ಹೊಸದಿಲ್ಲಿ: ಸಾಯಿಬಾಬಾ ದೇವರಲ್ಲ ಎಂದು ಹೇಳುವ ಮೂಲಕ ಬಾಗೇಶ್ವರ ಧಾಮದ ಸ್ವಘೋಷಿತ ದೇವಮಾನವ ಧೀರೇಂದ್ರ ಕೃಷ್ಣ ಶಾಸ್ತ್ರಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಮಧ್ಯಪ್ರದೇಶದ ಜಬಲ್ ಪುರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಬಾಗೇಶ್ವರ್ ಧಾಮ್ ದೇವಮಾನವ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಸಾಯಿಬಾಬಾರನ್ನು ‘ಫಕೀರ’ ಎಂದು ಕರೆಯಬಹುದು, ಆದರೆ ಅವರನ್ನು ದೇವರು ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದ್ದಾರೆ.
ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಬಾಗೇಶ್ವರ ಸರ್ಕಾರ್ ಎಂದೇ ತನ್ನ ಅನುಯಾಯಿಗಳಲ್ಲಿ ಜನಪ್ರಿಯರಾಗಿದ್ದಾರೆ. ತಮ್ಮ ಅಭಿಪ್ರಾಯವನ್ನು ಸಾಬೀತುಪಡಿಸಲು ಶಂಕರಾಚಾರ್ಯರನ್ನು ಸಹ ಅವರು ಉಲ್ಲೇಖಿಸಿದ್ದಾರೆ. “ಶಂಕರಾಚಾರ್ಯ ಜೀ ಎಂದಿಗೂ ಸಾಯಿಬಾಬಾರನ್ನು ದೇವರು ಎಂದು ಉಲ್ಲೇಖಿಸಿಲ್ಲ. ಶಂಕರಾಚಾರ್ಯ ಅವರನ್ನು ಪಾಲಿಸುವುದು ಪ್ರತಿಯೊಬ್ಬ ಸನಾತನಿಯ ಕರ್ತವ್ಯವಾಗಿದೆ ಏಕೆಂದರೆ ಅವರು ನಮ್ಮ ‘ಧರ್ಮ’ದ ಪ್ರಧಾನ ಮಂತ್ರಿಯಾಗಿದ್ದಾರೆ. ನಮ್ಮ ಧರ್ಮದ ಯಾವುದೇ ಸಂತರು ಅದು ಗೋಸ್ವಾಮಿ ತುಳಸಿದಾಸ್ ಜಿ ಅಥವಾ ಸೂರದಾಸ್ ಆಗಿರಲಿ, ಅವರು ಒಬ್ಬ ಸಂತ, ಮಹಾನ್ ವ್ಯಕ್ತಿ, ‘ಯುಗ ಪುರುಷ’, ‘ಕಲ್ಪ ಪುರುಷ’ ಆಗಿರಬಹುದು ಆದರೆ ದೇವರಲ್ಲ” ಎಂದು ಶಾಸ್ತ್ರಿ ಹೇಳಿದರು.
ಇದನ್ನೂ ಓದಿ:ಕೊಳ್ಳೇಗಾಲ ಎಸ್‌ಸಿ ಮೀಸಲು ಕ್ಷೇತ: ಯಾರು ಹಿತವರು ವರಿಷ್ಠರಿಗೆ ಈ ಮೂವರೊಳಗೆ?
“ಜನರು ತಮ್ಮ ನಂಬಿಕೆಯನ್ನು ಹೊಂದಿದ್ದಾರೆ. ನಾವು ಯಾರ ನಂಬಿಕೆಗೆ ಧಕ್ಕೆ ತರಲು ಸಾಧ್ಯವಿಲ್ಲ. ಸಾಯಿಬಾಬಾ ಅವರು ಸಂತ ಅಥವಾ ಫಕೀರರಾಗಿರಬಹುದು ಆದರೆ ಅವರು ದೇವರಾಗಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಶಿವಸೇನಾ (ಉದ್ಧವ್ ಬಣ) ಯುವಸೇನೆ ನಾಯಕ ರಾಹುಲ್ ಕನಾಲ್ ಅವರು ಶಿರಡಿ ಸಾಯಿಬಾಬಾ ಅವರ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಹೇಳಿಕೆಗೆ ಸಂಬಂಧಿಸಿದಂತೆ ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಮುಂಬೈ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರ ಪೊಲೀಸರು ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.