Advertisement

ಗೋದ್ರೆಜ್‍ ಸ್ಪಾಟ್‍ಲೈಟ್‍: ಕೈಗೆಟಕುವ ದರದಲ್ಲಿ ಸ್ಪಷ್ಟ ದೃಶ್ಯದ ಸಿಸಿ ಕ್ಯಾಮರಾ

03:48 PM Jan 03, 2022 | Team Udayavani |

ಗೋದ್ರೆಜ್‍ ಎಂದರೆ ನಮಗೆಲ್ಲ ಮುಂಚೆ ನೆನಪಿಗೆ ಬರುತ್ತಿದ್ದುದು ಸ್ಟೀಲ್‍ ಅಲ್ಮೆರಾ. ಈಗಲೂ ಸ್ಟೀಲ್‍ ಬೀರುಗಳಿಗೆ ಗೋದ್ರೆಜ್‍ ಬೀರು ಎಂದೇ ಸಾಮಾನ್ಯ ಜನ ಕರೆಯುತ್ತಾರೆ. ಅಪ್ಪಟ ದೇಶೀಯ ಕಂಪೆನಿಯಾದ ಗೋದ್ರೆಜ್‍ ಬೀಗಗಳು, ಅಲ್ಮೆರಾ, ಫ್ರಿಜ್‍, ಸಾಬೂನುಗಳು, ಹ್ಯಾಂಡ್‍ ವಾಶ್‍, ಸೊಳ್ಳೆ ನಿವಾರಕಗಳು ಸೇರಿದಂತೆ ವಿವಿಧ ವಸ್ತುಗಳನ್ನು ತಯಾರಿಸುತ್ತದೆ. ಇತ್ತೀಚೆಗೆ ಗೋದ್ರೆಜ್‍ ಕಂಪೆನಿ ಮನೆಗಳಲ್ಲಿ ಜನ ಸಾಮಾನ್ಯರೇ ಅಳವಡಿಸಿಕೊಳ್ಳಬಹುದಾದ ಗೋದ್ರೆಜ್‍ ಸ್ಪಾಟ್‍ಲೈಟ್‍ ಹೆಸರಿನ ಸಿಸಿ ಕ್ಯಾಮರಾಗಳನ್ನು ಹೊರ ತರುತ್ತಿದೆ.   ಇವುಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿವೆ. ಅದರಲ್ಲೊಂದು ಗೋದ್ರೆಜ್‍ ಸ್ಪಾಟ್‍ಲೈಟ್‍ ಫಿಕ್ಸಡ್‍.  ಇದರ ದರ ಅಮೆಜಾನ್‍.ಇನ್‍ ನಲ್ಲಿ 2,849 ರೂ. ಇದೆ.

Advertisement

ಈ ಸಿಸಿ ಕ್ಯಾಮರಾ 2 ಮೆಗಾಪಿಕ್ಸಲ್‍, ಫುಲ್‍ ಎಚ್‍ಡಿ ವಿಡಿಯೋ ಸೆರೆಹಿಡಿಯುತ್ತದೆ. ಇದಕ್ಕೆ 128 ಜಿಬಿ ಎಸ್‍ಡಿ ಕಾರ್ಡ್‍ ಹಾಕಿಕೊಳ್ಳಬಹುದು. 2.4 ಗಿಗಾಹರ್ಟ್ಜ್ ವೈಫೈ ಹೊಂದಿದೆ. ರಾತ್ರಿ ವೇಳೆ 5 ಮೀಟರ್ ವರೆಗೂ ಕತ್ತಲ ದೃಶ್ಯಗಳನ್ನು ಸೆರೆಹಿಡಿಯುತ್ತದೆ. ಚಿತ್ರೀಕರಿಸಿದ ದೃಶ್ಯಗಳನ್ನು ಕ್ಲೌಡ್‍ ಸ್ಟೋರೇಜ್‍ ಕೂಡ ಮಾಡಿಕೊಳ್ಳಬಹುದು. ಇದು ಮೈಕ್‍ ಕೂಡ ಹೊಂದಿದೆ. 110 ಡಿಗ್ರಿ ಕೋನದವರೆಗೂ ವಿಡಿಯೋ ಸೆರೆ ಹಿಡಿಯಬಲ್ಲದು.

ಇದನ್ನೂ ಓದಿ:ಜ.4 ‘ಏಕ್‌ ಲವ್‌ ಯಾ’ ಟ್ರೇಲರ್‌ ರಿಲೀಸ್

ಮೊದಲೇ ತಿಳಿಸಿದಂತೆ ಇದು ಮನೆಗಳಲ್ಲಿ ಬಳಸುವ ಸಲುವಾಗಿ ವಿನ್ಯಾಸಗೊಳಿಸಲಾದ ಸಿಸಿ ಕ್ಯಾಮರಾ. ಇದನ್ನು ಅಳವಡಿಸಲು ಯಾವುದೇ ತಂತ್ರಜ್ಞರು ಬೇಕಾಗಿಲ್ಲ. ನಾವೇ ಅಳವಡಿಸಿಕೊಳ್ಳಬಹುದು. ಅಳವಡಿಸಿಕೊಳ್ಳುವ ಜಾಗದಿಂದ ಅನತಿ ದೂರದಲ್ಲಿ ಎಲೆಕ್ಟ್ರಿಕ್‍ ಪ್ಲಗ್‍ ಇರಬೇಕು. ಕ್ಯಾಮರಾದಿಂದ ಬಂದ ಪಿನ್‍ ಅನ್ನು ಪ್ಲಗ್‍ ಗೆ ಹಾಕಬೇಕು. ಇದು ಕಾರ್ಯಾಚರಿಸಲು ವೈಫೈ ಹಾಟ್‍ಸ್ಪಾಟ್‍ ಬೇಕು. ವೈಫೈ ರೂಟರ್‍ ಬೇಕು. ರೂಟರ್‍ ಇಲ್ಲದಿದ್ದರೂ ಜಿಯೋ ಫೈ, ಏರ್‍ ಟೆಲ್‍ ಮೈ ವೈಫೈ ಎಂಬ ಡಾಟಾ ಡಿವೈಎಸ್‍ ಗಳಾದರೂ ಸಾಕು. ಅವಕ್ಕೆ ಸಿಮ್‍ ಹಾಕಿ ಹಾಟ್‍ಸ್ಪಾಟ್‍ ಸಾಧನವಾಗಿಸಿಕೊಂಡು, ಸಿಸಿ ಕ್ಯಾಮರಾ ವೈಫೈಗೆ ಕನೆಕ್ಟ್ ಮಾಡಿಕೊಳ್ಳಬಹುದು.

Advertisement

ಗೂಗಲ್‍ ಪ್ಲೇ ಸ್ಟೋರ್‍ ನಲ್ಲಿ ಗೋದ್ರೆಜ್‍ ಸ್ಪಾಟ್‍ಲೈಟ್‍ ಆಪ್‍ ಇದೆ. ಇದನ್ನು ಡೌನ್‍ಲೋಡ್‍ ಮಾಡಿಕೊಂಡು, ಅದಕ್ಕೆ ಸೈನ್‍ ಇನ್‍ ಆಗಬೇಕು. ಸೈನ್‍ ಇನ್‍ ಬಹಳ ಸುಲಭ, ನಿಮ್ಮ ಮೊಬೈಲ್‍ ನಂಬರ್‍ ಕೊಟ್ಟು, ಅದಕ್ಕೆ ಬರುವ ಓಟಿಪಿ ಹಾಕಿ, ಒಂದು ವಾಸ್‍ ವರ್ಡ್ ರಚಿಸಿಕೊಂಡರೆ ಸಾಕು. ನಂತರ ಕ್ಯಾಮರಾ ಬುಡದಲ್ಲಿರುವ ಕ್ಯೂ ಆರ್‍ ಕೋಡ್‍ ಅನ್ನು ಮೊಬೈಲ್‍ ನಲ್ಲಿ ಸ್ಕ್ಯಾನ್‍ ಮಾಡಿ ಅಲ್ಲಿ ಬರುವ ಸೂಚನೆಗಳನ್ನು ಪಾಲಿಸಿದರೆ ಸಿಸಿ ಕ್ಯಾಮರಾ ಈ ಆಪ್‍ಗೆ ಸಂಪರ್ಕವಾಗುತ್ತದೆ. ಅಲ್ಲಿಗೆ ಸೆಟಪ್‍ ಪೂರ್ಣವಾದಂತೆ.

ಬಳಿಕ ಕ್ಯಾಮರಾ ಸೆರೆ ಹಿಡಿಯುವ ದೃಶ್ಯಗಳನ್ನು ನೀವು ಮೊಬೈಲ್‍ನಲ್ಲೇ ನೋಡಬಹುದು. ಅಥವಾ ನಿಮ್ಮ ಕಂಪ್ಯೂಟರ್‍ ಪರದೆಯಲ್ಲಿ ಸೈನ್‍ ಇನ್‍ ಆಗಿ ಅಲ್ಲಿಯೂ ನೋಡಬಹುದು.

ಇದು ಒಳಾಂಗಣದಲ್ಲಿ ಬಳಸುವ ಸಿಸಿ ಕ್ಯಾಮರಾ ಹಾಗಾಗಿ ಮಳೆಯ ನೀರು ಬೀಳದಂತೆ ಮನೆಯ ಮುಂದೆ ಚಾವಣಿಯ ಕೆಳಗೇ ಅಳವಡಿಸಬೇಕು.ಇದರ ಸ್ಟ್ಯಾಂಡ್‍ ಅನ್ನು ಎತ್ತ ಬೇಕಾದರೂ ನುಲಿಯಬಹುದಾದ್ದರಿಂದ ಗೋಡೆಗೆ ಸ್ಕ್ರ್ಯೂ ಹಾಕಿ, ಸಿಕ್ಕಿಸಬಹುದು. ಅಥವಾ ಕಿಟಕಿ, ಟೇಬಲ್‍ ಇಂಥ ಜಾಗದಲ್ಲೂ ಇಡಬಹುದು.

ಇದರ ವಿಡಿಯೋ ರೆಕಾರ್ಡಿಂಗ್ ಗುಣಮಟ್ಟ ಚೆನ್ನಾಗಿದೆ. ಇದು ಕಲರ್‍ ಕ್ಯಾಮರಾ, ದೃಶ್ಯಗಳು ಬಣ್ಣದಲ್ಲೇ ಮೂಡಿಬರುತ್ತವೆ. ರೆಕಾರ್ಡಿಂಗ್ ಬೇಡ ಎಂದರೆ ಎಸ್‍ಡಿ ಕಾರ್ಡ್‍ ಅಗತ್ಯವಿಲ್ಲ. ದೃಶ್ಯಗಳ ರೆಕಾರ್ಡ್‍ ಬೇಕೆಂದರೆ 128 ಜಿಬಿವರೆಗೂ ಮೆಮೊರಿ ಕಾರ್ಡ್‍ ಹಾಕಿಕೊಳ್ಳಬಹುದು. 256 ಬಿಟ್‍ ಎನ್‍ಕ್ರಿಪ್ಷನ್‍ ನಿಂದ ಸುರಕ್ಷಿತವಾದ ಕ್ಲೌಡ್‍ ಸ್ಟೋರೇಜ್‍ ಸಹ ಇದ್ದು, ಅದನ್ನು ಪಡೆಯಲು ಚಂದಾದಾರರಾಗಬೇಕು.

ನೀವು ಎಲ್ಲೇ ಇದ್ದರೂ ಗೋದ್ರೆಜ್‍ ಸ್ಪಾಟ್‍ಲೈಟ್‍ ಆಪ್‍ ಮೂಲಕ ನಿಮ್ಮ ಮನೆಯೊಳಗೆ ಯಾರು ಬಂದರು? ಹೋದರು? ಎಂಬುದನ್ನು ನೀವು ನೋಡಬಹುದು. ರಾತ್ರಿ ವೇಳೆ ದೀಪ ಆರಿದ್ದರೂ ಇನ್‍ಫ್ರಾರೆಡ್‍ ಕ್ಯಾಮರಾ ಮೂಲಕ ದೃಶ್ಯಗಳನ್ನು ಸೆರೆ ಹಿಡಿಯುತ್ತದೆ.  ಮೈಕ್‍ ಸೌಲಭ್ಯ ಕೂಡ ಇರುವುದರಿಂದ ದೃಶ್ಯಗಳ ಜೊತೆ ಶಬ್ದವೂ ಕೇಳುತ್ತದೆ. ಜೊತೆಗೆ ಟೂವೇ ಮೈಕ್‍ ಸೌಲಭ್ಯವಿದೆ. ಅಂದರೆ ಮೊಬೈಲ್‍ ಆಪ್‍ ಮೂಲಕ ಮಾತನಾಡಿದ್ದು, ಕ್ಯಾಮರಾದ ಸ್ಪೀಕರಿನಲ್ಲಿ ಕೇಳುತ್ತದೆ. ಕ್ಯಾಮರಾ ಮುಂದೆ ಮಾತನಾಡಿದ್ದು, ಮೊಬೈಲ್‍ನಲ್ಲಿ ಕೇಳುತ್ತದೆ. ಈ ಆಯ್ಕೆಯನ್ನು ಬೇಕೆಂದಾಗ ಆನ್‍ ಆಫ್‍ ಮಾಡಿಕೊಳ್ಳಬಹುದು. ಈ ಕ್ಯಾಮರಾ ಬೇಕೆಂದರೆ ಮನೆಯ ಒಳಾಂಗಣದಲ್ಲೂ ಅಳವಡಿಸಿಕೊಂಡು ಮನೆಯಲ್ಲಿ ವೃದ್ಧರು ಒಬ್ಬರೇ ಇದ್ದಂತಹ ಸನ್ನಿವೇಶದಲ್ಲಿ ಅವರ ಚಲನವಲನಗಳನ್ನು ಮೊಬೈಲ್‍ ಮೂಲಕ ಅವರ ಮಕ್ಕಳು ಗಮನಿಸಬಹುದು.

ಸಾಮಾನ್ಯವಾಗಿ ಸಿ.ಸಿ ಕ್ಯಾಮರಾ ಅಂದರೆ ಮಸುಕು ಮಸಕುದಾದ ದೃಶ್ಯಗಳನ್ನೇ ನೋಡಿರುತ್ತೇವೆ. ಆದರೆ ಈ ಕ್ಯಾಮರಾ ಹಾಗಲ್ಲ. ಇದರ ಗುಣಮಟ್ಟ ಚೆನ್ನಾಗಿದೆ. ದೃಶ್ಯಗಳು ಸ್ಪಷ್ಟವಾಗಿ ಮೂಡಿಬರುತ್ತವೆ. ಮೂರು ಸಾವಿರ ರೂ. ಒಳಗೆ ಇದೊಂದು ಉತ್ತಮ ಸಿ.ಸಿ ಕ್ಯಾಮರಾ ಎನ್ನಲಡ್ಡಿಯಿಲ್ಲ.

-ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next