲೆ ಹಿಂಭಾಗದ ಪೊಲೀಸಪ್ಪನ ಬಿಲ್ಡಿಂಗ್‌ನ 2ನೇ ಮಹಡಿಯಲ್ಲಿರುವ ಮೊದಲನೇ ಮನೆ ಮತ್ತು ಮಾಗಡಿ ಮುಖ್ಯರಸ್ತೆಯ ಕಡಬಗೆರೆ ಸಾಯಿಲಕ್ಷಿ ಲೇಔಟ್‌ನ ಅಂಗಡಿಯ ಕೊಠಡಿಗೆ ಆತನೇ ಎಸ್‌ಐಟಿ ಅಧಿಕಾರಿಗಳನ್ನು ಕರೆದೊಯ್ದಿದ್ದು, ಮಹಜರಿಗೆ ಸಹಕಾರ ನೀಡಿದ್ದಾನೆ.

ಕೇಳಿದ್ದಕ್ಕ ಮಾತ್ರ ಉತ್ತರ: ವಿಚಾರಣೆ ವೇಳೆ ಆರೋಪಿ ವಾಗ್ಮೋರೆ, ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗಷ್ಟೇ ಉತ್ತರ ನೀಡುತ್ತಿದ್ದಾನೆ. ತರ ಆರೋಪಿಗಳ ರೀತಿ ಮನಬಂದಂತೆ ಮಾತನಾಡುತ್ತಿಲ್ಲ. ಇದು ಕೂಡ ತನಿಖೆಗೆ ಸಹಕಾರಿಯಾಗುತ್ತಿದೆ. ಇನ್ನು ಮಹಾರಾಷ್ಟ್ರ ಮತ್ತು ಗೋವಾಗೆ ಹೋಗಿರುವ ತನಿಖಾ ತಂಡಗಳ ಇತರೆ ಅಧಿಕಾರಿಗಳು ಸೋಮವಾರ ಮತ್ತೂಮ್ಮೆ ವಾಗ್ಮೋರೆಯನ್ನು ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಕೇಶ್‌ ಮಠಗೆ ಕರೆ: ಪರಶುರಾಮ್‌ ವಾಗ್ಮೋರೆ ನೀಡಿರುವ ಹೇಳಿಕೆಯಲ್ಲಿ ರಾಕೇಶ್‌ ಮಠ ಜತೆಗಿನ ಒಡನಾಟ ಮತ್ತು ಈತನ ಜತೆ ಕೆಲವೊಂದು ಸಮಾವೇಶದಲ್ಲಿ ಭಾಗಿಯಾದ ಬಗ್ಗೆ ತಿಳಿಸಿದ್ದಾನೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಶ್ರೀರಾಮಸೇನೆ ವಿಜಯಪುರ ಜಿಲ್ಲಾಧ್ಯಕ್ಷ ರಾಕೇಶ್‌ ಮಠಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. ಪರಶುರಾಮ್‌ ತಂದೆ ಅಶೋಕ ವಾಗ್ಮೋರೆ, ಮಾವ ಅಶೋಕ ಕಾಂಬ್ಳೆ ಕೂಡ ರಾಕೇಶ್‌ ಜತೆ ಬೆಂಗಳೂರಿಗೆ ಬರುತ್ತಿದ್ದಾರೆ. ಶನಿವಾರ ಎಲ್ಲರೂ ಒಟ್ಟಿಗೆ ವಿಚಾರಣೆ ಎದುರಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next