Advertisement
ಡಾ. ಲಕ್ಷ್ಮಣ
ನಿಸ್ಸಂಶಯವಾಗಿ ಇದು ವೈದ್ಯಕೀಯ ತುರ್ತುಕಾಲ, ಕಣ್ಣಿಗೆ ಕಾಣದ ಯಃಕಶ್ಚಿತ್ ವೈರಸ್ಸೊಂದು ಜಗತ್ತಿಗೆ ಮಾಸ್ಕ್ ಹಾಕಿಸಿ, ಜನಜೀವನವನ್ನು ಸ್ತದ್ಧಗೊಳಿಸಿದೆ. ಎಲ್ಲರ ಕಣ್ಣುಗಳಲ್ಲೂ ಆತಂಕದ ಛಾಯೆ! ಹಾಗಂತ ಎಲ್ಲಿಯೂ ಹೇಳುವ ಹಾಗಿಲ್ಲ. ಈ ತಲ್ಲಣದ ಗಳಿಗೆಯಲ್ಲಿ, ರಾತ್ರಿ ವೈದ್ಯರು ಮಲಗಿದ ಹೊತ್ತಿನಲ್ಲಿ, ರಾತ್ರಿ ಬರುವ ರೋಗಿಗಳ ಆರೈಕೆ ಮಾಡುತ್ತಿದ್ದಾಳೆ ಆಕೆ. ಜ್ವರ, ಕೆಮ್ಮು ನೆಗಡಿಯೆಂದರೆ ಈಗ ಜಗತ್ತು ಬೆಚ್ಚಿ ಬೀಳುತ್ತಿದೆ. ಈ ರೋಗಿಗಳನ್ನು ಮುಟ್ಟುವ ಮಾತು ಹಾಗಿರಲಿ, ಯಾರೂ ಮಾತನಾಡಿಸರು. ಆದರೆ, ಈ ಬಿಳಿಯ ಮೇಲಂಗಿ ಹಾಕಿಕೊಂಡ ಶ್ವೇತ ಶುಭ್ರಧಾರಿಣಿ, ಸುಡುವ ಹಣೆಗಳ ಮೇಲೆ ತಣ್ಣೀರು ಬಟ್ಟೆಯಿಟ್ಟು, ಇಂಜೆಕ್ಷನ್ನು
ಕೊಟ್ಟು ವೈದ್ಯರ ಸಲಹೆ ಮೇರೆಗೆ ಮಾತ್ರೆ ಕೊಟ್ಟು, ನರ್ಸಿಂಗ್ ಹೋಮಿನ ಇನ್ ಪೇಷಂಟಿನಲಿ ದಾಖಲಾದ ದಮ್ಮು ರೋಗಿಯ ಗ್ಲುಕೋಸ್ ಡ್ರಿಪ್ ಬದಲಾಯಿಸಲು ಓಡಿ ಹೋಗುತ್ತಾಳೆ. ಕೋವಿಡ್-19 ಬಂದಾಗಿನಿಂದ ಇವಳಿಗೆ ಹೆಚ್ಚುವರಿ ಡ್ನೂಟಿ. ಉಳಿದ ಎಲ್ಲ ನರ್ಸುಗಳು ಯುಗಾದಿಗೆಂದು ರಜೆಗೆ ಊರಿಗೆ ಹೋದವರು, ಲಾಕ್ ಡೌನ್‌ನಿಂದಾಗಿ ಊರಿನಲ್ಲೇ ಉಳಿದುಹೋಗಿದ್ದಾರೆ. ಹೀಗಾಗಿ, ಉಳಿದವಳೊಬ್ಬಳೇ ಶ್ವೇತವಸ್ತ್ರದ ದೇವತೆ, ಹೆಸರು ಮಂಜುಳಾ.
Related Articles
Advertisement
ಅವ್ವ ಕೂಲಿ ಮಾಡಿಯೇ ಮಗಳನ್ನು ನರ್ಸಿಂಗ್ ಓದಿಸಿದ್ದು. ನಡುಗಾಲದಲ್ಲಿ ಎದ್ದು ಹೋದ ಅಪ್ಪನ ಮೇಲೆ ಕೋಪವಿದೆ. ಆದರೆ, ಕೋಪದಿಂದ ಹೊಟ್ಟೆ ತುಂಬುವುದಿಲ್ಲವಲ್ಲ? ಈ ಹಸಿವಿಗಾಗಿ ದುಡಿಯಬೇಕು, ದುಡಿದು ಬದುಕಬೇಕೆಂಬ ಹಠ ತೊಟ್ಟೇ ಬೆಂಗಳೂರಿನ ಬಸ್ಸು ಹತ್ತಿದ್ದು… ಗೊತ್ತಿಲ್ಲ, ಅನ್ನ ಹಾಕುವ ಊರೇ ಇವರ ಕೊರಳ ಉರುಳಾಗುವುದಾ? ದೇವರೇ ಬಲ್ಲ. ಬಂದ ರೋಗಿಗಳಿಗೆಲ್ಲ ಕೋವಿಡ್-19 ಇರಲಿಕ್ಕಿಲ್ಲ. ಆದರೆ, ನೂರರಲ್ಲೊಬ್ಬರಿಗೆ ಕೋವಿಡ್-19 ಇದ್ದರೂ ಇವರಿಗೆ ಅಪಾಯವೇ… ಅಪಾಯ ಯಾರಿಗಿಲ್ಲ? ವೈದ್ಯರಿಗಿದೆ, ದಿನಸಿ ಕೊಡುವವನಿಗೆ, ಹಾಲು ಮಾರುವವನಿಗೆ, ಪೇಪರು ಹಂಚುವ ಹುಡುಗರಿಗೆ, ಮೆಡಿಕಲ್ ಶಾಪಿನವರಿಗೆ, ನೀರು ಕ್ಯಾನು ಹೊತ್ತು ತರುವ ಹುಡುಗನಿಗೆ… ಕಷ್ಟದ ಕಾಲ ಊರಿನಲ್ಲಿರುವ ಅವ್ವನಿಗೂ ಇದೆ ಸಂಕಷ್ಟದ ಕಾಲ. ನಾಡಿಗೂ ಇದೆ, ದೇಶಕ್ಕೂ ಇದೆ, ವಿಶ್ವಕ್ಕೂ ಇದೆ… ಇಂದಲ್ಲಾ ನಾಳೆ ಹೋಗುತ್ತದೆ ಕೋವಿಡ್-19. ಅಲ್ಲಿಯವರೆಗೂ ನೀವು ಮನೆಯಲ್ಲಿರಿ. ಕ್ಷೇಮವಾಗಿ ಕೈ ತೊಳೆಯುತ್ತಿರಿ. ನಿಮಗಾಗಿ ಅವರಿದ್ದಾರೆ, ಹಗಲು ರಾತ್ರಿ ಪಾಳಿಗಳ ಖಬರು ಇಲ್ಲದೆ…
ಕರ್ತವ್ಯದ ಮುಂದೆ ಕಷ್ಟಗಳೆಲ್ಲ ಗೌಣನಾನು ಚೇತನ್. ನನ್ನ ಹೆಂಡತಿ ಶೋಭ, ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕಿನ ಗಾಂಧಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿ
ಕೆಲಸ ಮಾಡುತ್ತಿದ್ದಾಳೆ. ರಾಜ್ಯಾದ್ಯಂತ ಕೋವಿಡ್-19 ಸೋಂಕಿನಿಂದ ಪಾರಾಗಲಿಕ್ಕಾಗಿ ಲಾಕ್‌ಡೌನ್ ಮಾಡಲಾಗಿದೆ. ಆದರೆ, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ರಜೆ ಇಲ್ಲ. ಅವರು ಹೊರ ಹೋಗಲೇ ಬೇಕಿದೆ. ಸೋಂಕಿತರು ಮತ್ತು ರೋಗಿಗಳ ಶುಶ್ರೂಷೆ ಅವರ ಕರ್ತವ್ಯ. ಮನೆಯಲ್ಲಿ ಎಂಟು ವರ್ಷದ ಮಗನಿದ್ದಾನೆ. ನಾನೂ ಸಹ ಬ್ರದರ್ ಆಗಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾರಣ, ಇಬ್ಬರಿಗೂ ಬಿಡುವಿಲ್ಲ. ಚಿತ್ರದುರ್ಗದವರಾದ ನಾವು ಕೆಲಸದ ನಿಮಿತ್ತ ರಾಯಚೂರಿನಲ್ಲಿ ವಾಸಿಸುತ್ತಿದ್ದೇವೆ. ಸೈನಿಕರಂತೆಯೇ ನಮಗೂ ಕೆಲವು ಬಾಧ್ಯತೆಗಳಿರುತ್ತವೆ. ಎಷ್ಟೋ ಜನ, ನಮ್ಮಲ್ಲಿಗೆ ಬರುವಾಗಲೇ ಹೆದರಿರುತ್ತಾರೆ, ತನಗೇನು ಆಗುತ್ತದೋ ಎಂಬ ಭೀತಿಯಲ್ಲಿರುತ್ತಾರೆ. ಅವರಿಗೊಂದು ಸಾಂತ್ವನ ಬೇಕಿರುತ್ತದೆ. ಅವರೊಳಗೆ ನಮ್ಮದೇ ಒಬ್ಬ ತಾಯಿ, ತಂದೆ, ಅಕ್ಕ, ಅಣ್ಣ, ಮಗು… ಕಾಣಿಸಿದಂತಾಗುವಾಗ ನಮಗೂ ಮನ ಮಿಡಿಯುತ್ತದೆ. ಅಷ್ಟಕ್ಕೂ ನಾವೂ ಮನುಷ್ಯರೇ ತಾನೇ? ನಮಗೆ ಸೋಂಕು ತಗುಲಬಾರದೆಂದೇನೂ ಇಲ್ಲವಲ್ಲ… ನನ್ನ ಪತ್ನಿ ತುರ್ತಾಗಿ ಅವೇಳೆಯಲ್ಲಿ ಕೆಲಸಕ್ಕೆ ಹಾಜರಾಗಬೇಕಾಗಿ ಬಂದಾಗ, “ನಾನಿದ್ದೇನೆ’ ಎನ್ನುವ ಧೈರ್ಯವನ್ನು ನಾನು ಕೊಡುತ್ತೇನೆ. ಇಬ್ಬರೂ ಒಂದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದರಿಂದ, ಅವಳು ಹೇಳದೆಯೇ ಅವಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿದೆ. ನಮ್ಮಿಬ್ಬರ ಕುಟುಂಬವೂ ಮಾನಸಿಕವಾಗಿ ಜೊತೆಯಲ್ಲಿದ್ದು ಧೈರ್ಯ ತುಂಬುತ್ತಿರುವುದರಿಂದ, ಮನಸಿಗೆ ಒಂದಷ್ಟು ಸಮಾಧಾನವಿದೆ. ನಾವಿಬ್ಬರೂ ಬೇರೆ ಬೇರೆ ಶಿಫ್ಟ್ನಲ್ಲಿ ಕೆಲಸ ಮಾಡುವುದರಿಂದ ಮಗನನ್ನು ಕೂಡಾ, ಶಿಫ್ಟ್ ಪ್ರಕಾರ ನೋಡಿಕೊಳ್ಳುತ್ತೇವೆ. ಆದರೆ, ಕೆಲವೊಮ್ಮೆ, ಇಬ್ಬರೂ ಹೊರ ಹೋಗಬೇಕಾಗಿ ಬಂದಾಗ ಮಾತ್ರ ಮಗುವನ್ನು ಬೇರೆಯವರ ಸುಪರ್ದಿಗೆ ಬಿಟ್ಟು ಹೋಗಬೇಕಾಗುತ್ತದೆ. ಎಲ್ಲರ ಬಗ್ಗೆ ಎಚ್ಚರ ವಹಿಸುವ ನಮಗೆ ನಮ್ಮ ಮಗುವಿನ ಕಾಳಜಿ ಮಾಡುವುದು ಕಷ್ಟವಾಗುತ್ತಿದೆ ಎನಿಸುವಾಗ ಸ್ವಲ್ಪ ನೋವಾಗುತ್ತದೆ. ಆದರೂ ಒಂದೊಳ್ಳೆ ಕೆಲಸ ಮಾಡಿ ದ ತೃಪ್ತಿಯ ಮುಂದೆ ಅದು ಗೌಣವಾಗುತ್ತದೆ. ಚೇತನ್, ಶೋಭಾ
ನಿರೂಪಣೆ: ಆಶಾ ಜಗದೀಶ್ ಆಸ್ಪತ್ರೆಯ ಯೋಧರು ನಾವು…
ನನ್ನ ಹೆಸರು ಸತ್ಯ, ನಾನು 15 ವರ್ಷಗಳಿಂದ ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ವಿಜಯ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದೀನಿ. ನನ್ನ ಗಂಡ ಮನೆಯಲ್ಲಿಯೇ ಲೇಥಿಂಗ್ ವರ್ಕ್ ಮಾಡ್ತಾರೆ. ಮೂವರು ಮಕ್ಕಳು. ದೊಡ್ಡವನು ಕೆಲಸ ಮಾಡ್ತಾನೆ, ಇಬ್ಬರು ಓದಿದ್ದಾರೆ. ಈ ಕೊರೊನಾ ಭಯ ಶುರುವಾದಾಗ, ದೊಡ್ಡ ಮಕ್ಕಳಿಬ್ಬರದೂ ಒಂದೇ ಸಮನೆ ಗಲಾಟೆ. “ನೀನು ಕೆಲಸಕ್ಕೆ ಹೋಗೋದು ಬೇಡ. ನಿನಗೇನಾದರೂ ಆದರೆ ನಮಗ್ಯಾರು ದಿಕ್ಕು?’ ಅಂತ. ಕೊನೆಯ ಮಗ ಮಾತ್ರ “ಪರವಾಗಿಲ್ಲಮ್ಮ, ನೀನು ಹೋಗು’ ಅನ್ನುವ ಧೈರ್ಯ ಕೊಟ್ಟ. ಗಂಡ ಹೇಳ್ತಾರೆ- “ಬೇರೆಯವರಿಗೆ ಸೇವೆ ಮಾಡುವ ಭಾಗ್ಯ ಎಷ್ಟು ಜನಕ್ಕೆ ಸಿಗುತ್ತೆ? ಮನೆಯ ಬಗ್ಗೆ ಯೋಚಿಸದೆ, ಧೈರ್ಯವಾಗಿ ಜನರ ಸೇವೆ ಮಾಡು, ನಮಗೆಲ್ಲರಿಗೂ ಒಳ್ಳೆಯದಾಗುತ್ತದೆ. ಮನೆಯ ಬಗ್ಗೆ ಯೋಚಿಸಬೇಡ. ನಾವು ನೋಡಿಕೊಳ್ತೀವಿ’ ಅಂತ. ಆದರೆ, ಅಕ್ಕಪಕ್ಕದ ಮನೆಯವರು ಒಂದಷ್ಟು ದಿವಸ ತುಂಬಾ ಗಲಾಟೆ ಮಾಡಿದರು. ನಿನ್ನಿಂದ ಬೀದಿಗೆ ರೋಗ ಹರಡುತ್ತದೆ ಅನ್ನೋ ತರಹ. ಕಡೆಗೆ, ಅವರಿಗೆಲ್ಲಾ ಮನೆಯವರು ಬೈದು ಬುದ್ಧಿ ಹೇಳಿದ್ದಾರೆ. “ನೀವ್ಯಾರೂ ನಮ್ಮ ಮನೆಯ ಬಳಿ ಬರಬೇಡಿ, ನಾವ್ಯಾರೂ ನಿಮ್ಮ ಮನೆಯ ಹತ್ತಿರ ಬರೋಲ್ಲ. ಒಂದು ವೇಳೆ ಈ ಕಾಯಿಲೆಯಿಂದ ನನ್ನ ಹೆಂಡತಿಗೆ ಏನಾದರೂ ಹೆಚ್ಚುಕಡಿಮೆಯಾದರೂ, ನಾನು ಅವಳ ಬಗ್ಗೆ ಹೆಮ್ಮೆಪಡ್ತೀನಿ. ಗಡಿಯಲ್ಲಿ ಸೈನಿಕರು ಫೈಟ್ ಮಾಡೋಲ್ವಾ? ಹಾಗೆಯೇ ನನ್ನ ಹೆಂಡತಿ ಆಸ್ಪತ್ರೆಯಲ್ಲಿ ಹೋರಾಟ ಮಾಡಿ ಸತ್ತಳು’ ಅಂತ ಅಂದು ಕೊಳ್ತೀನಿ, ಅಂತೆಲ್ಲಾ ಜಗಳವಾಡಿದ ಮೇಲೆ ಈಗ ಸುತ್ತ ಮುತ್ತ ಜನರು ಸುಮ್ಮನಾಗಿದ್ದಾರೆ. ನನ್ನಿಂದಾಗಿ ಯಾರಿಗೂ ಕಷ್ಟ ಆಗಬಾರದು ಅಂತ, ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು, ತಿಂಡಿ, ಅಡುಗೆ ಮಾಡಿಯೇ ಆಸ್ಪತ್ರೆಗೆ ಹೋಗುವುದು. ನಾನು ವಾಪಸ್ ಬರುವವರೆಗೆ ನಾಲ್ಕು ಜನರೂ ಕಾಯ್ತಾ ಇರ್ತಾರೆ. ಕಷ್ಟದ ದಿನಗಳಲ್ಲಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಅಂದುಕೊಂಡಿದ್ದೇನೆ. ಆಸ್ಪತ್ರೆಯ ಯೋಧರು ನಾವು… ಸತ್ಯ, ವಿಜಯಾ ಆಸ್ಪತ್ರೆ, ಬೆಂಗಳೂರು.
ನಿರೂಪಣೆ: ರೂಪಲಕ್ಷ್ಮಿ