ಮರೀಲು: ಜಾತಿ- ಧರ್ಮ ನೋಡದೆ ಜನರ ಸಾಮಾಜಿಕ ಅಭಿವೃದ್ಧಿಯತ್ತ ಚಿತ್ತ ಹರಿಸಿದಾಗ ದೇವರು ಖಂಡಿತಾ ಆಶೀರ್ವದಿಸುತ್ತಾ ಎಂದು ಗುಲ್ಬರ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ವಂ| ರೋಬರ್ಟ್ ಮಿರಾಂದ ಹೇಳಿದರು. ಮರೀಲು ಚರ್ಚ್ ಸಮುದಾಯ ಮತ್ತು ಮರೀಲು ಯೂತ್ ಕೌನ್ಸಿಲ್ ಸದಸ್ಯರ ಸಹಕಾರದೊಂದಿಗೆ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ನಡೆದ ಮಕ್ಕಳಿಗೆ ಕೊಡಲ್ಪಡುವ ಪ್ರಥಮ ಪವಿತ್ರ ದಿವ್ಯ ಪರಮಪ್ರಸಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜಾವಿಧಿಯನ್ನು ನೆರವೇರಿಸಿ ಮಾತನಾಡಿದರು.
ಯೇಸುವನ್ನು ಪರಮಪ್ರಸಾದದ ಮೂಲಕ ಸ್ವೀಕರಿಸೋಣ ಹಾಗೂ ಯೇಸುವಿನ ಬದುಕು ನಮಗೆ ಪ್ರೇರಣೆ ಆಗಿರಲಿ. ಎಲ್ಲೇ ಹೋದರೂ ವಿಶ್ವಾಸದ ಬದುಕನ್ನು ಬದುಕುವ ಮೂಲಕ ಯೇಸು ವನ್ನು ಅನುಸರಿಸಬೇಕು. ಭಕ್ತರು ಒಳ್ಳೆಯ ಬಾಂಧವ್ಯದೊಂದಿಗೆ, ಪ್ರತಿಯೊಬ್ಬರನ್ನೂ ಒಟ್ಟಿಗೆ ಸೇರಿಸಿಕೊಂಡು ಭಕ್ತರ ಹೃದಯಕ್ಕೆ ತಟ್ಟುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಪವಿತ್ರ ಪರಮಪ್ರಸಾದದ ದಿವ್ಯ ಬಲಿಪೂಜೆಯಲ್ಲಿ ದೆಹಲಿ ಧರ್ಮಕ್ಷೇತ್ರದಲ್ಲಿ ಧಾರ್ಮಿಕ ಸೇವೆ ನೀಡುತ್ತಿರುವ ವಂ| ಫ್ರಾನ್ಸಿಸ್ ವಲೇರಿಯನ್ ಬರೆಟ್ಟೊ, ಆಗ್ರಾ ಧರ್ಮಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ವಂ| ಟೋನಿ ಡಿ’ಅಲ್ಮೇಡ, ಆಲಂಕಾರು ಚರ್ಚ್‌ನ ಧರ್ಮಗುರು ವಂ| ಸುನಿಲ್ ವೇಗಸ್, ವಾಮಂಜೂರು ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ವಂ| ಕ್ಲಿಫರ್ಡ್ ಫೆರ್ನಾಂಡೀಸ್, ಬೋಪಾಲ್ ಸೆಮಿನರಿಯಲ್ಲಿ ಧರ್ಮಗುರು ಎಸ್ ವಿಡಿ ಮೇಳದ ವಂ| ಫ್ರಾನ್ಸಿಸ್ ವೇಗಸ್ ಧಾರ್ಮಿಕ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಪರಮಪ್ರಸಾದ ಸ್ವೀಕರಿಸಿದ 11 ಮಂದಿ ಮಕ್ಕಳ ಹೆತ್ತವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಹೆತ್ತವರ ಜತೆ ಮಕ್ಕಳು ಕೇಕ್ ಕತ್ತರಿಸಿ, ಪರಸ್ಪರ ಸಿಹಿ ಹಂಚಿದರು. ಚರ್ಚ್‌ನ ಪ್ರಧಾನ ಧರ್ಮಗುರು ವಂ| ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಪೊ›| ಎಡ್ವಿನ್ ಡಿ’ಸೋಜ ವಂದಿಸಿದರು. ವಂ| ಸುನಿಲ್ ವೇಗಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲಿಗೋರಿ ಸೆರಾವೋ, ಮರೀಲ್ ಯೂತ್ ಕೌನ್ಸಿಲ್ ಸಂಚಾಲಕ ಜೋಕಿಂ ಲೋಬೋ, ಅಧ್ಯಕ್ಷ ಮಿಥುಲ್ ಪಿರೇರಾ ಹಾಗೂ ಸದಸ್ಯರು, ಶಿಕ್ಷಕಿ ಸರಿತಾ ಡಿ’ಸೋಜಾ, ವಾಳೆ ಗುರಿಕಾರರು, ವಿವಿಧ ಸಂಘಗಳ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಕಷ್ಟದಿಂದ ಜೀವನ ಮೌಲ್ಯ
ವಾಮಂಜೂರು ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ವಂ| ಕ್ಲಿಫರ್ಡ್ ಫೆರ್ನಾಂಡೀಸ್ ಮಾತನಾಡಿ, ಭಕ್ತಿಯ ಮೂಲಕ ಪರಮ ಪ್ರಸಾದವನ್ನು ಸೇವಿಸುವ ದೇವರು ಮಾನವನ ಹೃದಯದಲ್ಲಿ ನೆಲೆಸುತ್ತಾನೆ. ಪ್ರತೀ ಏಳು ವರುಷಕ್ಕೊಮ್ಮೆ ಮಾನವನ ದೇಹದಲ್ಲಿ ಗಮನಾರ್ಹ ಬದಲಾವಣೆ ಆಗುವುದು ಸಹಜ ಗುಣ. ಹೆತ್ತವರು ಎನಿಸಿಕೊಳ್ಳುವವರು ತಮ್ಮ ಮಕ್ಕಳಿಗೆ ಉತ್ತಮವಾದ, ಉದಾತ್ತವಾದ ಗುಣಗಳನ್ನು ಸಣ್ಣ ಪ್ರಾಯದಿಂದಲೇ ಕಲಿಸುವಂತಾಗಬೇಕು. ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಅನುಭವಿಸುವುದು ಬೇಡ
ಎಂಬುದು ಎಲ್ಲ ಹೆತ್ತವರ ಅಭಿಪ್ರಾಯ. ಆದರೆ ಮಕ್ಕಳಿಗೆ ಕಷ್ಟದ ಅನುಭವದ ಪಾಠವನ್ನು ಅರಿವು ಮೂಡಿಸಿದಾಗ ಮಾತ್ರ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಲು ಸಾಧ್ಯ ಎಂದರು.